ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ವಚನ ಸ್ವೀಕರಿಸಿದ್ದಾರೆ.
ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದರು. ಈ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಜಯ್‌ಗೆ ಜೊತೆಯಾಗಿದ್ದರು.
ವಿಜಯ್ ಅವರ ತಂದೆ, ತಾಯಿ ಹಾಗೂ ಗೆಳತಿ ಹಾಗೂ ನಟಿ ತ್ರಿಷಾ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹೊಸ ಸಚಿವರು : ಎನ್.ಆನಂದ್, ಆಧವ್ ಅರ್ಜುನ, ಕೆ.ಎ.ಸೆಂಗೋಟ್ಟಯ್ಯನ್, ಕೆ.ಜಿ.ಅರುಣ್ ರಾಜ್, ಪಿ.ವೆಂಕಟರಮಣನ್, ಆರ್.ನಿರ್ಮಲಕುಮಾರ್, ರಾಜ್ಮೋಹನ್, ಟಿ.ಕೆ.ಪ್ರಭು ಮತ್ತು ಎಸ್.ಕೀರ್ತನಾ ಸೇರಿದಂತೆ 9 ಟಿವಿಕೆ ಶಾಸಕರು ವಿಜಯ್ ಅವರ ಚೊಚ್ಚಲ ಸರ್ಕಾರದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ 118 ಸ್ಥಾನಗಳ ಮ್ಯಾಜಿಕ್ ಬಹುಮತವನ್ನು ದಾಟಲು ವಿಜಯ್ ಐದು ದಿನಗಳು, ರಾಜ್ಯಪಾಲರೊಂದಿಗೆ ನಾಲ್ಕು ಸಭೆಗಳು ಮತ್ತು ಸಂಭಾವ್ಯ ಮಿತ್ರಪಕ್ಷಗಳೊಂದಿಗೆ ಅಂತ್ಯವಿಲ್ಲದ ಹೋರಾಟದ ಫಲವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೇ 13ಕ್ಕೆ ಬಹುಮತ ಸಾಬೀತು: ಸರ್ಕಾರ ರಚನೆಗೆ ಪೂರ್ಣ ಬಹುಮತ ಇಲ್ಲದ ಟಿವಿಕೆ ಪಕ್ಷದ ನಾಯಕ ವಿಜಯ್ ಜೋಸೆಫ್ ಅವರು, ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಮತ್ತು ಮುಸ್ಲಿಂ ಲೀಗ್ ಸೇರಿ 120 ಶಾಸಕರ ಬೆಂಬಲ ತೋರಿಸಿ ಸರ್ಕಾರ ರಚನೆಗೆ ಹಕ್ಕುಮಂಡಿಸಿದ್ದರು. ಅದರಂತೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದ ರಾಜ್ಯಪಾಲರು ಮೇ 13ರೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 13ರಂದು ಮುಖ್ಯಮಂತ್ರಿ ವಿಜಯ್ ಜೋಸೆಫ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ.
