ಬೆಂಗಳೂರು: ನಿನ್ನೆ ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಸೋಮನಹಳ್ಳಿಯಲ್ಲಿ ನೆರವೇರಲಿದೆ. ಈಗಾಗಲೇ ಅವರ ಪಾರ್ಥೀವ ಶರೀರ ಸೋಮನಹಳ್ಳಿಯತ್ತ ಕೊಂಡೊಯ್ಯಲಾಗುತ್ತಿದೆ. ತೆರೆದ ವಾಹನದಲ್ಲಿ ಅಂತಿಮ ಯಾತ್ರೆ ನಡೆಯುತ್ತಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಯಲ್ಲಿ ತೆರಳುತ್ತಿದ್ದಾರೆ. ಸದಾಶಿವನಗರ –ಮೇಖ್ರಿ ಸರ್ಕಲ್- ವಿಂಡ್ಸರ್ ಮ್ಯಾನರ್, ಕೆ.ಆರ್. ಸರ್ಕಲ್ – ಕಾರ್ಪೋರೇಷನ್ ಸರ್ಕಲ್ – ಟೌನ್ ಹಾಲ್ ಮೂಲಕ ಮೈಸೂರು ರಸ್ತೆಗೆ ಆಗಮಿಸಿದೆ. ಈಗಾಗಲೇ ದಾರಿಯುದ್ದಕ್ಕೂ ಸಾವಿರಾರು ಸಾರ್ವಜನಿಕರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಕೆಂಗೇರಿ ಮತ್ತು ಬಿಡದಿಯಲ್ಲೂ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಿದರು. ಸ್ಕೈ ವಾಕರ್ ಗಳ ಮೇಲಿಂದ ಹೂವಿನ ಮಳೆಗೆರೆದು ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಕೆಲವೇ ಕ್ಷಣಗಳಲ್ಲಿ ರಾಮನಗರ ತಲುಪಲಿದ್ದು, ಅಲ್ಲಿಯೂ ಸಾವಿರಾರು ಸಾರ್ವಜನಿಕರು ನೆರೆದಿದ್ದಾರೆ.
ನಿನ್ನೆ ನಿಗದಿಯಾಗಿದ್ದಂತೆ 12 ಗಂಟೆಯ ವೇಳೆಗೆ ಸೋಮನಹಳ್ಳಿ ತಲುಪಬೇಕಿತ್ತು. ಆದರೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು ತಡವಾಗುತ್ತಿದೆ.
ಹುಟ್ಟೂರು ಸೋಮನಹಳ್ಳಿಯಲ್ಲಿ ಸಂಜೆ 4 ಗಂಟೆ ವೇಳೆಗೆ ಅಂತ್ಯಸಂಸ್ಕಾರ ನೆರವೇರಲಿದೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನೆರೆವೇರಲಿವೆ. ಅಗ್ನಿಸ್ಪರ್ಶ ನೆರವೇರಿಸಲಿರುವ ಮೊಮ್ಮಗ ಅಮರ್ಥ್ಯ. ಕೃಷ್ಣ ಅವರ ಮೊಮ್ಮಗ, ಡಿಕೆ ಶಿವಕುಮಾರ್ ಅವರ ಅಳಿಯ ಅಮರ್ಥ್ಯ ಹೆಗ್ಡೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ಎಸ್.ಎಂ.ಕೃಷ್ಣ ಸಹೋದರರ ಪುತ್ರ ಗುರುಚರಣ್ ಮಾಹಿತಿ ನೀಡಿದ್ದಾರೆ. ಅಂತ್ಯಕ್ರಿಯೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. DIG ಬೋರಲಿಂಗಯ್ಯ, ಮಂಡ್ಯ SP ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಭದ್ರತೆಗಾಗಿ 700ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಇಬ್ಬರು ಎಸ್ ಪಿ, 10 ಡಿಎಸ್ ಪಿ, 31 ಪಿಐ, 70 ಪಿಎಸ್ ಐ, 200 ಹೋಮ್ ಗಾರ್ಡ್, 6 ಕೆಎಸ್ ಆರ್ ಪಿ, 6 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬಿಡದಿಯಲ್ಲಿ ಐಕಾನ್ ಕಾಲೇಜು ಬಳಿ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು.