ಕಲಬುರಗಿ: ಕೈಗಾರಿಕೋದ್ಯಮಿ ಗೌತಮ್ ಅದಾನಿ ದೇಶದ ಪ್ರತಿಗಾಮಿ ಸರ್ಕಾರಗಳಿಗೆ ನೆರವು ನೀಡುತ್ತಿದ್ದಾರೆ. ಇವರಿಗೆ ತತ್ವ, ಸಿದ್ಧಾಂತದ ಮೇಲೆ ನಡೆಯುತ್ತಿರುವ ಪಕ್ಷಗಳು ಬೇಕಿಲ್ಲ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಅದಾನಿ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಒಗ್ಗಟ್ಟಾಗುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ನರೇಂದ್ರ ಮೋದಿ-ಅಮಿತ್ ಶಾ ಅವರು ಅದಾನಿಯಂತಹ ಭಾರಿ ಉದ್ಯಮಿಗಳಿಂದ ಹಣ ಪಡೆದು ಚುನಾವಣೆ ನಡೆಸುತ್ತಿದ್ದಾರೆ. ಮೋದಿ, ಶಾ ಅವರೂ ಸಹ ಇಂತಹ ಉದ್ಯಮಿಗಳನ್ನೇ ಬೆಳೆಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಜಾರ್ಖಂಡ್ ರಾಜ್ಯಕ್ಕೆ ಹೋಗುತ್ತಿದ್ದೇನೆ. ಈಗಾಗಲೇ ಎರಡು ಬಾರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನಮ್ಮ ರಾಜ್ಯಕ್ಕೆ ಏನೆಲ್ಲಾ ಕೊಡುಗೆಗಳನ್ನು ನೀಡುತ್ತೀರಿ ಎಂದು ಅಲ್ಲಿನ ಜನ ಕೇಳುತ್ತಿದ್ದಾರೆ. ಬಿಜೆಪಿಯವರು 370 ಕಲಂ ರದ್ದತಿ ಬಗ್ಗೆ ಪದೇ ಪದೇ ಹೇಳುತ್ತಿದ್ದಾರೆ. ಆಯಾ ರಾಜ್ಯಕ್ಕೆ ಏನು ಕೊಡುತ್ತಿದ್ದಾರೆ ಎಂಬುದರ ಬಗ್ಗೆಯೂ ಹೇಳಬೇಕು. ರಾಜ್ಯಗಳಿಗೆ ಜಿಎಸ್‌ಟಿ ಪಾಲು, ರೈತರಿಗೆ ನೆರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ. ಇಂತಹ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ನೀಡುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ ನಾವು ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿಗಳನ್ನು ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದರು. ಬಿಜೆಪಿ ಯಾವತ್ತೂ ತಿರಂಗಾ ಮತ್ತು ಸಂವಿಧಾನವನ್ನು ಒಪ್ಪುವುದಿಲ್ಲ. ರಾಮಲೀಲಾ ಮೈದಾನದಲ್ಲಿ ಸಂವಿಧಾನ ಪ್ರತಿಯನ್ನೇ ಸುಟ್ಟವರು ಬಿಜೆಪಿ ನಾಯಕರು ಎಂದು ಖರ್ಗೆ ತಿರುಗೇಟು ನೀಡಿದರು.