ಸ್ಟಾರ್ ಸಿನಿಮಾಗಳು ರಿಲೀಸ್ ಆಗ್ತಿಲ್ಲ.. ಜನ ಬರ್ತಿಲ್ಲ.. ಕರ್ನಾಟಕ ಮಾತ್ರವಲ್ಲ ತೆಲುಗಿನಲ್ಲೂ ಥಿಯೇಟರ್ ಬಂದ್..!

Most read

ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ನೆನಪಲ್ಲೂ ಉಳಿಯದಂತೆ ಮುಚ್ಚಿ ಹೋಗಿವೆ. ಈಗ ಸಿನಿಮಾಗಳು ರಿಲೀಸ್ ಆದರೂ ಸಿಗುವ ಥಿಯೇಟರ್ ಗಳು ಮುನ್ನೂರರಿಂದ ನಾಲ್ಕು ನೂರು ಅಷ್ಟೇ. ಇದು ಕರ್ನಾಟಕದ ಪರಿಸ್ಥಿತಿ. ಆದರೆ ಆಂಧ್ರದಲ್ಲೂ ಇಂಥದ್ದೊಂದು ಸಮಸ್ಯೆ ದೊಡ್ಡಮಟ್ಟಕ್ಕೆ ತಲೆದೂಗುತ್ತಿದೆ. ಸದ್ಯಕ್ಕೆ ಈ ಶುಕ್ರವಾರ 400 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಬಾಗಿಲು ಹಾಕುತ್ತಿವೆ. ಆದರೆ ಕರ್ನಾಟಕದ ರೀತಿ ಸಂಪೂರ್ಣವಾಗಿ ಅಲ್ಲ 10 ದಿನಗಳ ಕಾಲ ಬಂದ್ ಮಾಡುತ್ತಿದ್ದಾರೆ.

ಥಿಯೇಟರ್ ಗಳನ್ನು ಮೆಂಟೈನ್ ಮಾಡುವುದು ಅಂದ್ರೆ ಸುಲಭದ ಮಾತಲ್ಲ‌. ಸಿಬ್ಬಂದಿಗಳಿಗೆ ಸಂಬಳ ಕೊಡಬೇಕು, ಕರೆಂಟ್ ಬಿಲ್ ಕಟ್ಬೇಕು, ಹೀಗೆ ಸಾಕಷ್ಟು ಖರ್ಚು ವೆಚ್ಚಗಳಿರುತ್ತವೆ. ಜನ ಥಿಯೇಟರ್ ಗೆ ಬರದೆ ಹೋದಲ್ಲಿ ಇದನ್ನು ನಿಭಾಯಿಸುವುದು ಬಹಳ ಕಷ್ಟ. ಐದೋ-ಹತ್ತೋ ಜನರು ಬಂದರೆ ಅಲ್ಲಿ ಏನು ಪ್ರಯೋಜನವಿಲ್ಲ. ಜನ ಥಿಯೇಟರ್ ಗೆ ಬರಬೇಕು ಅಂದ್ರೆ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗಬೇಕು. ತಿಂಗಳಿಗೊಂದರಂತೆ ಒಬ್ಬೊಬ್ಬ ಸ್ಟಾರ್ ನ ಸಿನಿಮಾ ರಿಲೀಸ್ ಆದ್ರೂ ಖಂಡಿತ ಥಿಯೇಟರ್ ಮಾಲೀಕ ಬದುಕುಳಿಯುತ್ತಾನೆ.

ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಗಳಿಗೇನು ಬರವಿಲ್ಲ. ಹೆಚ್ಚಿನ ಮಂದಿ ಇದ್ದಾರೆ. ಆದರೆ ಎಲ್ಲಾ ಭಾಷೆಯಲ್ಲೂ ಪ್ಯಾನ್ ಇಂಡಿಯಾ ಕ್ರೇಜ್ ಗೆ ಬಿದ್ದು ವರ್ಷಕ್ಕೆ ಒಂದೋ ಅಥವಾ ಎರಡು ವರ್ಷಕ್ಕೆ ಒಮ್ಮೆಯೋ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಒಟಿಟಿಗೆ ಜನ ಹೊಂದಿಕೊಂಡಿರುವ ಕಾರಣ ಥಿಯೇಟರ್ ಗೆ ಜನ ಬರುತ್ತಿಲ್ಲ. ಇದರಿಂದ ಥಿಯೇಟರ್ ಮಾಲೀಕರು ನಷ್ಟದಲ್ಲಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಐಪಿಎಲ್ ಕ್ರೇಜು, ಲೋಕಸಭಾ ಚುನಾವಣೆ ಇರುವ ಕಾರಣ ಜನ ಥಿಯೇಟರ್ ಕಡೆ ಬರ್ತಾ ಇಲ್ಲ. ಈ ಎಲ್ಲಾ ಕಾರಣದಿಂದ ಆಂಧ್ರದಲ್ಲಿ ಹತ್ತು ದಿನಗಳ ಕಾಲ ಥಿಯೇಟರ್ ಗಳನ್ನು ಬಂದ್ ಮಾಡುತ್ತಿದ್ದಾರೆ.

More articles

Latest article