ಕಾಂಗ್ರೆಸ್ ನಾಯಕ, ನನ್ನ ಸಹೋದರ ರಾಹುಲ್ ಗಾಂಧಿಯವರಿಗೂ ಧನ್ಯವಾದ. ವಿಸಿಕೆ ಹಾಗೂ ಎಡಪಕ್ಷಗಳ ನಾಯಕರಿಗೂ ಧನ್ಯವಾದ. ಈ ಸಂದರ್ಭದಲ್ಲಿ ನನ್ನ ಜೊತೆ ಇರುವ ಎಲ್ಲರಿಗೂ ಧನ್ಯವಾದ. ಎಲ್ಲರೂ ಆತ್ಮವಿಶ್ವಾದಿಂದ ಇರಿ ಗೆಲುವು ನಮ್ಮದೇ ಆಗಲಿದೆ. ಇಷ್ಟು ಕೋಟಿ ಜನರು ನನ್ನೊಂದಿಗೆ ಇರುವಾಗ ನಾನು ಯಾವುದಕ್ಕೂ ಹೆದರುವುದಿಲ್ಲ. ಏನೇ ಸಮಸ್ಯೆ ಬಂದರೂ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಜಯ್ ಮಾತನಾಡಿ, ನಾನು ಕೊಟ್ಟಿರುವ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುತ್ತೇನೆ. ನನಗೆ ಸ್ವಲ್ಪ ಕಾಲಾವಾಕಾಶಗಳನ್ನು ಕೊಡಿ. 10 ಲಕ್ಷ ಕೋಟಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ. ಹಿಂದಿನ ಎಂ.ಕೆ.ಸ್ಟಾಲಿನ್ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ತಮಿಳುನಾಡು ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಾನು ಬಂದಿದ್ದೇನೆ. ರಾಜ್ಯದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಲಾಗುವುದು. ಇನ್ಮುಂದೆ ಆಡಳಿತದಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಅಂಶಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ಕಳೆದ ತಿಂಗಳ ಚುನಾವಣೆಯಲ್ಲಿ ಟಿವಿಕೆ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದ 51 ವರ್ಷದ ನಟ-ರಾಜಕಾರಣಿ, ಶನಿವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ನ ಐದು ಶಾಸಕರು, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಯ ಇಬ್ಬರು ಶಾಸಕರು ಮತ್ತು ಕಮ್ಯುನಿಸ್ಟ್ ಪಕ್ಷ (ಸಿಪಿಐ), ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ (ಮಾರ್ಕ್ಸ್ವಾದಿ) (ಸಿಪಿಐ-ಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಿಂದ ತಲಾ ಇಬ್ಬರು ಶಾಸಕರ ಬೆಂಬಲವನ್ನು ಪಡೆದರು.
ವಿಜಯ್ ಜೋಸೆಫ್ ಸರ್ಕಾರದ ಸಚಿವರಿವರು
ಎನ್. ಆನಂದ್
ವಿಜಯ್ ನಟನಾಗಿದ್ದ ವೇಳೆ ಅವರ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದ ಎನ್. ಆನಂದ್. ಟಿವಿಕೆ ಪಕ್ಷ ಸ್ಥಾಪನೆಯ ವೇಳೆ ಅದರ ಸಂಪೂರ್ಣ ಉಸ್ತುವಾರಿ ನೋಡಿಕೊಂಡರಲ್ಲದೆ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಈಗಲೂ ಮುಂದುವರಿದಿದ್ದಾರೆ. ಟಿವಿಕೆ ಪಕ್ಷದ ವಕ್ತಾರರೂ ಆಗಿದ್ದಾರೆ. ಚೆನ್ನೈನ ತಿಯಾಗರಾಯನಗರ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯನ್ನು 51,632 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.
ಆಧವ್ ಅರ್ಜುನ
6 ಅಡಿ 7 ಇಂಚು ಎತ್ತರವಿರುವ ಆಧವ್ ಅರ್ಜುನ ಮಾಜಿ ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ. ತಮಿಳುನಾಡಿನ ರಾಜಕೀಯ ತಂತ್ರಜ್ಞ. ಈ ಹಿಂದಿನ ಚುನಾವಣೆಯಲ್ಲಿ ಎಂ.ಕೆ. ಸ್ಟಾಲಿನ್ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅರ್ಜುನ ಡಿಎಂಕೆ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಟಿವಿಕೆ ಸೇರಿ ಚೆನ್ನೈನ ವಿಲ್ಲಿವಕ್ಕಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಟಿವಿಕೆ ಪಕ್ಷದಲ್ಲಿ ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿದ್ದಾರೆ.
ಎಸ್. ಕೀರ್ತನಾ
ತಮಿಳುನಾಡಿನ ಶಿವಕಾಶಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ 29 ವರ್ಷದ ಯುವ ಶಾಸಕಿ. ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ತಳಮಟ್ಟದ ರಾಜಕೀಯ ಚಟುವಟಿಕೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದ ಕೀರ್ತನಾ ಎಂಎಸ್ಸಿ ಪದವೀಧರೆ. ಪಟಾಕಿ ಉದ್ಯಮದ ಕಾರ್ಮಿಕರಿಗೆ, ಮಹಿಳೆಯರಿಗೆ ಸಮಾನ ವೇತನದೊಂದಿಗೆ ರಾಸಾಯನಿಕಗಳೊಂದಿಗೆ ಕೆಲಸ ಮಾಡುವ ಕಾರ್ಮುಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಅನೇಕ ಭರವಸೆಗಳನ್ನು ನೀಡಿದ್ದಾರೆ.
