ವಿಪರ್ಯಾಸವೇನೆಂದರೆ, ಇವತ್ತು ಸೋನಿಯಾ ಅವರನ್ನು ‘ಕಾಂಗ್ರೆಸ್ ಕಿ ವಿಧವಾ’ ಎಂದು ಲೇವಡಿ ಮಾಡಲಾಗುತ್ತಿದೆ; `ಬಾರ್ ಡ್ಯಾನ್ಸರ್’ ಎಂದು ಹೀಯಾಳಿಸಲಾಗುತ್ತಿದೆ; ಅವರ ಇಟಲಿ ಮೂಲವನ್ನು ಕೆದಕಿ, ಅವರ ತ್ಯಾಗ-ಔದಾರ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ಹಾಗೆ ಟೀಕಿಸುವವರ ಸೀಮಿತ-ದೃಷ್ಟಿಗೆ ಆಕೆ ಒಬ್ಬ ರಾಜಕಾರಣಿಯಾಗಿ ಮಾತ್ರ ಕಾಣುತ್ತಾರೆ; ಒಬ್ಬ ಹೆಣ್ಣಾಗಿ, ತಾಯಿಗುಣವಾಗಿ ಗೋಚರಿಸುತ್ತಿಲ್ಲ. ಇದು ನೋಡುತ್ತಿರುವವರ ಅಲ್ಪತನವೇ ಹೊರತು ಸೋನಿಯಾರ ತಪ್ಪಲ್ಲ – ಮಾಚಯ್ಯ ಎಂ ಹಿಪ್ಪರಗಿ
ಇದು ಮಹಾಭಾರತದ ಕಥೆ. ಆಗಷ್ಟೆ ಕುರುಕ್ಷೇತ್ರ ಯುದ್ದ ಮುಗಿದುಹೋಗಿದೆ. ಅಶ್ವತ್ಥಾಮ, ಕೃಪಾಚಾರ್ಯ, ಕೃತವರ್ಮ ಈ ಮೂವರನ್ನು ಹೊರತುಪಡಿಸಿ ಇಡೀ ಕೌರವ ಪಡೆ ನಾಮಾವಶೇಷವಾಗಿದೆ. ತಂದೆ ದ್ರೋಣಾಚಾರ್ಯರ ಹತ್ಯೆಗೆ ಮಗ ಅಶ್ವತ್ಥಾಮ ಸೇಡಿನ ಬೆಂಕಿಯಲ್ಲಿ ಕುದಿಯುತ್ತಿದ್ದಾನೆ. ಪ್ರತೀಕಾರಕ್ಕಾಗಿ ಅದೊಂದು ರಾತ್ರಿ, ಪಾಂಡವರ ಅರಮನೆ ನುಸುಳುವ ಅಶ್ವತ್ಥಾಮ, ಕತ್ತಲಲ್ಲಿ ಮಲಗಿದ್ದ ಪಂಚ ಪಾಂಡವರ ಶಿರ ಕತ್ತರಿಸಿ ಹತ್ಯೆ ಮಾಡುತ್ತಾನೆ. ಆದರೆ ಅವರು ಪಾಂಡವರಲ್ಲ; ಪಾಂಡವರ ಮಕ್ಕಳಾದ ಉಪಪಾಂಡವರು! ಕತ್ತಲಲ್ಲಿ ಅಶ್ವತ್ಥಾಮ ಯಾಮಾರಿದ್ದ! ತನ್ನ ಐದೂ ಮಕ್ಕಳನ್ನು ಕಳೆದುಕೊಂಡ ದ್ರೌಪದಿಯ ತಾಯಿಕರುಳು ಮುಮ್ಮಲ ಮರುಗುತ್ತದೆ. ಗೋಳಾಡುತ್ತಾಳೆ. ಕಣ್ಣೀರು ಹರಿಸುತ್ತಾಳೆ.
