ಒಂದ್ ಕಥೆ ಹೇಳ್ತೀನಿ. ಒಂದೂರಲ್ಲಿ…. ಕಥೆ ಹೇಳುವಾಗ ಯಾವಾಗಲು ಒಂದೇ ಊರು ಒಬ್ಬನೇ ಮನುಷ್ಯ. ನನ್ ಕಥೆಲಿ ಕೆಲವರೇ ಸಾರ್ವಜನಿಕರು ಮತ್ತು ಹಲವಾರು ರಸ್ತೆಗಳು. ಒಂದ್ ಸರಿ ಏನಾಯ್ತು ಅಂದ್ರೆ, ನಮ್ ಬೆಂಗ್ಳೂರ್ ಶಿವಾಜಿನಗರದಲ್ಲಿ ಜನಜಂಗುಳಿ ಎಲ್ಲಾ ಖಾಲಿಯಾದ ಮೇಲೆ ಸುಮಾರು 2 ಗಂಟೆ ಮಧ್ಯ ರಾತ್ರೀಲಿ …ಖಲೀಂ ಚಾಚಾನ ಸೈಕಲ್ ಚಹದಂಗಡಿ ಇದ್ಯಲ್ಲಾ… ಅದೇ ಚರ್ಚು, ಮಿನಾರು, ದೇವಸ್ಥಾನದ ತುದಿಗಳು ಮಾತ್ರ ಕಾಣುವ ಮೂಲೆ, ಅಲ್ಲಿ ಸುಮಾರು ರಸ್ತೆಗಳು ಚಹ ಕುಡಿಯಲು ಬಂದವು. ಆ ದಿನ ಪುಸುಕುಲು ಮಂತ್ರಿಯ ರೋಡ್ ಶೋ ಇತ್ತು. ಶೋನ ಪ್ರಭಾವದಿಂದ ರಸ್ತೆಗಳ ಮೇಲೆ ಆದಂತ ಟ್ರಾಫಿಕ್ ಜಾಮ್ನ ಭಾರ ಹೊತ್ತೂ ಹೊತ್ತೂ ದಣಿದ ಕೆಲವು ರಸ್ತೆಗಳು ಚಾಚಾನ ಚಹಾದಂಗಡಿಗೆ ಬಂದವು. ಆ ದಿನ ಇಡೀ ಊರೇ ಸ್ಥಗಿತಗೊಂಡಿತ್ತು.
ಈ ರಸ್ತೆಗಳಿಗೂ ಹೆಸರುಗಳಿವೆ. ವಿಪ್ರ ರಸ್ತೆ, ಪುಣ್ಯಾಹ ರಸ್ತೆ, ಡಿಕನ್ಸನ್ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆ, ಇಬ್ರಾಹಿಂ ರಸ್ತೆ, ಅಶೋಕ ರಸ್ತೆ…ಅಲ್ಲಿ ದೂರದಿಂದ ಕನ್ಫ್ಯೂಸ್ ಆಗಿ ನಿಲ್ಲಲಾರದೆ ತಮ್ಮ ತಾಣ ಕಾಣದೇ ಅಲೆದಾಡುತ್ತಿರುವ ವಿಭಜನೆಯ ರಸ್ತೆಗಳು, ಗುಜರಾತಿನ ಕೋಮು ಗಲಭೆಯಲ್ಲಿ ಕಳೆದು ಹೋದ ರಸ್ತೆಗಳು, ಕೆಲವು ಸತ್ತ ರಸ್ತೆಗಳ ಭೂತಗಳೂ, ಅಲ್ಲಿ ಇಲ್ಲಿ ಮರಬುಡಗಳಲ್ಲಿ ಸಿಕ್ಕಿಕೊಂಡವೂ ಕೂಡ ಎದ್ದು ಬಂದಿದ್ದವು. ಅದು ಯಾರದ್ದು, ಯಾವ ಜಾತಿಯವರದ್ದು, ಹೆಜ್ಜೆ ಗುರುತುಗಳಷ್ಟೇ ನೆನಪಾಗುಳಿವ ಈ ರಸ್ತೆಗಳಿಗೆ ಯಾವ ಜಾತಿ, ಧರ್ಮ, ಕುಲದ್ದು ಈ ಹೆಜ್ಜೆ, ಮುಟ್ಟಿಸಿ ಕೊಳ್ಳಬಹುದೆ? ಇಲ್ಲಾ ಬದಿಯಲ್ಲಿ ತಳ್ಳುವುದೇ? ಎನ್ನುವ ಯಾವ ಗೋಜಿಲ್ಲ ಅವರಿಗೆ. ಹಿಂದೊಂದು ಕಾಲದಲ್ಲಿ ರಸ್ತೆಗಳನ್ನೂ ಶೋಷಿಸುವ ಜಾತಿಯವರ ಆಸ್ತಿ ಎಂಬಂತೆ ಪ್ರತೀ ಸರಿ ಪುಣ್ಯಾಹ ಮಾಡಿ ನಡಿತಿದ್ರು. ಆ ಕಾಲದ ರಸ್ತೆಗಳು ಒಡೆದು ಚೂರು ಚೂರಾಗಿ ತೀರಿಕೊಂಡು ಭೂತಗಳಾಗಿ ಗೊತ್ತು ಗುರಿ ಇಲ್ಲದೆ ಚಲಿಸಿ ಬಂದವುಗಳು. ಒಂದಷ್ಟು ರಸ್ತೆಗಳು ಈ ಚಹದಂಗಡಿಯ ಸುತ್ತ ಅಲ್ಲಿ ಇಲ್ಲಿ ನೇತಾಡಿಕೊಂಡು ಪಳೆಯುಳಿಕೆಗಳಾಗಿ ಬಿಟ್ಟಿವೆ.
ತೆಳು ಹಳದಿಯ ಮಂದ ಬೆಳಕಿನ ಬೀದಿ ದೀಪ. ಅದರಲ್ಲಿ ಸುಲೈಮಾನಿಯ ನೆನಪು ಮನಸ್ಸಿನಲ್ಲಿ ಹೊಳೆಯುತ್ತಿತ್ತು. ಎಲ್ಲಾ ರಸ್ತೆಗಳು ದಣಿದು ಮುಖವೆಲ್ಲಾ ಪೆಚ್ಚಾಗಿ ಚಹದಂಗಡಿಯ ಪಕ್ಕ ನಿಂತು ಸುಲೈಮಾನಿ ತಯಾರಾಗುವ ಪರಿಮಳವನ್ನು ಹೀರುತ್ತಾ ಆ ಮೊದಲ ಬಿಸಿ ಗುಟುಕಿಗಾಗಿ ಕಾಯುತ್ತಿದ್ದವು.
ವಿಪ್ರ ರಸ್ತೆ ಒಂದು ಸಣ್ಣ ಮಂಪರಿಗೆ ಜಾರಿ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಕುಳಿತು ಕೊಂಡಿತು. ಮಂತ್ರಿಯ ರೋಡ್ ಶೋ ಭಾರವನ್ನು ಹೊತ್ತ ರಸ್ತೆಯ ಕಣ್ಣಲ್ಲೆಲ್ಲಾ ನೀರು. ಮುಟ್ಟಿದರೆ ನಿದ್ದೆ. ಮನಸ್ಸಿನಲ್ಲೇ ಯೋಚನೆ ಮಾಡುತ್ತಾ “ಅಬ್ಬ! ಈ ವಿಪ್ರ ರಸ್ತೆಯ ಮೇಲೆ ಅದೆಷ್ಟು ತೂತು, ಗುಳಿ, ಗಟಾರಗಳು.. ಹೀಗೆ ಇದ್ರೆ ಬೇಗ ತೀರಿಕೊಂಡು ಬಿಡುತ್ತೆ” ಅಂದ್ಕೋತಾ ಅಲ್ಲೇ ಇದ್ದ ಕರೆಂಟ್ ಪೋಲಿಗೆ ಒರಗಿತು. ವಿಭಜನೆಯಲ್ಲಿ ಕಳೆದುಹೋದ ಒಂದಷ್ಟು ರಸ್ತೆಗಳು ಆ ಆಘಾತದಿಂದ 77 ವರ್ಷಗಳಾದರೂ ಆಚೆಗೆ ಬಂದಿಲ್ಲ. 77 ವರ್ಷಗಳಲ್ಲಿ ಅವರಿಗೆ ಅವರ ಮನೆಗಳ ರಸ್ತೆಗಳು ಕಾಣದೆ ಧೂಳು ಹಿಡಿದಿವೆ, ಆದರೆ ಎದೆಯಲ್ಲಿ ನಮ್ಮೂರು ಎಂಬ ಹಮ್ಮು ಹೊತ್ತು ನಿರಾಶ್ರಿತರಾಗಿ ನಡೆಯುತ್ತಲೇ ಇದ್ದಾರೆ. ಇಲ್ಲಿ ಬಂದು ಸ್ವಲ್ಪ ದಿನಗಳಾದವು…. ರಾತ್ರಿ ಸುಲೈಮಾನಿಗೆ ಆಗಾಗ ಬರುತ್ತಾರೆ. ಹಾಗೇ ಗುಜರಾತ್ ನರಮೇಧದಲ್ಲಿ ಮೈಯೆಲ್ಲಾ ಮೆತ್ತಿದ ಹಸೀ ರಕ್ತವನ್ನು ಹಾಗೇ ಹೊತ್ತು ಈಗಲೂ ಸಿಕ್ಕಲ್ಲೆಲ್ಲಾ ಸ್ನಾನ ಮಾಡುತ್ತಿರುತ್ತಾರೆ. ಅವರು ಈ ಚಹದಂಗಡಿಯ ಪಕ್ಕದಲ್ಲೇ ಸದ್ಯಕ್ಕೆ ಗುಡಿಸಲು ಹಾಕ್ಕೊಂಡಿದ್ದಾರೆ. ಹಾಗೆ ದಂಗೆ, ಕೊಲೆ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆಗಳು ಊರಿಗೆ ಊರೇ ಸುಟ್ಟು ಬೂದಿಯಾದ ಕಲಹಗಳು.. ಇಂತಹ ಜಾಗಗಳ ರಸ್ತೆಗಳೆಲ್ಲಾ ಹಿಂಸೆಯ ತೀವ್ರತೆಯನ್ನು ತಡೆಯಲಾರದೆ ಓಡುತ್ತವೆ.
ಚಹದಂಗಡಿ ಚಾಚಾ ಸುಲೈಮಾನಿಯನ್ನು ತಯಾರಿಸುವ ರೀತಿಯೇ ವಿಶೇಷ. ನೀರು ಕಾಯಿಸಿದ ನೀರನ್ನು ಒಮ್ಮೆ ಕಲಸಿ ಅದರಲ್ಲಿ ಚಹಪುಡಿ ಹಾಕಿ ಮಸಾಲೆಗಳನ್ನು ಮೇಲಿನಿಂದ ಉದುರಿಸಿ, ಅದು ಪಾಕವಾಗಲು ಬಿಟ್ಟು ತನ್ನ ಪ್ರೀತಿ ವಿಶ್ವಾಸಗಳೊಂದಿಗೆ ಗ್ಲಾಸ್ ಲೋಟದಲ್ಲಿ ಮೀಟರಿನಗಲ ಸುರಿದು ಅದರ ಮೇಲೆ ಪ್ರೇಮದ ಕಾಣಿಕೆ ಎಂಬಂತೆ ಒಂದೊಂದು ಪುದಿನ ಎಲೆಯನ್ನು ಹಾಕಿ ಕೊಡುತ್ತಾನೆ. ರಸ್ತೆಗಳ ಭಾರವಾದ ಮನಸ್ಸಿಗೆ ಮುದ ನೀಡುವ ಸುಲೈಮಾನಿಯ ಮೊದಲ ಗುಟುಕು ಬಾಯನ್ನು ಆವರಿಸಿ ಗಂಟಲಲ್ಲಿ ಇಳಿದು ಹೋಗುವಾಗ ರಸ್ತೆಗಳು “ಅಮ್ಮಾಹ್” ಎಂದು ಉದ್ಗರಿಸಿದವು. ಆ ಅಮ್ಮಾಹ್ ಪದಕ್ಕೆ ನಿಜವಾದ ಅರ್ಥ ಏನೋ?
