ಜರ್ಮನಿಯ ಮಂನ್ಹೆಮ್ನ ‘National Theatre’ನಲ್ಲಿ ನಡೆದ ನಾಟಕೋತ್ಸವದಲ್ಲಿ ಲಕ್ಷ್ಮಣ ಕೆ ಪಿ ಅವರ ನಿರ್ದೇಶನದಲ್ಲಿ ಮೂಡಿಬಂದ “ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ” (still i choose to love) ನಾಟಕದ ಕುರಿತು ಬರೆದಿದ್ದಾರೆ ಪ್ರಸ್ತುತ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಗೌತಮಿ ತಿಪಟೂರು.
“ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ” (still i choose to love)– ಈ ನಾಟಕದ ಶೀರ್ಷಿಕೆಯೇ ಎಲ್ಲವನ್ನು ಹೇಳುತ್ತದೆ. ಇದು ಪ್ರೇಮಭರಿತವಾಗಿ ಕೇಳಿಸಬಹುದು, ಆದರೆ ಈ ನಾಟಕ ಪ್ರೇಮದ ಇನ್ನೊಂದು ಆಯಾಮದತ್ತ ವಿಸ್ತರಿಸಿದೆ. ನಮ್ಮ ಸಮಾಜದಲ್ಲಿ ಪ್ರೀತಿಗೆ ನೀಡಲಾಗಿರುವ ವ್ಯಾಖ್ಯಾನದ ಹೊರತಾಗಿ ಅದು ಇನ್ನಷ್ಟು ವಿಶಾಲವಾಗಿದೆ – ಕೇವಲ ಸಂಬಂಧಗಳ ಕುರಿತಲ್ಲ, ಆದರೆ ಸಮಾಜ, ಸಮುದಾಯ, ಮಾನವೀಯತೆ ಮತ್ತು ಒಳಗೊಳ್ಳುವಿಕೆಯ ಬಗ್ಗೆ ಇದೆ. ಕೆಲವು ಜಾತಿ ಹಾಗೂ ವರ್ಗದ ಜನರು ಪ್ರೀತಿಯಿಂದ ವಂಚಿತರಾಗಿರುವ ಸತ್ಯವನ್ನು ಈ ನಾಟಕ ಬಹಿರಂಗಪಡಿಸುತ್ತದೆ. ತಮ್ಮ ಅನುಭವಗಳು, ಅದರ ಪರಿಣಾಮಗಳು ಹಾಗೂ ಅಪಮಾನಗಳ ನಡುವೆಯೂ ಪ್ರೀತಿಯನ್ನು ಆಯ್ಕೆಮಾಡುವುದು ಎಷ್ಟು ಕಠಿಣ ಎಂಬುದನ್ನು ಈ ನಾಟಕ ನಮಗೆ ತೋರಿಸುತ್ತದೆ. ಆದರೆ ಅಂತಿಮವಾಗಿ ಅವರು ಗೆಲ್ಲುತ್ತಾರೆ, ಏಕೆಂದರೆ ಅವರು ಇನ್ನೂ ಪ್ರೀತಿಸೋಣ ಎಂದು ನಿರ್ಧರಿಸುತ್ತಾರೆ.