ಪಾಂಡವರು ಸುಮ್ಮನಿರುತ್ತಾರೆಯೇ? ಅದರಲ್ಲೂ ಅರ್ಜುನ ಹಠಕ್ಕೆ ಬಿದ್ದವನಂತೆ ಅಶ್ವತ್ಥಾಮನನ್ನು ಸೆದೆಬಡಿದು ತಂದು ದ್ರೌಪದಿಯ ಮುಂದೆ ನಿಲ್ಲಿಸಿ “ನಿನ್ನ ಮಕ್ಕಳನ್ನು ಕೊಂದ ಈ ಪಾಪಿಗೆ ಯಾವ ಶಿಕ್ಷೆ ನೀಡಬೇಕು ಹೇಳು? ಈಗಲೇ ಗತಿಕಾಣಿಸುತ್ತೇವೆ” ಎಂದಬ್ಬರಿಸುತ್ತಾನೆ. ಭೀಮನಂತೂ, ಅಶ್ವತ್ಥಾಮನನ್ನು ತುಂಡುತುಂಡಾಗಿ ಕತ್ತರಿಸಿಹಾಕಲು ತುದಿಗಾಲಲ್ಲಿ ಹಂಬಲಿಸುತ್ತಾನೆ. ಕರುಣಾಮಯಿ ದೃಷ್ಟಿಯನ್ನು ಅಶ್ವತ್ಥಾಮನತ್ತ ನೆಟ್ಟು ದ್ರೌಪದಿ ತಣ್ಣಗೆ ನುಡಿಯುತ್ತಾಳೆ, “ಯಾವ ಶಿಕ್ಷೆಯೂ ಬೇಡ ಬಿಟ್ಟುಬಿಡಿ!”
ಅಚ್ಚರಿಗೀಡಾದ ಅರ್ಜುನ ಕೇಳುತ್ತಾನೆ, “ಯಾಕೆ?”. ದ್ರೌಪದಿಯ ತಾಯಿ ಹೃದಯ ಉಸುರುತ್ತದೆ “ಇವನೂ ಒಬ್ಬ ತಾಯಿಗೆ ಮಗನಲ್ಲವೇ? ಇವನನ್ನು ಕೊಂದರೆ, ಆ ತಾಯಿ ಕರುಳಿಗೆ ಸಂಕಟವಾಗುವುದಿಲ್ಲವೇ? ಮಕ್ಕಳನ್ನು ಕಳೆದುಕೊಂಡ ಸಂಕಟ ನನಗಷ್ಟೇ ಸಾಕು, ಇದು ಮುಂದುವರೆಯುವುದು ಬೇಡ. ಹಿಂಸೆಗೆ ಹಿಂಸೆಯೇ ಉತ್ತರವಾಗದಿರಲಿ. ನಿಲ್ಲಿಸಿಬಿಡಿ ಇದನ್ನು ಇಲ್ಲಿಗೆ!”.
ಹೆಣ್ಣನ್ನು ನಾವು ಮಡದಿಯಾಗಿ, ಮಗಳಾಗಿ, ಸೋದರಿಯಾಗಿ, ಗೆಳತಿಯಾಗಿ ಬಹುರೂಪದಲ್ಲಿ ಕಾಣಬಹುದಾದರೂ ಸಾಮಾನ್ಯವಾಗಿ ತಾಯಿರೂಪಕ್ಕೆ ಹೆಚ್ಚು ಹೋಲಿಸುತ್ತೇವೆ. ಯಾಕೆಂದರೆ, ಮಾತೃರೂಪ ಕೇವಲ ಸೃಷ್ಟಿಗೆ ಮಾತ್ರ ಸೀಮಿತವಾದುದಲ್ಲ; ತನ್ನ ಸೃಷ್ಟಿಯನ್ನು ಸಲಹಿ, ಪೊರೆದು, ಕ್ಷಮಿಸುವ ವಿಶಾಲ ಹರವು ಹೊಂದಿರುವಂತದ್ದು.
ಈಗ ಈ ಕಥೆ ನೆನಪಾಗಲು ಕಾರಣವಿದೆ.