ಒಂದು ಭೂತ ರಸ್ತೆ ಒಂದು ಗಾರೆ ಕಲ್ಲಿನ ಮೇಲೆ ಹಾಗೇ ಕೂತು ಮಂಪರಿನಲ್ಲಿ ಬಡಬಡಿಸಲು ಶುರು ಮಾಡಿತು. “ನನ್ನ ಮೇಲೆ ನಡೆದ ಕಾರಣಕ್ಕೆ ಅದೆಷ್ಟು ಚಾಟಿ ಏಟು ತಿಂದ್ರೋ…. ಅಯ್ಯೋ” ಎಂದು ಅಳುತ್ತಾ ಸುಲೈಮಾನಿಯ ಬಿಸುಪನ್ನು ಕಣ್ಣಿಗೆ ಹಿಡಿಯಿತು. ರೋಡ್ ಶೋ ರಸ್ತೆ ದಣಿವು ತಡೆಯಲಾರದೆ ಮತ್ತೊಂದು ಸುಲೈಮಾನಿ ಬೇಕೆಂದು ಹೇಳಿ ಏದುಸಿರು ಬಿಡುತ್ತಿತ್ತು. ಹಾಗೇ ಮರಕ್ಕೆ ಆನಿಸಿಕೊಂಡು ಕೆಳಗೆ ಜಾರುತ್ತ ಕಡೆಗೆ ಧೊಪ್ ಎಂದು ಕುಕ್ಕರಿಸಿತು. “ತಡೀಲಾರದಷ್ಟು ಹೊರೆ ಮತ್ತೆ ಬೆನ್ನೋವು. ನಿಮ್ ಕಾಲದಲ್ಲಿ ಬರೀ ಮಣ್ಣಿನ ದಾರಿ… ಈಗ ನಮ್ ಮೇಲೆ ಹಗುರಾಗಕ್ಕೆ ಟಾರ್ ಹಾಕ್ತಾರೆ. ಆದ್ರೆ ಹಾಕಿದ್ ಎರಡನೆ ದಿನ ಇನ್ಯಾರೋ ಬಂದು ಕೆತ್ತಿ ಗಾಯ ಮಾಡಿ… ಅಯ್ಯೋ..ಭಾಳ ನೋವು. ಅಷ್ಟು ಕಷ್ಟ ಪಟ್ಟು ದುಡ್ ತಗೋತಾರೆ. ಟಾರು ಮಾತ್ರ ಸರಿಯಾಗಿ ಹಾಕಲ್ಲ. ಈಗಂತೂ ಉಸಿರಾಡಕ್ಕೂ ಬಿಡದೆ ಸಿಮೆಂಟ್ ಹಾಕ್ತಾರೆ.
