ಪುರುಷಹಂಕಾರಕ್ಕೆ ಪೆಟ್ಟು ಕೊಟ್ಟ ಪುಟ್ಟ ಪದ್ಯ

Most read

ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ‌ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ ಅದು ವಿಕೃತ ರೂಪಕ್ಕೆ ತಿರುಗಿರುವುದು ವಿಷಾದನೀಯ. ಇಂತಹ ಹೊತ್ತಿನಲ್ಲಿ ಶಶಿಕಾಂತ ಯಡಹಳ್ಳಿಯವರು ʼಹೆಣ್ಣು ಎಂದರೆ ಬರೀ ಲೈಂಗಿಕ ಬಳಕೆಯ ಮಾಧ್ಯಮ ಮಾತ್ರಾನಾ? ಹೆಣ್ಣು ಎಂದರೆ ಗಂಡಸರಿಗೆ ಕೇವಲ ಸ್ತನ ವ್ಯಸನ ಹಾಗೂ ಯೋನಿ ಧ್ಯಾನ ಅಷ್ಟೇನಾ? ಎಂಬ ಮಹತ್ತರವಾದ ಪ್ರಶ್ನೆಯನ್ನು ಗಂಡು ಕುಲಕ್ಕೆ ಕೇಳುವ ಹಿರಿದಾದ ಆಶಯವನ್ನು ಈ ಕಿರಿದಾದ ಕವಿತೆ ಮಾಡಿದೆ ಎಂದು ಕವಿತೆಯನ್ನು ಶ್ಲಾಘಿಸಿದ್ದಾರೆ.

ನಾನು..

ನಾನು ಅಂದರೆ

ಒಂದು ಜೊತೆ

ಮೆತ್ತಗಿನ‌ ಮೊಲೆ

ತೊಡೆ ಸಂದಲ್ಲಿ ಅಡಗಿದ

ಕತ್ತಲ ಕೋಶ

ಇಷ್ಟೇ ಕವಿತೆ. ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಕವಯಿತ್ರಿ ಮಮತಾ ಸಾಗರ್ ರವರು ವಾಚಿಸಿದ ಸ್ವ ರಚಿತ ಕಿರು ಕವನ.

ಈ ಕವಿತೆ ಈಗಾಗಲೇ ಮಮತಾರವರ ಪದಸಂಚಾರ ಕವನ ಸಂಕಲನದಲ್ಲಿ ಪ್ರಕಟವಾಗಿದ್ದರೂ ಯಾರೂ ಪ್ರತಿಕ್ರಿಯಿಸಿರಲಿಲ್ಲ. ಯಾವಾಗ ಸಮ್ಮೇಳನದಲ್ಲಿ ಮಮತಾರವರು ಈ ಕವನ ವಾಚಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತೋ ಗಂಡಸರ ಅಂಡಿನ ಕೆಳಗೆ ಬಾಂಬೊಂದು ಸ್ಪೋಟಿಸಿದಂತಾಯ್ತು.

ಯಾಕೆ ಇದೇ ಪದಗಳನ್ನು ಬಳಸಲಾಗಿದೆ?. ಬೇರೆ ಪರ್ಯಾಯ ಪದಗಳಿರಲಿಲ್ಲವೇ? ಹೇಳುವುದನ್ನು ಹೀಗೆಲ್ಲಾ ಅಶ್ಲೀಲವಾಗಿ ಹೇಳದೆ ಪರ್ಯಾಯ ಪ್ರತಿಮೆಗಳ ಮೂಲಕ ಹೇಳಬಾರದೇ? ಇದೂ ಒಂದು ಪದ್ಯಾನಾ?… ಹೀಗೆಲ್ಲಾ.. ಅಷ್ಟೇ ಯಾಕೆ ಇದಕ್ಕಿಂತಾ ಕೆಟ್ಟದಾದ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿದವು.

ಕವಿತೆಯ ಗಂಧ ಗಾಳಿ ಗೊತ್ತಿಲ್ಲದ ಸಾಹಿತ್ಯದ ಅಂಧರೂ ಸಹ ಈ ಆರು ಸಾಲಿನ ಪದ್ಯಕ್ಕೆ ಬೆಚ್ಚಿ ಬಿದ್ದು ತಮ್ಮ ಗಂಡಸ್ತನದ ಆಕ್ರೋಶವನ್ನು ವಿಧವಿಧವಾಗಿ ವಿಸರ್ಜಿಸ ತೊಡಗಿದರು.