ಈ ನಾಟಕವು ಕೆಲ ನಟರು ನಾಟಕವೊಂದನ್ನು ಅಭ್ಯಾಸ ಮಾಡುವುದರಿಂದ ಪ್ರಾರಂಭವಾಗುತ್ತದೆ. ಈ ನಟರಲ್ಲಿ ಪ್ರತಿಯೊಬ್ಬರಿಗೂ ಭಿನ್ನ ಭಿನ್ನ ಹಿನ್ನೆಲೆಗಳು ಹಾಗೂ ತಮ್ಮದೇ ಆದ ಜೀವನ ಕಥೆಗಳಿವೆ. ನಾಟಕದ ಅತ್ಯಂತ ರೋಚಕ ಕ್ಷಣ ಎಂದರೆ ನಾಟಕದ ಪಾತ್ರಗಳು ಮತ್ತು ನಟರ ನಡುವೆ ಉದ್ಭವಿಸುವ ಸಂಘರ್ಷ. ಈ ಪಾತ್ರಗಳು, ನಟರು ಮತ್ತು ಲಿಖಿತ ಸಂಭಾಷಣೆಯ ನಡುವಿನ ಅಂತರ ಮತ್ತು ಅವುಗಳ ನಡುವೆ ನಡೆಯುವ ಸಂಘರ್ಷ ನಾಟಕದ ಅಂತರಾಳವನ್ನು ತೆರೆದಿಡುತ್ತದೆ. ಇದು ಪ್ರೇಕ್ಷಕರಿಗೆ ತಮ್ಮ ಬಗ್ಗೆ, ತಮ್ಮ ಜೀವನದ ಬಗ್ಗೆ, ಸಂಬಂಧಗಳ ಬಗ್ಗೆ, ಭಾರತೀಯ ಮತ್ತು ಪಾಶ್ಚಾತ್ಯ ಸಮಾಜಗಳ ವ್ಯತ್ಯಾಸದ ಬಗ್ಗೆ ಆಳವಾಗಿ ಚಿಂತನೆ ಮಾಡುವ ಅವಕಾಶವನ್ನು ಒದಗಿಸುತ್ತದೆ.
ಜಾತಿ, ಲಿಂಗ ಮತ್ತು “ಇತರರು” ಎಂಬ ಅರ್ಥವನ್ನು ಸೂಕ್ಷ್ಮವಾಗಿ ಮತ್ತು ನಿಖರವಾಗಿ ಹಿಡಿದು, ಈ ನಾಟಕವನ್ನು ಆಧುನಿಕ, ನೈಜ ಮತ್ತು ಪ್ರಸ್ತುತ ವಿಷಮ ಜಗತ್ತಿಗೆ ಹಿಡಿದ ಕೈಗನ್ನಡಿಯಂತೆ ಪ್ರಸ್ತುತಪಡಿಸಲಾಗಿದೆ.
ನಾಟಕದಲ್ಲಿ ಪ್ರೀತಿ ಮತ್ತು ಒಳಗೊಳ್ಳುವಿಕೆ ಪ್ರಮುಖವಾಗಿ ಮೂಡಿಬರುತ್ತದೆ. ಇಷ್ಟಲ್ಲದೆ ಈ ಪಾತ್ರಗಳು ನಾಟಕ ಕಲೆಯ ಬಗ್ಗೆ ಮಾತನಾಡುತ್ತವೆ – ತಮ್ಮ ಜೀವನದಲ್ಲಿ ನಾಟಕವು ಎಂತಹ ಸ್ಥಾನ ಹೊಂದಿದೆ ಎಂಬುದನ್ನೂ, ನಾಟಕವನ್ನು ಕೆಲವರು ಹೇಗೆ ವಾಸ್ತವದ ನಿಜವನ್ನು ಎದುರಿಸುವುದಕ್ಕಿಂತ ತಪ್ಪಿಸಿಕೊಳ್ಳುವ ಮಾರ್ಗವಾಗಿ ಪರಿಗಣಿಸುತ್ತಾರೆ ಎಂಬುದನ್ನೂ ತೋರಿಸಲಾಗಿದೆ.
ಈ ನಾಟಕದಲ್ಲಿ ಹಲವಾರು ಪ್ರಶ್ನೆಗಳನ್ನು ಎತ್ತುತ್ತಾರೆ:
ನಮಗೆ ಮುಖ್ಯವಾದ ವಿಷಯಗಳ ಬಗ್ಗೆ ನಾವು ಯಾಕೆ ಮಾತನಾಡುತ್ತಿಲ್ಲ?
