ವಂಚಿಸಿದವನ ಹೆಸರು ಮಗನಿಗಿಡುವಂತಿರಬೇಕು. ಆದರೆ..

Most read

ಪ್ರತೀಕಾರಕ್ಕಾಗಿ ಹೆಸರು ಬದಲಾವಣೆ ಹೊಸತೇನಲ್ಲ. ಕೆಲ ವರ್ಷದ ಹಿಂದೆ ನೆರೆಯ ಚೀನಾ ಗಡಿಯಲ್ಲಿ ಯುದ್ಧ ಭೀತಿ ತಂದು ತೊಂದರೆಯೊಡ್ಡಿದ ಸಮಯದಲ್ಲಿ ಗುಜರಾತ್ ಸರಕಾರ ಡ್ರಾಗನ್ ಫ್ರುಟ್ ಎಂಬ ಹಣ್ಣಿನ ಹೆಸರನ್ನು ಕಮಲಮ್ ಎಂದು ಬದಲಿಸಿತ್ತು. ಆದರೆ ಪ್ರತಿ ದಿನ ಬಳಸುವ ಸಿಹಿ ಸಕ್ಕರೆಯ ಚೀನಿಎನ್ನುವ ಹೆಸರಿನ ಗೋಜಿಗೆ ಮಾತ್ರ ಯಾರೂ ಆವತ್ತು ಹೋದಂತಿಲ್ಲ.  ಅದೇ ರೀತಿ ಮೊನ್ನೆ ನಮ್ಮ ವೈರಿ ಪಾಕಿಸ್ಥಾನದ ಪರ ನಿಂತ ಟರ್ಕಿಗೆ ಸೆಡ್ಡು ಹೊಡೆದು ನಾವು ಸಾಕುವ ನಮ್ಮ ಟರ್ಕಿ ಕೋಳಿಗಳ  ಹೆಸರು ಬದಲಾಯಿಸಿದ ಸುದ್ದಿ ಇನ್ನೂ ಬಂದಂತಿಲ್ಲ-  ಶಂಕರ್ ಸೂರ್ನಳ್ಳಿ

ಕನ್ನಡದ ಭಕ್ತಿ ಸಾಹಿತ್ಯದಲ್ಲಿ ಕನಕ ದಾಸ, ಪುರಂದರದಾಸ, ಶಿಶುನಾಳ ಷರೀಫರಂತವರ ಸಾಹಿತ್ಯದಲ್ಲಿ  ಬರುವಂತಹ ಒಗಟು ಒಗಟಾದ ಅಥವಾ ಕೆಲ ಸಾಮಾಜಿಕ ಸೂಕ್ಷ್ಮತೆಗಳನ್ನು ಬಿಚ್ಚಿಡುವಂತಹ ಅನೇಕ ರಚನೆಗಳು ಕಾಣಸಿಗುತ್ತವೆ.  ಅಂತಾದ್ದರಲ್ಲಿ ಪುರಂದರ ದಾಸರ ರಚನೆಯೊಂದು ಹೀಗಿದೆ

ಧರ್ಮವೇ ಜಯವೆಂಬ ದಿವ್ಯಮಂತ್ರ
ಮರ್ಮವನರಿತು ಮಾಡಲುಬೇಕು ತಂತ್ರ

ವಿಷವಿಕ್ಕಿದವನಿಗೆ ಷಡುರಸವನುಣಿಸಲಿ ಬೇಕು
ದ್ವೇಷ ಮಾಡಿದವನ ಪೋಷಿಸಲು ಬೇಕು
ಪೂಸಿ ಮಾಡಿ ಕೆಡಿಸುವನ ಹಾಡಿ ಹರಸಲುಬೇಕು
ಮೋಸ ಮಾಡುವವನ ಹೆಸರು ಮಗನಿಗಿಡಬೇಕು

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರ ವಿಠ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು.

