‌ಮನೋರಮ ಥಿಯೇಟರಿನ ಒಡಲ ಕಥೆಗಳು- 2

Most read

 ‘’ಅರ್ಧ ಕೆಜಿ ಬೀನ್ಸ್ ತಗೊಂಡಾಗ ಅರ್ಧ ಕೆಜಿ ಆಲುಗಡ್ಡೆ ಮುಫ್ತಾಗ್ ಕೊಡ್ತಾರಾ?”

ತಿರ್ಗಾ ಕೆಲ್ಸ ಮುಂದ್ವರ್ಸುದ್ಲು. ಮತ್ತೆ ಅವಳ ಯೋಚನೆ ಫ್ಯಾನ್ ಬಗ್ಗೆನೇ ಹೋಯ್ತು. ಕೆಲವು ತಿಂಗಳುಗಳ ಹಿಂದೆ ಅಷ್ಟೆ ಅವಳು ಮಗಳಿಗೋಸ್ಕರ ಒಂದ್ ಟೇಬಲ್ ಫ್ಯಾನ್ ಖರೀದಿಸಿದ್ಲು. ಮಗಳಿಗೆ ಓದಕ್ಕೆ ಕಷ್ಟ ಆಗತ್ತೆ ಅಂತ. ಅವಳು ಎಸ್ಎಸ್ಎಲ್ ಸಿ ಓದುತ್ತಿದ್ದಳು. ಅವಳಿಗೆ ಮನೇಲಿ ಮೇಲ್ಗಡೆ ತಿರ್ಗೋ ಫ್ಯಾನ್ ಹಾಕುಸ್ಬೇಕು ಅಂತ ಎಷ್ಟು ಪರಿತಪಿಸ್ತಿದ್ಲು. ಕೈ ಕೆಲಸ ಮಾಡ್ತಾ ಮಾಡ್ತಾ ಅವಳ ಯೋಚನೆಯ ದಾರಿ ಹಳೆ ದಿನಗಳ ಕಡೆ ನಡೆಯಿತು. ಅವಳು ಫ್ಯಾನ್ ತಂದಾಗ ಅದನ್ನು ಟೇಬಲ್ ಮೇಲಿಟ್ಟು, ಅವಳು ಮಗಳು ಇಬ್ಬರೂ “ ‘ನಾನು ನಾನು’ ಅಂತ ಪೈಪೋಟಿಯಲ್ಲಿ ಅದರ ಮುಂದೆ ನಿಂತು ಕೂತು ಆಟ ಆಡ್ತಿದ್ದು ಕಣ್ ಮುಂದೆ ಬಂದು ಹೋಯ್ತು.  ಅವಳು ಮಾಡ್ತಿದ್ದಿದ್ ಕೆಲಸ ಸ್ವಲ್ಪ ನಿಧಾನವಾಯ್ತು, ಅವಳ ಕೈ ಮೈಮರೆತು, ಅವಳ ಕಣ್ಣಲ್ಲಿ ತಾನಾಗೇ ನೀರು ಬರಲು ಶುರು ಆಯ್ತು. ಅವಳು ವಾಸ್ತವಕ್ಕೆ ಬಂದು ದೊಪ್ಪೆಂದು ಬಿದ್ದ ಅನುಭವ. ಆ ವಾಸ್ತವ ದು:ಖದ ಜಲಪಾತಕ್ಕೆ ತಳ್ಳಿದ ಹಾಗೆ ಆಗಿ ಅವಳು ಕೆಲಸ ಮಾಡ್ತಾನೇ ಗಟ್ಟಿಯಾಗಿ ಕಣ್ ಮುಚ್ಚಿ ಧಾರಾಕಾರವಾಗಿ ಬರ್ತಿದ್ದ ಕಣ್ಣೀರನ್ನು ಒರ್ಸ್ಕೊಂಡ್ಳು. ಆಗ ಆಹ್ಲಾದದಲ್ಲಿದ್ದ ಅವನು ಈ ತಾಳ ತಪ್ಪಿದ ಕೈ ಕೆಲಸದಿಂದ ಎಚ್ಚರಾಗಿ ಮೆತ್ತಗೆ ತಿರುಗಿ ನೋಡಿದ. ಸುತ್ತಲೂ ಕತ್ತಲು. ಅವನಿಗೆ ಅವಳೆಲ್ಲಿದ್ದಾಳೆ ಎಂದು ಕಾಣದೇ ಒಂದು ಗುಮಾನಿಯಲ್ಲಿ ಅಲ್ಲಿ ಇಲ್ಲಿ ನೋಡಿದ. ಅಷ್ಟು ಹೊತ್ತಿಗೆ ಇಂಟರ್ವೆಲ್ ಬಿಡ್ತು. ಫಟ್ ಅಂತ ಬೆಳಕು ಬಂತು. ಈ ಮನುಷ್ಯ ತಕ್ಷಣ ತನ್ನ ಜಿಪ್ಪಾಕೊಂಡ. ಪಕ್ಕದಲ್ಲೇ ಕೂತಿದ್ದ ಅವಳು ಸೀರೆ ಸರಿ ಮಾಡ್ಕೊಂಡ್ಳು.  ಕಣ್ಣಲ್ಲಿನ ನೀರು ಒರೆಸಿಕೊಂಡು ಕಷ್ಟಪಟ್ಟು ನಗುನಗುತ್ತಾ, “ಒಂದು 30 ರುಪೆ ಕಡಿಮೆ ಹಾಕ್ಕೊಂಡು ಕೊಡ್ಬುಡಿ, ಐನೋರು, ಕೊನೆಗೆ ನಂಗೆ ಏನೋ ಆಗೋಯ್ತು” ಅಂದ್ಲು. ಅವರಿಬ್ಬರೂ ಆಚೆ ಬರ್ತಿರುವಾಗ ಆ ಐನೋರು 60 ರೂ ಕತ್ತರಿಸಿಕೊಂಡು ಕೊಟ್ಟ. ಆಗ ಅವಳು ಏನ್ ಐನೋರೆ 30 ಅಂದ್ರೆ 60 ಕಡ್ಮೆ ಮಾಡ್ತೀರ ಎನ್ ಮನಸ್ಸಾಕ್ಸಿನೇ ಬೇಡ್ವಾ?” ಅಂದ್ಲು. ಅದಕ್ಕೆ ಆ ವ್ಯಕ್ತಿ “ಕೆಲ್ಸ ಎಷ್ಟೋ ಅಷ್ಟಕ್ ದುಡ್ಡು, ಮುಂಡಾಮೋಚ್ತು, ಮನಸ್ಸಾಕ್ಷಿಯೆಲ್ಲಾ ಮಾತಾಡ್ಬೇಡ. ಮಾಡೋ ಕೆಲ್ಸಕ್ಕೆ ಅದ್ ಬೇರೆ ಹೇಳ್ತಾಳೆ ಮಿಟುಕಲಾಡಿ?”ಅಂದ.  ಅಯ್ಯೋ ಅಂತ ತಲೆ ಬಡ್ಕೊಂಡು ಮನಸ್ಸಿನಲ್ಲಿ “ವೇಸ್ಟ್ ಪೀಸ್” ಅಂದ್ಕೊಂಡು ಸುಮ್ಮನಾಗಿ ಅವಳು ಥಿಯೆಟರ್ನಿಂದ ಆಚೆ ಬಂದ್ಲು.