ನಾಟಕ ಹಾಗೂ ರಂಗಭೂಮಿಯ ಉದ್ದೇಶವೇನು? ಇದು ಕೇವಲ ಮನರಂಜನೆಯೇ ಅಥವಾ ಅದಕ್ಕಿಂತ ಹೆಚ್ಚಿನ್ನದನ್ನು ಹೇಳಬಲ್ಲದೆ?
ನಾವು ಕಲಾವಿದರಾಗಿ ಏನು ಮಾಡಬೇಕು ಎಂದು ಯಾರು ನಿಗದಿ ಪಡಿಸುತ್ತಾರೆ?
ನಾಟಕರಂಗದಲ್ಲಿ ನಮ್ಮದೇ ಜೀವನದ ಅನುಭವಗಳನ್ನು ತರುವಲ್ಲಿ ಎಷ್ಟು ಧೈರ್ಯಬೇಕು? ಇಂತಹ ಅನುಭವಗಳನ್ನು ಲಕ್ಷಾಂತರ ಜನರು ಹೇಗೆ ಒಂದೂ ಪ್ರಶ್ನೆಮಾಡದೆ, ಇದರಬಗ್ಗೆ ಮಾತನಾಡದೆ ಅನುಭವಿಸುತ್ತಿದ್ದಾರೆ ?. ಮುಂತಾಗಿ…..
ನಾಟಕದಲ್ಲಿ ನಾಲ್ಕು ಪ್ರಮುಖ ಪಾತ್ರಗಳಿದ್ದು, ಅದರಲ್ಲಿ ಇಬ್ಬರು ಭಾರತೀಯರು ಮತ್ತು ಇಬ್ಬರು ಜರ್ಮನ್ ನಟರು. ಈ ನಟರ ವೈಯಕ್ತಿಕ ಜೀವನ ಮತ್ತು ಕಥೆಗಳು, ನಾಟಕದ ಪಾತ್ರಗಳನ್ನು ರೂಪಿಸುವಲ್ಲಿ ಮುಖ್ಯವಾಗಿದೆ. ಅಮಾಸಾ ಎಂಬ ಪ್ರಮುಖ ಪಾತ್ರವನ್ನು ಚಂದ್ರು ಕೊಡಿಹಳ್ಳಿ ಅವರು ಅಭಿನಯಿಸಿದ್ದು, ಆ ಪಾತ್ರದ ಸೂಕ್ಷ್ಮ ಭಾವನೆಗಳನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ತಲುಪಿಸುತ್ತಾರೆ. ಆ ಪಾತ್ರದ ಸಂಕಟ ಮತ್ತು ಕತೆ ಪ್ರೇಕ್ಷಕರ ಕಣ್ಣಲ್ಲಿ ನೀರಾಡುವಂತೆ ಮಾಡುತ್ತದೆ. ನಾಟಕದಲ್ಲಿ ಹೇಳಲಾದಂತೆ – ಇನ್ನೊಬ್ಬರ ನೋವನ್ನು ಸಂಪೂರ್ಣವಾಗಿ ಅರಿಯುವುದು ಸಾಧ್ಯವಿಲ್ಲ. ನಾವು ಅದನ್ನು ಅನುಭವಿಸಿದಾಗ ಮಾತ್ರ ಅರ್ಥವಾಗುತ್ತದೆ. ಆದರೆ ಅವರ ಅಭಿನಯವು ಎಲ್ಲ ಪ್ರೇಕ್ಷಕರ ಹೃದಯವನ್ನೂ ತಲುಪುತ್ತದೆ – ಕೇವಲ ಅನುಕಂಪವಲ್ಲ, ನಿಜವಾದ ಅನುಭವಗಳ ಭಾವನೆಗಳಾಗಿ…
ನಾಟಕ ಮುಗಿಯುವ ವೇಳೆಗೆ ಅದು ಪ್ರೇಕ್ಷಕರ ಹೃದಯದಲ್ಲಿ ಭಾರವನ್ನು ಮತ್ತು ಹಲವಾರು ಪ್ರಶ್ನೆಗಳನ್ನು ಮೂಡಿಸುತ್ತದೆ – ಆ ಪ್ರಶ್ನೆಗಳು ನಮ್ಮ ಜೀವನಕ್ಕೆ ಸಂಬಂಧಪಟ್ಟವಾಗಿರುವುದು ಆಶ್ಚರ್ಯಕಾರಿಯೇನಲ್ಲ. ಜೀವನದಲ್ಲಿ ಎಷ್ಟೇ ಅಪಮಾನಗಳನ್ನು ಎದುರಿಸಿದರೂ ಅಂತಿಮವಾಗಿ, ಈ ನಾಟಕವು “ಆದರೂ ನಾನು ಪ್ರೀತಿಸಲು ಆಯ್ಕೆ ಮಾಡಿಕೊಳ್ಳುತ್ತೇನೆ” ಎಂಬ ಭಾವನಾತ್ಮಕ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.
