ಒಂದು ಆಲೋಚನಾ ಕ್ರಮವಾಗಿ ಬದುಕಿದ ಅಸ್ಸಾದಿ ಸಾರ್‌

Most read

ನನ್ನಂತವರಿಗೆ ಪ್ರೊ. ಅಸಾದಿಯವರು ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  ಏಕೆಂದರೆ ಅವರು ನಮ್ಮ ನಡುವೆ ವ್ಯಕ್ತಿಯಾಗಿ ಇದ್ದದ್ದಕ್ಕಿಂತ ಹೆಚ್ಚು ಒಂದು ‘ಅಲೋಚನಾ ಕ್ರಮವಾಗಿ’ ಬದುಕಿದ್ದರು.  ಅವರದೇ ಆದ ಸ್ಕೂಲ್ ಆಫ್ ಥಾಟ್ ಒಂದಿತ್ತು. ಅದು ಅತ್ಯಂತ ಜಾತ್ಯತೀತ, ಅಹಿಂಸಾತ್ಮಕ ಮತ್ತು ಪ್ರಜಾಪ್ರಭುತ್ವದ ಪರವಾದ ಧೋರಣೆಯನ್ನು ಪ್ರತಿಪಾದಿಸುವ ಸ್ಕೂಲ್ ಆಗಿತ್ತು ಡಾ. ಕಿರಣ್‌ ಗಾಜನೂರು, ಸಹಾಯಕ ಪ್ರಾಧ್ಯಾಪಕರು.

ಅದು 2010 ಅನ್ನಿಸುತ್ತದೆ ಕುವೆಂಪು ವಿಶ್ವವಿದ್ಯಾಲಯಕ್ಕೆ ನಾನು ನನ್ನ ಪಿಹೆಚ್ಡಿ ಪ್ರಬಂಧ ಸಲ್ಲಿಸಿದ್ದೆ. ಅದು ಮೌಲ್ಯಮಾಪನಗೊಂಡು ವರದಿಗಳು ಬಂದಿದ್ದವು. ನನ್ನ ಸಂಶೋಧನೆಯ ಮೌಖಿಕ ಪರೀಕ್ಷೆಯ ದಿನಾಂಕ ನಿಗದಿಯಾಗಿತ್ತು.  ನಾನು ನನ್ನ ಇಮೇಲ್ ಸಂಪರ್ಕದಲ್ಲಿರುವ ಎಲ್ಲರಿಗೂ ನನ್ನ ಪಿಹೆಚ್ಡಿ ಪ್ರಬಂಧದ ಮೌಖಿಕ ಪರೀಕ್ಷೆ ಇದೆ ಭಾಗವಹಿಸಿ ಎಂದು ಇಮೇಲ್ ಕಳುಹಿಸಿದ್ದೆ.

15 ನಿಮಿಷಗಳಲ್ಲಿ ಪ್ರೊ. ಅಸಾದಿ ಅವರು ‘ಯಾರು ಬರುತ್ತಾರೋ ಇಲ್ಲವೋ ನಾನು ಬರುವೆ’ ಎಂದು ಪ್ರತಿಕ್ರಿಯಿಸಿದ್ದರು. ನೋಡಿದರೆ ಮೌಖಿಕ ಪರೀಕ್ಷೆಯ ದಿನ ಅವರೇ ನನ್ನ ಸಂಶೋಧನೆಯ ಬಾಹ್ಯ ಪರೀಕ್ಷಕರಾಗಿ ಬಂದು ನಕ್ಕಿದ್ದರು, ಅಸಾದಿ ಸಾರ್ ಇದ್ದದ್ದೆ ಹೀಗೆ. . .!

ನನ್ನಂತವರಿಗೆ ಪ್ರೊ. ಅಸಾದಿಯವರು ನಮ್ಮ ನಡುವೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.  ಏಕೆಂದರೆ ಅವರು ನಮ್ಮ ನಡುವೆ ವ್ಯಕ್ತಿಯಾಗಿ ಇದ್ದದ್ದಕ್ಕಿಂತ ಹೆಚ್ಚು ಒಂದು ‘ಅಲೋಚನಾ ಕ್ರಮವಾಗಿ’ ಬದುಕಿದ್ದರು.  ಅವರದೇ ಆದ ಸ್ಕೂಲ್ ಆಫ್ ಥಾಟ್ ಒಂದಿತ್ತು. ಅದು ಅತ್ಯಂತ ಜಾತ್ಯತೀತ, ಅಹಿಂಸಾತ್ಮಕ ಮತ್ತು ಪ್ರಜಾಪ್ರಭುತ್ವದ ಪರವಾದ ಧೋರಣೆಯನ್ನು ಪ್ರತಿಪಾದಿಸುವ ಸ್ಕೂಲ್ ಆಗಿತ್ತು.

ನಾವು ಯಾರೂ ಅವರಿಗೆ ನೇರವಾದ ವಿದ್ಯಾರ್ಥಿಗಳಾಗಿರಲಿಲ್ಲ. ಆದರೆ ಅವರ ಚಿಂತನೆಗಳು ನಮ್ಮೆಲ್ಲರನ್ನು ಅವರ ವಿದ್ಯಾರ್ಥಿಗಳನ್ನಾಗಿ ಮಾಡಿತ್ತು. ಬಹಳ ಮುಖ್ಯವಾಗಿ ಅವರಲ್ಲಿದ್ದ ‘ಸಾಮಾಜಿಕ ಹೋರಾಟಗಾರ’ ನಮ್ಮೆಲ್ಲರನ್ನು ಸೆಳೆಯುವ ಮೂಲಕ ಅವರ ಚಿಂತನಾ ವ್ಯಾಪ್ತಿಯ ಭಾಗ ಮಾಡಿಕೊಂಡಿತ್ತು. ಕನ್ನಡದಲ್ಲಿ ರಾಜ್ಯಶಾಸ್ತ್ರೀಯ ಚಿಂತನೆಗಳನ್ನು ಮಂಡಿಸಿದ ಪ್ರಮುಖರಲ್ಲಿ ಅಸಾದಿಯವರು ಮೊದಲಿಗರು. ಅದಲ್ಲದೆ ಖ್ಯಾತ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಮೂಲಕ ರಾಜ್ಯಶಾಸ್ತ್ರೀಯ ಚಿಂತನಾ ಕ್ರಮವನ್ನು ಅವರು ಪಾಪ್ಯುಲರ್ ಗೊಳಿಸುತ್ತಿದ್ದರು. ಆ ಮೂಲಕ ಕರ್ನಾಟಕದ ಬಹುತೇಕ ವಿಶ್ವವಿದ್ಯಾಲಯಗಳ ರಾಜ್ಯಶಾಸ್ತ್ರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ಅವರ ವಾದಕ್ರಮ ಎಷ್ಟೊಂದು ಪ್ರಖರವಾಗಿತ್ತು ಅಂದರೆ ಒಮ್ಮೆ ಖ್ಯಾತ ಪತ್ರಿಕೆಯೊಂದಕ್ಕೆ ಜನಗಣತಿಗಳ ಲೇಖನವೊಂದನ್ನು ಬರೆದು ಆದರಲ್ಲಿ “ನಮ್ಮ ನಡುವೆ ಬೆಳೆಯುತ್ತಿರುವ ಅಧಿಕಾರ ರಾಜಕಾರಣ’ ಎಂಬುದು ನಮ್ಮನ್ನು ಆಳಿದ ವಸಾಹತುಶಾಹಿ ರಾಜಕಾರಣದಂತೆ ತನ್ನ ಅಗತ್ಯಕ್ಕಾಗಿ ಧಾರ್ಮಿಕ ಗುಂಪುಗಳನ್ನು ಸೀಮಿತ ಚೌಕಟ್ಟಿನಲ್ಲಿ ಗ್ರಹಿಸಿ, ಗುರುತಿಸುವ ಉದ್ದೇಶವನ್ನು ಹೊಂದಿದೆ. ಈ ಮಾದರಿಯ ವಿಶ್ಲೇಷಣೆ ಸಮುದಾಯಗಳ ನಿಜವಾದ ಅಸ್ಮಿತೆಯನ್ನು ಕಟ್ಟಿಕೊಡುವಲ್ಲಿ ಸೋಲುತ್ತದೆ. ಬಹಳ ಮುಖ್ಯವಾಗಿ ಸಮುದಾಯಗಳ ನಡುವಿನ ಸೌಹಾರ್ದಕ್ಕೆ ಕೊಡಲಿ ಏಟು ನೀಡುತ್ತದೆ ಎಂಬ ಮಾತುಗಳನ್ನು ಹೇಳಿದ್ದರು.

