ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಟಿಕೆಟ್ ಹಂಚಿಕೆಯಾಗಿದೆ. ಆದರೆ ತಮ್ಮದೆ ಪಕ್ಷದ ನಾಯಕರು ತಮ್ಮ ಅಭ್ಯರ್ಥಿಯನ್ನು ಸೋಲಿಸಲು ಟೊಂಕಕಟ್ಟಿ ನಿಂತಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ತುಮಕೂರು ಒಂದು. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಧುಸ್ವಾಮಿ ಲೋಕಸಭಾ ಟಿಕೆಟ್‌ಗೆ ಟವಲ್ ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಹೊರಗಿನಿಂದ ಬಂದ ವಿ. ಸೋಮಣ್ಣ ಅವರಿಗೆ ಮಣೆ ಹಾಕಿದೆ.
ಜೆಸಿ ಮಾಧುಸ್ವಾಮಿಯ ರಾಜಕೀಯ ಎದುರಾಳಿ ಜೆಡಿಎಸ್. ಚಿಕ್ಕನಾಯಕನಹಳ್ಳಿಯಲ್ಲಿ ಇಷ್ಟು ವರ್ಷಗಳ ಕಾಲ ಜೆಡಿಎಸ್ ವಿರುದ್ಧ ಸ್ಪರ್ಧಿಸಿ ಗೆಲುವು, ಸೋಲು ಕಂಡಿರುವ ಅವರಿಗೆ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದೇ ನುಂಗಲಾರದ ತುತ್ತಾಗಿದೆ. ನಿಷ್ಠುರ ರಾಜಕಾರಣಿ ಎನಿಸಿಕೊಂಡಿರುವ ಅವರಿಗೆ ಈಗ ಟಿಕೆಟ್ ಕೂಡ ನೀಡದೆ ಇರುವುದು ಅವರ ಕೋಪ ಹೆಚ್ಚಾಗಲು ಮತ್ತಷ್ಟು ಕಾರಣ.
ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಮತ್ತು ಮಾಜಿ ಸಚಿವ ವಿ ಸೋಮಣ್ಣ ಇಬ್ಬರ ನಡುವಿನ ಈ ಗೊಂದಲಗಳು ಬೂದಿ ಮುಚ್ಚಿದ ಕೆಂಡವೇನಲ್ಲ. ಮಾಧುಸ್ವಾಮಿ ಬೆಂಬಲಿಗರು ಟಿಕೆಟ್ ಘೋಷಣೆಯಾಗುವುದಕ್ಕಿಂತ ಮುಂಚೆಯಿಂದಲೂ ಪ್ರತಿಭಟನೆ ನಡೆಸುತ್ತಲೆ ಇದ್ದಾರೆ.
ಮಾಧುಸ್ವಾಮಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುವ ಹಾಲಿ ಸಂಸದ ಜಿ.ಎಸ್ ಬಸವರಾಜು ಅವರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಮಾಧುಸ್ವಾಮಿ ಅವರನ್ನು ತುಳಿಯುವ ಒಂದು ತಂತ್ರ ಎನ್ನಲಾಗಿದೆ. ವಿ ಸೋಮಣ್ಣ ತುಮಕೂರಿನಿಂದ ಅದೃಷ್ಟವಶಾತ್ ಗೆದ್ದರೇ ಮಾಧುಸ್ವಾಮಿ ರಾಜಕೀಯ ಭವಿಷ್ಯಕ್ಕೆ ನಿಜಕ್ಕೂ ಆಪತ್ತು ಬರಲಿದೆ. ಹೀಗಾಗಿಯೇ ಮಾಧುಸ್ವಾಮಿ ಒಳಗೊಳಗೆ ಸೋಮಣ್ಣ ಸೋಲಿಗೆ ಹಪಹಪಿಸುತ್ತಿದ್ದು, ಅವರ ಸೋಲನ್ನೇ ಬಯಸುತ್ತಿದ್ದಾರೆ.
ಇನ್ನು, ಈ ಇಬ್ಬರು ಮಾಜಿ ಸಚಿವರ ಒಳ ಜಗಳ ಮಾತ್ರ ಲಾಭವಾಗುವುದು ಕಾಂಗ್ರೆಸ್‌ಗೆ. ತುಮಕೂರಿನಿಂದ ಈ ಹಿಂದೆ ಸಂಸದರಾಗಿದ್ದ ಮುದ್ದಹನುಮೇಗೌಡ ಈ ಬಾರಿಯೂ ಕಣಕ್ಕಿಳಿಯುತ್ತಿದ್ದು, ಮಾಧುಸ್ವಾಮಿ ಮತ್ತು ವಿ ಸೋಮಣ್ಣ ಜಗಳ ಇವರಿಗೆ ಲಾಭವಾಗಲಿದೆ. ಕಾಂಗ್ರೆಸ್ ಕೂಡ ಇದನ್ನೇ ಲಾಭ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ಇನ್ನು ಮಾಜಿ ಸಚಿವ ಮಾಧುಸ್ವಾಮಿ ಜೊತೆಗೆ ನಾನು ನಿನ್ನೆಯೇ ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ ಆದರೆ ಅವರ ಸ್ವಲ್ಪ ಬೇಜಾರಾಗಿ ಮಾತಾಡ್ತಿದ್ರು. ನಾನು ನಾಳೆ ಮನೆಗೆ ಬರ್ತಿದಿನಿ ಅಣ್ಣ ಅಂದೆ. ಆದರೆ ನೀನು ಬರಬೇಡ ಅಂದ್ರು. ಆಯ್ತು ಅಣ್ಣ ಮನೆಯಲ್ಲಿ ತಂಗಿ ಇರ್ತಾಳೆ ಮಾತಾಡಿಸಿಕೊಂಡು ಹೋಗ್ತೇನೆ ಅಂದೆ. ಆದ್ರೂ ಅವರು, ಬೇಡ ಗುರು ನನ್ನ ಮಾತು ಕೇಳು ಅಂದ್ರು. ಆಯ್ತಣ್ಣ ನಾಲ್ಕು ದಿನ ಕಳೀಲಿ ನಿನ್ನಲ್ಲಿರುವ ದುಗುಡವು ಕಡಿಮೆಯಾಗಲಿ ಆಮೇಲೆ ಬರ್ತಿನಿ ಅಂದೆ.