 ****

ಆ ಥಿಯೆಟರ್ ನಡೆಸುತ್ತಿದುದು ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿ. ಆತನ ಹೆಸರು ಶೌಕತ್ ಮಿಯಾನ್. ಅವನು ಹೆಣ್ಣುತನವನ್ನು ಹೆಚ್ಚು ವ್ಯಕ್ತ ಪಡಿಸುತ್ತಿದ್ದ. ಮಿಯಾನ್ ಗೆ ತಾನು ಶರಪಂಜರದ ಕಲ್ಪನ ಮತ್ತೆ “ಜಲ್ ಬಿನ್ ಮಚ್ಲಿ ನೃತ್ಯ ಬಿನ್ ಬಿಜ್ಲಿ” ಹಿಂದಿ ಚಿತ್ರದ ಸಂಧ್ಯ ಅನ್ನೋ ನಾಯಕಿ ಎಂಬ ಭಾವನೆ.  ಅದೇ ತರ ಕಣ್ಣು ಫ್ಲಟ್ಟರ್ ಮಾಡ್ತಾನೆ, ಅದೇ ತರ ನಡೀತಾನೆ, ಅದೇ ತರ ಡಾನ್ಸ್ ಮಾಡ್ತಾನೆ, ನಗ್ತಾನೆ, ಅಳತಾನೆ ಎಲ್ಲಾ. ಯಾರೂ ಅವನಿಗೆ ಎದ್ರಿಗೆ ಏನೂ ಹೇಳ್ತಿರ್ಲಿಲ್ಲ. ಭಯ. ಏಕಂದ್ರೆ ಅವನು ಭಯಂಕರ ಹಣವಂತ. ಆದ್ರೆ ಅವನ ಹಿಂದೆ ಅವನನ್ನು ನಕಲು ಮಾಡಿ ನಗುತಿದ್ದರು. ಪ್ರತೀ ದಿನದ  ಕಲೆಕ್ಷನ್ ತೆಗೆದುಕೊಳ್ಳಲು ಅಲ್ಲಿ ಬರ್ತಿದ್ದ. ಸಣ್ಣಕ್ಕಿದ್ದ. ಲೂಸ್ ಲೂಸ್ ರೇಶ್ಮೆ ಜುಬ್ಬ ಪೈಜಾಮ ಮತ್ತೆ ಹೆಂಗಸರಂತೆ ಒಂದು ಸ್ಟೋಲ್/ದುಪಟ್ಟ ಹಾಕ್ತಿದ್ದ. ಆತ ಬಂದು ತಾನು ಥಿಯೆಟರ್‌ನ ಮಾಲಿಕ ಅಂತ ತೋರಿಸೋದ್ರಲ್ಲಿ ಅವನಿಗೆ ಒಂಥರಾ ಹೆಮ್ಮೆ! ಥಿಯೆಟರ್ ಸುತ್ತಾ ಗುಂಪಲ್ಲಿ ನಡೆದು ಬಂದು, ಎಲ್ಲರನ್ನೂ ಮಾತನಾಡಿಸುತ್ತಾ, ಒಮ್ಮೆ ಗರ್ವದಿಂದ ನೋಡಿ ಮೆಲ್ಲಗೆ ರಾಣಿಯ ಹಾಗೆ ಸಾಗಿ ಹೋಗಿ ಸೈಯ್ಯದ್ ಚಾಚಾ ಅಂಗಡಿಯ ಮುಂದೆ ಕೂರುತ್ತಿದ್ದ. ಈ ಚಿತ್ರಮಂದಿರದ ಇನ್ನೊಂದು ಭಾಗ ಅಂದರೆ ಚಹದಂಗಡಿ ಮತ್ತು ಸೈಯದ್ ಚಾಚಾ. ಸುಮಾರಾಗಿ ಅವರು ಅ ಚಿತ್ರಮಂದಿರ ಶಿಥಿಲವಾಗ ತೊಡಗಿದಾಗ ಬಂದದ್ದು. ಮಿಯಾನ್ ಮತ್ತು ಅವನು ತುಂಬಾ ವರ್ಷಗಳ ಸ್ನೇಹಿತರು. ಚಾಚಾದು ಚಿಕ್ಕದೊಂದು ಪೆಟ್ಟಿ ಅಂಗಡಿ. ಅಲ್ಲಿ ಹರಟೆ ಹೊಡೆಯೋದು ಮಿಯಾನ ನಿತ್ಯದ ಕೆಲಸ. ಅವನ ಜೊತೆಯಲ್ಲಿ ಕೆಲವು ದೋಸ್ತಿಗಳು ಬರುತ್ತಿದ್ರು. ಅವ್ರ ಈ ಮಿಯಾನ್ ಏನ್ ಮಾತಾಡಿದ್ರೂ ಆಹಾ!!! ಓಹೋ!!! ಕ್ಯಾ ಬಾತ್ ಹೆ ಅಂತ ಹೊಗಳೋ ಕೆಲಸ ಮಾಡೋರು. ಆದ್ರೆ ಚಾಚಾ ಮಾತ್ರ ಹಾಗಲ್ಲ. ನೇರವಾಗಿ ತನಗರಿವಾದಂತೆ ಮಾತನಾಡುತಿದ್ದರು.