ಮೊಲೆ ಮತ್ತು ಕೋಶ ಎಂಬ ಎರಡು ಪದಗಳು ಪುರುಷಹಂಕಾರಕ್ಕೆ ಪೆಟ್ಟು ಕೊಟ್ಟಿದ್ದವು. ಮೊಲೆ ಬದಲು ಸ್ತನ ಎಂದಿದ್ದರೆ ಪ್ರತಿರೋಧದ ತೀವ್ರತೆ ಕಡಿಮೆಯಾಗುತ್ತಿತ್ತೇನೋ? ಆದರೆ ಮರ್ಮಾಂಗಗಳ ಅಸಲಿ ಕನ್ನಡ ಪದ ಬಳಕೆ ಕಾವ್ಯದಲ್ಲಿ ನಿಶಿದ್ಧ ಎನ್ನುವ ತೀರ್ಮಾನಕ್ಕೆ ಬಂದ ಆಷಾಢಭೂತಿಗಳು ಮುಜುಗರಕ್ಕೊಳಗಾಗಿ ಬೇಜಾರಿನಿಂದ ಬಾಯಿ ಬುಡ ಬಡೆದುಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳು ಸಾಕ್ಷಿಯಾದವು.

ಇಷ್ಟಕ್ಕೂ ಇದು ಕವಿತೆ ಹೌದೋ ಅಲ್ಲವೋ ಎನ್ನುವ ವಿವಾದ ಪಕ್ಕಕ್ಕಿಡೋಣ. ಮೊದಲು ಈ ಕವಿತೆ ಏನನ್ನು ಹೇಳುತ್ತಿದೆ ಎಂಬುದನ್ನು ನೋಡೋಣ. ಯಾವುದೇ ಅಂದದ ಹೆಣ್ಣನ್ನು ನೋಡುವ ಬಹುತೇಕ ಗಂಡುಗಳ ಕಣ್ಣುಗಳ ನೋಟ ಮೊದಲು ದೇಹಸಿರಿಯತ್ತಲೇ ಸರ್ವೇ ಮಾಡುತ್ತವೆ ಎಂಬುದು ನಿರ್ವಿವಾದ. ಪ್ರಾಕೃತಿಕವಾದ ಆಕರ್ಷಣೆಯೂ ಇದಕ್ಕೆ ಕಾರಣವಾಗಿರಬಹುದು. ಆದರೆ ಮನೋನಿಗ್ರಹವನ್ನು ಮರೆತ ಗಂಡುಗಳ ಅಂತರಂಗದಲಿ ಹೆಣ್ಣು ಭೋಗದ ವಸ್ತು ಎನ್ನುವ ಪುರುಷಪ್ರಧಾನ ವ್ಯವಸ್ಥೆ ರೂಪಿಸಿಕೊಂಡು ಬಂದಿರುವ ಪರಂಪರೆ ಕೂಡಾ ಕಾರಣವಾಗಿದೆ. ಮಹಾಕಾವ್ಯಗಳು, ಪುರಾಣ ಪುಣ್ಯಕತೆಗಳು ಸಹ ಹೆಣ್ಣಿನ ಅಂಗಾಂಗಗಳನ್ನು ವರ್ಣಿಸಿವೆ.

ಆದರೆ ಎಚ್ಚೆತ್ತ ಮಹಿಳೆಯರು ಹೆಣ್ಣಿನ ಕುರಿತು ಪುರುಷರ ಗ್ರಹಿಕೆಯನ್ನೇ ಪ್ರಶ್ನಿಸುತ್ತಿದ್ದಾರೆ. ಮಮತಾ ಸಾಗರ್, ಪ್ರತಿಭಾ ನಂದಕುಮಾರ್ ರಂತಹ ನಿರ್ಭೀತ ಕವಿಯಿತ್ರಿಯರು ಪದ್ಯ ಮಾಧ್ಯಮದ ಮೂಲಕ ಬಿಡೆ ಬಿಟ್ಟು ತಮ್ಮ ಪ್ರತಿರೋಧವನ್ನು ದಾಖಲಿಸುತ್ತಾ ಬಂದಿದ್ದಾರೆ. ಮಮತಾರವರು ಪದ್ಯ ಒಂದರಲ್ಲಿ ಬಹುತೇಕ ಪುರುಷರು ಯೋನಿ ಧ್ಯಾನ ಪೀಡಿತರಾಗಿರುತ್ತಾರೆ ಎಂದು ನೇರವಾಗಿಯೇ ಹೇಳಿದ್ದಾರೆ.

