ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್‌ ತೀರ್ಪು: ತಮಿಳುನಾಡು ಸಿಎಂ ಸ್ಟಾಲಿನ್‌ ಹರ್ಷ

Most read

ಚೆನ್ನೈ: ಸರಕಾರ ಕಳುಹಿಸಿದ ಹತ್ತು ಮಸೂದೆಗಳಿಗೆ ಸಹಿ ಹಾಕದೆ ಕಾಯ್ದಿರಿಸಿಕೊಂಡ ತಮಿಳುನಾಡು ರಾಜ್ಯಪಾಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ವಿಳಂಬ ಮಾಡಿರುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತಮಿಳುನಾಡು ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ರಾಜ್ಯ ಸ್ವಾಯತ್ತತೆಗೆ ದೊರೆತ ಮಹತ್ವದ ಗೆಲುವು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲ ಆರ್.ಎನ್. ರವಿ ಅವರ ಪದೇ ಪದೇ ವಿಳಂಬ ಮತ್ತು ರಾಜ್ಯ ಶಾಸನಕ್ಕೆ ಒಪ್ಪಿಗೆ ನೀಡಲು ನಿರಾಕರಿಸುವುದರ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ವಿವೇಚನೆಗೆ ಸ್ಪಷ್ಟ ಮಿತಿಗಳನ್ನು ನಿಗದಿಪಡಿಸಿದೆ. ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿಯಲು ಅಥವಾ ವಿನಾಕಾರಣ ವಿಳಂಬ ಮಾಡಲು ಸಾಧ್ಯವಿಲ್ಲ. ಅವರು ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ತಮಿಳುನಾಡು ರಾಜ್ಯಪಾಲರ ಬಳಿ ಬಾಕಿ ಇರುವ ಎಲ್ಲಾ 10 ಮಸೂದೆಗಳನ್ನು ಈಗ ತೆರವುಗೊಳಿಸಲಾಗಿದೆ.

ರಾಜ್ಯ ವಿಧಾನಸಭೆಯಿಂದ ಈಗಾಗಲೇ ಹಿಂದಿರುಗಿಸಲ್ಪಟ್ಟ ಮತ್ತು ಮರು ಅಂಗೀಕಾರಗೊಂಡ 10 ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ ರಾಜ್ಯಪಾಲರ ಕ್ರಮವು ಸಂವಿಧಾನದ 200ನೇ ವಿಧಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ. ಇದು ರಾಜ್ಯಪಾಲರ ಮಸೂದೆಗಳಿಗೆ ಒಪ್ಪಿಗೆಯನ್ನು ನಿಯಂತ್ರಿಸುವ ಸಂವಿಧಾನದ 200ನೇ ವಿಧಿಗೆ ವಿರುದ್ಧವಾಗಿದೆ. ರಾಜ್ಯಪಾಲರು ಅಂತಹ ವಿಷಯಗಳಲ್ಲಿ ಯಾವುದೇ ವಿವೇಚನೆಯನ್ನು ಹೊಂದಿಲ್ಲ. ಅವರು ಮಂತ್ರಿ ಮಂಡಳದ ಸಹಾಯ ಮತ್ತು ಸಲಹೆಯ ಮೇರೆಗೆ ಕಾರ್ಯನಿರ್ವಹಿಸಲು ಬದ್ಧರಾಗಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಜ್ಯಪಾಲರು ಅನಿರ್ದಿಷ್ಟವಾಗಿ ಅನುಮೋದನೆಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ತೀರ್ಪಿನ ಪ್ರಕಾರ, ವಿಧಾನಸಭೆಯಿಂದ ಮಸೂದೆಯನ್ನು ಅಂಗೀಕರಿಸಿ ಎರಡನೇ ಬಾರಿಗೆ ರಾಜ್ಯಪಾಲರಿಗೆ ಕಳುಹಿಸಿದ ನಂತರ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡುವುದು ಅಥವಾ ಅಪರೂಪದ ಸಂದರ್ಭಗಳಲ್ಲಿ, ಮಸೂದೆಯು ಅದರ ಹಿಂದಿನ ಆವೃತ್ತಿಗಿಂತ ಗಣನೀಯವಾಗಿ ಭಿನ್ನವಾಗಿದ್ದರೆ ಒಪ್ಪಿಗೆಯನ್ನು ತಡೆಹಿಡಿಯುವುದು ಮಾತ್ರ ಸಾಂವಿಧಾನಿಕ ಕ್ರಮವಾಗಿದೆ. ಅದನ್ನು ಮತ್ತೆ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಲು ಅನುಮತಿ ಇಲ್ಲ. ನ್ಯಾಯಾಲಯದ ಹಸ್ತಕ್ಷೇಪದ ನಂತರ, ಬಾಕಿ ಇರುವ ಎಲ್ಲಾ 10 ಮಸೂದೆಗಳನ್ನು ಈಗ ತೆರವುಗೊಳಿಸಲಾಗಿದೆ.

ಈ ತೀರ್ಪಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರಾಜ್ಯ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದು, ಇದನ್ನು “ಐತಿಹಾಸಿಕ ತೀರ್ಪು” ಎಂದು ಬಣ್ಣಿಸಿದ್ದಾರೆ. ಇದು ತಮಿಳುನಾಡಿಗೆ ಮಾತ್ರವಲ್ಲದೆ ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಂದ ಜಯ ಎಂದು ಹೇಳಿದ್ದಾರೆ.

More articles

Latest article