Sunday, September 8, 2024

ಅಧಿವೇಶನದಲ್ಲಿ ಅರಚಾಟದ ತಂತ್ರ ;  ಪ್ರಜಾತಂತ್ರದ ದುರಂತ

Most read

ಹಗರಣಗಳಾಗಿದ್ದರೆ ಆ ಕುರಿತು ಚರ್ಚಿಸಬಾರದು ಎಂದೇನಿಲ್ಲ. ಆದರೆ ಆ ಚರ್ಚೆಗಳು ಸಕಾರಾತ್ಮಕ ಸಂವಾದವಾಗಿರದೇ ವಾದ ವಿವಾದ ವಿತಂಡವಾದಗಳೇ ಆದಾಗ ಅಧಿವೇಶನದ ಉದ್ದೇಶ ಹಳ್ಳ ಹಿಡಿಯುತ್ತದೆ. ಈ ವಿವೇಕ ಆಳುವ ಪಕ್ಷ ಮತ್ತು ಪ್ರತಿಪಕ್ಷದವರಿಗೆ ಇರಲೇ ಬೇಕಾಗುತ್ತದೆ, ಇಲ್ಲವಲ್ಲ ಎನ್ನುವುದೇ ಪ್ರಜಾಪ್ರಭುತ್ವದ ದುರಂತವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈಗ ಅಸೆಂಬ್ಲಿ ತುಂಬಾ ಬರೀ ಹಗರಣಗಳ ಹೊಗೆ. ವಾಲ್ಮೀಕಿ ನಿಗಮದ ಹಗರಣವನ್ನ ರಣಾಂಗಣ ಮಾಡಿಕೊಂಡು ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳು ರಣೋತ್ಸಾಹ ತೋರುತ್ತಿವೆ. ‘ಆಗಿರುವ ಹಗರಣವನ್ನು ಒಪ್ಪಿಕೊಂಡು, ಸರಕಾರದ ಲೋಪದೋಷಗಳಿದ್ದರೆ ಸರಿಪಡಿಸಿಕೊಂಡು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದು ಆಡಳಿತ ಪಕ್ಷ ಭರವಸೆ ಕೊಡಬಹುದಿತ್ತು, ಕೊಡಲಿಲ್ಲ. ಪ್ರತಿಪಕ್ಷವಾದರೂ ಹಗರಣ ಕುರಿತು ಸಕಾರಾತ್ಮಕವಾಗಿ ಚರ್ಚಿಸಬಹುದಾಗಿತ್ತು,  ಚರ್ಚಿಸಲಿಲ್ಲ. ಹೀಗಾಗಿ “ನಾ ಕೊಡೆ, ನೀ ಬಿಡೆ” ಎನ್ನುವ ಹಗ್ಗಜಗ್ಗಾಟದಲ್ಲಿ ಕೋಟ್ಯಂತರ ರೂಪಾಯಿಗಳ ತೆರಿಗೆ ಹಣ ವ್ಯರ್ಥವಾಯಿತು. ಅಧಿವೇಶನದಾದ್ಯಂತ ತೌಡು ಕುಟ್ಟುವ ಮಹತ್ಕಾರ್ಯ ಮುಂದುವರೆಯಿತು.

