ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ, ಮಹಿಳೆಯರ ಅಸಹಜ ಸಾವು, ನಾಪತ್ತೆ, ಕೊಲೆ, ಇತ್ಯಾದಿ ಹಿಂಸೆಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಂಗಳೂರಿನ ʼಮಹಿಳಾ ದೌರ್ಜನ್ಯ ವಿರೋಧಿ ವೇದಿಕೆʼ ಯ ಸದಸ್ಯೆಯರು ʼಕೊಂದವರು ಯಾರುʼ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಯನ್ನು ನೀಡಿದರು.
ನಗರದ ಉರ್ವಾ ಮಾರ್ಕೆಟ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಶನಲ್ ಚಾಲೆಂಜ್- 2o25 ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಲು ಅವರು ಮಂಗಳೂರಿಗೆ ಆಗಮಿಸಿದ್ದರು.
ಧರ್ಮಸ್ಥಳ ಪ್ರಕರಣಗಳ ಕುರಿತ ಎಸ್ಐಟಿಯ ಅಂತಿಮ ವರದಿಯನ್ನು ಈ ತಿಂಗಳೊಳಗೆ ಕೊಡುವಂತೆ ಗೃಹಮಂತ್ರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ವ್ಯಾಪ್ತಿಯ ಎಲ್ಲ ಬಗೆಗಳ ಅಪರಾಧ ಪ್ರಕರಣಗಳಲ್ಲಿ ಎಸ್ಐಟಿ ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ಸಮಗ್ರವಾಗಿ ತನಿಖೆ ನಡೆಸಿ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವವರೆಗೂ ಎಸ್ಐಟಿ ಅಂತಿಮ ವರದಿ ಕೊಡುವಂತೆ ಮತ್ತು ಅರ್ಧಕ್ಕೆ ಕೆಲಸ ಮುಗಿಸುವಂತೆ ಅದರ ಮೇಲೆ ಒತ್ತಡ ಹೇರಬಾರದು ಎಂದು ವೇದಿಕೆಯೊಂದಿಗೆ ಸಹಯೋಗ ಹೊಂದಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಲೇಖಕಿಯರು ಆಗ್ರಹಿಸಿದರು.
ಮನವಿಯ ಮುಖ್ಯಾಂಶಗಳು
- ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು 14.07.2025ರಂದು ಬರೆದಿದ್ದ ಪತ್ರವನ್ನು ಆಧರಿಸಿ, ಎಸ್ಐಟಿ ರಚನೆ ಮಾಡಿದ ಸರ್ಕಾರದ ಆದೇಶ ಸಂಖ್ಯೆ: ಹೆಚ್ ಡಿ 142 ಸಿಒಡಿ 2025, ಬೆಂಗಳೂರು, ದಿನಾಂಕ 19/07/2025ರಲ್ಲಿ ”………. ಮೇಲ್ಕಂಡ ಪ್ರಕರಣವೂ ಸೇರಿದಂತೆ ಹಾಗೂ ಇದರ ಸಂಬಂಧ ಕರ್ನಾಟಕ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗುವ ಇತರೆ ಎಲ್ಲಾ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಡಿಜಿ ಮತ್ತು ಐಜಿಪಿರವರು ವಿಶೇಷ ತನಿಖಾ ತಂಡಕ್ಕೆ (Special Investigation Team) ವರ್ಗಾಯಿಸುವುದು…..” ಎಂದು ತಿಳಿಸಲಾಗಿದೆ. ಆದ್ದರಿಂದ ಈ ಆದೇಶದನ್ವಯ ಎಸ್‌ಐಟಿ ಕೂಡಲೇ ಧರ್ಮಸ್ಥಳ ಪ್ರದೇಶದಲ್ಲಿ ನಡೆದಿರುವ ನಾಪತ್ತೆ, ಅತ್ಯಾಚಾರ, ಕೊಲೆಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಎಸ್‌ಐಟಿಗೆ ನಿರ್ದೇಶನ ನೀಡಬೇಕು.
