ಶರಣ ಚಳುವಳಿಯ ಪ್ರಮುಖಳಾಗಿ, ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಳಾಗಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯಿತ್ರಿ ಮತ್ತು ವಚನಗಾರ್ತಿಯಾಗಿ ಹೀಗೆ ಹಲವು ರೀತಿಗಳಲ್ಲಿ ಗುರುತಿಸಿಕೊಂಡ ಅಕ್ಕರೆಯ ಅಕ್ಕ ಅಕ್ಕಮಹಾದೇವಿಯ ಜಯಂತಿಯನ್ನು ಕರ್ನಾಟಕ ಸರ್ಕಾರವು ಏಪ್ರಿಲ್ 12 ರಂದು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಕನನ್ನು ನೆನೆದಿದ್ದಾರೆ ಡಾ. ಗಂಗಾಧರಯ್ಯ ಹಿರೇಮಠ.
ಅಕ್ಕ ಮಹಾದೇವಿ ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ಜಗತ್ತಿನ ಮಹಿಳಾ ಸಾಧಕಿಯರಲ್ಲಿಯೇ ಅಗ್ರಗಣ್ಯಳು. ಪರಿಪೂರ್ಣತೆ ಬೆಳಗಿ ತೋರಿದ ಮಹಾಶಕ್ತಿ. ಕನ್ನಡ ಸಾಹಿತ್ಯದ ಆರಂಭದ ಕವಯತ್ರಿ. ಆಧ್ಯಾತ್ಮ ಶಿಖರಕ್ಕೇರಿದ ಶಿವಶರಣೆಯ ಸಾಧನೆ, ಸಾಹಸ, ಜೀವನದ ಶ್ರೇಷ್ಠ ಆದರ್ಶ, ಈ ಆದರ್ಶ ಸಾಧನೆಯಲ್ಲಿ ಅವರು ತೋರಿದ ಧೈರ್ಯ, ಸ್ಥೈರ್ಯ ಜಗತ್ತಿನ ಆಧ್ಯಾತ್ಮಿಕ ಇತಿಹಾಸದಲ್ಲಿಯೇ ಅವರಿಗೆ ಶ್ರೇಷ್ಠ ಸ್ಥಾನ ದೊರಕಿಸಿ ಕೊಟ್ಟಿದೆ. ಕನ್ನಡ ನಾಡಿನ ಶಿವಮೊಗ್ಗ ಜಿಲ್ಲೆಯ ‘ಉಡುತಡಿ’ ಎಂಬ ಗ್ರಾಮದಲ್ಲಿ ನಿರ್ಮಲ ಶೆಟ್ಟಿ, ಸುಮತಿ ಎಂಬ ದಂಪತಿಗಳಿಗೆ ಜನಿಸಿದ ಅಕ್ಕಮಹಾದೇವಿಯ ಕಾಲ ಕ್ರಿ.ಶ 1130-1160.
ಅಕ್ಕಮಹಾದೇವಿಯ ವಚನಗಳು
ಅಕ್ಕ ಬರೆದ 434 ವಚನಗಳು ಜನಪ್ರಿಯವಾಗಿವೆ. ತನ್ನ ಸಾಧನೆಯ ಹಾದಿಯಲ್ಲಿ ಪಟ್ಟ ಕಷ್ಟಗಳು, ಅನುಭವಿಸಿದ ತಳಮಳ, ಶರಣರ ವ್ಯಕ್ತಿತ್ವ, ಶರಣ ಸಮುದಾಯದಿಂದ ತನ್ನ ಮೇಲಾದ ಪ್ರಭಾವ, ತನ್ನ ನಿಸ್ಸೀಮ ಭಕ್ತಿ ಇವೆಲ್ಲ ಅಕ್ಕನ ವಚನಗಳಲ್ಲಿ ವ್ಯಕ್ತವಾಗಿವೆ. ವಚನಗಳಲ್ಲಿ ಭಾವಗೀತೆಯ ಸೌಂದರ್ಯವಿದೆ. ದಿವ್ಯ ಪ್ರೇಮದ ಮಾಧುರ್ಯವಿದೆ. ಒಬ್ಬ ಸಾಧಕಿಯ ದೃಢ ಚಿತ್ತವಿದೆ. ಸರ್ವರಿಗೂ ಅನ್ವಯವಾಗುವ ಸಾರ್ವಕಾಲಿಕ ಸತ್ಯವನ್ನು ಅವುಗಳು ಒಳಗೊಂಡಿವೆ. ಸ್ಥಿತಪ್ರಜ್ಞೆಯನ್ನು ತಿಳಿಸುತ್ತವೆ. ಹೀಗಾಗಿ ಅಕ್ಕನ ವಚನಗಳು ಕನ್ನಡ ನಾಡಿನ ಜನಮಾನಸದಲ್ಲಿ ನೆಲೆಯೂರಿವೆ. ಅವರ ಕೆಲವು ಜನಪ್ರಿಯ ವಚನಗಳ ಒಂದೊಂದು ಸಾಲನ್ನು ತಿಳಿಯುವುದಾದರೆ, ಅಕ್ಕ ಕೇಳವ್ವಾ ನಾನೊಂದು ಕನಸು ಕಂಡೆ, ಆವವಿದ್ಯೆಯ ಕಲಿತಡೇನು? ಸಾವವಿದ್ಯೆ ಬೆನ್ನಬಿಡದು, ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ, ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದೆಡೆಂತಯ್ಯಾ? ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ ಬಾವಿ ಹಳ್ಳಗಳುಂಟು, ಅಂಗ ಶೀತಕ್ಕೆ ಬಿಸಾಟ ಅರಿವೆಗಳುಂಟು, ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನನಗುಂಟು. ಹೀಗೆ ಅವರ 434 ವಚನಗಳು ಅರ್ಥಪೂರ್ಣ ವೈಶಿಷ್ಟ್ಯತೆಯನ್ನೊಳಗೊಂಡಿವೆ.
ಅಕ್ಕಮಹಾದೇವಿಯ ಅನುಭಾವಿಕ ಯಾತ್ರೆ :
ತನ್ನ ಜನ್ಮ ಸ್ಥಳ ಉಡುತಡಿಯಿಂದ ಕಲ್ಯಾಣಕ್ಕೆ ನಂತರ ಶ್ರೀಶೈಲಕ್ಕೆ ಹೋಗುವ ಅಕ್ಕನ ಪಾದಯಾತ್ರೆ ಒಂಟಿ ಜೀವದ ಯಾತ್ರೆ. ಈ ಯಾತ್ರೆಯಲ್ಲಿ ಪ್ರಕೃತಿಯ ಜೀವಜಾಲದ ಎಲ್ಲವನ್ನೂ ಗಮನಿಸುತ್ತಾ, ಇದಕ್ಕೆಲ್ಲಾ ಕಾರಣೀಭೂತನಾದ ಒಂದು ಶಕ್ತಿ ಶಿವ (ಚೆನ್ನ ಮಲ್ಲಿಕಾರ್ಜುನ) ನೆಂಬ ಗ್ರಹಿಕೆಯಲ್ಲಿ ವಿಸ್ಮಯ ಪಡುತ್ತಾ ಸಾಗುವ ಹಂತವಿದು. ಇಡೀ ಪ್ರಕೃತಿಯನ್ನು ಶೋಧಿಸುವ ಈ ಹಂತದಲ್ಲಿ ಕಾಯದ ಬಗೆಗೆ ಕಳವಳವಿದೆ. ಭಕ್ತೆಯೊಬ್ಬಳ ಹುಡುಕಾಟವಿದೆ. ಶಿವದಕ್ಕದೇ ಹೋದ, ಕಾಣದೇ ಹೋದ ವಿಷಾದವಿದೆ. ಹೀಗೆ ಪರಿತಪಿಸುತ್ತಾ ಸಾಗುವ ಅಕ್ಕ ಕಲ್ಯಾಣದ ನೆಲದ ಮೇಲೆ ಕಾಲಿಟ್ಟ ಕ್ಷಣ ಅವಳ ಏಕಾಂಗಿತನಕ್ಕೆ ‘ಸಮುದಾಯದ’ ಸ್ಪರ್ಶವಾಗಿ ಒಂಟಿತನ ಮಾಯವಾಗಿ ಶರಣ ಸಮುದಾಯದಿಂದ ಅಕ್ಕನಿಗೆ ನೈತಿಕ ಬಲ ಸಿಗುತ್ತದೆ. ಅವರ ವ್ಯಕ್ತಿ ವಿಕಾಸಕ್ಕೆ ಅದು ಪರಾಕಾಷ್ಟೆಯ ಹಂತ. ವ್ಯಕ್ತಿತ್ವದಲ್ಲಿ ಕಂಡು ಬರುವ ಬದಲಾವಣೆಗಳೇ ಕಲ್ಯಾಣದ ಮಹತ್ವ. ಅನುಭವ ಮಂಟಪದ ಅನುಭಾವಿಕ ಪರಿಕಲ್ಪನೆಗಳು ಭಕ್ತಿಯ ಪರಿಕಲ್ಪನೆ ಮಾತ್ರವಲ್ಲ ಇನ್ನಿತರ ಶರಣರ ಪರಿಕಲ್ಪನೆಗಳೂ ಅವುಗಳಲ್ಲಿ ನಿರ್ವಚನಗೊಳ್ಳುತ್ತವೆ.
