ಬೆಂಗಳೂರು: ಟೆಸ್ಟ್ ಕ್ರಿಕೆಟ್ ಗೆ ಇತ್ತೀಚೆಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕು ಎಂದು ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ಒಂದೂವರೆ ದಶಕದಲ್ಲಿ ದೇಶದ ಕ್ರಿಕೆಟ್ ಗೆ ಕೊಹ್ಲಿ ನೀಡಿರುವ ಕೊಡುಗೆಗಳನ್ನು ಗಮನದಲ್ಲಿರಿಸಿ ಈ ಪ್ರಶಸ್ತಿ ನೀಡಬೇಕು ಎಂದು ಅವರು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಈ ಮನವಿ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಸಾಧನೆಗಳು ಅಸಂಖ್ಯ ಮತ್ತು ದಾಖಲೆಗಳು ಅಪರಿಮಿತ. ಹಾಗಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ರೈನಾ ಹೇಳಿದರು.
ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ 14 ವರ್ಷ ಸಾಧನೆ ಮಾಡಿ ವೃತ್ತಿಜೀವನಕ್ಕೆ ಅಂತ್ಯಗೊಳಿಸಿದ್ದಾರೆ. ಅವರು ಈಗಾಗಲೇ ಅರ್ಜುನ ಪ್ರಶಸ್ತಿ (2013), ಪದ್ಮಶ್ರೀ (2017), ಮತ್ತು ಖೇಲ್ ರತ್ನ (2018) ಸೇರಿದಂತೆ ಹತ್ತಾರು ರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದಾರೆ.
ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾತ್ರ ಎಂಬುದನ್ನು ಇಲ್ಲಿ ಸ್ಮರಿಸಬಹುದು.