ಎರಡು ಸಾವಿರ ವರ್ಷಗಳ ಹಿಂದೆ ಶೂದ್ರಕ ಮಹಾಕವಿ ಸಂಸ್ಕೃತದಲ್ಲಿ ರಚಿಸಿದ ಪ್ರಸಿದ್ಧ ಮತ್ತು ಮಹತ್ವದ ನಾಟಕ ಮೃಚ್ಛಕಟಿಕ. ಮೃಚ್ಛಕಟಿಕ ಎಂದರೆ ಕನ್ನಡದಲ್ಲಿ ಮಣ್ಣಿನ ಬಂಡಿ ಎಂದೂ ಇಂಗ್ಲಿಷಿನಲ್ಲಿ The Little Clay Cart ಎಂದೂ ಅರ್ಥ. ಇಪ್ಪತ್ತು ಶತಮಾನಗಳು ಕಳೆದರೂ ಇನ್ನೂ ಈ ನಾಟಕ ಭಾರತದ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಲೇ ಬಂದಿರುವುದು ವಿಸ್ಮಯದ ಸಂಗತಿ. 1941ರಲ್ಲಿ ‘ವಸಂತಸೇನೆ’ ಹೆಸರಿನಲ್ಲಿ ಕನ್ನಡ ಚಲನಚಿತ್ರವಾಗಿ ಮೂಡಿಬಂದಿದ್ದು ರಂಗದಿಗ್ಗಜರಾದ ಸುಬ್ಬಯ್ಯ ನಾಯ್ಡುರವರು ಚಾರುದತ್ತ, ಹಾಗೂ ಆರ್. ನಾಗೇಂದ್ರರಾವ್ ರವರು ಶಕಾರ ಪಾತ್ರದಲ್ಲಿ ಅಭಿನಯಿಸಿದ್ದರು
ಹಲವಾರು ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ರಂಗರೂಪ ಪಡೆದ ಈ ನಾಟಕವನ್ನು ಕನ್ನಡದಲ್ಲೂ ಅನುವಾದ ಮಾಡಲಾಗಿದ್ದು ಬನ್ನಂಜೆ ಗೋವಿಂದಾಚಾರ್ಯರ ಅನುವಾದವನ್ನು ಆಯ್ದುಕೊಂಡ ದಾಕ್ಷಾಯಿಣಿ ಭಟ್ ರವರು 20 ವರ್ಷಗಳು ತುಂಬಿರುವ ತಮ್ಮ “ದೃಶ್ಯ” ರಂಗತಂಡಕ್ಕೆ ನಿರ್ದೇಶಿಸಿದ್ದಾರೆ. ಮಾರ್ಚ್ 15 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮೃಚ್ಛಕಟಿಕ’ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೂರೆಗೊಂಡಿತು.

ಉಜ್ಜಯಿನಿ ನಗರದ ಶ್ರೀಮಂತ ವೇಶ್ಯೆ ವಸಂತಸೇನೆಗೆ ದಾನಗುಣದಿಂದ ಸಂಪತ್ತನ್ನೆಲ್ಲಾ ಕಳೆದುಕೊಂಡು ದರಿದ್ರನಾಗಿದ್ದ ಚಾರುದತ್ತನ ಮೇಲೆ ಪ್ರೀತಿಯಾಗುತ್ತದೆ. ಲಂಪಟನಾದ ರಾಜನ ಭಾಮೈದ ಸಂಸ್ಥಾನಕನಿಂದ ತಪ್ಪಿಸಿಕೊಂಡು ಬಂದ ವಸಂತಸೇನೆ ಒಡವೆಗಳನ್ನು ಸುರಕ್ಷಿತವಾಗಿಡಲು ಚಾರುದತ್ತನ ಕೈಗೆ ಕೊಡುತ್ತಾಳೆ. ತನ್ನ ಕಾಮದಾಸೆಯನ್ನು ವಿರೋಧಿಸಿದ ವಸಂತಸೇನೆಯನ್ನು ಸಂಸ್ಥಾನಕ ಕೊಲ್ಲಲು ಪ್ರಯತ್ನಿಸಿ ಕೊಲೆಯ ಆರೋಪವನ್ನು ಚಾರುದತ್ತನ ಮೇಲೆ ಆರೋಪಿಸುತ್ತಾನೆ. ವಿಚಾರಣೆ ನಡೆದು ಚಾರುದತ್ತನಿಗೆ ಮರಣದಂಡನೆ ವಿಧಿಸಿದಾಗ ವಸಂತಸೇನೆ ಬಂದು ಸತ್ಯವನ್ನು ತಿಳಿಸುತ್ತಾಳೆ. ಮಹಿಳೆಯರೆಲ್ಲಾ ಸೇರಿ ನೀಚ ಸಂಸ್ಥಾನಕನನ್ನು ಕೊಲ್ಲುತ್ತಾರೆ. ಇದು ಈ ಮೃಚ್ಛಕಟಿಕ ನಾಟಕದ ಸಂಕ್ಷಿಪ್ತ ಕಥೆ.
