ಅಯೋಧ್ಯೆಯಲ್ಲಿ ನಡೆದ ಬಾಲರಾಮ ವಿಗ್ರಹ ಸ್ಥಾಪನೆಗೂ ಹಾಗೂ ಆ ಸಂಭ್ರಮದ ನೆಪದಲ್ಲಿ ದೇಶದ ಅಲ್ಲಲ್ಲಿ ನಡೆದ ಕೆಲವು ದುಷ್ಕೃತ್ಯಗಳಿಗೂ ಸಂಬಂಧವಿದೆ. ರಾಮಮಂದಿರ ಉದ್ಘಾಟನೆ ಎನ್ನುವುದು ರಾಮಭಕ್ತರಲ್ಲಿ ಭಾವತೀವ್ರತೆಯನ್ನು ಅತಿಯಾಗಿ ಪ್ರಚೋದಿಸಿದ್ದಂತೂ ಸುಳ್ಳಲ್ಲ. ಭಾವಪ್ರಚೋದನೆಗೊಳಗಾದ ಕೆಲವಾರು ಮತಾಂಧರು ಅಲ್ಪಸಂಖ್ಯಾತರನ್ನು ಅಪಮಾನಿಸಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವೇ?. ಮತಾಂಧತೆಯ ವಿಷ ಬೀಜವನ್ನು ಭಕ್ತರ ಮನದೊಳಗೆ ನಾಟಿಮಾಡಿ ಸೌಹಾರ್ದತೆಯ ಫಲವನ್ನು ಅಪೇಕ್ಷಿಸಲು ಆಗುತ್ತದೆಯಾ.? ರಕ್ತಸಿಕ್ತ ಸಂಘರ್ಷದ ಮೂಲಕ, ಪ್ರಾರ್ಥನಾ ಮಂದಿರದ ನಾಶದ ಮೂಲಕ ರಾಮಮಂದಿರ ನಿರ್ಮಿಸಿದ್ದು ರಾಮಭಕ್ತರಿಂದ ಸಹನೆ ಸಾಮರಸ್ಯವನ್ನು ಆಶಿಸಬಹುದಾ?
ಊಹೂಂ. ಸಾಧ್ಯವೇ ಇಲ್ಲ ಎಂಬುದಕ್ಕೆ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ಕಾಲಕ್ಕೆ ದೇಶಾದ್ಯಂತ ಕೆಲವು ಅಂಧಭಕ್ತರು ನಡೆಸಿದ ದಾಂಧಲೆ ದೌರ್ಜನ್ಯ ಹಿಂಸಾಚಾರ ಹಾಗೂ ಧರ್ಮದ್ವೇಷದ ಬಿಡಿ ಘಟನೆಗಳೇ ಸಾಕ್ಷಿಯಾಗಿವೆ.
ಪುಣೆಯಲ್ಲಿ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ ( FTII) ಎನ್ನುವ ಕೇಂದ್ರ ಸರಕಾರದ ಪ್ರತಿಷ್ಠಿತ ಸಂಸ್ಥೆಯೊಂದಿದೆ. ಸಿನೆಮಾ ಹಾಗೂ ಟಿವಿ ಕುರಿತಂತೆ ತಾಂತ್ರಿಕ ತರಬೇತಿಯನ್ನು ಅಲ್ಲಿ ಕೊಡಲಾಗುತ್ತದೆ. ಬಾಲರಾಮ ಪ್ರತಿಷ್ಠಾನದ ಸಂಭ್ರಮದ ಮತ್ತಿನಲ್ಲಿದ್ದ ಸಂಘ ಪರಿವಾರದ ಕೆಲವು ಅವಿವೇಕಿ ಧರ್ಮಾಂಧರು ಇದ್ದಕ್ಕಿದ್ದಂತೆ ಈ ತರಬೇತಿ ಸಂಸ್ಥೆಗೆ ಅತಿಕ್ರಮಣ ಮಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. “ರಿಮೆಂಬರ್ ಬಾಬರಿ; ಡೆತ್ ಆಫ್ ಕಾನ್ಸ್ಟಿಟ್ಯೂಷನ್” ಎನ್ನುವ ಬ್ಯಾನರನ್ನು ವಿದ್ಯಾರ್ಥಿ ಸಂಘವು ಕ್ಯಾಂಪಸ್ಸಿನಲ್ಲಿ ಹಾಕಿದ್ದರಿಂದ ರೊಚ್ಚಿಗೆದ್ದ ಅಸಹಿಷ್ಣು ಮತಾಂಧ ಯುವಕರು ಬ್ಯಾನರನ್ನು ಹರಿದು ಸುಟ್ಟು ಹಾಕಿ ಇಡೀ ಕ್ಯಾಂಪಸ್ ನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ಅಟ್ಟಹಾಸ ಮೆರೆದಿದ್ದಾರೆ . ರಾಮಮಂದಿರದ ಉದ್ಘಾಟನೆ ಭಾವೈಕ್ಯತೆ ಹುಟ್ಟಿಸುವ ಬದಲು ಭಾವಪ್ರಚೋದನೆ ಮಾಡಿದ್ದರ ದುಷ್ಪರಿಣಾಮವೇ ಈ ದುರ್ಘಟನೆ. ಕಲಾವಿದ ತಂತ್ರಜ್ಞ ವಿದ್ಯಾರ್ಥಿಗಳ ಮೇಲೆ ನಡೆದ ಈ ದುರ್ಘಟನೆ, ವಿದ್ಯಾದಾನ ಮಾಡುವ ಸಂಸ್ಥೆಯ ಮೇಲೆ ನಡೆಸಿದ ದಾಳಿ ಖಂಡನಾರ್ಹ.