ವಿಭಜನೆಯ ರಸ್ತೆ ಪುರಾಣ ಶುರು ಮಾಡಿತು.. “ನಮ್ಮೂರ ರಸ್ತೆಗಳೆಲ್ಲರೂ ಎಂದೂ ಜೊತೆಗಿದ್ವಿ. ನಂ ಜೊತೆ ಹುಲ್ಲು ಮಣ್ಣು ನೀರು ಕೆಸರು ಎಲ್ರೂ ಇದ್ರು. ವರ್ಷಗಳ ಕಾಲ ನಮ್ಮೂರು ಎಂಬ ಹುಸಿ ಅಭಿಮಾನದಲ್ಲಿ ಬದುಕ್ತಾ ಇದ್ವಿ. ಆದ್ರೆ ದೇಶದ ವಿಭಜನೆಯಾದಾಗ ನಮ್ಮೂರು ಕಳೆದು ಹೋಯಿತು. ಎಷ್ಟೇ ನಡೆದರೂ ನಮ್ಮೂರು ಸಿಗಲಿಲ್ಲ. ನಮ್ಮೂರಲ್ಲೇ ನಿರಾಶ್ರಿತ ರಸ್ತೆಗಳಾದ ನಾವು ಎಲ್ಲಿ ಸೇರುತ್ತೇವೆ ಎಂದು ತಿಳಿಯದೆ ಅಂತೂ ಎಲ್ಲೋ ಅಡ್ಜಸ್ಟ್ ಮಾಡ್ಕೊಂಡು ಸಿಕ್ಕ ಸ್ಥಳದಲ್ಲಿ ಬದುಕಲು ಶುರು ಮಾಡಿದ್ವಿ. ಹಾಗಂತ ರಸ್ತೆಗಳ ಇತಿಹಾಸ ಮರೆಯೋಕ್ಕಾಗುತ್ತಾ?
ವಿಭಜನೆ ರಸ್ತೆಗೆ ಅದೊಂತರಾ ವಿಭಜನೆಗೊಳ್ಳುವ ಆತಂಕದಲ್ಲಿ ಯಾರ್ಯಾರ್ ಎಲ್ಲೆಲ್ಲಿ ಬದುಕುಳಿದಿದ್ದಾರೆ ಎಂದರಿಯದೆ ಮಂತ್ರಿಯ ರೋಡ್ ಶೋ ರಸ್ತೆಯನ್ನು ಕೇಳಿತು. “ನೀನು ದೇಶ ವಿಭಜನೆಯಾದಾಗ ಎಲ್ಲಿದ್ದೆ? ಅದಕ್ಕೆ ರೋಡ್ ಶೋ ರಸ್ತೆ ನಿಧಾನವಾಗಿ ಹೇಳಿತು “ದೇಶದ ವಿಭಜನೆನಾ? ನಮಗಿಲ್ಲಿ ನಮ್ಮನ್ನೇ ದೊಡ್ಡದು ಮಾಡೋದು, ಸಣ್ಣದು ಮಾಡೋದು, ಯಾರೋ ಬರ್ತಾರೆ ಅಂದ್ರೆ ನಮ್ಮನ್ನ ಬೇಲಿ ಹಾಕಿ ಮುಚ್ಚಾಕಿ ಬಿಡೋದು…. ದೇಶ ಬಿಡು ನಮ್ಮನ್ನೇ ವಿಭಜನೆ ಮಾಡ್ತಿರ್ತಾರೆ. ನಮಗೆಲ್ಲಾ ನಮ್ಮೂರು ಅನ್ನೋದೇ ಇಲ್ಲ… ಬರೀ ಭಾರ ಹೊರೋದು ಮತ್ತೆ ಗುಂಡಿ ಬೀಳುತ್ತೆ ಮತ್ತೆ ಕೆತ್ತುತ್ತಾರೆ…. ಇಲ್ಲಿ ಗುಡಿಸಲಲ್ಲಿ ಬದುಕುವ ಮನುಷ್ಯರಿಗೂ ಅಷ್ಟೆ, ಅಯ್ನೋರ ಮಂತ್ರಿಗಳ ರಾದ್ಧಾಂತಕ್ಕೆ ನಾವು ಎತ್ತಂಗಡಿ ಆಗ್ತಾನೇ ಇರ್ತೀವಿ”.
