ಸಿಖ್ ಉಗ್ರಗಾಮಿ ಹತ್ಯೆ ಸಂಚು: ಅಮೆರಿಕದಲ್ಲಿ ಭಾರತೀಯ ಮೂಲದ ನಿಖಿಲ್ ಗೆ ಸಂಕಷ್ಟ

Most read

ನ್ಯೂಯಾರ್ಕ್: ಸಿಖ್ ಉಗ್ರಗಾಮಿಯೊಬ್ಬನನ್ನು ಅಮೆರಿಕ ನೆಲದಲ್ಲಿ ಸುಪಾರಿ ನೀಡಿ ಕೊಲೆಗೈಯುವ ಸಂಚಿನಲ್ಲಿ ಬಂಧಿತನಾಗಿರುವ ಭಾರತೀಯ ಪ್ರಜೆಯೊಬ್ಬನನ್ನು ಅಮೆರಿಕ ಪೊಲೀಸರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ನಿಖಿಲ್ ಗುಪ್ತ ಅಲಿಯಾಸ್ ನಿಕ್ ಎಂಬ 52 ವರ್ಷದ ಭಾರತೀಯ ನಾಗರಿಕನನ್ನು ಕಳೆದ ವರ್ಷ  ಜೂನ್ ತಿಂಗಳಿನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿತ್ತು. ಅಮೆರಿಕ ಸರ್ಕಾರದ ವಿನಂತಿಯ ಮೇರೆಗೆ ಆತನನ್ನು ಅಮೆರಿಕ ದೇಶಕ್ಕೆ ಹಸ್ತಾಂತರಿಸಲಾಗಿದ್ದು, ಫೆಡರಲ್ ಪೊಲೀಸರ ವಶಕ್ಕೆ ನೀಡಲಾಗಿದೆ.

ಕಳೆದ ವರ್ಷ ನ್ಯೂಯಾರ್ಕ್ ನಗರದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನನ್ನು ಹತ್ಯೆ ಮಾಡುವ ವಿಫಲ ಯತ್ನವೊಂದು ನಡೆದಿತ್ತು. ಇದೇ ಪ್ರಕರಣದಲ್ಲಿ ನಿಖಿಲ್‌ ಗುಪ್ತನನ್ನು ಪ್ರಮುಖ ಆರೋಪಿಯನ್ನಾಗಿ ಗುರುತಿಸಲಾಗಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್

ಅಮರಿಕ ಮತ್ತು ಕೆನಡಾ ದೇಶ‍ಗಳ ನಾಗರಿಕತ್ವ ಪಡೆದಿದ್ದ ಗುರುಪತ್ವಂತ್ ಸಿಂಗ್ ಸಿಖ್ಖರಿಗಾಗಿ ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರದ ಬೇಡಿಕೆ ಇಟ್ಟುಕೊಂಡು ಕಾರ್ಯಚಟುವಟಿಕೆ ನಡೆಸುತ್ತಿದ್ದಾನೆ. ಈತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿಕೊಂಡಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಭಾರತದ ಬೇಡಿಕೆಯನ್ನು ಇಂಟರ್‌ಪೋಲ್‌ ತಿರಸ್ಕರಿಸಿದೆ. ಆದಾಗ್ಯೂ ಗುರುಪತ್ವಂತ್‌ ಸಿಂಗ್‌ ನನ್ನು ಭಾರತ ಸರ್ಕಾರ ಪ್ರತ್ಯೇಕತಾವಾದಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ.

ನಿಖಿಲ್ ಗುಪ್ತನನ್ನು ನ್ಯೂಯಾರ್ಕ್ ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ತನ್ನನ್ನು ತಾನು ನಿರ್ದೋಷಿ ಎಂದು ಹೇಳಿಕೊಂಡಿದ್ದಾನೆ ಎಂದು ಆತನ ವಕೀಲ ಜೆಫ್ರಿ ಚಾಬ್ರೋಯಿ ಹೇಳಿದ್ದಾರೆ.

ಜೆಕ್ ನ್ಯಾಯಾಲಯ ಕಳೆದ ತಿಂಗಳು ನಿಖಿಲ್ ಗುಪ್ತ ತನ್ನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಾರದು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಗುರುಪತ್ವಂತ್ ಸಿಂಗ್ ನನ್ನು ಕೊಲ್ಲಲು ನಿಖಿಲ್ ಗುಪ್ತ 15,000 ಡಾಲರ್ ನೀಡಿ ಕೊಲೆಗಡುಕನೊಬ್ಬನನ್ನು ನೇಮಕ ಮಾಡಿಕೊಂಡಿದ್ದ ಎಂದು ಅಮೆರಿಕ ಪೊಲೀಸರು ಆರೋಪಿಸಿದ್ದಾರೆ. ನಿಖಿಲ್ ಗುಪ್ತ ಭಾರತದ ಅತಿಮುಖ್ಯ ಸರ್ಕಾರಿ ಅಧಿಕಾರಿಯೊಬ್ಬರ ಆಣತಿಯಂತೆ ಈ ಕೊಲೆಯನ್ನು ಸಂಯೋಜಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋಬಿಡನ್

ಗುರುಪತ್ವಂತ್‌ ಸಿಂಗ್‌ ಹತ್ಯೆ ಯತ್ನದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಕಳೆದ ವರ್ಷ ನವೆಂಬರ್‌ ನಲ್ಲಿ ಭಾರತ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಹತ್ಯೆ ಯತ್ನ ಘಟನೆಯನ್ನು ಅಮೆರಿಕ ಸರ್ಕಾರ ಅತ್ಯಂತ ಗಂಬೀರವಾಗಿ ಪರಿಗಣಿಸಿದ್ದು, ಭಾರತ ಸರ್ಕಾರದ ಅತಿಮುಖ್ಯ ರಾಜತಾಂತ್ರಿಕರೊಂದಿಗೆ ಈ ಕುರಿತು ಪ್ರಸ್ತಾಪಿಸಲಾಗಿದೆ ಎಂದು ವೈಟ್‌ ಹೌಸ್‌ ಹೇಳಿತ್ತು.

More articles

Latest article