01
ಯಾರನ್ನೂ ಪರಚದ
ಹುಲಿಯುಗುರಿಗಾಗಿ
ಹುಲಿ ಮರಿಗಳಿಗೆ ವಿಷ ಹಾಕಲಾಯಿತು
ಯಾರ ಕತ್ತೂ ಸೀಳದ
ಹುಲಿಯ ಕೋರೆಹಲ್ಲುಗಳಿಗಾಗಿ
ಹುಲಿಗಳ ಮಾರಣಹೋಮ ನಡೆಸಲಾಯಿತು
02
ಹುಲಿಯ
ಉಗುರು ಹಲ್ಲು ಕಣ್ಣು ಚರ್ಮಕ್ಕಾಗಿ
ವಿಷವಿಕ್ಕುವ ಮನುಷ್ಯರಿಗೆ
ಹೃದಯ ಕಣ್ಣು ಕರುಣೆ ಇರಲಿಲ್ಲ
ಹುಲಿಗಳ ಕೊಲ್ಲುವ ದುರುಳತನಕ್ಕಿಂತ
ಯಾರನ್ನೂ ಕೊಲ್ಲದ
ಹುಲಿಗಳ ಮೃಗೀಯತೆ ನನಗಿಷ್ಟ
03
ಮೃಗಗಳು
ಕಾಡಿನ ಮಕ್ಕಳು
ಅವುಗಳ ಕೊಲ್ಲುವ
ನಾವು ನರರಾಕ್ಷಸರು
04
ಧನದಾಹಕ್ಕಾಗಿ
ಮೃಗಗಳ ಚರ್ಮ ಸುಲಿಯುವ
ಮನುಷ್ಯರಿಗಿಂತ
ಹಸಿದಾಗ ಮಾತ್ರ ಬೇಟೆಯಾಡಿ ತಿನ್ನುವ
ಹುಲಿಯೇ ಶ್ರೇಷ್ಠ
05
ಕ್ರೌರ್ಯವನ್ನೇ
ಉಸಿರಾಡುವ ಮನುಷ್ಯರಿಗಿಂತ
ಹುಲಿಯ ಮೈಮೇಲಿನ ಪಟ್ಟಿಗಳು
ಅದೆಷ್ಟು ಮೋಹಕ
06
ತಾಯಿ ಹುಲಿ ಮತ್ತು ನಾಲ್ಕು ಮರಿಗಳ
ವಿಷಹಾಕಿ ಕೊಂದ
ಮನುಷ್ಯರ ವಿರುದ್ಧ
ಜಿಂಕೆ ಮೊಲ ಕಾಡೆಮ್ಮೆ ದನಗಳು
ಪ್ರಕೃತಿ ಮಾತೆಗೆ ದೂರು ಕೊಟ್ಟಿವೆ
07
ಕಾಡಿನ ಹಕ್ಕಿಗಳು
ಕಣ್ಣೀರಿಟ್ಟು
ದೇವರಲ್ಲಿ ಪ್ರಾರ್ಥಿಸಿದವು
ಓ ದೇವರೇ
ಹುಲಿಗಳ ವಿಷವಿಕ್ಕಿ ಕೊಂದ
ಮನುಷ್ಯರು
ತಿನ್ನುವ ಅನ್ನ
ಕುಡಿಯುವ ನೀರು
ಉಸಿರುವ ಗಾಳಿಯೂ ವಿಷವಾಗಲಿ
08
ವಿಷ ತಿಂದು
ಸ್ವರ್ಗಕ್ಕೆ ಹೋದ ಹುಲಿಗಳು
ದೇವೇಂದ್ರನಿಗೆ ಫಿರ್ಯಾದು ಕೊಟ್ಟವು
ನಾವು ಯಾವ ಮನುಷ್ಯರನ್ನು ಕೊಂದೆವು?
ನಮ್ಮನ್ನೇಕೆ ಈ ಮನುಷ್ಯರು ಕೊಂದರು?
09
ಮಾದಪ್ಪನ ಹೊತ್ತ ಹುಲಿ
ಕೆಳಗಿಳಿಸಿ
ಧರಣಿ ಕೂತಿದೆ
ತನ್ನ ಸಂಗಾತಿ ಮತ್ತು ಮರಿಗಳ
ವಿಷವಿಕ್ಕಿ ಕೊಂದವರ
ಧರಣಿಯಿಂದಲೇ ಇಲ್ಲದಂತೆ ಮಾಡಲು
ಬೇಡಿಕೆ ಇಟ್ಟಿದೆ
ಬರಿಗಾಲಲ್ಲಿ ನಡೆದೂ ನಡೆದೂ ದಣಿದ ಮಾದಪ್ಪ
ಹುಲಿಕೊಂದವರ ಹುಡುಕುತ್ತಿದ್ದಾನೆ
10
ಮಾದಪ್ಪನ ಜೊತೆ ಹುಲಿಯನ್ನೂ
ಪೂಜಿಸುವ ಜನ
ಹುಲಿಗಳಿಗೆ ವಿಷವಿಕ್ಕುತ್ತಾರೆ
ಮಾದಪ್ಪನಲ್ಲಿ ವರ ಬೇಡುತ್ತಾರೆ
ಎಂಥ ಸೋಜಿಗ!
11
ಮಾದಪ್ಪನ ಹುಲಿ ಕೊಂದು
ಏಸು ಸೂಜಿ ಮಲ್ಲಿಗೆ ಅರ್ಪಿಸಿದರೇನು
ಚರ್ಮ ಸುಲಿದು ಕಣ್ಣು ಕಿತ್ತು ಉಗುರು
ಮಾರಿಕೊಳ್ಳುವ ಜನ
ರಾಶಿ ದುಂಡುಮಲ್ಲಿಗೆ ಹಾಕಿ
ಭಕುತಿ ಗೀತೆ ಹಾಡಿದರೇನು?
ಮಾದಪ್ಪ ಒಲಿಯುವನೇನು?
12
ಹುಲಿಗಳಿಗೆ
ವಿಷವಿಕ್ಕಿ ಕೊಂದವರ ಮುದ್ದಾಡಲು
ಮಹಾದೇವನ ಕೊರಳ
ಘಟಸರ್ಪ ಅಪ್ಪಣೆ ಕೇಳಿತು
ವೀರಣ್ಣ ಮಡಿವಾಳರ,
ಕವಿ, ನಾಟಕಕಾರ
ಇದನ್ನೂ ಓದಿ- ಕಪ್ಪು ಅಜೆಂಡ