ಈ ಶೈಕ್ಷಣಿಕ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಗ್ರೇಸ್ ಮಾರ್ಕ್ಸ್ (ಕೃಪಾಂಕ) ನೀಡುವುದಿಲ್ಲ. ಆದರೆ 3 ಪರೀಕ್ಷೆಗಳ ಆಯ್ಕೆ ಅವಕಾಶ ಮುಂದುವರಿಯಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್ ಸಂದರ್ಭ ಶಾಲೆಗಳೇ ಬಂದ್ ಆಗಿದ್ದರಿಂದ ಅಂದಿನ ಸರ್ಕಾರ ಗ್ರೇಸ್ ಮಾರ್ಕ್ಸ್ ನೀಡುವ ತೀರ್ಮಾನ ಮಾಡಿತ್ತು. ಕಳೆದ ಬಾರಿ ನಮ್ಮಲ್ಲೂ ಕೆಲ ನ್ಯೂನತೆಗಳಿದ್ದವು. ಅಲ್ಲದೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ್ದರಿಂದ ಶೇ. 10ರಷ್ಟು ಗ್ರೇಸ್ ಮಾರ್ಕ್ಸ್ ಕೊಡಲು ತೀರ್ಮಾನಿಸಿದ್ದೆವು. ಆದರೆ ಇದರಿಂದ ಮುಖ್ಯಮಂತ್ರಿಗಳ ಕೆಂಗಣ್ಣಿಗೂ ಗುರಿಯಾಗಬೇಕಾಯಿತು ಹಾಗಾಗಿ ಈ ಬಾರಿ ಕೃಪಾಂಕ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಿದ್ದೇವೆ. ಕಟ್ಟುನಿಟ್ಟಿನಿಂದ ಪರೀಕ್ಷೆಗಳನ್ನು ನಡೆಸುತ್ತೇವೆ. ಫಲಿತಾಂಶ ಕುಸಿತ ಆಗಬಹುದು. ಆದರೆ ಕಲಿಕೆಯಲ್ಲಿ ನಮ್ಮ ಮಕ್ಕಳು ಯಾವ ಹಂತದಲ್ಲಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸು ವುದು ನಮ್ಮ ಉದ್ದೇಶ. ಅನುತ್ತೀರ್ಣರಾದ ವರಿಗೆ ಮತ್ತೆ ಅವಕಾಶ ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿ ಹಿಂದೆ ಬೀಳಬಾರದು. ಅಂತೆಯೇ ಏನೂ ಕಲಿಯದೆ ಉತ್ತೀರ್ಣ ಸಹ ಆಗಬಾರದು. ಹಾಗೆಂದು ಗ್ರೇಸ್ ಮಾರ್ಕ್ಸ್ ಮಾತ್ರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.