ಆದರೆ ಈ ಕಥೆಗೆ ಹಲವಾರು ಆಯಾಮಗಳನ್ನು ಕೊಡುವ ಈ ನಾಟಕವು ನಿಷ್ಕಾಮ ಪ್ರೇಮ, ಉದಾತ್ತ ಭಾವ, ರಾಜಕೀಯ ಷಡ್ಯಂತ್ರ, ಅಧಿಕಾರಸ್ಥರ ದೌರ್ಜನ್ಯಗಳನ್ನು ವಿಡಂಬನಾತ್ಮಕ ದೃಶ್ಯ ಸೃಷ್ಟಿಗಳ ಮೂಲಕ ಕಟ್ಟಿಕೊಡುತ್ತದೆ.
ನಾಟಕದ ಸಂಘರ್ಷವಿರುವುದು ಪ್ರೇಮ ಮತ್ತು ಕಾಮಗಳಲ್ಲಿ. ವಸಂತಸೇನೆ ನಿಜವಾದ ಪ್ರೇಮಕ್ಕಾಗಿ ಹಾತೊರೆಯುತ್ತಾಳೆ. ಆದರೆ ರಾಜನ ನೆಂಟ ಸಂಸ್ಥಾನಕ ಆಕೆಯನ್ನು ಕಾಮಕ್ಕಾಗಿ ಬಯಸುತ್ತಾನೆ. ಕಾಮುಕನ ದೌರ್ಜನ್ಯಕ್ಕೆ ವಸಂತಸೇನೆ ಹಾಗೂ ಶಡ್ಯಂತ್ರಕ್ಕೆ ಚಾರುದತ್ತ ಇಬ್ಬರೂ ಬಲಿಯಾಗುವಷ್ಟರಲ್ಲಿ ಆಟ ಬದಲಾಗುತ್ತದೆ, ಬದುಕಿ ಬಂದ ವಸಂತಸೇನೆಯಿಂದ ಕಾಮುಕನ ಕೃತ್ಯ ಬಯಲಾಗುತ್ತದೆ. ಚಾರುದತ್ತ ಬಚಾವಾಗುತ್ತಾನೆ. ಕಾಮ ಸೋಲುತ್ತದೆ, ಪ್ರೇಮ ಗೆಲ್ಲುತ್ತದೆ.
ಇಡೀ ನಾಟಕದ ಕೇಂದ್ರವೇ ಪ್ರೇಮವಾಗಿದೆ. ಅದರ ಪರಿಧಿಯಲ್ಲಿ ಹಲವಾರು ಘಟನೆಗಳು ನಡೆಯುತ್ತವೆ, ತಲ್ಲಣಗಳನ್ನು ಸೃಷ್ಟಿಸುತ್ತವೆ, ಹಲವಾರು ಅನಿರೀಕ್ಷಿತ ತಿರುವುಗಳು ಸಂಭವಿಸುತ್ತವೆ. ಹೀಗಾಗಿಯೇ ಶೂದ್ರಕನ ಈ ನಾಟಕ ಕಾಲಾತೀತವಾಗಿ ಜೀವಂತವಾಗಿದೆ, ಕಾಲಕಾಲಕ್ಕೆ ಮರುಜನ್ಮ ಪಡೆಯುತ್ತಲೇ ಬಂದಿದೆ.