ಅಕ್ಕನ ನಿರಾಕರಣೆಯ ಪರಿಕಲ್ಪನೆ:
ಅಕ್ಕನ ಸಾಮಾಜಿಕ ಮೌಲ್ಯಗಳ ಪರಿಕಲ್ಪನೆ ಈ ನಾಲ್ಕು ಅಂಶಗಳಲ್ಲಿದೆ. ರೂಪ ನಿರೂಪದ ಪರಿಕಲ್ಪನೆ, ಲಿಂಗ ಸಮಾನತೆಯ ಆಶಯ, ಸತಿಪತಿಗಳೊಂದಾದ ಶಿವಭಕ್ತಿ ಪರಿಕಲ್ಪನೆಯ ಸೀಮೋಲ್ಲಂಘನೆ, ನಿರ್ವಾಣದ ಪರಿಕಲ್ಪನೆ. “ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ, ಎಡೆಯಿಲ್ಲದ, ಕಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ” ನಿಸ್ಸೀಮ ಚಲುವ, ಈ ಸ್ಥಿತಿ ನಿರೂಪವಾದದ್ದು, ಅಕಾಯವಾದದ್ದು. ತನ್ನ ರೂಪದ ಜೊತೆಗೆ ಗುರುತಿಸಿಕೊಳ್ಳದೆ ಭಾವಸ್ಥಿತಿಯ ಶಕ್ತಿಯಾಗಿದ್ದಾಳೆ ಈಕೆ. ವಚನ ಸಾಹಿತ್ಯದ ಭಕ್ತಿ ಪರಿಕಲ್ಪನೆ ಸತಿ-ಪತಿ ಒಂದಾಗುವುದು. ಇಂತಹ ಭಕ್ತಿ, ಮದುವೆ ನಿರಾಕರಣೆ, ಸಾಮಾಜಿಕ ಮೌಲ್ಯಗಳ ನಿರಾಕರಣೆ ಅಕ್ಕನದು. ಅಲ್ಲಮ ಸ್ವೀಕೃತ ನೆಲೆಯಲ್ಲಿ ನಿಂತು ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು, ಅಲ್ಲದಿರೆ ತೊಲಗು ತಾಯೆ ಎನ್ನುತ್ತಾರೆ. ಹರನೇ ನನ್ನ ಗಂಡನೆಂದು ಅನಂತಕಾಲದ ಜಪ, ಶಿವನೊಡನೆ ಅಮರ ಪ್ರೇಮದ ಸಂಬಂಧ ಅವರ ಆಧ್ಯಾತ್ಮಿಕ ಎತ್ತರವನ್ನು ಸೂಚಿಸುತ್ತದೆ. ಅಕ್ಕನ ನಿರ್ವಾಣದ ಬಗೆಗೆ ಅಲ್ಲಮನ ಪ್ರಶ್ನೆ, ಆನಂತರ ಅವನ ಪ್ರಶಂಸೆ, ರೂಪವೆಂದರೆ ಕಣ್ಣಿನ ಬದುಕು. ಈ ಬದುಕನ್ನು ರೂಪಿಸುವುದು ನಮ್ಮ ಸಾಮಾಜಿಕ ಮೌಲ್ಯಗಳು. ಇದರಾಚೆಗೆ ಇನ್ನೊಂದು ಬದುಕಿದೆ ಎಂಬುದನ್ನು ಅಕ್ಕ ತೋರಿಸಿದ್ದು ನಿರ್ವಾಣದ ಸ್ಥಿತಿ. ಆಧ್ಯಾತ್ಮದ ಬೆಳಕು ಚೆಲ್ಲಿದ ಪರಿ ಇದು. ಇದುವೇ ಅಕ್ಕನ ವ್ಯಕ್ತಿತ್ವ, ಅಕ್ಕನ ನಿರ್ವಾಣದ ಪರಿಕಲ್ಪನೆ, ಸಾಮಾಜಿಕ ಮೌಲ್ಯಗಳ ನಿರಾಕರಣೆಯ ಪರಿಕಲ್ಪನೆಯಾಗಿದೆ.
