ಸರ್ವಾಧಿಕಾರಿ ಮನೋಭಾವನೆಯ ಮೋದಿ ಸರಕಾರ ಅಗತ್ಯ ಇದ್ದಾಗಲೆಲ್ಲಾ ಈ ತನಿಖಾ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷಕ್ಕೆ ಬಳಸುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಡಿ ಮಾತ್ರವಲ್ಲ, ಸಿಬಿಐ, ಐಟಿ ಯಂತಹ ಸರಕಾರಿ ತನಿಖಾ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಆದಷ್ಟು ಬೇಗ ರೂಪಿಸುವುದು ಸದ್ಯದ ತುರ್ತು ಅಗತ್ಯವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಎನ್ಫೋರ್ಸಮೆಂಟ್ ಡೈರೆಕ್ಟರೇಟ್ (ಇಡಿ) ತನ್ನ ಎಲ್ಲಾ ಮಿತಿಯನ್ನು ಮೀರುತ್ತಿದೆ, ಇದನ್ನು ನಿಲ್ಲಿಸಲು ಮಾರ್ಗದರ್ಶಿ ಸೂತ್ರದ ಅಗತ್ಯವಿದೆ” ಎಂದು ಜುಲೈ 21 ರಂದು ಸುಪ್ರೀಂ ಕೋರ್ಟ್ ಹೇಳುವ ಮೂಲಕ ಕೇಂದ್ರ ಸರಕಾರದ ಸಾಕುನಾಯಿಯಂತೆ ವರ್ತಿಸುತ್ತಿರುವ ಇಡಿ (ED) ಎಂಬ ಜಾರಿ ನಿರ್ದೇಶನಾಲಯ ತನಿಖಾ ಸಂಸ್ಥೆಗೆ ಚಾಟಿ ಏಟು ಬೀಸಿದೆ. ಈ ಏಟು ತನ್ನ ದ್ವೇಷ ರಾಜಕಾರಣಕ್ಕೆ ತನಿಖಾ ಸಂಸ್ಥೆಯನ್ನು ಎಗ್ಗಿಲ್ಲದೇ ಬಳಸುತ್ತಿರುವ ಮೋದಿ ಸರಕಾರಕ್ಕೆ ಮಾಡಿದ ಕಪಾಳ ಮೋಕ್ಷವೂ ಆಗಿದೆ.
ಈ ಹಿಂದೆ ಸಹ ಈ ಇಡಿ ಸಂಸ್ಥೆಯ ಕುರಿತು ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಪಂಜರದ ಗಿಳಿಯಾಗಬಾರದೆಂದು ತಾಕೀತು ಮಾಡಿತ್ತು. ಆದರೂ ಮೋದಿ- ಶಾ ಅಣತಿಯಂತೆ ಕಾರ್ಯ ನಿರ್ವಹಿಸುತ್ತಾ ವಿರೋಧಿ ಪಾಳಯದ ಮೇಲೆ ಆಕ್ರಮಣ ಮಾಡುವ ಈ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆಯೇ ನಾಶವಾಗಿದೆ. ಇಡಿ ಅಧಿಕಾರಿಗಳು ಕೇಂದ್ರ ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಾ ಸಂವಿಧಾನ ವಿರೋಧಿ ಕೃತ್ಯದಲ್ಲಿ ನಿರಂತರ ನಿರತರಾಗಿದ್ದಾರೆ.
ಈಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೇಗಾದರೂ ಮಾಡಿ ಕಾನೂನಿನ ಇಕ್ಕಳದಲ್ಲಿ ಸಿಕ್ಕಿಸಬೇಕೆಂದೇ ಮೈಸೂರಿನ ಮುಡಾ ಸೈಟು ಹಗರಣವನ್ನು ಬಿಜೆಪಿಗರು ಸೃಷ್ಟಿಸಿದರು. ಸಿದ್ದರಾಮಯ್ಯನವರ ಪತ್ನಿಯವರು 14 ಬದಲಿ ಸೈಟುಗಳನ್ನು ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ಪಡೆದಿದ್ದು ಅದಕ್ಕೆ ಸಿದ್ದರಾಮಯ್ಯನವರು ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಅದರ ವಿರುದ್ಧ ಭಾರೀ ಪ್ರತಿಭಟನೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಹಮ್ಮಿಕೊಂಡಿದ್ದರು. ಮೈಸೂರಿನ ವರೆಗೂ ಪಾದಯಾತ್ರೆ ಮಾಡಿದರು. ಎಷ್ಟು ಸಾಧ್ಯವಿತ್ತೊ ಅಷ್ಟು ಅಪಪ್ರಚಾರ ಮಾಡತೊಡಗಿದರು. ಈ ವಿಚಾರವನ್ನೇ ಗೋದಿ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದವು.
ಆದರೆ ಈ ಸೈಟ್ ಪ್ರಕರಣವನ್ನು ಹಗರಣ ಮಾಡಿದ್ದರಲ್ಲಿ ಯಾವುದೇ ಹುರುಳಿರಲಿಲ್ಲ. ಹಾಗೆ ನೋಡಿದರೆ ಮುಡಾದಲ್ಲಿ ಎಲ್ಲಾ ಪಕ್ಷದ ನಾಯಕರುಗಳೂ ಸೈಟುಗಳನ್ನು ಪಡೆದಿದ್ದರು. ಈ ಹಗರಣ ನ್ಯಾಯಾಲಯದ ಮೆಟ್ಟಿಲೇರಿತು. ಈ ಆರೋಪ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ಗೊತ್ತಾದಾಗ ಕೇಂದ್ರದ ಮೋದಿ ಸರಕಾರ ತನ್ನ ಇಡಿ ಅಸ್ತ್ರವನ್ನು ಪ್ರಯೋಗಿಸಿತು. ಈ ಹಗರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರವಾಗಲೀ ಇಲ್ಲವೇ ಆರ್ಥಿಕ ಅವ್ಯವಹಾರವಾಗಲೀ ಆಗದೇ ಇದ್ದರೂ ಇಡಿ ತನಿಖಾ ಸಂಸ್ಥೆ ಅತೀ ಆಸಕ್ತಿ ವಹಿಸಿ ಮೂಗು ತೂರಿಸಿತು. ಈ ಜಾರಿ ನಿರ್ದೇಶನಾಲಯದ ಕೆಲಸ ಮನಿ ಲಾಂಡರಿಂಗ್ ನಂತಹ ಆರ್ಥಿಕ ಅಪರಾಧಗಳನ್ನು ತಡೆಗಟ್ಟುವುದು ಹಾಗೂ ವಿದೇಶಿ ವಿನಿಮಯ ನಿರ್ವಹಣೆ ಮಾಡುವುದು. ಆದರೆ ತನ್ನ ಕಾರ್ಯ ವ್ಯಾಪ್ತಿಯನ್ನು ಮೀರಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗಿದ್ದರಿಂದಾಗಿ ಜಾರಿ ನಿರ್ದೇಶನಾಲಯ ಸದಾ ಸಂದೇಹಕ್ಕೆ ಒಳಗಾಗುತ್ತಲೇ ಬಂದಿದೆ.
ಸಮಗ್ರವಾಗಿ ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟ್ ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೆಂದು ಹೇಳಿತು. ಆದರೆ ಅಷ್ಟಕ್ಕೆ ಇಡಿ ತನಿಖಾ ಸಂಸ್ಥೆ ಸುಮ್ಮನಾಗಲಿಲ್ಲ, ತನ್ನ ಸೋಲನ್ನೂ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಮೋಶಾಗಳು ಅವಕಾಶವನ್ನೂ ಕೊಡಲಿಲ್ಲ. ಹೀಗಾಗಿ ಹೈಕೋರ್ಟ್ ತೀರ್ಪನ್ನು ಇಡಿ ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಿತು. ಹೇಗಾದರೂ ಮಾಡಿ ಗುರುತರ ಕಳಂಕಗಳಿಲ್ಲದ ಸಿದ್ದರಾಮಯ್ಯನವರಿಗೆ ಭ್ರಷ್ಟಾಚಾರದ ಕಳಂಕ ಮೆತ್ತಲೇಬೇಕು, ರಾಜಕೀಯವಾಗಿ ಮುಗಿಸಬೇಕು ಹಾಗೂ ಕಾನೂನಿನ ಬಲೆಗೆ ಬೀಳಿಸಲೇ ಬೇಕು ಎನ್ನುವ ಜಿದ್ದಿಗೆ ಬಿದ್ದ ಇಡಿ ಮೇಲ್ಮನವಿ ಸಲ್ಲಿಸಿ ಸುಪ್ರೀಂ ಮೆಟ್ಟಿಲು ಹತ್ತಿತ್ತು.