ಅವರ ಮುಖ್ಯ ಕಾಳಜಿ ನಮ್ಮ ಜನಗಣತಿಗಳು ಹಿಂದಿನ ವಸಾಹತು ಆಡಳಿತ ತನ್ನ ಅನುಕೂಲಕ್ಕಾಗಿ ಸಮುದಾಯಗಳನ್ನು ಒಡೆದು ಆಳುವ ನೀತಿಯ ಭಾಗವಾಗಿ ರೂಪಿಸಿಕೊಂಡಿದ್ದ ಚೌಕಟ್ಟುಗಳ ಪಡಿಯಚ್ಚುಗಳಂತೆ ಕೆಲಸ ಮಾಡುತ್ತಿರುವುದರಿಂದ ಆಧುನಿಕ ಕಾಲದಲ್ಲಿ ಧಾರ್ಮಿಕ ಸಹಿಷ್ಣುತೆಗೆ ಕಾರಣವಾಗಬೇಕಿದ್ದ ಧರ್ಮಾಧಾರಿತ ಜನಗಣತಿ, ಕೋಮುವಾದಿ ರಾಜಕಾರಣಕ್ಕೆ ಕಾರಣವಾಗುತ್ತಿದೆ ಎಂಬುದಾಗಿತ್ತು. ಇದನ್ನು ತಪ್ಪಿಸಬೇಕಾದರೆ ಆಧುನಿಕ ಜನಗಣತಿಗಳು ವಸಾಹತು ಪಳೆಯುಳಿಕೆಗಳಂತೆ ಕಾರ್ಯನಿರ್ವಹಿಸದೆ ನಿರ್ವಸಾಹತು ಕಡೆ ಹೆಜ್ಜೆ ಹಾಕಬೇಕು ಎಂಬ ವಾದವನ್ನು ಮಂಡಿಸಿದ್ದರು”

ನಾವುಗಳು ಜನಗಣತಿಯ ಸಾಧಕ/ಭಾದಕಗಳ ಕುರಿತು ಚರ್ಚಿಸುತ್ತಿದ್ದರೆ ಅಸಾದಿಯವರೊಳಗಿನ ಚಿಂತಕ ಜನಗಣತಿಗಳು ನಡೆಯವ ಸ್ವರೂಪದ ಕುರಿತೇ ಮುಖ್ಯವಾದ ಪ್ರಶ್ನೆಗಳನ್ನು ಎತ್ತುವ ಮೂಲಕ ಹೇಗೆ ‘ಅಧಿಕಾರ ರಾಜಕೀಯ ಜನಗಣತಿಗಳನ್ನೂ ಕೋಮುವಾದೀಕರಿಸುತ್ತಿದೆ’ ಎನ್ನುವ ವಿನೂತನ ಪ್ರಶ್ನೆಯನ್ನು ಪ್ರಭುತ್ವದ ಮುಂದೆ ಇಟ್ಟುಬಿಟ್ಟಿದ್ದರು.

ಪ್ರೊ. ಅಸ್ಸಾದಿಯವರೊಂದಿಗೆ ಕಿರಣ್‌ ಗಾಜನೂರು

ಈ ಮೇಲಿನ ಅವರ ಅಭಿಪ್ರಾಯ ಅವರೊಳಗಿದ್ದ ಪ್ರಖರ ಚಿಂತಕನ ಪರಿಚಯಕ್ಕೆ ಒಂದು ಉದಾಹರಣೆಯಷ್ಟೆ. ನಮ್ಮ ಕಾಲದ ರೈತ, ದಲಿತ ಮತ್ತು ಹಿಂದುಳಿದ ಚಳುವಳಿಗಳ ಕುರಿತ ಅವರ ವಿಶ್ಲೇಷಣೆಗಳನ್ನು ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುವ ಸಾಮರ್ಥ್ಯವನ್ನು ಹೊಂದಿವೆ. ಆ ಕೆಲಸ ಇನ್ನು ಮುಂದೆ ನಡೆಯಬೇಕಿದೆ ಅನ್ನಿಸುತ್ತಿದೆ.