******

ಮಿಯಾನ್ ಒಂಥರಾ ವಿಚಿತ್ರ. ಕೆಲವೊಮ್ಮೆ ಥಿಯೆಟರ್ನಲ್ಲಿ ತಾನೂ ಚಿತ್ರ ನೋಡಲು ಹೋಗ್ತಿದ್ದ. ಅವನಿಗೆ ಅಲ್ಲಿ ಸೆಕ್ಸ್ ವರ್ಕರ್ ಗಳೆಲ್ಲರೂ ಪರಿಚಯ. ತುಂಬಾ ಆತ್ಮೀಯವಾಗಿ ಅವರನ್ನೆಲ್ಲಾ ಮಾತಾಡಿಸುತ್ತಿದ್ದ. ಅವನು ಥಿಯೆಟರ್‌ ಗೆ ಬಂದ್ರೆ ಸಾಕು, ಥಿಯೆಟರ್ನಲ್ಲಿ ಬದುಕೋರೆಲ್ಲಾ ಗುಂಪು ಸುತ್ಕೊಂಡು ಅವನ್ನ ಮಾತಾಡಸ್ತಾ ಇದ್ರು.  ಈ ಸೆಕ್ಸ್ ವರ್ಕರ್ಸ್ ಗೆಲ್ಲಾ ಗೊತ್ತು ಆತ ತನ್ನ ಪಟಲಾಂ ಜೊತೆ ಬಂದರೆ ಇವರು ಕೆಲಸ ಮಾಡಲು ಕೆಳಗೆ ಹಾಲಿಗೆ ಹೋಗಬೇಕಂತ. ಯಾಕಂದ್ರೆ ಬಾಲ್ಕನಿ ಸಾಹೇಬರಿಗೆ ಮಾತ್ರ. ಓಹ್!!! ಬಾಲ್ಕನಿಯಲ್ಲಿ ಅವರೆಲ್ಲರೂ ಕೂತಾಗ ಆತನ ಫೇವರೇಟ್ ಸಿನೆಮ ಹಾಕ್ತಿದ್ದ. “ಜಲ್ ಬಿನ್ ಮಚ್ಲಿ ನೃತ್ಯ ಬಿನ್ ಬಿಜಲಿ” ಯ ಹಿರೋಯಿನ್ ಕುಣಿದಂಗೆ ಅವನು ಕುಣೀತಿದ್ದ. ಹಾಗೆ ಶರಪಂಜರ ಹಾಕಿ ಡೈಲಾಗುಗಳೆಲ್ಲಾ ಹೇಳಿ ಬಾಲ್ಕನಿಯಲ್ಲಿ ಅವರೆಲ್ಲ ಮಜಾ ಮಾಡೋರು. ಲೈಂಗಿಕವಾಗಿಯೂ ಮಜಾ ಮಾಡೋರು. ಆ ವ್ಯಕ್ತಿ ಆ ಥಿಯೇಟರ್‌ ನ ಇಟ್ಕೊಂಡಿದ್ದಿದ್ದೇ ಅವನ ಮಜಾಗೋಸ್ಕರ ಮತ್ತೆ ಅಲ್ಲಿ ಬದುಕುತ್ತಿದ್ದ ಜನರಿಗೋಸ್ಕರ.  ಅವನ ಜೊತೆ ಇದ್ದವರೂ ಅವನ ತರದ ಹೆಣ್ಣಿನ ಮನಸ್ಸು ಭಾವನೆ ಹೃದಯ ಇದ್ದವ್ರು. ಪೋಲೀಸ್ ಅಂತು ಈ ಕಡೆ ತಲೆ ಹಾಕದಂತೆ ವ್ಯವಸ್ಥೆ ಮಾಡಿಟ್ಟಿದ್ದ. ಅಲ್ಲಿ ಬದುಕುತ್ತಿದ್ದ ಜೀವಗಳಿಗೆ ಮುಲಾಮಿನಂತೆ ಆ ಥಿಯೆಟರಿನ ಪಕ್ಕದಲ್ಲಿ ಸೈಯದ್ ಚಾಚಾನ ಚಹ ಅಂಗಡಿ. ಅಲ್ಲಿದ್ದವರಿಗೆ ಚಾಚಾ ಯಾವಾಗಲೂ ಸಲಹೆ ಸಹಾಯ ನೀಡುತ್ತಾ ಇದ್ದರು. ಅಲ್ಲಿ ಇದೆಲ್ಲದರ ಭಾಗವಾಗಿ ಬರುವವರು ಐದು ಜನ ಹೆಂಗಸರು. ಅದರಲ್ಲಿ ಇಬ್ಬರು ದಂಧಾ ಮಾಡೋವ್ರು, ರಾತ್ರಿ ಮನೆಗೆ ಹೋಗುತ್ತಾರೆ. ಇನ್ನು ಮೂವರು ದಿಕ್ಕು ದೆಸೆ ಇಲ್ಲದೆ ಎಲ್ಲವನ್ನೂ ಕಳೆದುಕೊಂಡ ಮುದುಕಿಯರು. ಅವರು ಅಲ್ಲೇ ಥಿಯೇಟರ್‌ ನಲ್ಲೇ ತಂಗುತ್ತಿದ್ದರು. ಎಲ್ಲಾ ಸಂಬಂಧಗಳನ್ನೂ ಕಳೆದುಕೊಂಡು ಬಿಟ್ಟರೂ ಇನ್ನು ನನಗೆ ಗತಿಯೇ ಇಲ್ಲ, ಊಟ ಇಲ್ಲ, ಸೂರೂ ಇಲ್ಲ, ಇನ್ನು ನಾನು ತೀರಬೇಕು ಅಂತ ಬದುಕಿಗೆ ತಿಳಿಯೋದಿಲ್ವಲ್ಲ, ಏನ್ ಮಾಡೋದು?.