ಪದ್ಯ ಎಂದರೆ ಹೀಗೆಯೇ ಇರಬೇಕು. ಲೈಂಗಿಕವಾಗಿ ಬಳಕೆಯ ಪದಗಳು ಇರಬಾರದು. ಮರ್ಯಾದಸ್ತರ ಭಾಷೆಯಲ್ಲೇ ಬರೆಯಬೇಕು ಎಂಬ ನಿಬಂಧನೆಗಳು ಎಲ್ಲಿವೆ?. ರೂಢೀಗತ ನಿರ್ಬಂಧಗಳನ್ನು ಧಿಕ್ಕರಿಸುವುದೇ ಕಾವ್ಯದ ಮೂಲ ಸ್ವರೂಪ. ಸತ್ಯವನ್ನು ಹೇಳಲು ಹೊಸ ಸಾಧ್ಯತೆಗಳನ್ನು ಕವಿ ಪ್ರಯೋಗಿಸುತ್ತಲೇ ಇರಬೇಕು. ತಮ್ಮ ಪದ್ಯದ ಮೂಲಕ ಮಮತಾರವರು ಅದನ್ನೇ ಮಾಡಿದ್ದಾರೆ. ಕಾವ್ಯದ ಆಶಯ, ಕವಿಯ ಮನಸ್ಸಿಗಾದ ಗಾಯಗಳ ಆಳವನ್ನು ಅಳೆಯಲಾಗದ ವಿಕ್ಷಿಪ್ತ ಮನಸುಗಳು ವಿಕೃತವಾಗಿ ಪ್ರತಿಕ್ರಿಯಿಸುತ್ತವೆ.

ಈ ರೀತಿಯ ಅನಗತ್ಯ ವಿರೋಧಕ್ಕೆ ಕಾರಣ ಮನಸಿಗೆ ಹಾಕಿಕೊಂಡ ಬ್ರಾಹ್ಮಣ್ಯವಾದಿ ಮಡಿವಂತಿಕೆ. ನೋಡಬಾರದ್ದನ್ನು ನೋಡಲು, ಮಾಡಬಾರದ್ದನ್ನು ಮಾಡಲು ಹಾತೊರೆಯುವ ಮನಸುಗಳು ಕವಿತೆಯಲ್ಲಿ ಶುದ್ಧತೆಯನ್ನು ಬಯಸುವುದೇ ವಿಪರ್ಯಾಸ. ಇದೇ ವೈದಿಕಶಾಹಿ ಮೂಸೆಯಿಂದಲೇ “ವಾತ್ಸಾಯನ ಕಾಮಸೂತ್ರ” ಸೃಷ್ಟಿಯಾಗಿದ್ದು. ದೇವತೆಗಳ ಕುಚ ನಿತಂಬಗಳೂ ಸಹ ವೈದಿಕರ ಸ್ತ್ರೋತ್ರಗಳ ಭಾಗವಾಗಿದ್ದು. ಸಂಸ್ಕೃತ ಭೂವಿಷ್ಟ ಶಬ್ದ ಪದಪ್ರಯೋಗಗಳ ಮೂಲಕ ಹೆಣ್ಣಿನ ಅಂಗಾಂಗಗಳ ಪ್ರಸ್ತಾಪ ಮಾಡಿದರದು ಶ್ರೇಷ್ಠ, ಕನ್ನಡದ ಪದಗಳ ಬಳಕೆ ನಿಷಿದ್ಧ ಎಂಬುದು ಶ್ರೇಷ್ಠತೆಯ ವ್ಯಸನ ಪೀಡಿತ ಮಡಿವಂತರ ಮನೋವೈಕಲ್ಯ..

