ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲಾಗಿದೆ ಎಂಬ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯ ಚುನಾವಣಾಧಿಕಾರಿ ಎಸ್. ಚೊಕ್ಕ ಲಿಂಗಮ್ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಹೊರಬಿದ್ದ ನಂತರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಆಘಾಡಿ ನಾಯಕರು ಆರೋಪಿಸುತ್ತಿರುವ ಬೆನ್ನಲ್ಲೇ ಚುನಾವಣಾಧಿಕಾರಿಗಳುಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಈ ರೀತಿಯ ವಿವಾದಗಳನ್ನು ಅತಿರಂಜಿತಗೊಳಿಸುವ ಯಾವುದೇ ಪ್ರಯತ್ನ ಕಂಡುಬಂದರೂ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಾನು ಇವಿಎಂ ಹ್ಯಾಕ್ ಮಾಡಬಲ್ಲೆ ಎಂದು ವಿದೇಶದಲ್ಲಿ ಕುಳಿತು ಹೇಳಿಕೆ ನೀಡಿದ್ದ ಸೈಯದ್ ಶುಜಾ ಎಂಬಾತನ ವಿರುದ್ಧ ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ದೆಹಲಿ ಮತ್ತು ಮುಂಬೈ ಪೊಲೀಸರು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ಇವಿಎಂ ಬಗ್ಗೆ ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವ ಅಥವಾ ಈ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸುಳ್ಲೂ ಸುದ್ದಿ ಹರಡುವುದು ಗಂಭೀರ ಅಪರಾಧವಾಗಿದ್ದು, ಇದರಲ್ಲಿ ಭಾಗಿಯಾಗುವ ಯಾರೊಬ್ಬರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಎನ್ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಜಯಂತ್ ಪಾಟೀಲ್ ಅವರು ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ಬಳಕೆ ಕುರಿತು ಆತಂಕ ವ್ಯಕ್ತಪಡಿಸಿದ್ದರು, ಸಂಜೆ 5 ಗಂಟೆಯ ನಂತರ ಮತದಾನದ ಪ್ರಮಾಣ ದಿಢೀರನೆ ಹೆಚ್ಚಾಗಿದ್ದನ್ನುಅವರು ಪ್ರಶ್ನಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸಲು ಮತಪತ್ರಗಳನ್ನು ಮರಳಿ ತರುವಂತೆ ಅವರು ಒತ್ತಾಯಿಸಿದ್ದರು.