ಮೊದಲ ಭಾಗ ಓದಿದ್ದೀರಾ? ಮನೋರಮ ಎಂಬ ಥಿಯೇಟರಿನ ಒಡಲ ಕಥೆಗಳು

ಅವಳಿಗೆ ಗೊತ್ತು ಈ ದಂಧಾದಲ್ಲಿ ಮಾತ್ರ ಅಲ್ಲ, ಯಾವ ಕೆಲಸದಲ್ಲೂ ಐನೋರು ಇಷ್ಟು ಹೇಳಿದ್ರೆ ಅಷ್ಟು ಕಟ್ ಮಾಡ್ತಾರೆ ಅಂತ. ಐನೋರು 60 ರೂಪಾಯಿ ಕಡಿದುಕೊಂಡು ಬಾಕಿ ಹಣ ಕೊಡುವಾಗ ಕೈ ಮೇಲೆತ್ತಿ ಅವಳ ಕೈಗೆ ಹಣ ಉದುರಿಸಿದ್ರು. ಅದಕ್ಕೆ ಅವಳು ನಗ್ತಾ ಕೇಳಿದ್ಲು “ಐನೋರೆ ಮಾಡಿಸ್ಕೊಳ್ಳೋವಾಗ ಪರ್ವಾಗಿಲ್ವ?”. ಅವಳು ಹೇಳಿದ್ದು ಕಿವಿಗೇ ಬೀಳದಂತೆ  ಐನೋರು ಜಾಗಾ ಖಾಲಿ ಮಾಡ್ತಿರುವಾಗ ಸುಮ್ನಿರಲಾರ್ದೆ ಒಂದು ಮಾತೇಳಿದ್ರು. “ಆಮೇಲೇ, ನನ್ನಾ ಪೂಜೆ ಗೀಜೆ ಮಾಡೋ ಜಾಗದಲ್ಲಿ ಕಂಡ್ರೆ ಪರಿಚಯ ತೋರಿಸ್ಬೇಡ”. ಇದನ್ನ ಕೇಳಿ ಅವಳ ಮೈಯೆಲ್ಲಾ ಉರೀತು ಅಂದ್ಕೊಂಡ್ರಾ!!! ಇಂತದೆಲ್ಲ ಅವಳಿಗೆ ಎಷ್ಟು ಅಭ್ಯಾಸ ಆಗೋಗಿತ್ತು ಅಂದ್ರೆ ಈ ಡಯಲಾಗ್ ಹೇಳ್ದೆ ಇರೋ ಗಿರಾಕಿಯೆ ಇಲ್ಲ. “ಸರಿ ಸರಿ ಹೋಗಿ ಐನೋರೆ, ನಂಗೆಲ್ಲಾ ಗೊತ್ತು” ಅಂದ್ಲು. ಆ ಐನೋರು ಸುಮ್ನೆ ಹೋಗ್ದೆ “ನಿನ್ ಹೆಸ್ರೇನು?” ಅಂದ್ರು. ಆ ಥಿಯೆಟರಿನಲ್ಲಿ ಅಡಗಿ ಹೋಗಿರುವ ಅದೆಷ್ಟೋ ಹೆಸರುಗಳಲ್ಲಿ ಒಂದು ಹೆಸರು ಹೇಳಿದ್ಲು. ‘ಮಾಂಕಾಳಿ’. ಐಯ್ನೋರು “ಶಾಂತಂ ಪಾಪಂ” “ಶಾಂತಂ ಪಾಪಂ” ಅಂದ್ಕೋತ ಹೋದ್ರು.

(ಮುಂದುವರಿಯುವುದು…)

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article