ವಿಕ್ಷಿಪ್ತ ವಿರೋಧಗಳನ್ನು ಪಕ್ಕಕ್ಕಿಟ್ಟು ಈಗ ಮಮತಾರವರ ಕಿರು ಕವಿತೆ ಏನನ್ನು ಧ್ವನಿಸುತ್ತದೆ ಎಂಬುದನ್ನು ನೋಡೋಣ. ಸೃಜನಶೀಲ ಕಲೆ ಸಾಹಿತ್ಯಗಳಲ್ಲಿ ಆಕೃತಿ ಮತ್ತು ಆಶಯ ಎಂಬ ಎರಡು ಪ್ರಮುಖ ಅಂಗಗಳಿರುತ್ತವೆ. ಕಾವ್ಯ ಕಟ್ಟುವ ರೀತಿ ಆಕೃತಿಯಾದರೆ, ಅದು ಹೊರಹೊಮ್ಮಿಸುವ ಭಾವ, ಅರ್ಥಗಳು ಆಶಯವಾಗಿರುತ್ತವೆ. ಮಮತಾರವರ ಪದ್ಯದ ಆಕೃತಿಯಲ್ಲಿ ಸಂಪ್ರದಾಯವಾದಿಗಳಿಗೆ ಪಥ್ಯವಾಗದ ಪದಗಳಿವೆ. ಆದರೆ  ಇಂತಹ ಅ‌ನೇಕಾನೇಕ ಲೈಂಗಿಕ ಸಂಬಂಧಿತ ಪದಪುಂಜಗಳು ಬಹುತೇಕರ ನಿತ್ಯದ ಆಡು ಮಾತುಗಳಾಗಿವೆ. ಮಹಿಳಾ ಸಂಬಂಧಿ ಬೈಗುಳಗಳಂತೂ ಪುಂಖಾನುಪುಂಖವಾಗಿವೆ. ಆದರೆ ಆಡು ಮಾತಿನ ಪದಗಳು ಪದ್ಯಗಳಲ್ಲಿ ಬಳಕೆ ಮಾಡಬಾರದು ಎನ್ನುವುದು ಗಂಡಾಳ್ವಿಕೆಯ ನಾಜೂಕಯ್ಯಗಳ ಆಗ್ರಹ. ಇದಕ್ಕೆ ಹಿಪಾಕ್ರಸಿ ಅನ್ನೋದು.

ಮಮತಾರ ಪದ್ಯದ ಆಶಯ ಬಹಳ ಸ್ಪಷ್ಟವಾಗಿದೆ. ನಾನು ಹೆಣ್ಣು, ನನಗೂ ಭಾವನೆಗಳಿವೆ, ಸೂಕ್ಷ್ಮ ಸಂವೇದನೆಯ ಮನಸ್ಸಿದೆ. ನೋವು ನಲಿವು, ನಿಲುವು ಒಲವುಗಳು ಮಹಿಳೆಯರಿಗೂ ಇದೆ. ಆದರೆ ಪುರುಷರು ಯಾಕೆ ಹೆಣ್ಣೆಂದರೆ ಎರಡು ಮೆತ್ತನೆಯ ಮೊಲೆ ಎಂದೇ ಭಾವಿಸುತ್ತಾರೆ, ತೊಡೆ ಸಂದಿಯ ಧ್ಯಾನದಲಿ ಮೈಮರೆಯುತ್ತಾರೆ. ಮಹಿಳೆಯ ಅಂಗಾಂಗಳಿಗೆ ಕೊಡುವ ಮಹತ್ವವನ್ನು ಆಕೆಯ ಭಾವನೆಗಳಿಗೆ ಕೊಡುತ್ತಿಲ್ಲ. ಹೆಣ್ಣು ಎಂದರೆ ಬರೀ ಲೈಂಗಿಕ ಬಳಕೆಯ ಮಾಧ್ಯಮ ಮಾತ್ರಾನಾ? ಹೆಣ್ಣು ಎಂದರೆ ಗಂಡಸರಿಗೆ ಕೇವಲ ಸ್ತನ ವ್ಯಸನ ಹಾಗೂ ಯೋನಿ ಧ್ಯಾನ ಅಷ್ಟೇನಾ? ಎಂಬ ಮಹತ್ತರವಾದ ಪ್ರಶ್ನೆಯನ್ನು ಗಂಡು ಕುಲಕ್ಕೆ ಕೇಳುವ ಹಿರಿದಾದ ಆಶಯವನ್ನು ಈ ಕಿರಿದಾದ ಕವಿತೆ ಮಾಡಿದೆ.