ಅವರ ವಿದ್ವತ್ತು, ಅವರಿಗಿದ್ದ ಖ್ಯಾತಿಯ ಆಚೆಗೆ ಅವರು ಇರುತ್ತಿದ್ದದ್ದು ಮಗುವಿನಂತೆ. ಯಾವಾಗ ನೋಡಿದರೂ ಪುಟ್ಟ ಮಗುವೊಂದನ್ನು ನೋಡುತ್ತಿರುವ ಭಾವ ನನ್ನಲ್ಲಿ ಆವರಿಸುತ್ತಿತ್ತು. ಹಾಗಾಗಿಯೇ ಅವರ ಪ್ರತಿ ರಾಜಕೀಯ ವಿದ್ಯಮಾನವನ್ನು ವಿಶ್ಲೇಷಿಸುವಾಗಲೂ, ಓದುವಾಗಲೂ ಅವರ ನೋಟಕ್ರಮದಲ್ಲಿ ಮಗುವಿನ ಕುತೂಹಲ ಮತ್ತು ರಾಜಕೀಯ ವಿಜ್ಞಾನಿಯ ವೈಜ್ಞಾನಿಕತೆ ಎರಡೂ ಮೇಳೈಸುತ್ತಿದ್ದವು ಅನ್ನಿಸುತ್ತದೆ.

ಅವರ ವ್ಯಕ್ತಿತ್ವ ಎಷ್ಟು ದೊಡ್ಡದಿತ್ತು ಎಂದರೆ ನಮ್ಮ ಯಾವುದೇ ಲೇಖನ ಪ್ರಕಟವಾದಾಗಲೂ ಅವರ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ನೋಡಿ ಇಲ್ಲೊಂದು ವಿಶ್ಲೇಷಣೆ ಪ್ರಕಟವಾಗಿದೆ ಓದಿ ಎಂದು ಸಲಹೆ ನೀಡುತ್ತಿದ್ದರಂತೆ.  ನಮ್ಮ ಜೊತೆ ಏನನ್ನೂ ಮಾತನಾಡದ ಅಸಾದಿ ನಮ್ಮ ಬರಹಗಳ ಕುರಿತು ಅವರ ವಿದ್ಯಾರ್ಥಿಗಳ ಜೊತೆ ಸಂವಾದಿಸುತ್ತಿದ್ದರಂತೆ. ಇದನ್ನು ಅವರ ಹಲವಾರು ವಿದ್ಯಾರ್ಥಿಗಳೇ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ- ಮುಜಾಫರ್‌ ಅಸ್ಸಾದಿ | ವಿದ್ವತ್ತಿನ, ಬಹುತ್ವದ ಪ್ರತೀಕ

ಸಣ್ಣ ಸಮುದಾಯ ಮತ್ತು ಗಾಜನೂರಿನಂತ ಹಳ್ಳಿಯಿಂದ ಬಂದ ನನ್ನಂತವನು ಇಂದು ಈ ಒಂದು ಹುದ್ದೆಯಲ್ಲಿ ಇದ್ದೇನೆ ಎಂದರೆ ಅದಕ್ಕೆ ಕಾರಣ ‘ನಮ್ಮ ಗೆಲುವನ್ನು ಅವರ ಗೆಲುವು’ ಎಂದು ಸಂಭ್ರಮಿಸುತ್ತಿದ್ದ ಪ್ರೊ. ಅಸಾದಿಯಂತಹ ನಿಷ್ಕಲ್ಮಶ ಹೃದಯದ ಮೇಸ್ಟ್ರು ಮಾತ್ರ. .

ಹೀಗೆ ಇದ್ದ ಪ್ರೊ. ಅಸಾದಿ ಈಗ ಎಲ್ಲ ಎಂದರೆ ನಂಬುವುದು ಹೇಗೆ. . .! ಮಿಸ್ ಯು ಸೋ ಮಚ್ ಸಾರ್. .

ಡಾ. ಕಿರಣ್ ಎಂ ಗಾಜನೂರು

ಸಹಾಯಕ ಪ್ರಾಧ್ಯಾಪಕರು

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ, ಕಲಬುರಗಿ.


ಇದನ್ನೂ ಓದಿ- ನೆನಪು | ಜನ ಮನದ ನಡುವೆ ಅಲಕ್ಷಿತರ ಕತೆಗಾರ

More articles

Latest article