- ಧರ್ಮಸ್ಥಳ ಗ್ರಾಮ ಮತ್ತು ಅದರ ಸುತ್ತಲೂ ಹತ್ತಾರು ವರ್ಷಗಳಿಂದ ಮಹಿಳೆಯರ ಮತ್ತು ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಹಿಂಸೆಗಳು, ಅನ್ಯಾಯಗಳಿಗೆ ಎಸ್ಐಟಿ ತನಿಖೆ ನ್ಯಾಯ ಕಲ್ಪಿಸಿ ವಿರಾಮ ಹಾಕಬಹುದೆಂಬ ಆಶಯದಲ್ಲಿ ನಾವು ಇರುವಾಗಲೇ, ಎಸ್ಐಟಿ ತನಿಖೆ ಕೇವಲ ಬುರುಡೆ ಮತ್ತು ಶವ ಹೂತ ಪ್ರಕರಣವನ್ನು ಕೇಂದ್ರೀಕರಿಸಿದ್ದು ನಮ್ಮ ಜಿಲ್ಲೆಯ ಮಹಿಳೆಯರನ್ನು ಕಂಗಾಲಾಗಿಸಿದೆ.
- ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ 2012ರಲ್ಲಿ ಪಡೆದಿರುವ ಮಾಹಿತಿಯ ಪ್ರಕಾರವೇ, 2001ರಿಂದ 2012ರ ವರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಆತ್ಮಹತ್ಯೆಗಳು” ಎಂದು ದಾಖಲಾಗಿದ್ದ ಒಟ್ಟು 452 ಪ್ರಕರಣಗಳ ಪೈಕಿ 349 ಮತ್ತು 85 ಪ್ರಕರಣಗಳು ಕ್ರಮವಾಗಿ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ದಾಖಲಾಗಿದ್ದು, ಅವುಗಳಲ್ಲಿ 96 ಮಹಿಳೆಯರಿಗೆ ಸಂಬಂಧಿಸಿವೆ. ಆದ್ದರಿಂದ “ಆತ್ಮಹತ್ಯೆಗಳು” ಎಂದು ದಾಖಲಾಗಿರುವ ಈ ಅಗಾಧ ಪ್ರಮಾಣದ ಅಪರಾಧ ಪ್ರಕರಣಗಳಿಗೆ ನಿಜವಾದ ಕಾರಣವೇನು ಮತ್ತು ಕಾರಣರಾರು ಎಂಬುದನ್ನು ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು.
- ರಾಜ್ಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಹಿಂಸೆಗಳನ್ನು ತಡೆಗಟ್ಟಲು ಮತ್ತು ಅದನ್ನು ವರದಿ ಮಾಡಿ ಶಿಫಾರಸುಗಳನ್ನು ನೀಡಲು ಕಳೆದ ಅವಧಿಯಲ್ಲಿ ತಮ್ಮ ಸರ್ಕಾರವು ಶ್ರೀ ವಿ.ಎಸ್.ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ನೀಡಿದ್ದ ವರದಿಯಲ್ಲಿ 2016ರ ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಅಪರ ಎಸ್ ಪಿ ಅವರು, “ಧರ್ಮಸ್ಥಳ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಕಳೆದ ಐದು ವರ್ಷಗಳಲ್ಲಿ ಕನಿಷ್ಠವೆಂದರೂ 100 ಮಂದಿ ಅಸಹಜ ಸಾವಿಗೀಡಾಗಿದ್ದಾರೆ,” ಎಂದು ಹೇಳಿರುವುದಾಗಿ ದಾಖಲಾಗಿದೆ. ಈ ಸರ್ಕಾರಿ ಅಧಿಕೃತ ದಾಖಲೆಯನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿ, ಇದರ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು.