ಇಂತಹ ನಾಟಕಕ್ಕೆ ದಾಕ್ಷಾಯಿಣಿ ಭಟ್ ರವರು ಇನ್ನೊಂದು ಆಯಾಮವನ್ನು ಕೊಟ್ಟಿದ್ದಾರೆ. ಸ್ತ್ರೀ ಸಂವೇದನೆಯನ್ನು ಮುಖ್ಯವಾಗಿಟ್ಟುಕೊಂಡೇ ನಿರ್ದೇಶಿಸಿದ್ದಾರೆ. ಕೊನೆಗೆ ಮಹಿಳಾ ಪಾತ್ರಧಾರಿಗಳಿಂದಲೇ ದುರಹಂಕಾರಿ ದುಷ್ಟನನ್ನು ಸಂಹಾರ ಮಾಡಿಸಿದ್ದಾರೆ. ಸ್ತ್ರೀಯರನ್ನು ಕಾಡುವವರಿಗೆ ಕೇಡುಗಾಲ ತಪ್ಪದು ಎನ್ನುವ ಸಂದೇಶವನ್ನು ಕೊಟ್ಟಿದ್ದಾರೆ.

ಪ್ರೇಮವನ್ನು ಗೆಲ್ಲಿಸುವುದು ಹಾಗೂ ಕಾಮಾಂಧತೆಯನ್ನು ಸೋಲಿಸುವುದು ಈ ನಾಟಕದ ಆಶಯವಾಗಿದ್ದು, ಇದನ್ನು ಸಾಕಾರಗೊಳಿಸಲು ಕಟ್ಟಲಾದ ನಾಟಕದ ಆಕೃತಿ ಮಾತ್ರ ವಿಶಿಷ್ಟವಾಗಿದೆ. ಪ್ರತಿ ದೃಶ್ಯಗಳೂ ನೋಡುಗರ ಮನವನ್ನು ರಂಜಿಸುವಂತೆ ಮೂಡಿ ಬಂದಿವೆ. ಒಂದಿಷ್ಟು ಶೈಲೀಕೃತ ಆಂಗಿಕಾಭಿನಯ, ಹಾಸ್ಯಮಯ ವಾಚಿಕಾಭಿನಯ, ಕಣ್ಮನ ಸೆಳೆಯುವ ಆಹಾರ್ಯಾಭಿನಯ, ಗುಂಪುಗಳ ಸಮರ್ಥ ಬಳಕೆ, ರೂಪಕತೆಗಳೆಲ್ಲಾ ಸೇರಿ ನಾಟಕ ಆಕರ್ಷಣೀಯವಾಗಿದೆ.