ಅಕ್ಕನ ಭಕ್ತಿಯ ಪರಿಕಲ್ಪನೆ:
ಶರಣ ಸಮುದಾಯದಿಂದ ಅಕ್ಕ ಪಡೆದುಕೊಂಡಿದ್ದಕ್ಕಿಂತಲೂ ಅಧಿಕವಾಗಿ ಶರಣ ಸಮುದಾಯ ಅಕ್ಕನಿಂದ ಪಡೆದುಕೊಂಡದ್ದು ಬಹಳಷ್ಟಿದೆ. ರೂಪದ ಸ್ಥಿತಿಯಿಂದ ನಿರೂಪದ ಸ್ಥಿತಿಗೆ, ಕಾಯದ ಸ್ಥಿತಿಯಿಂದ ಅಕಾಯದ ಸ್ಥಿತಿಗೆ ಸಾಗುವ ಅನುಭಾವಿಕ ಪರಿಕಲ್ಪನೆಗಳೆಲ್ಲಾ ಸೃಷ್ಟಿಯಾಗುವುದು ಇಲ್ಲಿಯೇ. ಇಲ್ಲಿ ಕೇವಲ ಅಕ್ಕನ ಭಕ್ತಿಯ ಪರಿಕಲ್ಪನೆಗಳು ಮಾತ್ರವಲ್ಲ, ಅಲ್ಲಮ, ಬಸವಣ್ಣ, ಚನ್ನಬಸವಣ್ಣ ಹಾಗೂ ಮಡಿವಾಳ ಮಾಚಿದೇವ ಮುಂತಾದವರ ಭಕ್ತಿಯ ಪರಿಕಲ್ಪನೆಗಳು ನಿರ್ವಚನಗೊಳ್ಳುತ್ತವೆ. ಅವು ಎಲ್ಲರ ವಾದ-ಸಂವಾದಗಳ ಮೂಲಕ ಪರಸ್ಪರ ವಿಕಸಿತಗೊಳ್ಳುತ್ತಾ ಬಯಲಾಗುತ್ತವೆ. ಅವು ಹೀಗೆ ಅರಳಿಕೊಳ್ಳುವ ಮುನ್ನ, ಅನುಭವ ಮಂಟಪದ ಅಲ್ಲಮ ಮುಂತಾದ ಶರಣರಿಗೆ ಅಕ್ಕ ಮುಖಾಮುಖಿಯಾಗಿ ನಿಲ್ಲುತ್ತಾಳೆ.