ದಾಸರು ಹೇಳಿದಂತೆ ಮೋಸ ಮಾಡಿದವನ ಹೆಸರನ್ನ ಮಗನಿಗಿಡುವಷ್ಟರ ಮಟ್ಟಿಗಿನ ದಾರಾಳತನ ಯಾರಿಗಿದೆಯೋ ತಿಳಿಯದು. ಆದರೆ ಮೋಸ ವಂಚನೆ ಮಾಡಿದ ಶತ್ರುವಿನ ಹೆಸರನ್ನಿಡುವುದು ಬಿಡಿ ಅಸಲಿಗೆ ಶತ್ರುವಿನ ಹೆಸರೇ ಅಲ್ಲದ ಅದಕ್ಕೆ ಸಂಬಂಧವೇ ಇಲ್ಲದಿದ್ದರೂ ಕೂಡ ಆರೀತಿ ಅನ್ನಿಸುವ ಕೇವಲ ಕಾರಣಕ್ಕಾಗಿ ಪ್ರಸಿದ್ಧವಾದ ಆ ’ಅಲ್ಲದʼ ಹೆಸರಿಗೇ ಖೊಕ್ ನೀಡಿದಂತಹ ಪ್ರಕರಣ ದೇಶದಲ್ಲಿ ನಡೆದಿದೆ.

ಇತ್ತೀಚೆಗೆ ನಡೆದ ಪಹಲ್ಗಾಂವ್ ಘಟನೆಯ ಬಳಿಕ ದೇಶಾದ್ಯಂತ ನೆರೆಯ ಪಾಕಿಸ್ಥಾನದೊಂದಿಗೆ ಪ್ರತೀಕಾರದ ಭಾವ ಎಲ್ಲೆಡೆ ವ್ಯಕ್ತವಾಗಿತ್ತು. ಇನ್ನೇನು ಯುದ್ಧ ಸುರು ಆಗೇಬಿಟ್ಟಿತು ಎನ್ನುವವರೆಗೆ ಪರಿಸ್ಥಿತಿ ಮುಂದುವರೆದಿತ್ತು. ಅಂತಾದ್ದರಲ್ಲಿ ಕೆಲ ಯುದ್ಧೋನ್ಮಾದಿಗಳು ಪಾಕಿಸ್ಥಾನದ ಕರಾಚಿಯ ಹೆಸರನ್ನು ಹೊಂದಿರುವ ಬೇಕರಿಯೊಂದರ ಮೇಲೂ ಕೂಡ ದಾಳಿ ನಡೆಸಿದ್ದರು. ಆದರೆ ಇದರ ಮಂದುವರಿಕೆಯಾಗಿ ಇತ್ತೀಚೆಗೆ ಜೈಪುರದ ಕೆಲ ವ್ಯಾಪಾರಿಗಳು ಪಾಕ್ ಎನ್ನುವ ಹೆಸರನ್ನು ಹೊಂದಿರುವ ಸಿಹಿತಿಂಡಿಗಳ ಹೆಸರನ್ನು ಬದಲಿಸಿ ಸುದ್ದಿ ಮಾಡಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ಮೈಸೂರ್ ಪಾಕ್ ಸಹ ಸೇರಿದೆ. ಅವರ ಪ್ರಕಾರ ನಮ್ಮ ಮೈಸೂರ್ ಪಾಕ್  ಇನ್ಮುಂದೆ ಮೈಸೂರ್ ಪಾಕ್ ಆಗಿರದೇ ಮೈಸೂರ್ ಶ್ರೀ ಆಗಿರುತ್ತದಂತೆ!

ಈ ರೀತಿ ಪ್ರತೀಕಾರಕ್ಕಾಗಿ ಹೆಸರು ಬದಲಾವಣೆ ಹೊಸತೇನಲ್ಲ. ಕೆಲ ವರ್ಷದ ಹಿಂದೆ ನೆರೆಯ ಚೀನಾ ಗಡಿಯಲ್ಲಿ ಯುದ್ಧ ಭೀತಿ ತಂದು ತೊಂದರೆಯೊಡ್ಡಿದ ಸಮಯದಲ್ಲಿ ಗುಜರಾತ್ ಸರಕಾರ ಡ್ರಾಗನ್ ಫ್ರುಟ್ ಎಂಬ ಹಣ್ಣಿನ ಹೆಸರನ್ನು ಕಮಲಮ್ ಎಂದು ಬದಲಿಸಿತ್ತು. ಯಾಕೆಂದರೆ ಈ ಡ್ರಾಗನ್ ಎಂಬ ಕಾಲ್ಪನಿಕ ಜೀವಿ (ನಮ್ಮ ಗಂಡಭೇರುಂಡ, ಶರಭ ಹಾಗು ಗ್ರಿಫಿನ್, ಫೀನಿಕ್ಸ್ ಗಳಂತೆ) ನಮ್ಮ ವೈರಿಯಾದ ಚೀನಾವನ್ನು ಪ್ರತಿನಿಧಿಸುತ್ತದೆ ಎನ್ನುವ ಕಾರಣಕ್ಕಾಗಿ ಡ್ರಾಗನ್ ಫ್ರುಟ್ ಕಮಲಮ್ ಎಂದು ಮತಾಂತರ ಆಗಿತ್ತು. ಆದರೆ ಪ್ರತಿ ದಿನ ಬಳಸುವ ಸಿಹಿ ಸಕ್ಕರೆಯ ’ಚೀನಿ” ಎನ್ನುವ ಹೆಸರಿನ ಗೋಜಿಗೆ ಮಾತ್ರ ಯಾರೂ ಆವತ್ತು ಹೋದಂತಿಲ್ಲ.  ಅದೇ ರೀತಿ ಮೊನ್ನೆ ನಮ್ಮ ವೈರಿ ಪಾಕಿಸ್ಥಾನದ ಪರ ನಿಂತ ಟರ್ಕಿಗೆ ಸೆಡ್ಡು ಹೊಡೆದು ನಾವು ಸಾಕುವ ನಮ್ಮ ಟರ್ಕಿ ಕೋಳಿಗಳ  ಹೆಸರು ಬದಲಾಯಿಸಿದ ಸುದ್ದಿ ಇನ್ನೂ ಬಂದಂತಿಲ್ಲ.

ಎಲ್ಲರಿಗೂ ಗೊತ್ತಿದೆ ಮೈಸೂರ್ ಪಾಕಿನ ಪಾಕ್ ಗೂ ಪಾಕಿಸ್ತಾನದ ಪಾಕ್ ಗೂ ಯಾವುದೇ ಸಂಬಂಧವಿಲ್ಲವೆಂದು (ನಮ್ಮ ಭಾರತದ ಬುಡದಲ್ಲೇ ಪಾಕ್ (Palk) ಜಲಸಂಧಿಯಿದೆ. ಹಿಂದೆ ಮದ್ರಾಸಿನ ಗವರ್ನರ್ ಆಗಿದ್ದ ರಾಬರ್ಟ್ ಪಾಕ್ ಎನ್ನುವವರ ಕಾರಣಕ್ಕಾಗಿ ಬಂದಂತಹ ಹೆಸರಿದು) ಪಾಕಶಾಲೆ, ಪಾಕ ಪ್ರವೀಣ  ಎನ್ನುವಂತೆ ಪಾಕ (ನೀರು ಆವಿಯಾಗಿಸಲ್ಪಟ್ಟ ದಪ್ಪನೆಯ ಮಿಶ್ರಣ) ಎನ್ನುವ ಪದದಿಂದ ಈ ಮೈಸೂರ್ ಪಾಕ್ ಅರ್ಥಾತ್ ಮೈಸೂರಿನ ಪಾಕ ಹುಟ್ಟಿದೆಯೇ ಹೊರತು ಪಾಕಿಸ್ಥಾನಕ್ಕೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಪಾಕಿಸ್ಥಾನ ಹುಟ್ಟೋ ಮುಂಚೆಯೇ ಮೈಸೂರು ಅರಸರ ಕಾಲದಲ್ಲಿ ಕಂಡುಕೊಳ್ಳಲಾದ ಈ ಪ್ರಸಿದ್ಧ ಸಿಹಿ ತಿನಿಸಿಗೆ ಇದೀಗ ಪಹಲ್ಗಾಂವ್ ಪರಿಣಾಮ ಬಿದ್ದಿದೆ ಅಷ್ಟೆ.

ಮುಸ್ಲಿಮ್ ಅರಸರ ಹೆಸರಿರುವ ದೆಹಲಿಯ ಮಾರ್ಗಗಳ ಹೆಸರು ಬದಲಾವಣೆ, ಇಸ್ಲಾಮ್ ಸಂಬಂಧಿ ಹೆಸರುಗಳಾದ ಅಲಹಾಬಾದ್, ಹೈದರಾಬಾದ್ ನಂತಹ ನಗರಗಳ ಹೆಸರು ಬದಲಾವಣೆಗಳ ಈ ಕಾಲಘಟ್ಟ (’ಇಂಡಿಯ”ದಲ್ಲಿ ಅತ್ಯಾಚಾರಗಳು ನಡೆಯುತ್ತವೆ ಭಾರತದಲ್ಲಿ ಅಲ್ಲ ಎಂದೊಬ್ಬ ಹೇಳಿಕೆ ನೀಡಿದ್ದ) ದಲ್ಲಿ ಇವೆಲ್ಲ ಒಂದು ಸಾಮಾನ್ಯ ಘಟನೆಗಳಂತೆ ಇದೀಗ ತೋರತೊಡಗಿವೆ. ಆದರೆ ಹಿಂದೊಮ್ಮೆ ಕಾಂಗ್ರೆಸ್‌ ಕಾಲದಲ್ಲೂ ಸಸ್ಯವೊಂದರ ಹೆಸರು ಬದಲಾವಣೆಯ ಪ್ರಕ್ರಿಯೆ ನಡೆದಿತ್ತು