2001 ಡಿಸೆಂಬರ್ 13. ದೆಹಲಿಯ ನಮ್ಮ ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ಶುರುವಾಗಿದೆ. ಒಂದಷ್ಟು ಸಂಸದರು, ಅಧಿಕಾರಿಗಳು ಒಳಗೇ ಸಿಲುಕಿಕೊಂಡಿದ್ದಾರೆ. ಎಷ್ಟು ಮಂದಿ ಉಗ್ರರಿದ್ದಾರೆ? ಯಾವ್ಯಾವ ಕಡೆಯಿಂದ ದಾಳಿ ನಡೆಸುತ್ತಿದ್ದಾರೆ? ಒಳಗಿದ್ದ ಯಾರಿಗೆ ಏನಾಗಿದೆ? ಎಂಬ ಯಾವ ಮಾಹಿತಿಯೂ ಇಲ್ಲ. ಗಾಬರಿಗೊಂಡ ಪ್ರಧಾನಿ ಅಟಲ್ ತಮ್ಮ ಕಚೇರಿಯಲ್ಲಿ ಟಿ.ವಿ.ಗೆ ಕಣ್ಣುನೆಟ್ಟು ಕ್ಷಣಕ್ಷಣದ ಸುದ್ದಿಗೆ ಚಡಪಡಿಸುತ್ತಿದ್ದಾರೆ. ಆಗ ಅವರ ಫೋನ್ ರಿಂಗಣಿಸುತ್ತೆ. ಆತಂಕದಲ್ಲಿ ರಿಸೀವರ್ ಎತ್ತಿ “ಹಲೋ” ಎನ್ನುತ್ತಾರೆ. ಅತ್ತ ಕಡೆಯಿಂದ ಸೋನಿಯಾ ಗಾಂಧಿ ಧ್ವನಿ. “ಅಟಲ್‌ಜಿ, ನೀವು ಸುರಕ್ಷಿತವಾಗಿದ್ದೀರಿ ತಾನೇ? ದಾಳಿಯ ಸುದ್ದಿ ಕೇಳಿ, ನೀವೆಲ್ಲಿ ಒಳಗೆ ಸಿಲುಕಿಹಾಕಿಕೊಂಡಿದ್ದೀರೋ ಎಂದು ಚಿಂತೆಯಾಗಿತ್ತು. ಅದಕ್ಕೇ ಫೋನ್ ಮಾಡಿದೆ” ಎಂದು ವಿಚಾರಿಸುತ್ತಾರೆ. ಪ್ರತಿಯಾಗಿ ಅಟಲ್ ಅವರು, “ಇಲ್ಲ, ಸೋನಿಯಾಜಿ ನಾನು ಸುರಕ್ಷಿತ. ನೀವು ಒಳಗೆ ಸಿಲುಕಿದ್ದೀರೇನೊ ಅಂತ ನನಗೆ ಗಾಬರಿಯಾಗಿತ್ತು” ಎಂದು ಪ್ರತಿಕ್ರಿಯಿಸುತ್ತಾರೆ. ಒಂದಷ್ಟು ಮಾತುಕತೆಯ ನಂತರ “ನೀವು ದೃತಿಗೆಡಬೇಡಿ ಅಟಲ್‌ಜಿ. ಇದು ದೇಶದ ಮೇಲಿನ ದಾಳಿ. ನಿಮ್ಮೊಂದಿಗೆ ನಾವಿದ್ದೇವೆ” ಎಂದು ಹೇಳಿ ಸೋನಿಯಾ ಫೋನ್ ಕಟ್ ಮಾಡುತ್ತಾರೆ.
ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರಿಗೆ ಮಾಧ್ಯಮ ಸಲಹೆಕಾರನಾಗಿ ಕೆಲಸ ಮಾಡಿದ ಪತ್ರಕರ್ತ ಅಶೋಕ್ ಟಂಡನ್ ತಮ್ಮ “ಅಟಲ್ ಸಂಸ್ಮರಣ್” ಕೃತಿಯಲ್ಲಿ ಉಲ್ಲೇಖಿಸಿರುವ ಘಟನೆ ಇದು. ಇದೇ ಡಿಸೆಂಬರ್ 8ರಂದು ಪುಸ್ತಕ ಬಿಡುಗಡೆಯಾಗಿದೆ.