ಡಾ.ಕೆ.ಜಿ.ಅರುಣ್‌ರಾಜ್
ಡಾ.ಕೆ.ಜಿ.ಅರುಣ್‌ರಾಜ್ ತಮಿಳುನಾಡಿನ ವೈದ್ಯ ಮತ್ತು ಮಾಜಿ ಭಾರತೀಯ ಕಂದಾಯ ಸೇವಾ ಅಧಿಕಾರಿ. ಅವರು ಟಿವಿಕೆಯ ನೀತಿ ಮತ್ತು ಪ್ರಚಾರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಡಾ.ಟಿ.ಕೆ. ಪ್ರಭು
ವೃತ್ತಿಯಲ್ಲಿ ದಂತವೈದ್ಯರಾಗಿರುವ ಡಾ.ಟಿ.ಕೆ. ಪ್ರಭು ಅವರು ಕಾರೈಕುಡಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಟಿವಿಕೆ ಪಕ್ಷದಿಂದ ಗೆದ್ದು ಸಚಿವರಾಗಿದ್ದಾರೆ.
ಕೆ.ಎ. ಸೆಂಗೋಟ್ಟಯ್ಯನ್
ಎಐಡಿಎಂಕೆ ಪಕ್ಷದಲ್ಲಿ ಕಳೆದ ಐದು ದಶಕಗಳ ಕಾಲ ದುಡಿದಿದ್ದ ಕೆ.ಎ. ಸಂಗೋಟ್ಟಯ್ಯನ್ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಕಳೆದ ವರ್ಷ ಟಿವಿಕೆ ಸೇರಿದ್ದ ಸಂಗೋಟ್ಟಯ್ಯನ್ ವಿಜಯ್ ಅವರೊಂದಿಗೆ ಕೈಜೋಡಿಸಿದ್ದರು. ಅಭ್ಯರ್ಥಿಗಳ ಆಯ್ಕೆ, ಜಾತಿ ಧೃವೀಕರಣ ಸೇರಿ ತಮಿಳುನಾಡು ರಾಜಕೀಯದ ಹಲವು ತಂತ್ರಗಳನ್ನು ವಿಜಯ್ ಅವರಿಗೆ ಧಾರೆಎರದಿದ್ದಾರೆ.
ಪಿ.ವೆಂಕಟರಮಣನ್
ಪಿ.ವೆಂಕಟರಮಣನ್ ಮುಖ್ಯಮಂತ್ರಿ ವಿಜಯ್ ಜೋಸೆಫ್ ಅವರಿಗೆ ದೀರ್ಘಕಾಲದ ಗೆಳೆಯ. 2000ನೇ ಇಸ್ವಿಯಿಂದ ಅವರ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯ್ ರಾಜಕೀಯಕ್ಕೆ ಧುಮುಕಲು ಪ್ರೋತ್ಸಾಹದಾಯಕರೂ ಆಗಿದ್ದರು. ಚೆನ್ನೈನ ಮೈಲಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿ.ವೆಂಕಟರಮಣನ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಈ ವಿಜಯ್ ಜೋಸೆಫ್ ಸಂಪುಟದಲ್ಲಿ ಸಚಿವರಾಗಿದ್ದಾರೆ.
ನಿರ್ಮಲ್ ಕುಮಾರ್
ನಿರ್ಮಲ್ ಕುಮಾರ್ ತಮಿಳಗ ವೆಟ್ರಿ ಕಳಗಂನ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಧುರೈನ ತಿರುಪ್ಪರಾಂಕುಂದ್ರಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜಮೋಹನ್ ಅರುಮುಗಂ
ನಟ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಭಾಷಣಕಾರ. ರಾಜಮೋಹನ್ ಅರುಮುಗಂ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚೆನ್ನೈನ ಎಗ್ಮೋರ್ ಕ್ಷೇತ್ರದಿಂದ ಗೆದ್ದಿರುವ ರಾಜಮೋಹನ್ ಈಗ ವಿಜಯ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ.

