ಸೂರ್ಯ ತಿಲಕ; ವೈಜ್ಞಾನಿಕ ಕೈಚಳಕ

Most read

ರಾಮನವಮಿಯ ದಿನ ಅಯೋಧ್ಯೆಯ ಅಪೂರ್ಣ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಗೊಂಡ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದ್ದನ್ನು ನೋಡಿದವರು ವಿಸ್ಮಯಗೊಂಡರು. ಕೆಲವರು ದೈವ ಲೀಲೆ ಎಂದು ಭಾವಪರವಶರಾದರೆ, ರಾಮಲಲ್ಲಾ ವೈಭವಕ್ಕೆ ಬೆರಗಾದರು.   

ಅದ್ಭುತ ಅತ್ಯದ್ಭುತ ಅಮೋಘ ಎಂದೆಲ್ಲಾ ಸೂರ್ಯ ತಿಲಕ ಪವಾಡವನ್ನು ಸುದ್ದಿ ಮಾಧ್ಯಮಗಳು ವರ್ಣಿಸಿ ರಾಮಭಕ್ತಿಗೆ ಉನ್ಮಾದವನ್ನು ಸೇರಿಸಿ ಕೃತಾರ್ಥರಾದರು. ರಾಮಲಲ್ಲಾನಿಗೆ ಸೂರ್ಯ ತಿಲಕದ ಹೊಳಪನ್ನು ನೀಡಿದ ರಾಮ ಮಂದಿರದ ವಿನ್ಯಾಸವನ್ನು ವಿಸ್ಮಯವೆಂಬಂತೆ ಮಾಧ್ಯಮಗಳು ಪ್ರಚಾರ ಮಾಡಿದವು. ಟಿವಿಯಲ್ಲೇ ಸೂರ್ಯ ತಿಲಕ ಪವಾಡ ನೋಡಿದ ರಾಮಭಕ್ತರು ರೋಮಾಂಚನ ಗೊಂಡರು.

ಆದರೆ.. ನಮ್ಮ ಪೂರ್ವಜರಾದ ದೇವಸ್ಥಾನಗಳ ವಿನ್ಯಾಸಕಾರರು ಮಾಡಿದ ಸೂರ್ಯ ರಶ್ಮಿ ವಿನ್ಯಾಸ ಮಾಡಲು ಈಗಿನವರಿಗೆ ಸಾಧ್ಯವಾಗಿಲ್ಲ.  ಗ್ರಹಗಳ ಚಲನೆ, ಸೂರ್ಯ ಮತ್ತು ಭೂಮಿಯ ಪರಿಭ್ರಮಣೆಗಳನ್ನು ಅದೆಷ್ಟೋ ವರ್ಷಗಳ ಕಾಲ ಅಧ್ಯಯನ ಮಾಡಿ ಪ್ರತಿ ವರ್ಷ ಸರಿಯಾದ ಸಮಯಕ್ಕೆ ಸೂರ್ಯನ ಕಿರಣ ಸಹಜವಾಗಿ ದೇವರ ಮೇಲೆ ಮೂಡುವಂತೆ ಮಾಡುವ ಪೂರ್ವಜರ ತಂತ್ರಜ್ಞಾನ ಈಗಿನ ಆಧುನಿಕರಿಗೆ ಇನ್ನೂ ದಕ್ಕಿಲ್ಲ.

ಉದಾಹರಣೆಗೆ ಬೆಂಗಳೂರಿನ ಹನುಮಂತನಗರದಲ್ಲಿ ಗವಿಗಂಗಾಧರೇಶ್ವರ ದೇವಸ್ಥಾನ ಇದೆ. ಪ್ರತಿ ವರ್ಷ ಮಹಾಶಿವರಾತ್ರಿಯ ದಿನ ಸೂರ್ಯನ ಕಿರಣ ಗರ್ಭಗುಡಿಯ ಶಿವಲಿಂಗದ ಮೇಲೆ ಕರಾರುವಕ್ಕಾಗಿ ಬೀಳುತ್ತದೆ. ಅದನ್ನು ಶಿವನ ಪವಾಡ ಎಂದೇ ಹಲವಾರು ಭಕ್ತರು ನಂಬಿದ್ದಾರೆ ಹಾಗೂ ಪುರೋಹಿತರು ನಂಬಿಸಿದ್ದಾರೆ. ಆದರೆ ಅದರಲ್ಲಿ ಯಾವ ಪವಾಡವೂ ಇಲ್ಲ, ದೈವಲೀಲೆಯಂತೂ ಮೊದಲೇ ಅಲ್ಲ. ಅದು ಪುರಾತನರ ಆರ್ಕಿಟೆಕ್ಚರ್ ಕೌಶಲ್ಯ. ಸೂರ್ಯನ ಚಲನೆಯ ಗತಿಯನ್ನು ಆಧರಿಸಿದ ತಂತ್ರಜ್ಞಾನ. ಅದು ಭೌಗೋಳಿಕ ಅಧ್ಯಯನದಿಂದಾದ ಅಪರೂಪದ ವಿನ್ಯಾಸ. ಆ ರೀತಿ ವಿನ್ಯಾಸ ಮಾಡಿದವರನ್ನು ಅಭಿನಂದಿಸಲೇ ಬೇಕು. ಇಂತಹ ಖಗೋಳಾಧಾರಿತ ಆವಿಷ್ಕಾರಕ್ಕೆ ದೈವಲೀಲೆಯನ್ನು ಸೇರಿಸಿ ಪವಾಡದ ಕಲ್ಪನೆಯನ್ನು ವೈದಿಕಶಾಹಿ ಹುಟ್ಟು ಹಾಕಿ ಜನರಲ್ಲಿ ಭಕ್ತಿಯ ಉನ್ಮಾದವನ್ನು ಹೆಚ್ಚಿಸುತ್ತಲೇ ಬಂದಿದೆ.