ಆದರೆ.. ಅಲ್ಲಿ ಆಗಿದ್ದೇ ಇಡಿ ಸಂಸ್ಥೆಗೆ ಕಪಾಳ ಮೋಕ್ಷ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿಯವರು ಹಾಗೂ ಇನ್ನೊಬ್ಬ ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರರವರು ಇಡಿ ಸಲ್ಲಿಸಿದ ಮೇಲ್ಮನವಿಯನ್ನೇ ವಜಾಗೊಳಿಸಿದರು. ಬರೀ ವಜಾ ಅಷ್ಟೇ ಆಗಿದ್ದರೆ ಇಡಿ ಮತ್ತೆ ಮತ್ತೆ ಇಂತಹುದೇ ದ್ವೇಷ ರಾಜಕೀಯಕ್ಕೆ ಮಾಧ್ಯಮವಾಗುತ್ತಿತ್ತು. ಆದರೆ ನ್ಯಾಯಮೂರ್ತಿಗಳು ಈ ಇಡಿ ಎನ್ನುವ ಮೀತಿಮೀರಿದ ತನಿಖಾ ಸಂಸ್ಥೆಗೆ ಗೈಡ್ ಲೈನ್ ವಿಧಿಸಬೇಕೆಂದು ಹೇಳಿದ್ದು ಇಡಿಗೆ ಹಾಗೂ ಅದರ ಪಾಲಕರಿಗೆ ನುಂಗಲಾರದ ತುತ್ತಾಯಿತು.
ಯಾಕೆಂದರೆ ಈಗ ಕೇಂದ್ರ ಸರಕಾರ ತನ್ನ ವಿರೋಧಿಗಳನ್ನು ಮಣಿಸಲು, ಬೇರೆ ಪಕ್ಷದ ನಾಯಕರನ್ನು ತನ್ನ ಪಕ್ಷಕ್ಕೆ ಸೆಳೆಯಲು, ಪಕ್ಷಾಂತರ ಮಾಡಿಸಿ ಸರಕಾರಗಳನ್ನೇ ಉರುಳಿಸಲು ಈ ಇಡಿ ಅಸ್ತ್ರವನ್ನು ಯಗ್ಗು ಸಿಗ್ಗಿಲ್ಲದೇ ಬಳಸುತ್ತಲೇ ಬಂದಿತ್ತು. ಈ ಮಹತ್ಕಾರ್ಯಕ್ಕೆ ಸುಪ್ರೀಂ ಕೋರ್ಟ್ ಏನಾದರೂ ತಡೆ ಹಾಕಿ, ಮೂಗುದಾರ ತೊಡಿಸಿ, ಗೈಡ್ಲೈನ್ ಗಡಿಯನ್ನು ಹಾಕಿದ್ದೇ ಆದರೆ ಕೇಂದ್ರದ ಇಡಿ ಅಸ್ತ್ರ ತನ್ನ ಶಕ್ತಿ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಮುಡಾ ಪ್ರಕರಣದ ಮೇಲ್ಮನವಿ ವಜಾ ಕೇಸ್ ಇಡಿಗೆ ನಿಯಂತ್ರಣ ಹೇರುವ ಪ್ರಯತ್ನಕ್ಕೂ ಚಾಲನೆ ಇತ್ತಂತಾಗಿದೆ.
ಇದೆಲ್ಲದಕ್ಕಿಂತಲೂ ನ್ಯಾಯಮೂರ್ತಿಗಳು ಇಡಿ ಕುರಿತು ಆಡಿದ ಕಠಿಣಾತಿ ಕಠಿಣ ಮಾತುಗಳು ಇಡಿ ಹಾಗೂ ಅದರ ಪೋಷಕರ ಗಂಟಲಿನ ಪಸೆ ಆರುವಂತೆ ಮಾಡಿದೆ. “ರಾಜಕೀಯ ಕದನಕ್ಕೆ ಮತದಾರರನ್ನು ಬಳಸಿಕೊಳ್ಳಬೇಕೆ ಹೊರತು, ಇದಕ್ಕಾಗಿ ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಕೆ ಮಾಡಬಾರದು” ಎಂದು ಹೇಳುವ ಮೂಲಕ ನೇರವಾಗಿ ಮೋದಿ ಸರಕಾರಕ್ಕೆ ಮರ್ಮಾಘಾತವಾಗುವಂತಹ ತೀರ್ಪಿತ್ತಿದೆ. ಕಳೆದ ಒಂದು ದಶಕದಿಂದ ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳಾದ ಐಟಿ, ಸಿಬಿಐ ಹಾಗೂ ಇಡಿ ಗಳನ್ನು ತನ್ನ ರಾಜಕೀಯ ದ್ವೇಷಕ್ಕೆ ಪೂರಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆ. ಈ ಸಂಸ್ಥೆಗಳು ಹೆಸರಿಗಷ್ಟೇ ಸ್ವಾಯತ್ತ ಸಂಸ್ಥೆಗಳಾದರೂ ಕೇಂದ್ರ ಸರಕಾರದ ಆಧೀನದಲ್ಲಿದ್ದು ಮೋದಿ- ಶಾ ಗಳ ವಿವೇಚನೆಯಂತೆ ಕಾರ್ಯ ನಿರ್ವಹಿಸುತ್ತಾ ಬಂದಿವೆ. ತನ್ನ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಈ ಸಂಸ್ಥೆಗಳನ್ನು ಬಿಜೆಪಿ ಪಕ್ಷ ದುರುಪಯೋಗ ಮಾಡುತ್ತಿದೆ.
ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕ್ರೇಜಿವಾಲ್, ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ, ಬಿಆರ್ ಎಸ್ ನಾಯಕಿ ಕವಿತಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಮುಂತಾದ ನಾಯಕರನ್ನು ತನಿಖಾ ಸಂಸ್ಥೆಗಳು ಬಂಧಿಸಿ ಜೈಲಿಗೆ ಕಳಿಸಿವೆ. ಅದೇ ರೀತಿ ಕರ್ನಾಟಕದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿ ಬಂಧಿಸಿ ಜೈಲಿಗೆ ಕಳುಹಿಸಲು ಇಡಿ ಮೂಲಕ ಮೋದಿ ಸರಕಾರ ಪ್ರಯತ್ನಿಸಿತು. ಆದರೆ ನ್ಯಾಯಾಧೀಶರುಗಳ ಸಂವಿಧಾನಬದ್ದ ವಿವೇಚನೆ ಇಂತಹ ಅವಘಡವನ್ನು ತಪ್ಪಿಸಿತು. ಇಡಿ ಹಾಗೂ ಅದರ ಹಿಂದಿರುವ ಸೂತ್ರಧಾರರಿಗೆ ಮುಟ್ಟಿ ನೋಡಿಕೊಳ್ಳುವಂತಹ ಪಾಠವನ್ನೂ ಕಲಿಸಿತು.
ಆದರೂ ಈ ಸರ್ವಾಧಿಕಾರಿ ಮನೋಭಾವನೆಯ ಮೋದಿ ಸರಕಾರ ಅಗತ್ಯ ಇದ್ದಾಗಲೆಲ್ಲಾ ಈ ತನಿಖಾ ಸಂಸ್ಥೆಗಳನ್ನು ತಮ್ಮ ರಾಜಕೀಯ ದ್ವೇಷಕ್ಕೆ ಬಳಸುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಇಡಿ ಮಾತ್ರವಲ್ಲ, ಸಿಬಿಐ, ಐಟಿ ಯಂತಹ ಸರಕಾರಿ ತನಿಖಾ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಆದಷ್ಟು ಬೇಗ ರೂಪಿಸುವುದು ಸದ್ಯದ ತುರ್ತು ಅಗತ್ಯವಾಗಿದೆ. ಕೇಂದ್ರ ಸರಕಾರದ ಕೈಗೊಂಬೆಗಳಾದ ಈ ಸಂಸ್ಥೆಗಳಿಗೆ ಮೂಗುದಾರ ಹಾಕಲೇಬೇಕಿದೆ. ಅವುಗಳನ್ನು ಸರಕಾರದ ನೇರ ಹಿಡಿತದಿಂದ ಬೇರ್ಪಡಿಸಿ ಸ್ವಾಯತ್ತ ಸಂಸ್ಥೆಗಳಾಗಿ ಪರಿವರ್ತಿಸಬೇಕಿದೆ. ಪಕ್ಷಾತೀತವಾಗಿ ಸಂವಿಧಾನದ ಪರಿಮಿತಿಯಲ್ಲೇ ಕಾರ್ಯನಿರತವಾಗುವಂತೆ ನ್ಯಾಯಾಂಗ ಆದೇಶಿಸಬೇಕಿದೆ. ಹೀಗೆ ಮಾಡದೇ ಹೋದರೆ ಇಂದಿಲ್ಲಾ ಮುಂದೆ ಈ ತನಿಖಾ ಸಂಸ್ಥೆಗಳ ದುರ್ಬಳಿಕೆಯಿಂದಾ ಸಾಂವಿಧಾನಿಕ ಪ್ರಜಾಪ್ರಭುತ್ವ ಅಳಿದು ಹಿಂದುತ್ವವಾದಿ ಸರ್ವಾಧಿಕಾರಿ ಆಡಳಿತ ವ್ಯವಸ್ಥೆ ಹೇರಿಕೆಯಾಗುವ ಸಾಧ್ಯತೆಗಳೆ ಹೆಚ್ಚಿವೆ. ಈಗ ಸಂವಿಧಾನದ ಅಳಿವು ಉಳಿವು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಿಂತಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ- http://ಬಿಹಾರ ವಿಧಾನಸಭಾ ಚುನಾವಣೆ -ಚುನಾವಣಾ ಆಯೋಗದ ಅನುಮಾನಾಸ್ಪದ ನಡೆ https://kannadaplanet.com/bihar-suspicious-move-by-election-commission/