ಆಶಯದ ಅರಿವಿಲ್ಲದ ಗಾವಿಲರು ಕೇವಲ ಕವಿತೆಯ ಆಕೃತಿಯಲ್ಲಿ ಬಳಸಿದ ಪದಗಳ ಕುರಿತು ಆಕ್ಷೇಪ ಎತ್ತುತ್ತಿದ್ದಾರೆ.  ಕುಂಬಳ ಕಾಯಿ ಕಳ್ಳರಂತೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಕಾವ್ಯವನ್ನು ಟೀಕಿಸುವ ಆತುರದಲ್ಲಿ ತಾವೇ ಬೆತ್ತಲಾಗುತ್ತಿದ್ದಾರೆ. ಕವಯಿತ್ರಿಯ ಆಶಯವೂ ಇದೇ ಆಗಿತ್ತು. ಕೆಲವು ಗಂಡಸರೊಳಗೆ ಅಡಗಿರುವ ಹಿಪಾಕ್ರಸಿಯನ್ನು ಬಹಿರಂಗಗೊಳಿಸಬೇಕಿತ್ತು. ಕಾವ್ಯಕ್ಕಾಗಿ ಕಾವ್ಯ, ಕಲೆಗಾಗಿ ಕಲೆ ಎನ್ನುವ ಶ್ರೇಷ್ಠತೆಯ ವ್ಯಸನ ಪೀಡಿತರ ಪರಂಪರಾಗತ ನಂಬಿಕೆಯನ್ನು ಒಡೆದು ಹಾಕಬೇಕಿತ್ತು. ಪ್ರಶ್ನಿಸುವುದೇ ಕಾವ್ಯ ಹಾಗೂ ಕಲೆಯಂತಹ ಸೃಜನಾತ್ಮಕ ಮಾಧ್ಯಮಗಳ ಉದ್ದೇಶ ಎಂಬುದನ್ನು ಅನಾವರಣಗೊಳಿಸಬೇಕಿತ್ತು. ಇಂತಹ ದೊಡ್ಡದಾದ ಕೆಲಸವನ್ನು ಈ ಪುಟ್ಟ ಕವಿತೆ ಮಾಡಿಯಾಗಿದೆ. ಹೆಣ್ಣಿನ ಮನಸಿಗಿಂತ ಮೈಮಾಟದತ್ತಲೇ ಕೆಟ್ಟ ನೋಟ ಬೀರುವ ಕಾಮಣ್ಣಗಳಿಗೆ ಈ ಪದ್ಯ ದಿಟ್ಟವಾಗಿ ಉತ್ತರಿಸಿದೆ. ಪುರುಷಹಂಕಾರವನ್ನು ಕೆಣಕುವ ಮೂಲಕ ತನ್ನ ಆಶಯದಲ್ಲಿ ಸಫಲವಾಗಿದೆ.

ಹೆಣ್ಣೆಂದರೆ ಭೋಗದ ವಸ್ತು ಎಂದು ಬಗೆವ ಗಂಡುಗಳ ಕುರಿತು ನನ್ನದೊಂದು ಕವಿತೆ ಇಲ್ಲಿದೆ..

ಕೀಚಕ ಸಂತಾನ

ಮಡಿ ಹುಡಿಗಳ ತಡೆಬೇಲಿ ದಾಟಿ

ಕಟ್ಟುಪಾಡುಗಳ ಅಡೆತಡೆ ಮೀರಿ

ತೊಡೆಗಳ ನಡುವಿನ ಕಾಡು ಕಣಿವೆಗೆ

ತುಡಿಯುವ ಗಂಡು ಗಾರುಡಿಗರಿಗೆ

ಹೆಣ್ಣೆಂಬುದು ಮನಸಿಗಂಟಿದ ತೊನ್ನು

ಯಾವಾಗಲೂ ಹೀಗೇನೇ

ಪ್ರೇಮವನು ಕಾಮ ಆಕ್ರಮಿಸಿ

ಭಾವಗಳ ಬಯಕೆಗಳೇ ಅತಿಕ್ರಮಿಸಿ

ಸಿಕ್ಕಾಗ ದಕ್ಕಿಸಿಕೊಳ್ಳುವ ಆತುರ

ಜೊತೆಗೆ ಪುಟಿದುಕ್ಕುವ ಪುರುಷಹಂಕಾರ

ಹೊಲ ಯಾವುದಾದರೇನು ನೇಗಿಲು

ಸುಗ್ಗಿಯ ಹಿಗ್ಗಿನಲಿ ನುಗ್ಗುವುದೇ ದಿಗಿಲು

ಆ ಅವಳ ಮನಸು ಕನಸು ಭಾವನೆ ಬಿಕ್ಕಳಿಕೆ

ಯಾವುದೂ ಲೆಕ್ಕಕ್ಕಿಲ್ಲ ಸೊಕ್ಕಿದ ಭಂಡತನಕೆ

ಕೋಳಿ ಕಂಡರೆ ರೆಕ್ಕೆ ಪುಕ್ಕ ಕಿತ್ತೆಸೆದು ಮುಕ್ಕುವ

ಕೀಚಕ ಸಂತಾನ ಎಲ್ಲೆಡೆ ಕಾದಿದೆ ಎಚ್ಚರಿಕೆ..

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯುವ ಕವಿತೆ- ’ನಾನು ಎಂದರೆ…ʼ‌

More articles

Latest article