ಇಂತಹುದೇ ಒಂದು ಸೂರ್ಯ ತಿಲಕ ಪ್ರಯೋಗ ಪ್ರಯತ್ನವನ್ನು ಅಯೋಧ್ಯೆಯ ಬಾಲರಾಮನ ಪ್ರತಿಮೆಯ ಮೇಲೆ ಮಾಡಲಾಗಿದೆ. ಇದರಲ್ಲಿ ಯಾವ ದೇವಲೀಲೆಯೂ ಇಲ್ಲ, ಇನ್ಯಾವುದೇ ಪವಾಡವೂ ಆಗಿಲ್ಲ. ಆದರೆ ವಿಜ್ಞಾನದ ತಾಂತ್ರಿಕತೆಯ ಸಹಾಯದಿಂದ ಸೂರ್ಯ ರಶ್ಮಿ ತಿಲಕವನ್ನು ಸೃಷ್ಟಿಸಿ ರಾಮಭಕ್ತರ ಭಕ್ತಿಯನ್ನು ಇಮ್ಮಡಿ ಗೊಳಿಸಲಾಗಿದೆ.  ಇದು ನೈಸರ್ಗಿಕವಾಗಿ ಸೂರ್ಯನ ಕಿರಣ ರಾಮನವಮಿಯ ದಿನ ರಾಮಲಲ್ಲಾನ ಮೇಲೆ ಮೂಡಿದ ವೈಚಿತ್ರ್ಯವೇನಲ್ಲ. ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿ ಆರ್ಟಿಫಿಶಿಯಲ್ ಸೂರ್ಯ ಕಿರಣವನ್ನು ಮೂಡಿಸಿದ್ದಾರೆ.

ಅದಕ್ಕಾಗಿ ರೂರ್ಕಿಯ CBRI ಸಂಸ್ಥೆ ಹಾಗೂ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIAP) ಸಂಸ್ಥೆಯ ವಿಜ್ಞಾನಿಗಳು ಭಾರೀ ಶ್ರಮವಹಿಸಿದ್ದಾರೆ‌. ವಿಶೇಷ ಗೇರ್ ಬಾಕ್ಸ್ ಗಳನ್ನು ಬಳಸಿಕೊಂಡು ಪ್ರತಿಫಲಿಸುವ ಕನ್ನಡಿಗಳು ಮತ್ತು ಮಸೂರಗಳನ್ನು ಉಪಯೋಗಿಸಿಕೊಂಡು, ಸೋಲಾರ್ ಟ್ರ್ಯಾಕಿಂಗ್ ತಂತ್ರಜ್ಞತೆ ಅಳವಡಿಸಿಕೊಂಡು ದೇವಾಲಯದ ಮೂರನೇ ಮಹಡಿಯಿಂದ ಗರ್ಭಗುಡಿಯ ಮೂರ್ತಿಯ ಮೇಲೆ ಸೂರ್ಯನ ಕಿರಣಗಳು ಮೂಡುವಂತೆ ಮಾಡಲಾಗಿದೆ.

ಪಂಚಾಂಗ ಆಧರಿಸಿ ರಾಮನವಮಿಯ ನಿಗದಿತ ದಿನಾಂಕದಂದು ಸೂರ್ಯ ತಿಲಕ ಸಂಭವಿಸಲು 19 ಗೇರುಗಳುಳ್ಳ ಸಂಕೀರ್ಣವಾದ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಎಲ್ಲವೂ ವಿದ್ಯುತ್, ಬ್ಯಾಟರಿ ಚಾಲಿತ ವ್ಯವಸ್ಥೆಯಾಗಿದೆ.