ವೇಶ್ಯೆ, ವೈಶ್ಯ ಬ್ರಾಹ್ಮಣ, ವಿಧೂಷಕ ಬ್ರಾಹ್ಮಣ, ಲಂಪಟ ರಾಜನೆಂಟ, ಕಳ್ಳ, ಬೌದ್ಧ ಸನ್ಯಾಸಿ, ಸೇವಕ, ಸೈನಿಕ, ದಾಸಿ, ನ್ಯಾಯಾಧೀಶೆ ಹೀಗೆ ಈ ನಾಟಕದ ಪಾತ್ರಗಳು ಸಮಾಜದ ಎಲ್ಲ ಸ್ತರಗಳನ್ನೂ ಪ್ರತಿನಿಧಿಸುವಂತಿವೆ. ಪ್ರತಿ ಪಾತ್ರದ ಸ್ವಭಾವ ನಡೆ ನುಡಿಗಳೂ ಭಿನ್ನವಾಗಿವೆ. ಹಾಸ್ಯ, ವಿಡಂಬನೆಗಳು ಈ ನಾಟಕದ ಜೀವಾಳವಾಗಿವೆ. ಜೂಜುಕೋರ ಬೌದ್ಧ ಸನ್ಯಾಸಿಯಾಗಿ ಬದಲಾಗಿದ್ದು, ತನ್ನ ಪ್ರಿಯತಮೆಯನ್ನು ದಾಸ್ಯತ್ವದಿಂದ ಬಿಡುಗಡೆಗೊಳಿಸಲು ಬ್ರಾಹ್ಮಣ ಯುವಕ ಕಳ್ಳನಾಗಿದ್ದು, ವೇಶ್ಯಾವಾಟಿಕೆಯ ವಸಂತಸೇನೆ ಉತ್ಕಟ ಪ್ರೇಮಿಯಾಗಿದ್ದು, ವಿವಾಹಿತ ಚಾರುದತ್ತ ವೇಶ್ಯೆಯನ್ನು ಪ್ರೀತಿಸಿದ್ದು.. ಇವರಲ್ಲಾದ ಬದಲಾವಣೆಗಳು ಈ ನಾಟಕದ ಗಮನಾರ್ಹ ಅಂಶಗಳಾಗಿವೆ.
ಈ ನಾಟಕದಾಳಕ್ಕೆ ಇಳಿದು ನೋಡಿದರೆ ಆ ಕಾಲದ ವರ್ಣಸಂಕರ ಸ್ಪಷ್ಟವಾಗುತ್ತದೆ. ಈ ನಾಟಕದ ಬ್ರಾಹ್ಮಣ ಪುರುಷ ಪಾತ್ರಗಳು ಕೆಳವರ್ಗದ ಸ್ತ್ರೀ ಪಾತ್ರಗಳನ್ನು ಪ್ರೀತಿಸಿ, ಅದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದು ವಿಸ್ಮಯಕಾರಿ ಬೆಳವಣಿಗೆಯಾಗಿದೆ. ಪ್ರೀತಿಗೆ ಮೇಲುಕೀಳು ಜಾತಿ ಸೂತಕಗಳ ಹಂಗಿಲ್ಲ ಎನ್ನುವುದನ್ನು ಈ ನಾಟಕ ಹೇಳುತ್ತದೆ. ಅದಕ್ಕೆ ಉದಾತ್ತನಾದ ಬ್ರಾಹ್ಮಣ ಚಾರುದತ್ತ ವೇಶ್ಯೆಯ ಮೋಹಕ್ಕೊಳಗಾಗಿ ಆಕೆಯ ಒಡವೆಗಳ ಗೊಡವೆಗಾಗಿ ಪರದಾಡುತ್ತಾನೆ. ಇನ್ನೊಬ್ಬ ಬ್ರಾಹ್ಮಣ ಯುವಕ ಸರ್ವಿಲಕನು ವೇಶ್ಯೆಯ ಮನೆಯ ಸೇವಕಿ ಮದನಿಕಳಿಗಾಗಿ ಕಳ್ಳತನಕ್ಕಿಳಿಯುತ್ತಾನೆ. ಪ್ರೀತಿ ಎನ್ನುವುದು ಜಾತಿ ಹಾಗೂ ಸಾಮಾಜಿಕ ನೀತಿಗಳ ಬೇಲಿ ದಾಟಿ ಏನೇನೆಲ್ಲಾ ಮಾಡಿಸಲು ಪ್ರೇರೇಪಿಸುತ್ತದೆ ಎಂಬುದಕ್ಕೆ ಈ ನಾಟಕವೇ ಸಾಕ್ಷಿಯಾಗಿದೆ. ವೈದಿಕಶಾಹಿ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ಇಂತಹ ವರ್ಣಸಂಕರಣದ ನಾಟಕವನ್ನು ರಚಿಸಿದ ಶೂದ್ರಕ ಮಹಾಕವಿ ಸೋಜಿಗ ಸೃಷ್ಟಿಸಿದ್ದಾನೆ.