ಅಲ್ಲೀ ತನಕ ಏನೋ ಒಂದು ಆಸೇಲಿ ಬದುಕುತ್ತಿದ್ದ ಗುಜರಾತ್ ಗಲಭೆ ರಸ್ತೆಗೆ ಭಯಂಕರ ಆತಂಕ ಶುರುವಾಯಿತು. ತನ್ನ ಮೇಲಿದ್ದ ಎಲೆಗಳನ್ನೆಲ್ಲಾ ವದರಿ ಮತ್ತೆ ಇನ್ನೆಲ್ಲಿ ತಮ್ಮೂರನ್ನು ಹುಡುಕಿಕೊಂಡು ಹೋಗಬೇಕೋ ಅನ್ನೋ ಆಯಾಸ, ನಿರುತ್ಸಾಹ ಕಾಣ ತೊಡಗಿತು. ವಿಪ್ರ ರಸ್ತೆಗೆ ಮತ್ತೆ ದಾರಿ ಹುಡುಕುವ ಹೆಣಗಾಟ ನೆನೆದು…. ಈಗಲಾದರೂ ನಿಜವಾಗಿ ಸಾಯಲಿಕ್ಕಾಗುವುದಿಲ್ಲವೇ ಎಂಬ ಚಿಂತೆ ಹತ್ತಿತು. ಅಂದು ವಲಸೆ ಕಾರ್ಮಿಕರೊಂದಿಗೆ ಹೊರಟ ರಸ್ತೆಗಳು ಅದರ ಸ್ನೇಹಿತರು ತಮ್ಮ ನೋವು ನೋಡುವುದೋ ಕಾರ್ಮಿಕರ ನೋವು ನೋಡುವುದೋ ತಿಳಿಯದೇ ತುಂಬಾ ಹೆಣಗಾಡಿದರು. ವಲಸೆ ಕಾರ್ಮಿಕರಿಗೆ ತಮ್ಮ ಊರು ತಿಳಿದಿತ್ತು, ಅವರನ್ನು ಹೇಗೋ ಆ ಊರು ಹೊಟ್ಟೆಗಾಕ್ಕೊಳತ್ತೆ ಅನ್ನೋ ಭರವಸೆ ಇತ್ತು ಆದರೇ ಈ ರಸ್ತೆಗಳಿಗೆ ತಮ್ಮೂರು ಎಲ್ಲಿ ಕಳೆದು ಹೋಗಿದೆ ಎಂದೇ ತಿಳಿಯದು. ಅವರ ಊರನ್ನು ಹುಡುಕಿಕೊಂಡು ದಕ್ಷಿಣದ ಕಡೆಗೂ ಬಂದಿದೆ ಎಂದು ಮಂತ್ರಿ ರೋಡ್ ಶೋ ರಸ್ತೆ ಯೋಚನೆ ಮಾಡುತ್ತಿತ್ತು.
ಡಿಕನ್ಸನ್ ರಸ್ತೆ ಮೆಲ್ಲಗೆ ಹೇಳಿತು “ಇಷ್ಟೆಲ್ಲಾ ಆದರೂ ನಮ್ಮ ಊರು, ನಮ್ಮ ದೇಶ, ನಮ್ಮದು ಎನ್ನವ ಒಂದೇ ಭಾವ ನಮ್ಮನ್ನು ಎಲ್ಲೆಡೆ ಒಯ್ಯುತ್ತಿದೆ. ನಾವೂ ಹುಡುಕುತ್ತಿದ್ದೇವೆ”.
ಅಂಗಡಿಯ ಬಲಗಡೆಯಿಂದ ಯಾರೋ ಜೋರಾಗಿ ಕರ್ಕಶವಾಗಿ ಕೂಗಿದ್ದು ಕೇಳಿಸಿ ಎಲ್ಲರೂ ಮುಖ ಮುಖ ನೋಡಿದರು. ಅಷ್ಟರೊಳಗೆ ಒಂದಷ್ಟು ಜನ ಬೇರಂಗಾದ ಬಾವುಟವನ್ನು ಹಿಡಿದು, ಕೈಯಲ್ಲಿ ಕತ್ತಿ ಹಿಡಿದು ಓಡುತ್ತಿದ್ದರು….. ಹಾಗೇ ಅವರು ಓಡಿದಂತೆ ಅವರ ಹಿಂದೆ ಅಷ್ಟು ಹೊತ್ತೂ ಕೇಳುತ್ತಾ ಇದ್ದ ಆ ರಸ್ತೆಯ ಮೇಲೆ ರಕ್ತದ ಹೊಳೆ ಹರಿಯ ತೊಡಗಿತು.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.