ಇದನ್ನು ಸಾಧ್ಯವಾಗಿಸಲು ಶ್ರಮಿಸಿದ ವಿಜ್ಞಾನಿಗಳಲ್ಲಿ ಒಬ್ಬರಾದ ರೂರ್ಕಿಯ CBRI ವಿಜ್ಞಾನಿ ಡಾ.ಪ್ರದೀಪ್ ಚೌಹಾಣ್ ತಮ್ಮ ವೈಜ್ಞಾನಿಕ ಆವಿಷ್ಕಾರದ ಬಗ್ಗೆ ಮಾತಾಡುವುದನ್ನು ಬಿಟ್ಟು “ಸೂರ್ಯ ತಿಲಕವು ರಾಮಲಲ್ಲಾ ಪ್ರತಿಮೆಗೆ ದೋಷರಹಿತವಾಗಿ ಅಭಿಷೇಕ ಮಾಡಿದೆ” ಎಂದು ಹೇಳಿ ವಿಜ್ಞಾನಕ್ಕೆ ದೈವಭಕ್ತಿಯ ಲೇಪನ ಮಾಡಿದರು.

ಶಬರಿಮಲೆಗೆ ಅತೀ ಹೆಚ್ಚು ಭಕ್ತರನ್ನು ಆಕರ್ಷಿಸಿದ್ದಕ್ಕೆ ಸಂಕ್ರಾಂತಿಯ ದಿನ ಆಗಸದಲ್ಲಿ ಮೂಡುವ ಮಕರ ಜ್ಯೋತಿಯೂ ಪ್ರಮುಖ ಕಾರಣ. ಭಕ್ತಿಯ ಪರಾಕಾಷ್ಠೆ ಹೆಚ್ಚಾದವರಿಗೆ ಆ ಮಕರ ಜ್ಯೋತಿಯ ಹಿಂದೆ ಯಾವುದೇ ದೈವಲೀಲೆ ಇಲ್ಲ ಅದೊಂದು ಮಾನವ ನಿರ್ಮಿತವಾದದ್ದು ಎಂದು ಹೇಳಿದರೆ ಆಗಿನಂತೆ ಈಗಲೂ ಅಂಧಭಕ್ತರು ನಂಬಲು ಸಿದ್ದರಿಲ್ಲ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರೇ ಒಪ್ಪಿಕೊಂಡರೂ ಭಕ್ತರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಭಕ್ತಿಯ ಅಮಲು ಉನ್ಮಾದವೇ ಇದಕ್ಕೆ ಕಾರಣ.

ಇದನ್ನೂ ಓದಿ- ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

ಅದೇ ರೀತಿ ಹೊಸದಾಗಿ ಪ್ರಾಣಪ್ರತಿಷ್ಟಾಪನೆಯಾದ ರಾಮಲಲ್ಲಾ ಮೂರ್ತಿಗೂ ಯಾವುದೋ ಒಂದು ವಿಶೇಷ ಆಕರ್ಷಣೆಯನ್ನು ಹುಟ್ಟುಹಾಕಬೇಕಾಗಿತ್ತು. ಅದಕ್ಕಾಗಿ ರಾಮನವಮಿಯ ದಿನ ಸೂರ್ಯ ತಿಲಕವನ್ನು ಸೃಷ್ಟಿಸಲಾಯ್ತು. ಈ ರೀತಿಯ ವಿಸ್ಮಯಗಳು ಮುಂದೆ ನಂಬಿಕೆಯನ್ನು ಮೂಢನಂಬಿಕೆಯಾಗಿ ಬದಲಾಯಿಸುವ ಕ್ರಮದ ಭಾಗಗಳಾಗಿವೆ. ದೇಶ ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರೆದು ಜನರಲ್ಲಿರುವ ಮೌಢ್ಯ ಹಾಗೂ ಅತೀಂದ್ರೀಯ ಪರ ನಂಬಿಕೆಗಳನ್ನು ಕಡಿಮೆಗೊಳಿಸಬಹುದಾಗಿತ್ತು. ಆದರೆ ವಿಜ್ಞಾನವೇ ಭಕ್ತಿ ಭಾವ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಹಕರಿಸುವುದು ಈ ಕಾಲಘಟ್ಟದ ವಿಪರ್ಯಾಸವೇ ಆಗಿದೆ. ಚಂದ್ರಯಾನಕ್ಕೂ ಮುನ್ನ ಇಸ್ರೊ ವಿಜ್ಞಾನಿಗಳೇ ತಿರುಪತಿಗೆ ಹೋಗಿ ಯಶಸ್ಸಿಗಾಗಿ ಪೂಜೆ ಸಲ್ಲಿಸುವಂತಹ ನಿರ್ಧಾರಗಳೇ ಜನಮಾನಸದಲ್ಲಿ ದೈವನಂಬಿಕೆಗಳ ಬೇರು ಆಳವಾಗಿ ಇಳಿಯುವಂತೆ ಮಾಡುತ್ತವೆ. ಇದು ದೈವನಂಬಿಕೆಗಳ ಗೆಲುವೋ, ವೈಜ್ಞಾನಿಕ ಜಾಗೃತಿಯ ಸೋಲೋ ಅಥವಾ ವಿಜ್ಞಾನಿಗಳು ಹಾಗೂ ದೈವಾರಾಧಕರ ನಡುವಿನ ಒಡಂಬಡಿಕೆಯೋ?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article