ಬ್ರಿಡ್ಜ್ ಟೌನ್ (ಬಾರ್ಬೊಡಸ್): ಭಾರತದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೆ ಸ್ಫೋಟಕ ಆಟವಾಡಿದರು. ಮಂದಗತಿಯ ಪಿಚ್ ಆದರೂ ತನ್ನ ಶಾಟ್ ಗಳನ್ನು ಹೊಡೆಯಲು ಅವರು ದಾರಿಗಳನ್ನು ಕಂಡುಕೊಂಡಿದ್ದರು. ಹೀಗಾಗಿ ಅಫಘಾನಿಸ್ತಾನ ಭಾರತ ವಿರುದ್ಧದ ತನ್ನ ಮೊದಲ ಸೂಪರ್ -8 ಪಂದ್ಯದಲ್ಲಿ ಸೋಲೊಪ್ಪಿಕೊಂಡು ಶರಣಾಯಿತು.
ಬಾರ್ಬೊಡಸ್ ನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣದ ಪಿಚ್ ಬೌಲರ್ ಗಳಿಗೆ ಅನುಕೂಲಕರವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪಾಳಯಕ್ಕೆ ದೊಡ್ಡ ಮೊತ್ತ ಪೇರಿಸಿಡುವುದು ಅಷ್ಟು ಸುಲಭವಾಗಿರಲಿಲ್ಲ. ನಾಯಕ ರೋಹಿತ್ ಶರ್ಮ 13 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು. ಇನ್ನೊಂದೆಡೆ ವಿರಾಟ್ ಕೊಹ್ಲಿಯ ಬ್ಯಾಟ್ ನಿಂದಲೂ ರನ್ ಹೊಳೆ ಹರಿಯಲಿಲ್ಲ. 24 ಎಸೆತದಲ್ಲಿ 24 ರನ್ ಗಳಿಸಿದ ವಿರಾಟ್ ಇನ್ನೇನು ಸ್ಕೋರ್ ಗತಿ ಏರಿಸುತ್ತಾರೆ ಎನ್ನುವಷ್ಟರಲ್ಲಿ ರಶೀದ್ ಖಾನ್ ಬೌಲಿಂಗ್ ನಲ್ಲಿ ಔಟಾದರು.
ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಬ್ ಪಂಥ್ ಪಿಚ್ ನ ಯಾವ ಭಯವೂ ಇಲ್ಲದೇ ನಾಲ್ಕು ಬೌಂಡರಿಗಳನ್ನು ಸಿಡಿಸಿದರು. 11 ಎಸೆತಗಳಲ್ಲಿ ಅವರು 20 ರನ್ ಗಳಿಸಿದ್ದಾಗ ಅಫಘಾನಿಸ್ತಾನದ ನಾಯಕ ರಶೀದ್ ಖಾನ್ ಬಲಿ ತೆಗೆದುಕೊಂಡರು.
ಅಫಘಾನಿಸ್ತಾನ ಇನ್ನೇನು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದೆ ಎನ್ನುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ ಬೇರೆಯದ್ದೇ ತಿರುವು ನೀಡಿದರು. ಆಫ್ ಸ್ಟಂಪ್ ನಿಂದ ಆಚೆ ಹೋಗುತ್ತಿದ್ದ ಚೆಂಡುಗಳನ್ನು ಎಳೆದು ಲೆಗ್ ಸೈಡ್ ನಲ್ಲಿ ಬಾರಿಸುತ್ತಿದ್ದ ಸೂರ್ಯ ಅಫಘಾನಿಸ್ತಾನ ಬೌಲರ್ ಗಳನ್ನು ಗಲಿಬಿಲಿಗೊಳಿಸಿದರು. ಕ್ರೀಸ್ ಗೆ ಕಚ್ಚಿಕೊಂಡ ಮೇಲೆ ಸೂರ್ಯ ಮೈದಾನದ ಎಲ್ಲ ಮೂಲೆಗಳಿಗೂ ಚೆಂಡನ್ನು ಬಡಿದು ಕಳಿಸಿದರು. ಕೇವಲ 28 ಎಸೆತಗಳಲ್ಲಿ 53 ರನ್ ಗಳಿಸಿದ ಸೂರ್ಯ ಇನ್ನಿಂಗ್ಸ್ ನಲ್ಲಿ ಐದು ಬೌಂಡರಿ, ಮೂರು ಸಿಕ್ಸರ್ ಅರಳಿದ್ದವು.
ಶಿವಂ ದುಬೆ ಔಟಾದ ಬಳಿಕ ಆಡಲು ಬಂದ ಹಾರ್ದಿಕ್ ಪಾಂಡ್ಯ ಮತ್ತೊಂದು ಬದಿಯಲ್ಲಿ ನಿಂತು ಸೂರ್ಯ ಕುಮಾರ್ ಅವರಿಗೆ ಭರ್ಜರಿ ಬೆಂಬಲ ನೀಡಿದರು. ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ನಲ್ಲಿ ಅಷ್ಟಾಗಿ ಮಿಂಚದ ಹಾರ್ದಿಕ್ ತನ್ನ ಬ್ಯಾಟಿಂಗ್ ಶಕ್ತಿಯನ್ನು ತೋರಿಸಿದರು. 24 ಎಸೆತಗಳಲ್ಲಿ 32 ರನ್ ಗಳಿಸಿದ ಅವರು ತಮ್ಮ ವೇಗದ ಕೈ ಚಲನೆಯಿಂದ ಹೊಡೆದ ಬೌಂಡರಿಗಳು ಚಿತ್ತಾಕರ್ಷಕವಾಗಿದ್ದವು.