ಅಕ್ಕಮಹಾದೇವಿಯ ಆಧ್ಯಾತ್ಮಿಕ ಪ್ರಗತಿ:
ಅನುಭವ ಮಂಟಪ ಸ್ತ್ರೀ-ಶೂದ್ರರನ್ನು ಸಾಮಾಜಿಕ ತಿರಸ್ಕಾರ, ಬಂಧನಗಳನ್ನು ಪರಿಹರಿಸುವ ಪವಿತ್ರ ಕಾರ್ಯದಲ್ಲಿ ಕೈಹಾಕಿತು. ಆಧ್ಯಾತ್ಮಿಕ ಪ್ರಗತಿಯಲ್ಲಿ ‘ಸ್ತ್ರೀ’ ಯಾವ ಹಂತವನ್ನು, ಎತ್ತರವನ್ನು ತಲುಪಬಹುದೆಂಬುದನ್ನು ತೋರುವುದಕ್ಕೆ ಅಕ್ಕಮಹಾದೇವಿಯ ಆಧ್ಯಾತ್ಮಿಕ ಜೀವನ ನೆರವಾಯಿತು. ಆತ್ಮನಿಗೆ ಗಂಡು-ಹೆಣ್ಣುಗಳೆಂಬ ಕೀಳು ಪ್ರಭೇಧಗಳಿಲ್ಲವೆಂದು ಮಹಾದೇವಿಯಕ್ಕ ಸಾರಿ, ಹೊಸ ಧೈರ್ಯ, ಚೈತನ್ಯಗಳನ್ನು ಕನ್ನಡ ನಾಡಿನ ಹೆಣ್ಣು ಮಕ್ಕಳ ಹೃದಯದಲ್ಲಿ ಬಿತ್ತಿದಳು. ಅಕ್ಕನ ಜೀವನವೆಂದರೆ ಸಮನ್ವಯ ಸಿದ್ಧಾಂತದ ದೃಷ್ಟಾಂತಗಳು. ಸಾಧನೆಯ ಸಾಹಸ, ಜೀವನದ ಉಚ್ಛ ಆದರ್ಶ, ಆ ಕಾಲದಲ್ಲಿಯೇ ವೈರಾಗ್ಯದ ಕಠಿಣ ಹಾದಿಯನ್ನು ಅರಸಿಕೊಂಡು ಅದರ ಸಾಫಲ್ಯ ಪಡೆದ ಮಹಾವ್ಯಕ್ತಿತ್ವ . ಹೆಣ್ಣಾಗಿ ಇಂತಹ ನಿಸ್ಸೀಮ ಧೈರ್ಯ ಅಕ್ಕನ ವಿಶೇಷ ಗುಣ, ಅವಳ ಮಹಾಶಕ್ತಿ! ತಾನು ನಡೆಸಿದ ಬಾಳುವೆ, ಪಟ್ಟ ಅನುಭವಗಳನ್ನು ಆಧ್ಯಾತ್ಮದ ಎರಕದಲ್ಲಿ ಹೊಯ್ದು, ಹೊಸ ಮೂರ್ತಿಯನ್ನು ಸೃಜಿಸಿದಳು.
ಹೀಗೆ ಈ ಮಹಾತಾಯಿಯ ಜೀವನಗಾಥೆ ಕನ್ನಡ ನಾಡಿನ ಜನಮಾನಸದಲ್ಲಿ ಹಸಿರಾಗಿದೆ, ಉಸಿರಾಗಿದೆ. ಆಕೆ ಕೈ ಹಿಡಿದದ್ದು ನಾಡೊಡೆಯ ಜೈನರಾಜ ಕೌಶಿಕನನ್ನು, ಸಕಲ ಭೋಗಭಾಗ್ಯವು ಅವಳದಾಗಿತ್ತು. ಅಚ್ಚುಮೆಚ್ಚಿನ ದಾಸದಾಸೀ ಜನ ಬೇಕಾದಷ್ಟಿದ್ದರೂ ಅದನ್ನು ತಿರಸ್ಕರಿಸಿ ತೋರಿದ ಆಧ್ಯಾತ್ಮಿಕ ಬೆಳಕು, ಸಾಧನೆ ಮತ್ತು ಪ್ರಗತಿ ಮೆಚ್ಚುವಂತದ್ದಾಗಿದೆ.
ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ
ವಿಶ್ರಾಂತ ಪ್ರಾಧ್ಯಾಪಕರು,
ಮೊ: 9880093613
ಇದನ್ನೂ ಓದಿ- ʼನೆನಪಿರುವುದು ತಾರೀಕುಗಳು ಮಾತ್ರʼ: ಗುಲ್ಫಿಶಾ ಫಾತಿಮಾ