- ಎಸ್ಐಟಿ ಕಾರ್ಯಾಚರಣೆ ಆರಂಭವಾದ ನಂತರ ಅನೇಕ ದೂರುಗಳು ದಾಖಲಾಗಿದ್ದರೂ ಅವುಗಳ ತನಿಖೆ ತೃಪ್ತಿಕರವಾಗಿ ನಡೆಯದೆ ಸ್ಥಗಿತಗೊಂಡಿದೆ ಎಂಬುದಾಗಿ ನಮ್ಮ ಗಮನಕ್ಕೆ ಬಂದಿದೆ (ಉದಾ: ಪುಂಜಾಲಕಟ್ಟೆಯ ಅಪ್ರಾಪ್ತ ಬಾಲಕಿ ಹೇಮಲತಾ ನಾಪತ್ತೆ ಪ್ರಕರಣ) ನ್ಯಾಯದ ನಿರೀಕ್ಷೆಯಲ್ಲಿದ್ದ ಸಂತ್ರಸ್ತ ಕುಟುಂಬಗಳಿಗೆ ಇದು ಮತ್ತೊಂದು ಭಯಂಕರ ಆಘಾತ ಉಂಟುಮಾಡಿದೆ. ಆದ್ದರಿಂದ ಸರ್ಕಾರದ ಮೇಲಿನ ಆದೇಶದಂತೆ ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲ ಅಪರಾಧ ಪ್ರಕರಣಗಳಲ್ಲೂ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿ ರಾಜ್ಯದ, ಅದರಲ್ಲೂ ನಮ್ಮ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿ ಕೊಡುವುದು.
- ಧರ್ಮಸ್ಥಳ ಪಂಚಾಯತಿ ದಾಖಲೆಗಳಲ್ಲೇ ನೂರಾರು “ಅಪರಿಚಿತ” ಶವಗಳನ್ನು ದಫನ್ ಮಾಡಿರುವ ಅಧಿಕೃತ ಮಾಹಿತಿಗಳು ದೊರಕಿವೆ ಹಾಗೂ ಆ ಯುಡಿಆರ್ ಸಂಖ್ಯೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರು ನಾಶಪಡಿಸಿರುವುದಾಗಿ ಮಾಹಿತಿ ಹಕ್ಕಿನ ಅಡಿಯಲ್ಲಿ ತಿಳಿದುಬಂದಿದೆ. ಈ ಬಗ್ಗೆಯೂ ಎಸ್ಐಟಿ ಸಮಗ್ರ ತನಿಖೆ ನಡೆಸಿ ದಫನ್ ಮಾಡಿರುವ ಶವಗಳ “ಅಪರಿಚಿತರು” ಯಾರೆಂದು ಮತ್ತು ಹೇಗೆ ಈ “ಅನುಮಾನಾಸ್ಪದ” ಮತ್ತು “ಅಸಹಜ” ಸಾವುಗಳು ಸಂಭವಿಸಿದವೆಂಬ ವಿಷಯವನ್ನು ಪತ್ತೆಮಾಡಬೇಕು.
- ಹಲವು ನಿರ್ದಿಷ್ಟ ಪ್ರಕರಣಗಳಲ್ಲಿ ಆರೋಪಿಗಳನ್ನು ರಕ್ಷಿಸಲು ಕಾನೂನು ಬಾಹಿರವಾಗಿ ಕೆಲಸ ಮಾಡಿರುವ ಮತ್ತು ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳನ್ನೂ ಎಸ್ಐಟಿ ತನಿಖೆಗೆ ಒಳಪಡಿಸಬೇಕು.
ಹಾಗೇನಾದರೂ ಯಾವುದೇ ಕಾರಣಕ್ಕೂ ಎಸ್ಐಟಿ ಕಾರ್ಯಾಚರಣೆ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ನಿಜ ಆರೋಪಿಗಳನ್ನು ಬಯಲುಗೊಳಿಸಲು ವಿಫಲವಾದಲ್ಲಿ ಮತ್ತು ಈ ಬಾರಿ ಈ ಪ್ರದೇಶದ ಸಂತ್ರಸ್ತ ಜನತೆಗೆ ನ್ಯಾಯ ದೊರಕದೇ ಹೋದ ಪಕ್ಷದಲ್ಲಿ, ಜನರು ಮತ್ತಷ್ಟು ಭೀಕರ ಸಂಕಷ್ಟಗಳಿಗೆ ಮತ್ತು ಸಂಕಟಗಳಿಗೆ ತುತ್ತಾಗುವುದು ಖಚಿತ ಎಂಬುದನ್ನು ತಮಗೆ ವಿಷಾದದಿಂದ ಈ ಮೂಲಕ ಮನವರಿಕೆ ಮಾಡಿಕೊಡುತ್ತ, ಅಂತಹ ಘೋರ ದುರಂತಕ್ಕೆ ತಮ್ಮ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂಬ ನಂಬಿಕೆ, ವಿಶ್ವಾಸಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಅನ್ಯಾಯದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ.