ಬಿಜೆಪಿಗರು ವಾಲ್ಮೀಕಿ ನಿಗಮ ಹಾಗೂ ಮೂಡಾ  ಹಗರಣಗಳ ಕುರಿತು ಕೋಲಾಹಲ ಎಬ್ಬಿಸಿದ್ದಾರೆ. ಅದಕ್ಕೆ ಟಕ್ಕರ್ ಕೊಡಲು ಬಿಜೆಪಿ ಸರಕಾರದಲ್ಲಿದ್ದಾಗ ಆದ ಹಗರಣಗಳ ಪಟ್ಟಿಯನ್ನು ಕಾಂಗ್ರೆಸ್ಸಿಗರು ಬಿಡುಗಡೆ ಗೊಳಿಸಿದ್ದಾರೆ. ಅದೂ ಒಂದಲ್ಲ ಎರಡಲ್ಲ ಒಟ್ಟು 21 ಹಗರಣಗಳ ಪಟ್ಟಿ ಇದೆ. ಆಯ್ತು ಈಗ ಕಾಂಗ್ರೆಸ್ ಸರಕಾರಕ್ಕೆ ಬಿಜೆಪಿ ಸರಕಾರದಲ್ಲಾದ ಹಗರಣಗಳ ಬಗ್ಗೆ ಸಮಗ್ರ ಮಾಹಿತಿ ಇರುವುದೇ ಆದಲ್ಲಿ ಯಾಕೆ ಪ್ರತಿಯೊಂದನ್ನು ತನಿಖೆ ಮಾಡಿಸಿ ಸತ್ಯವನ್ನು ಅನಾವರಣ ಗೊಳಿಸಲಿಲ್ಲ? ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿಲ್ಲ? ತನಿಖೆ ಮಾಡಿಸಲು ಮುಂದಾದರೆ ಸೇಡಿನ ರಾಜಕೀಯ ಎಂದು ಬಿಜೆಪಿಗರು ಮೂರು ದಾರಿ ಸೇರುವಲ್ಲಿ ನಿಂತು ಬಾಯಿ ಬಡಿದುಕೊಳ್ಳುತ್ತಾರೆ ಹಾಗೂ ತಮ್ಮ ಸರಕಾರ ಇದ್ದಾಗ ಆಗಿರುವ ಹಗರಣಗಳನ್ನು ಮರೆತು ಈಗಿನ ಸರಕಾರದ ಅವಧಿಯಲ್ಲಾದ ಹಗರಣಗಳ ಬಗ್ಗೆ ವಿಧಾನಸೌಧದ ಚಾವಣಿ ಛಿದ್ರವಾಗುವಂತೆ ಕಿರುಚಾಡುತ್ತಾರೆ. ಬೇರೆಯವರ ಹಗರಣ ಪ್ರಶ್ನಿಸುವವರು ಮೊದಲು ತಾವು ಶುದ್ಧ ಹಸ್ತರಾಗಿರಬೇಕಲ್ಲವೇ? ಮುಂದೊಮ್ಮೆ ಬಿಜೆಪಿ ಸರಕಾರ ಬಂದಾಗ ಇದೇ ಮರುಕಳಿಸುತ್ತದೆ. ಈಗ ಹಗರಣದ ಮಸಿ ಮೆತ್ತಿಕೊಂಡ ಪಕ್ಷದವರು ವಿರೋಧ ಪಕ್ಷದಲ್ಲಿ ಕೂತು ಆ ಆಳುವ ಪಕ್ಷದ ಹಗರಣಗಳ ಬಗ್ಗೆ ಆಕಾಶ ಭೂಮಿ ಒಂದು ಮಾಡುತ್ತಾರೆ.

ಇದೆಲ್ಲಾ ಒಂದು ರೀತಿಯ ಸಮಯಸಾಧಕ ರಾಜಕಾರಣ. ಈಗ ರಾಜಕಾರಣ ಎನ್ನುವುದೇ ಪಕ್ಷಾತೀತವಾಗಿ ಅವಕಾಶವಾದಿ ಕಳ್ಳರ ಸಂತೆಯಾಗಿದೆ. ಇಲ್ಲಿ ಯಾರೂ ಸಾಚಾಗಳಿಲ್ಲವೆಂಬುದೂ ಜನರಿಗೆ ಗೊತ್ತಾಗಿದೆ. ಪ್ರತಿ ಅಧಿವೇಶನದ ಸಮಯದಲ್ಲಿ ಈ ಆಡಳಿತ ಮತ್ತು ವಿರೋಧ ಪಕ್ಷಗಳ ಬೃಹನ್ನಾಟಕವನ್ನು ಜನರು ನೋಡುತ್ತಲೇ ಇರುತ್ತಾರೆ. ಮಹಾಜನತೆಗೆ ಅಸಹನೆ ಹೆಚ್ಚಾದಾಗ ಪಕ್ಷಗಳನ್ನು ಅದಲು ಬದಲು ಮಾಡುತ್ತಾರೆ. ಯಾವ ಪಕ್ಷ ಬಂದರೂ ಮತ್ತೆ ಇದೇ ಪುನರಾವರ್ತನೆ ಆಗುತ್ತಲೇ ಇರುತ್ತದೆ. “ಅವರ ಬಿಟ್, ಇವರ ಬಿಟ್, ಅವರಾರು?” ಎನ್ನುವ ಆಟವನ್ನು ಮತದಾರರೂ ಆಡುತ್ತಿರುತ್ತಾರೆ.

