ಬೆಂಗಳೂರಿನ ನಿರ್ದಿಷ್ಟ ಪ್ರದೇಶವೊಂದನ್ನು ‘ಪಾಕಿಸ್ತಾನ’ ಎಂದಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಐವರು ಸದಸ್ಯರ ಪೀಠ, ತಮ್ಮ ವೈಯಕ್ತಿಕ ಪೂರ್ವಾಗ್ರಹಗಳು ತಮ್ಮ ಕರ್ತವ್ಯದ ಮೇಲೆ ಪ್ರತಿಫಲಿಸದಂತೆ ವಕೀಲರು ಮತ್ತು ನ್ಯಾಯಾಧೀಶರುಗಳು ನೋಡಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡಿದೆ.
ನಾವು ಭಾರತದ ಭೂಪ್ರದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧ. ಆದರೆ ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶ ಗಮನಿಸಿದ ಪೀಠ ತಾನು ಹೂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿತು.