ಮತ್ತೆ ಸಿಕ್ಕಿದ ಅವಶೇಷಗಳು 10-12 ವರ್ಷದ ಹಿಂದೆ ಹೂಳಲಾದ ಮಹಿಳೆಯರ ದೇಹಗಳು!

Most read

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೊಂಡಿದ್ದ ವ್ಯಕ್ತಿ ಇಲ್ಲಿನ ಬಂಗ್ಲೆಗುಡ್ಡೆ ಎಂಬ ಅರಣ್ಯ ಪ್ರದೇಶದಲ್ಲಿ ಸೋಮವಾರ  SIT ಮೂಲಕ ಹೊರತೆಗೆದಿರುವ ಮಾನವ ದೇಹದ ಅವಶೇಷಗಳು ಮಹಿಳೆಯರ ದೇಹದ ಅವಶೇಷಗಳು ಎಂಬುದು ಬಹುತೇಕ ಖಚಿತವಾಗಿದೆ. Iಈ ತಲೆಬುರುಡೆ ಮತ್ತು ಮೂಳೆಗಳನ್ನು ಗಮನಿಸಿದ ಬಳಿಕ ಹಾಗೂ ಅಲ್ಲಿ ಕಳೇಬರದೊಂದಿಗೆ ಸಿಕ್ಕಿದ ಕೆಂಪು, ಹಸಿರು ಸೀರೆಗಳು ಮತ್ತು ಇತರ ಉಡುಪುಗಳನ್ನು ನೋಡಿ ಅವು ಮಹಿಳೆಯರದ್ದೇ ಎಂಬ ಅಭಿಪ್ರಾಯಕ್ಕೆ SIT ಬಂದಿದೆ ಎನ್ನಲಾಗಿದೆ. ಇಂದು ಸಿಕ್ಕಿದ ಈ ಅವಶೇಷಗಳು ಇತ್ತೀಚಿನದ್ದು ಎಂಬ ಗುಮಾನಿಯೂ ಹರಡಿತ್ತು. ಆದರೆ, ಗುಡ್ಡದ ಮೇಲೆ ಕಡಿದಾದ ಆ ಜಾಗದಲ್ಲಿ ಅಗೆತ ನಡೆಸಿದಾಗ ಸಿಕ್ಕಿದ ಈ ಅವಶೇಷಗಳು 10-12 ವರ್ಷಗಳ ಹಿಂದಿನ ದೇಹದ ಅವಶೇಷಗಳು ಎಂದು SIT ಮೂಲಗಳು ತಿಳಿಸಿವೆ.

ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಕಳೇಬರಗಳ ಶೋಧ ಕಾರ್ಯವು ಬಹುತೇಕ ನೇತ್ರಾವತಿ ನದಿಯ ದಡದಲ್ಲೇ ನಡೆಯುತ್ತಿತ್ತು. ನೆನ್ನೆಯವರೆಗೂ ವ್ಯಕ್ತಿ ಹೇಳಿದ್ದ 10ನೆಯ ಪಾಯಿಂಟ್‌ ವರೆಗೆ ಅಗೆತ ನಡೆಸಲಾಗಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಸೋಮವಾರ 11ನೇ ಪಾಯಿಂಟ್‌ ನಿಂದ ಆ ವ್ಯಕ್ತಿʼ ಮನಸ್ಸು ಬದಲಾಯಿಸಿಕೊಂಡು ಮುಂದಿನ ನಿಗದಿತ ಪಾಯಿಂಟ್‌ ಬದಲಿಗೆ SIT ತಂಡವನ್ನು ಗುಡ್ಡದಲ್ಲಿ ಕಡಿದಾದ ಜಾಗಕ್ಕೆ ಕರೆದುಕೊಂಡು ಹೋಗಿದ್ದಾನೆ. ಆರಂಭದಲ್ಲಿ ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸಿದ್ದರು ಎನ್ನಲಾಗಿದೆ. ಆದರೆ, ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್‌ ಅವರಿಗೆ ದಬಾಯಿಸಿ ʼಆ ವ್ಯಕ್ತಿʼ ಎಲ್ಲಿ ತೋರಿಸುತ್ತಾನೋ ಅಲ್ಲಿಗೆ ಹೋಗಿ ಅಗೆತ ಮಾಡಲು ಸೂಚಿಸಿದರೆನ್ನಲಾಗಿದೆ. SIT ತಂಡದ ಮುಖ್ಯಸ್ಥರಾಗಿರುವ ಡಾ. ಪ್ರಣವ್‌ ಮೊಹಾಂತಿಯವರು ಮೊನ್ನೆಯೇ ನಿರ್ದೇಶನ ನೀಡಿ ʼಆ ವ್ಯಕ್ತಿʼ ಎಲ್ಲಿಗೆ ಕರೆದುಕೊಂಡು ಹೋಗುತ್ತಾನೋ ಅಲ್ಲೇ ಹೋಗಿ ಅಗೆತ ನಡೆಸಲೂ ಸೂಚಿಸಿದ್ದರು.

ಸೋಮವಾರ ಹೊರತೆಗೆದ ಅವಶೇಷಗಳ ಪ್ರಮಾಣಗಳನ್ನು ನೋಡಿದರೆ ಒಂದಕ್ಕಿಂತ ಹೆಚ್ಚು ಅವಶೇಷಗಳಿರುವುದು ಖಚಿತವಾಗಿದೆ. ಬಹಳ ಮುಖ್ಯವಾಗಿ ಈ ಅವಶೇಷಗಳು ಇಷ್ಟು ದಿನ ಗ್ರಾಮ ಪಂಚಾಯ್ತಿಯ ಸದಸ್ಯರು ನೀಡಿದ್ದ ಹೇಳಿಕೆಗಳನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ಪ್ರಬಲ ಪುರಾವೆಯಾಗಲಿವೆ. ಏಕೆಂದರೆ, ಗುಡ್ಡದ ಮೇಲೆ, ಅಷ್ಟು ಕಡಿದಾದ ಅರಣ್ಯ ಜಾಗದಲ್ಲಿ ಗ್ರಾಮ ಪಂಚಾಯತಿ ಕಳೇಬರಗಳನ್ನು ಹೂಳಲು ಸಾಧ್ಯವಿಲ್ಲ. ಹೀಗಾಗಿ, ʼಆ ವ್ಯಕ್ತಿʼ ಯ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಆ ನಿಟ್ಟಿನಲ್ಲಿ ತನಿಖೆ ನಡೆಸಲು SIT ಮುಂದಾಗುವುದು ಅನಿವಾರ್ಯವಾಗಲಿದೆ.  ಈ ಅವಶೇಷಗಳ ಕುರಿತು FSL ವರದಿ ಬಂದ ನಂತರದಲ್ಲಿ ಮತ್ತಷ್ಟು ಸ್ಪಷ್ಟತೆ ಸಿಗಲಿದ್ದು, ಮುಂದಿನ ತನಿಖೆ ತೀವ್ರಗೊಳ್ಳಲಿದೆ.

More articles

Latest article