ಹೊಸದಾಗಿ ಸೇರ್ಪಡೆಯಾದ ಯುವ ನಟ ನಟಿಯರನ್ನು ಪಾತ್ರವಾಗಿ ತಯಾರಿ ಮಾಡುವಲ್ಲಿ ದಾಕ್ಷಾಯಿಣಿಯವರು ಗೆದ್ದಿದ್ದಾರೆ. ಎಲ್ಲಾ ನಟ ನಟಿಯರೂ ತಮ್ಮ ಸಾಮರ್ಥ್ಯ ಮೀರಿ ಅಭಿನಯಿಸಿ ನಾಟಕವನ್ನು ದಡ ಸೇರಿಸಿದ್ದಾರೆ. ವಸಂತಸೇನೆಯ ಲವಲವಿಕೆಯ ಪಾದರಸದಂತಾ ಅಭಿನಯ ಹಾಗೂ ಸಂಸ್ಥಾನಕನ ವಿಕ್ಷಿಪ್ತ ನಟನೆ ನೋಡುಗರನ್ನು ವಿಸ್ಮಿತರನ್ನಾಗಿಸುವಂತಿದೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಸಮರ್ಥವಾಗಿ ಜೀವಿಸಿದ್ದಾರೆ. ಹೀಗಾಗಿ ಇದೊಂದು ಆಂಗಿಕಾಭಿನಯ ಪ್ರಧಾನ ನಾಟಕವಾಗಿದೆ. ನಿರ್ದೇಶಕರ ಶ್ರಮ ಸಾರ್ಥಕವಾಗಿದೆ. ಆದರೂ ಕೆಲವು ನಟರ ಸಂಭಾಷಣಾ ವೇಗಕ್ಕೆ ಕಡಿವಾಣ ಹಾಕಬೇಕಿದೆ, ಮಾತಿನ ನಡುವೆ ಪಾಜ್ (pause) ಗಳನ್ನು ಹಾಗೂ ಏರಿಳಿತಗಳನ್ನು ಬಳಸುವ ಸೂಕ್ಷ್ಮತೆಗಳನ್ನು ಹೇಳಿಕೊಡಬೇಕಿದೆ.
ನೋಡುವುದಕ್ಕೆ ಚೆಂದವಾಗಿರುವ ಈ ನಾಟಕದ ಆಳಕ್ಕೆ ಇಳಿದರೆ ಕಥಾನಕದ ಪ್ರಸ್ತುತಿಯಲ್ಲಿ ಒಂದಿಷ್ಟು ಗೊಂದಲಗಳಿವೆ. ತಪ್ಪಿಸಿಕೊಂಡು ಬಂದ ಗೊಲ್ಲರ ಯುವಕ ಯಾರು, ಆತನ ಹಿನ್ನೆಲೆ ಏನು?, ರಾಜ್ಯದಲ್ಲಾದ ಕ್ಷಿಪ್ರಕ್ರಾಂತಿಗೆ ಕಾರಣಗಳೇನು? ವೇಶ್ಯಾವೃತ್ತಿಯ ವಸಂತಸೇನೆ ಅಧಿಕಾರಸ್ಥನನ್ನು ನಿರಾಕರಿಸಿದ್ದಕ್ಕೆ ಸಮರ್ಥನೆಗಳೇನು? ಉದಾತ್ತ ಪಾತ್ರವಾದ ಚಾರುದತ್ತನಿಗೆ ಸಹನಶೀಲೆ ಹೆಂಡತಿ ಹಾಗೂ ಬಂಗಾರದಂತಹ ಮಗನಿದ್ದರೂ ವೇಶ್ಯೆಯೊಬ್ಬಳ ಪ್ರೀತಿಗೆ ಹಂಬಲಿಸಿದ್ದೇಕೆ? ಎಲ್ಲವನ್ನೂ ಕಳೆದುಕೊಂಡು ದರಿದ್ರನಾದ ಚಾರುದತ್ತನ ಮಡದಿಯ ಬಳಿ ಬೆಲೆಬಾಳುವ ಒಡವೆ ಇದ್ದಿದ್ದಾದರೂ ಹೇಗೆ?.. ಇಂತಹ ಕೆಲವಾರು ಪ್ರಶ್ನೆಗಳಿಗೆ ಮಾತುಗಳಲ್ಲಾದರೂ ಸ್ಪಷ್ಟೀಕರಣಗಳನ್ನು ಕೊಟ್ಟಿದ್ದರೆ ಚೆನ್ನಾಗಿತ್ತು. ಕೆಲವು ಮಿಸ್ಸಿಂಗ್ ಲಿಂಕ್ ಗಳನ್ನು ಅರ್ಥವಾಗುವ ಹಾಗೆ ಜೋಡಿಸಬೇಕಿತ್ತು.