ಹೋಗಲಿ, ಪ್ರತಿಪಕ್ಷಗಳು ಅಧಿವೇಶನದಲ್ಲಿ ಹೀಗೆ ಹಗರಣವೊಂದನ್ನು ಹಿಡಿದುಕೊಂಡು ಜನಹಿತದ ಚರ್ಚೆಗಳೇ ಆಗದಂತೆ ಮಾಡುವುದರಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಆಳುವ ಪಕ್ಷಕ್ಕೆ. ಯಾಕೆಂದರೆ ಆಳುವ ಸರಕಾರ ಅನೇಕಾನೇಕ ತಪ್ಪುಗಳನ್ನು ಮಾಡುತ್ತಲೇ ಬಂದಿರುತ್ತದೆ. ಅವುಗಳ ಕುರಿತೂ ಚರ್ಚೆಯಾಗ ಬೇಕಾಗುತ್ತದೆ. ಒಂದೋ ಎರಡೋ ಹಗರಣಗಳ ಜಗಳವೇ ಅಧಿವೇಶನದ ಕಾಲಾವಧಿಯನ್ನು ನುಂಗಿ ಹಾಕಿದರೆ ಆಳುವ ಸರಕಾರ ಬೇರೆ ತಪ್ಪುಗಳಿಗೆ ಉತ್ತರಿಸುವುದರಿಂದ ಪಾರಾದಂತಾಗುತ್ತದೆ ಹಾಗೂ ಅದಕ್ಕೆ ಪ್ರತಿಪಕ್ಷಗಳೇ ಅನುವು ಮಾಡಿಕೊಟ್ಟಂತಾಗುತ್ತದೆ. ಇವರ ಹಗರಣದ ಬಗ್ಗೆ ಅವರು, ಅವರ ಹಗರಣಗಳ ಕುರಿತು ಇವರು ಸ್ಪರ್ಧೆಗೆ ಬಿದ್ದವರಂತೆ ಕೆಸರೆರಚಾಟಕ್ಕೆ ಇಳಿದಾಗ ಅಸೆಂಬ್ಲಿಯಲ್ಲಿ ಜನರ ಹಿತಾಸಕ್ತಿಯ ಕುರಿತು, ರಾಜ್ಯದ ಅಭಿವೃದ್ದಿ ಯೋಜನೆಗಳ ಕುರಿತು ಚರ್ಚೆಗಳಿಗೆ ಅವಕಾಶವೇ ಇಲ್ಲವಾಗುತ್ತದೆ. ಹಾಗೂ ಆಳುವ ಸರಕಾರಕ್ಕೂ ಇದೇ ಬೇಕಾಗಿರುತ್ತದೆ.

ಜನತಂತ್ರ ವ್ಯವಸ್ಥೆಯಲ್ಲಿ ಅಧಿವೇಶನ ಅಂತ ಇರುವುದು ಹಾಗೂ ಕರೆಯುವುದು ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರಗಳನ್ನು ಕಂಡು ಹಿಡಿಯಲು. ಆದರೆ ಅಲ್ಲಿ ಸದನದಲ್ಲಿ  ಯಾವಾಗಲೂ ಈ ಆಶಯಕ್ಕೆ ವ್ಯತಿರಿಕ್ತವಾದ ವಿತಂಡವಾದಗಳೇ ಮುನ್ನಲೆಗೆ ಬರುತ್ತವೆ ಹಾಗೂ ರಾಜ್ಯದ ಹಾಗೂ ಅಲ್ಲಿಯ ಜನರ ಹಿತಾಸಕ್ತಿಗಳು ಹಿನ್ನೆಲೆಗೆ ಸರಿಯುತ್ತವೆ.

ಹಗರಣಗಳಾಗಿದ್ದರೆ ಆ ಕುರಿತು ಚರ್ಚಿಸಬಾರದು ಎಂದೇನಿಲ್ಲ. ಆದರೆ ಆ ಚರ್ಚೆಗಳು ಸಕಾರಾತ್ಮಕ ಸಂವಾದವಾಗಿರದೇ ವಾದ ವಿವಾದ ವಿತಂಡವಾದಗಳೇ ಆದಾಗ ಅಧಿವೇಶನದ ಉದ್ದೇಶ ಹಳ್ಳ ಹಿಡಿಯುತ್ತದೆ. ಈ ವಿವೇಕ ಆಳುವ ಪಕ್ಷ ಮತ್ತು ಪ್ರತಿಪಕ್ಷದವರಿಗೆ ಇರಲೇಬೇಕಾಗುತ್ತದೆ, ಇಲ್ಲವಲ್ಲ ಎನ್ನುವುದೇ ಪ್ರಜಾಪ್ರಭುತ್ವದ ದುರಂತವಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ಪತ್ರಕರ್ತರು.

ಇದನ್ನೂ ಓದಿ- http://ಹಗರಣಗಳ ನೆಪ, ಆರೋಪ ಪ್ರತ್ಯಾರೋಪಗಳ ಪ್ರತಾಪ https://kannadaplanet.com/pretense-of-scandals-glory-of-accusations-and-rebuttals/

More articles

Latest article