ಎಂಭತ್ತರ ದಶಕದ ಆರಂಭದಲ್ಲಿ ಮೇವು ಮತ್ತು ಇನ್ನಿತರ ಕಾರಣಗಳಿಗಾಗಿ ಹವಾಯಿಯಿಂದ ಭಾರತಕ್ಕೆ ತಂದ ಕುಬಾಬುಲ್ (Leucaena leucocephala) ಎಂಬ ಸಸ್ಯದ ಉಪಯುಕ್ತತೆಯನ್ನು ಕಂಡು ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಅದರ ಕುಬಾಬುಲ್ ಎಂಬ ಋಣಾತ್ಮಕ ಛಾಯೆಯ ಹೆಸರನ್ನು ಸುಬಾಬುಲ್ ಎಂದು ಬದಲಿಸಿದ್ದರು.

ಇಡೀ ವಿಶ್ವವೇ ಭಾರತದ ಬೆನ್ನಿಗಿದೆ ಎಂಬುದರ ಅಸಲಿಯತ್ತು ಮೊನ್ನಿನ ಘಟನೆಗಳಿಂದ ಬಯಲಾಗಿದೆ. ನಮ್ಮ ದೇಶದ ಯಾವುದೋ ಒಂದು ರಾಜ್ಯದಷ್ಟು ದೊಡ್ಡದಿರುವ ವೈರಿ ರಾಷ್ಟ್ರ ಪಾಕ್ ನ ಹುಚ್ಚಾಟಗಳ ಹಿಂದೆ ಬಲಾಢ್ಯ ಕಾಣದ ಕೈಗಳಿರುವುದು ರಹಸ್ಯವೇನಲ್ಲ. ಐ ಎಮ್ಎಫ್ ನ ಭರ್ಜರಿ ಸಾಲಗಳು ಅದಕ್ಕೆ ಸಲೀಸಾಗಿ ಸಿಗುತ್ತಿವೆ. ಗುಜರಿಯಲ್ಲಿ ಕೊಳೆಯುತ್ತಿರುವ ತಮ್ಮ ಔಟ್ ಡೇಟೆಡ್ ಸರಕುಗಳನ್ನು ಯುದ್ಧೋನ್ಮಾದ ದೇಶಗಳಿಗೆ ಮಾರುವ ವ್ಯಾವಹಾರಿಕ ದೇಶಗಳ ಸಂಚೂ ಕೂಡ ಇದರ ಹಿಂದಿದೆ. ಶತ್ರುವಿನ ಶತ್ರು ಮಿತ್ರ ಎನ್ನುವ ತತ್ವದಡಿಯಲ್ಲಿ ಪಾಕನ್ನು ಸದಾ ಪೋಷಿಸುತ್ತಿರುವ ಚೀನಾದ ತಂತ್ರಜ್ಞಾನದ ಪ್ರಗತಿಯನ್ನು ಯಾವತ್ತೂ ಕೀಳಂದಾಜಿಸುವಂತಿಲ್ಲ. ಇಂತಹ ಕಠಿಣ ಸಂದರ್ಭಗಳಲ್ಲಿ ಯುದ್ಧೋನ್ಮಾದಗಳಿಗಿಂತ ಮುತ್ಸದ್ದಿತನದ ನಡೆಯೇ ಹೆಚ್ಚು ಮಹತ್ವದ್ದೆನಿಸುತ್ತದೆ. ವೈರಿಯ ಹೆಸರನ್ನು ಮಗನಿಗಿಡುವಷ್ಟರ ಮಟ್ಟಿಗಲ್ಲದಿದ್ದರೂ…

ಶಂಕರ್ ಸೂರ್ನಳ್ಳಿ

ಇದನ್ನೂ ಓದಿ- ಹೆಣ್ಣೊಂದು ಕಲಿತರೆ ನಾಡು ನುಡಿಗೆ ಗೌರವ ದೊರೆತಂತೆ…

More articles

Latest article