ನಾಟಕದ ದೃಶ್ಯಗಳಿಗೆ ರೋಚಕತೆಯನ್ನು ಕೊಟ್ಟಿದ್ದು ಗಜಾನನ ನಾಯಕರವರ ಸಂಗೀತ ಸಂಯೋಜನೆ, ಹಾಡುಗಳು ಹಾಗೂ ರಾಗಾಲಾಪಗಳು. ರಂಗದ ಮೇಲೆ ನಡೆಯುವ ಕ್ರಿಯೆಗಳಿಗೆ ಪೂರಕವಾಗಿ ಸ್ಪಂದಿಸಿದ ಸಂಗೀತ ಅಗತ್ಯ ಮೂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ವಿಜಯಕುಮಾರ್ ರವರ ಬೆಳಕಿನ ವಿನ್ಯಾಸ ಪ್ರತಿ ದೃಶ್ಯಗಳಲ್ಲೂ ತನ್ನ ಮಾಂತ್ರಿಕತೆಯನ್ನು ಸಾದರಪಡಿಸದೆ, ಆದರೆ ಸೈಕ್ ಸಿಂಕ್ ಮಾಡುವಲ್ಲಿ ವಿಫಲವಾಗಿದೆ. ದೃಶ್ಯದ ಸನ್ನಿವೇಶಕ್ಕೂ ಹಾಗೂ ಹಿನ್ನಲೆ ಪರದೆಯ ಮೇಲೆ ಮೂಡಿಬಂದ ಬೆಳಕಿನ ಬಣ್ಣಕ್ಕೂ ತಾಳಮೇಳ ಇಲ್ಲವಾಗಿದೆ. ಕತ್ತಲು, ಮಳೆ, ಗುಡುಗಿನ ಸನ್ನಿವೇಶದಲ್ಲಿ ಸೈಕ್ ಮೇಲೆ ನೀಲಿ ಆಗಸದಲ್ಲಿ ಹುಣ್ಣಿಮೆ ಚಂದ್ರನನ್ನು ತೋರಿಸುವ ಅಗತ್ಯವಿರಲಿಲ್ಲ.

ಇಡೀ ನಾಟಕದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ವಸ್ತ್ರಾಲಂಕಾರ. ದಾಕ್ಷಾಯಿಣಿ ಭಟ್ ರವರು ಕಾಲೋಚಿತ ಹಾಗೂ ಪಾತ್ರೋಚಿತವಾಗಿ ಪ್ರತಿ ಪಾತ್ರದ ಕಾಸ್ಟ್ಯೂಮ್ ಗಳನ್ನು ವಿನ್ಯಾಸಗೊಳಿಸಿ ನಾಟಕದ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ. ಪ್ರತಿ ದೃಶ್ಯಗಳ ಬ್ಲಾಕಿಂಗ್ ಮತ್ತು ಮೂವ್ಮೆಂಟ್ಗಳು ಗಮನಾರ್ಹವಾಗಿವೆ. ದೃಶ್ಯ ಸಂಯೋಜನೆಗಳು ಕಲಾತ್ಮಕವಾಗಿವೆ.