ನನಗೆ ವೈಯಕ್ತಿಕವಾಗಿ ಪ್ರೀತಿಯನ್ನು ಆಯ್ಕೆ ಮಾಡುವುದು ಅಥವಾ ಪ್ರೀತಿಸಲು ಸಾಧ್ಯವಾಗುವುದು ಬಹಳ ಭಾರವಾದ ವಿಷಯವಾಗಿದೆ. ಕೆಲವರಿಗೆ ಇದು ಸಾಪೇಕ್ಷವಾಗಿ ಸರಳವಾಗಬಹುದು. ಆದರೆ ಪ್ರತಿಸಾರಿ ನಾವು ಪ್ರೀತಿಯನ್ನು ಆಯ್ಕೆ ಮಾಡುವಾಗ ನಾವು ಧೈರ್ಯವಾಗಿರಲು ಆಯ್ದುಕೊಳ್ಳುತ್ತಿದ್ದೇವೆ ಎಂದರ್ಥ – ಅದು ನಮಗೆ ನೋವುಂಟು ಮಾಡಬಹುದೆಂದು ತಿಳಿದಿದ್ದರೂ ಸಹ.
“I still choose to love” ಈ ವರ್ಷ ನಾನು ನೋಡಿದ ಅತ್ಯುತ್ತಮ ಪ್ರಾಯೋಗಿಕ ನಾಟಕಗಳಲೊಂದು ಎಂದು ಹೇಳಬಹುದು. ಇದು ಯೂರೋಪ್‌ನಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಪ್ರದರ್ಶನಗೊಳ್ಳಬೇಕು.
ಈ ಅದ್ಭುತ ನಾಟಕವನ್ನು ರೂಪಿಸಿದ ನಿರ್ದೇಶಕ ಲಕ್ಷ್ಮಣ ಕೆ ಪಿ’ ಗೆ ಹಾಗೂ ನಾಟಕದ ಭಾಗವಾಗಿರುವ ಎಲ್ಲರಿಗೂ ಅಭಿನಂದನೆಗಳು. ಸಮಾಜಕ್ಕೆ ಮುಖ್ಯವಾಗಿರುವ ವಿಷಯಗಳನ್ನು ನಾಟಕದ ಮೂಲಕ ಹೇಳಲು ತೀರ್ಮಾನಿಸಿರುವ ನಿಮ್ಮ ಧೈರ್ಯಕ್ಕೆ ಶರಣು.
ಗೌತಮಿ ತಿಪಟೂರು
ಇವರು ಭರತನಾಟ್ಯ ಹಾಗೂ ರಂಗಭೂಮಿ ಕಲಾವಿದೆ. ಪ್ರಸ್ತುತ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಇದನ್ನೂ ಓದಿ- ರೂಪಕವಾಗಿ ಧ್ವನಿಸುವ ಪುಟ್ಟ ಸಿನಿಮಾ ʼಹರಿಶ್ಚಂದ್ರʼ