ರಾಜಕಾರಣವೆಂದರೆ ನಾವು ಅರ್ಥ ಮಾಡಿಕೊಂಡಿರೋದು ಆರೋಪ-ಪ್ರತ್ಯಾರೋಪ; ಒಬ್ಬರನ್ನೊಬ್ಬರು ದ್ವೇಷಿಸುವುದು, ಟೀಕಿಸುವುದು, ಅಸಹ್ಯಕರವಾಗಿ ನಿಂದಿಸುವುದು. ಇತ್ತೀಚಿನ ದಿನಗಳಲ್ಲಂತೂ ಇದು ವಿಪರೀತವಾಗಿದೆ. ಆದರೆ, ಅವತ್ತು ಸೋನಿಯಾ ಗಾಂಧಿ ತನ್ನೊಳಗಿನ ರಾಜಕಾರಣಿಯನ್ನು ಪಕ್ಕಕ್ಕೆ ತಳ್ಳಿ, ತಾಯಿಗುಣದ ಒಬ್ಬ ಹೆಣ್ಣುಮಗಳಾಗಿ ವರ್ತಿಸಿದ್ದರು. ತಮ್ಮ ಎದುರಾಳಿ ಪಕ್ಷದ ಅಟಲ್ ಅವರ ಸುರಕ್ಷತೆ ಬಗ್ಗೆ ಗಾಬರಿಗೊಂಡು, ತಾವೇ ಖುದ್ದಾಗಿ ಫೋನ್ ಮಾಡಿ ವಿಚಾರಿಸಿಕೊಂಡಿದ್ದರು. ಆಕೆಯ ಆತಂಕವು ತೋರಿಕೆಯದಲ್ಲ, ಪ್ರಾಮಾಣಿಕವಾದುದು. ಯಾಕೆಂದರೆ ಇಂತದ್ದೇ ಜೀವದ್ರೋಹಿ ಕೃತ್ಯಗಳಲ್ಲಿ ಕಣ್ಣಮುಂದೆಯೇ ಅತ್ತೆಯನ್ನು, ಗಂಡನನ್ನು ಕಳೆದುಕೊಂಡ ಹೆಣ್ಣಮಗಳು ಅವರು. “ಕಳೆದುಕೊಂಡ ಸಂಕಟ ನನಗಷ್ಟೇ ಸಾಕು” ಎಂದು ಪಾಂಡವರೆದುರು ನುಡಿಯುವ ದ್ರೌಪದಿಯ ಸಂಕಟವನ್ನು ಸೋನಿಯಾ ಕೂಡಾ ಹಾದು ಬಂದವರು. ತೀವ್ರತೆಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಅವರವರ ಸಂಕಟ ಅವರಿಗೆ ದೊಡ್ಡದು. ಆ ಕಾರಣಕ್ಕೇ, ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಯಾಗಿ ವರ್ತಿಸದೆ ಒಬ್ಬ ತಾಯಿಯಾಗಿ ಪ್ರತಿಕ್ರಿಯಿಸಲು ಸೋನಿಯಾ ಅವರಿಗೆ ಸಾಧ್ಯವಾಯಿತು.
ವಿಪರ್ಯಾಸವೇನೆಂದರೆ, ಇವತ್ತು ಅದೇ ಸೋನಿಯಾ ಅವರನ್ನು ‘ಕಾಂಗ್ರೆಸ್ ಕಿ ವಿಧವಾ’ ಎಂದು ಲೇವಡಿ ಮಾಡಲಾಗುತ್ತಿದೆ; `ಬಾರ್ ಡ್ಯಾನ್ಸರ್’ ಎಂದು ಹೀಯಾಳಿಸಲಾಗುತ್ತಿದೆ; ಅವರ ಇಟಲಿ ಮೂಲವನ್ನು ಕೆದಕಿ, ಅವರ ತ್ಯಾಗ-ಔದಾರ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ಹಾಗೆ ಟೀಕಿಸುವವರ ಸೀಮಿತ-ದೃಷ್ಟಿಗೆ ಆಕೆ ಒಬ್ಬ ರಾಜಕಾರಣಿಯಾಗಿ ಮಾತ್ರ ಕಾಣುತ್ತಾರೆ; ಒಬ್ಬ ಹೆಣ್ಣಾಗಿ, ತಾಯಿಗುಣವಾಗಿ ಗೋಚರಿಸುತ್ತಿಲ್ಲ. ಇದು ನೋಡುತ್ತಿರುವವರ ಅಲ್ಪತನವೇ ಹೊರತು ಸೋನಿಯಾರ ತಪ್ಪಲ್ಲ. ಯಾಕೆಂದರೆ ದ್ರೌಪದಿಯ ಕಣ್ಣೀರಿನ ಸಂಕಟ ಮಹಾಭಾರತಕ್ಕೆ ಮುಗಿದುಹೋದ ಕಥೆಯಲ್ಲ; ಕಲಿಯುಗಕ್ಕೂ ಉಲ್ಬಣಿಸಿರುವ ಹೆಣ್ಣಿನ ವ್ಯಥೆ.
ಮಾಚಯ್ಯ ಎಂ ಹಿಪ್ಪರಗಿ
ರಾಜಕೀಯ ವಿಶ್ಲೇಷಕರು