ಬನ್ನಂಜೆಯವರು ಅನುವಾದಿಸಿದ ಮುನ್ನೂರಕ್ಕೂ ಹೆಚ್ಚು ಪುಟಗಳಿರುವ ರಂಗ ಕೃತಿಯನ್ನು ರಂಗಕ್ಕೆ ಅಳವಡಿಸುವುದು ಸುಲಭವೇನಲ್ಲ. ಆದರೂ ಅಂತಹ ಪ್ರಯತ್ನವನ್ನು ಮಾಡಿದ್ದಕ್ಕೆ ನಿರ್ದೇಶಕಿ ಅಭಿನಂದನಾರ್ಹರು. ಆದರೆ ಎರಡು ಗಂಟೆಯ ನಾಟಕ ಸ್ವಲ್ಪ ಸುದೀರ್ಘ ಎನ್ನಿಸುವಂತಿದೆ. ನಾಟಕದ ಕಥಾನಕಕ್ಕೆ ಧಕ್ಕೆಯಾಗಿರುವ ಕೆಲವು ದೃಶ್ಯಗಳನ್ನು ಎಡಿಟ್ ಮಾಡಬೇಕಿತ್ತು. ಆರಂಭದ ಕೋಲಾಟದ ದೃಶ್ಯ ಅನಗತ್ಯವಾಗಿತ್ತು. ನಾಟಕ ಅರ್ಧ ಮುಗಿದಾದ ನಂತರ ಎಳೆತ ಎನ್ನಿಸುವ ಸನ್ನಿವೇಶಗಳನ್ನು ಕಟ್ ಮಾಡಿದ್ದರೆ ನಾಟಕ ಇನ್ನೂ ಚೆನ್ನಾಗಿ ಮೂಡಿ ಬರಬಹುದಾಗಿತ್ತು. ಮುಂದಿನ ಪ್ರದರ್ಶನಗಳಲ್ಲಿ ಲೋಪಗಳನ್ನು ಸರಿಪಡಿಸಲು ಪ್ರಯತ್ನಿಸಬಹುದಾಗಿದೆ. ಚಾರುದತ್ತ ಹಾಗೂ ಸಂಸ್ಥಾನಕ ಕೇಂದ್ರಿತ ನಾಟಕವನ್ನು ವಸಂತಸೇನೆ ಕೇಂದ್ರಿತವಾಗಿ ಮಾಡಿದ್ದರೆ ನಿರ್ದೇಶಕಿಯ ಸ್ತ್ರೀ ಕೇಂದ್ರಿತ ನಾಟಕವಾಗಿಸುವ ಆಶಯ ಈಡೇರಬಹುದಾಗಿದೆ.
ಒಟ್ಟಿನ ಮೇಲೆ ಬದಲಾಯಿಸಬಹುದಾದ ಕೆಲವಾರು ನ್ಯೂನತೆಗಳ ನಡುವೆಯೂ ನಾಟಕ ನೋಡಿಸಿಕೊಂಡು ಹೋಗುತ್ತದೆ. ಕಲಾವಿದರ ಅಭಿನಯ ಈ ನಾಟಕದ ಹೈಲೈಟ್ ಆಗಿದೆ. ಬಡತನ ಸಿರಿತನ, ಜಾತಿ ತಾರತಮ್ಯ, ನೈತಿಕತೆ ಅನೈತಿಕತೆಯ ಕಟ್ಟುಪಾಡುಗಳನ್ನು ಮೀರಿ ಒಡಮೂಡುವ ಪ್ರೀತಿ ಹಾಗೂ ಅದಕ್ಕಾಗಿ ಪಡುವ ಪರಿಪಾಟಲು ‘ಮೃಚ್ಛಕಟಿಕ’ದ ಸಾರಾಂಶವಾಗಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ರಂಗ ಕೃತಿ ವಿಮರ್ಶೆ | ಕಿರಣ್ ಭಟ್ ರವರ ‘ಹೌಸ್ ಫುಲ್’ ಓದುವುದೇ ಥ್ರಿಲ್ https://kannadaplanet.com/kiran-bhatts-housefull-is-a-thrill-to-read/