ಸೂರ್ಯ ಮತ್ತು ಹಾರ್ದಿಕ್ ಔಟಾದರೂ ಕೊನೆಯಲ್ಲಿ ಆಡಲು ಬಂದ ಅಕ್ಷರ್ ಪಟೇಲ್ 6 ಎಸೆತಗಳಲ್ಲಿ 12 ರನ್ ಗಳಿಸಿ ಅಫಘಾನಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದರು. ಮಂದಗತಿಯ ಪಿಚ್ ನಲ್ಲಿ ಚೇಸ್ ಮಾಡಲು ಬಹುತೇಕ ಅಸಾಧ್ಯವಾದ 182 ರನ್ ಗಳ ಗುರಿಯನ್ನು ಭಾರತ ತಂಡ ಅಫಘಾನಿಸ್ತಾನಕ್ಕೆ ನೀಡಿತ್ತು.
ಭಾರತ ನೀಡಿದ ದೊಡ್ಡ ಗುರಿಯನ್ನು ಬೆನ್ನಟ್ಟಿದ್ದ ಅಪಘಾನಿಸ್ತಾನ ಯಾವ ಹಂತದಲ್ಲೂ ಭಾರತದ ಬೌಲರ್ ಗಳಿಗೆ ಸವಾಲಾಗಲೇ ಇಲ್ಲ. ಭಾರತವನ್ನು ಕಾಡಬಹುದಾಗಿತ್ತ ರೆಹಮತ್ತುಲ್ಲಾ ಗುರ್ಬಾಜ್ ಅವರನ್ನು ಜಸ್ಪೀತ್ ಬುಮ್ರಾ ಎರಡನೇ ಓವರ್ ನಲ್ಲೇ ಔಟ್ ಮಾಡಿ ಕಳಿಸಿದರು. ಹಜ್ರತುಲ್ಲಾ ಜಜಾಯ್ ಕೂಡ ಬುಮ್ರಾ ಅವರಿಗೇ ವಿಕೆಟ್ ಒಪ್ಪಿಸಿ ನಡೆದರು. ವಿಕೆಟ್ ಟು ವಿಕೆಟ್ ಬೌಲ್ ಮಾಡಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಪವರ್ ಪ್ಲೇ ನಲ್ಲೇ ಬೌಲ್ ಮಾಡಿ ಅಪಾಯಕಾರಿ ಆಟಗಾರ ಇಬ್ರಾಹಿಂ ಜರ್ದಾನ್ ಅವರನ್ನು ಔಟ್ ಮಾಡಿ ಕಳಿಸಿದರು. ಅಲ್ಲಿಗೆ ಅಫಘಾನಿಸ್ತಾನದ ಸೋಲು ನಿಶ್ಚಿತವಾಗಿ ಹೋಯಿತು.
ಅಜ್ಮತ್ತುಲ್ಲಾ ಒಮರ್ ಜಾಯಿ ಬಿರುಸಿನ ಆಟ ಪ್ರದರ್ಶಿಸುತ್ತಿದ್ದಾಗಲೇ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಔಟಾದರೆ, ಗುಲ್ಬದ್ದೀನ್ ನೈಬ್ ಈ ವಿಶ್ವಕಪ್ ನಲ್ಲಿ ಮೊದಲ ಪಂದ್ಯ ಆಡುತ್ತಿರುವ ಕುಲದೀಪ್ ಯಾದವ್ ಗೆ ಬಲಿಯಾದರು.
ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಅಫಘಾನಿಸ್ತಾನ ತನ್ನೆಲ್ಲ ವಿಕೆಟ್ ಕಳೆದುಕೊಂಡು 134 ರನ್ ಗಳಿಸಲು ಶಕ್ತವಾಯಿತು. ಜಸ್ಪೀತ್ ಬುಮ್ರಾ ನಾಲ್ಕು ಓವರ್ ಗಳಲ್ಲಿ ಕೇವಲ 7 ರನ್ ನೀಡಿ ಮೂರು ವಿಕೆಟ್ ಪಡೆದರು. ಅರ್ಶದೀಪ್ ಸಿಂಗ್ ಕೊಂಚ ದುಬಾರಿ ಎನಿಸಿಕೊಂಡರೂ ನಾಲ್ಕು ಓವರ್ ಗಳಲ್ಲಿ 36 ರನ್ ನೀಡಿ ಮೂರು ವಿಕೆಟ್ ಕಬಳಿಸಿ ಅಫಘಾನಿಸ್ತಾನದ ಮಧ್ಯಮ ಕ್ರಮಾಂಕದ ನಡು ಮುರಿದರು.
ಸೂರ್ಯಕುಮಾರ್ ಯಾದವ್ ಅರ್ಹವಾಗಿಯೇ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಪಡೆದರು. ಭಾರತ ಸೂಪರ್ 8ರ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಂಟಿಗುವಾದಲ್ಲಿ ಶನಿವಾರ ಆಡಲಿದ್ದು, ಆ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.