ಸಿದ್ದಾಪುರ: ಹಳಿಯಾಳ, ಜೊಯಿಡಾ ಸೇರಿದಂತೆ ಕ್ಷೇತ್ರದ ಕುಣಬಿ, ಕುಂಬ್ರಿ ಸಮಾಜವನ್ನ ಎಸ್ಟಿಗೆ ಸೇರಿಸುವಂತೆ ಬಹುದಿನದಿಂದ ಹೋರಾಟ ನಡೆಯುತ್ತಿದೆ. ಸಂಸದಳಾಗಿ ಆಯ್ಕೆಯಾದಲ್ಲಿ ಅವರ ಹೋರಾಟಕ್ಕೆ ಖಂಡಿತ ಸಂಸತ್‌ನಲ್ಲಿ ದನಿಯಾಗುವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಕೆಟ್ ಘೋಷಣೆಯಾದಾಗಿನಿಂದ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದೇನೆ. ಒಂದು ದಿನವೂ ವ್ಯರ್ಥ ಮಾಡದೇ ಎಲ್ಲಾ ಶಾಸಕರು, ಮುಖಂಡರೊಡಗೂಡಿ ನಡೆಯುತ್ತಿರುವ ಪ್ರಚಾರ ಈಗ ಮೂರನೇ ಸುತ್ತಿಗೆ ತಲುಪಿದೆ. ೩೦ ವರ್ಷ ಜಿಲ್ಲೆಯ ಜನ ಕಷ್ಟದಲ್ಲಿ ಕಳೆದಿದ್ದಾರೆ. ಹೀಗಾಗಿ ಬದಲಾವಣೆ ಬೇಕೆಂದು ಜನ ಈ ಬಾರಿ ಬಯಸುತ್ತಿದ್ದಾರೆ. ಗ್ಯಾರಂಟಿಯಿಂದ ಬಡಜನರಿಗೆ ಅನುಕೂಲ ಆಗಿದ್ದು, ಅದರಿಂದಾಗಿ ಕಾಂಗ್ರೆಸ್‌ಗೆ ಜನಾಶೀರ್ವಾದ ಸಿಗಲಿದೆ ಎಂದರು.
ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಆಸ್ತಿಗಳನ್ನ ಮುಸ್ಲಿಮರಿಗೆ ಹಂಚುತ್ತಾರೆಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ, ಮಾಧ್ಯಮದವರಿಗೆ ತಿಳಿದಿದೆ ಇದು ಸುಳ್ಳೇಂದು. ಆದರೆ. ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ದೇಶದ ಅಭಿವೃದ್ಧಿ ಗುರಿಯ ಬಗ್ಗೆ ಬಿಟ್ಟು ಭವಿಷ್ಯ ನುಡಿಯಲು ಆರಂಭಿಸಿರುವುದು ಹಾಸ್ಯಾಸ್ಪದ. ನಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ಏನೇನು ಕೊಟ್ಟಿದ್ದೇವೆ ಎಂಬುದನ್ನ ತಿಳಿಸಿದ್ದೇವೆ. ಬಿಜೆಪಿಗರನ್ನ ಕೇಳಿದರೆ ಅವರ ಕುಟುಂಬಕ್ಕೂ ಗ್ಯಾರಂಟಿ ತಲುಪಿದ್ದು ಗೊತ್ತಾಗುತ್ತದೆ. ನಾವು ಗ್ಯಾರಂಟಿ ಅನುಷ್ಠಾನ ಮಾಡುವಾಗ ಪಕ್ಷ, ಜಾತಿ ಭೇದ ಮಾಡಿಲ್ಲ. ಹೀಗಿದ್ದಾಗ ಯಾವ ಆಧಾರದಲ್ಲಿ ಇವರು ಮಾತನಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನಮ್ಮ ನ್ಯಾಯ ಪತ್ರ ಪ್ರಣಾಳಿಕೆ ಓದಿದವರಿಗೆ ಅರ್ಥ ಆಗುತ್ತದೆ, ಬಹುಶಃ ಅವರು ಸರಿಯಾಗಿ ಓದಿರಲಿಕ್ಕಿಲ್ಲ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯವರಿಗೆ ನಮ್ಮ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯ ಕೇಳಿದ್ದರು, ಆದರೆ ಕೊಟ್ಟಿಲ್ಲ. ಅವಕಾಶ ನೀಡಲು ಯಾಕೆ ಇವರಿಗೆ ಕಷ್ಟ? ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೇ ಸಮಯ ನೀಡಿದಿದ್ದಾಗ ಇನ್ನು ಸಾಮಾನ್ಯ ಜನರಿಗೆ ಇವರೆಲ್ಲಿ ಸಮಯ ಕೊಡುತ್ತಾರೆ? ನಮ್ಮ ಪ್ರಣಾಳಿಕೆಯಲ್ಲಿ ಸುಳ್ಳಿಲ್ಲ ಎಂದ ಅವರು, ಜನ ಅವರ ಸ್ವಾರ್ಥಕ್ಕಾಗಿ, ಪ್ರಯೋಜನ ಪಡೆಯುತ್ತಿರುವ ಗ್ಯಾರಂಟಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕಿದೆ. ಸುಳ್ಳು ಮಾತನಾಡುವವರು ಯಾರೆಂದು ಯೋಚಿಸಿ ಮತ ಚಲಾಯಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.