ಹಾಗೆಯೇ ಮಹಾರಾಷ್ಟ್ರದ ಠಾಣೆ ವ್ಯಾಪ್ತಿಯ ಮೀರಾ ರಸ್ತೆಯಲ್ಲಿ ರಾಮಮಂದಿರ ಉದ್ಘಾಟನಾ ಪ್ರಯುಕ್ತ ಸಂಘ ಪರಿವಾರದವರು ಶೋಭಾಯಾತ್ರೆ ಆರಂಭಿಸಿದ್ದರು. ರಾಮಮಂದಿರದ ಸಂಭ್ರಮದ ಸಮೂಹಸನ್ನಿಯಲ್ಲಿದ್ದ ಅತಿರೇಕಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ, ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ಉದ್ವೇಗಕಾರಿ ಘೋಷಣೆಗಳನ್ನು ಕೂಗುತ್ತಾ ಹಿಂಸೆಗೆ ಇಳಿದು ಸಾಕಷ್ಟು ಮುಸ್ಲಿಂ ಅಂಗಡಿಗಳಿಗೆ ನುಗ್ಗಿ ಧ್ವಂಸ ಮಾಡಿ ಕೋಮು ಸಂಘರ್ಷ ಹುಟ್ಟುಹಾಕಿತು. ಆದರೆ ಕೋಮುವಾದಿ ಸರಕಾರ ಹಿಂಸೆ ಆರಂಭಿಸಿದವರನ್ನು ಬಿಟ್ಟು ಕೆಲವಾರು ಅಲ್ಪಸಂಖ್ಯಾತ ಯುವಕರನ್ನು ಬಂಧಿಸಿ ಅವರ ಅಂಗಡಿ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ಧ್ವಂಸ ಮಾಡಿ ಉತ್ತರ ಪ್ರದೇಶದ ಮಾದರಿ ಅನುಸರಿಸಿತು. ರಾಮರಾಜ್ಯ ಸ್ಥಾಪನೆ ಅಂದ್ರೆ ಇದೇನಾ?
ಉತ್ತರ ಪ್ರದೇಶದಲ್ಲಿ ಉನ್ಮಾದ ಪೀಡಿತ ಮತಾಂಧರ ಗುಂಪು ಮಸೀದಿಯೊಂದರ ಮೇಲೆ ಕೇಸರಿ ಬಾವುಟ ಹಾರಿಸಿ ತಮ್ಮ ರಾಮಾಂಧ ಭಕ್ತಿ ಪ್ರದರ್ಶಿಸಿದ್ದರೆ, ಮಧ್ಯಪ್ರದೇಶದಲ್ಲಿ ಚರ್ಚ್ ಮೇಲೆ ದಾಳಿ ನಡೆಸಿದ ಧರ್ಮಾಂಧರು ತಮ್ಮ ಕೋಮುದ್ವೇಷವನ್ನು ಸಾಬೀತುಪಡಿಸಿದ್ದಾರೆ.
ಕರ್ನಾಟಕದ ಕಲಬುರ್ಗಿಯ ಕೋಟನೂರು ಪ್ರದೇಶದಲ್ಲಿ ಮತಾಂಧರು ಅಂಬೇಡ್ಕರರವರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ತಮ್ಮ ವಿಕೃತಿ ಮೆರೆದರು. ಈಗ ಇಡೀ ಕಲಬುರ್ಗಿ ನಗರ ಪ್ರಕ್ಷುಬ್ದವಾಗಿದೆ. ದಲಿತ ಸಂಘಟನೆಗಳಿಂದ ಸರಣಿ ಪ್ರತಿಭಟನೆಗಳು ನಡೆದಿವೆ. ಬಾಬಾಸಾಹೇಬರಿಗೆ ಈ ಸಂಘಿ ಕಮಂಗಿಗಳು ಮಾಡಿದ ಅಪಮಾನಕ್ಕೆ ಇಡೀ ನಗರವೇ ಹೊತ್ತಿ ಉರಿಯುವ ಸಾಧ್ಯತೆಯನ್ನು ಪೊಲೀಸರು ತಡೆದಿದ್ದಾರೆ. ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ.
ರಾಮನ ಹೆಸರಲ್ಲಿ ತಮ್ಮ ರಕ್ಕಸ ಶಕ್ತಿಯನ್ನು ಹೆಚ್ಚಿಸಿಕೊಂಡ ಮತಾಂಧ ನೇತಾರರು ದೇಶಾದ್ಯಂತ ವೈದಿಕಶಾಹಿ ಹಿಂದುತ್ವ ಸಿದ್ದಾಂತವನ್ನು ಜಾರಿಗೆ ತಂದು ಈ ದೇಶವನ್ನು ಹಿಂದೂರಾಷ್ಟ್ರ ಮಾಡಲು ಸರ್ವಸನ್ನದ್ದರಾಗಿದ್ದಾರೆ. ರಾಮಮಂದಿರ ಎಂಬುದು ಹಿಂದೂಗಳನ್ನು ಒಂದಾಗಿಸಲು ನೆಪವಷ್ಟೇ. ಆದರೆ ಮನುವಾದಿಗಳ ಉದ್ದೇಶವೇ ಅಂಬೇಡ್ಕರ್ ರವರ ಸಮಾನತೆ ಸಾರುವ ಸಂವಿಧಾನ ಬದಲಾಯಿಸುವುದು. ಸಂಘಿಗಳ ಮೊದಲ ಶತ್ರು ಮುಸ್ಲಿಂ ಧರ್ಮೀಯರಾದರೆ, ಎರಡನೇ ಶತ್ರು ಅಂಬೇಡ್ಕರ್ ರವರು ಹಾಗೂ ದಲಿತರು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಅವಕಾಶ ಕೊಡದೇ ಬಹಿಷ್ಕೃತರನ್ನಾಗಿಸಿದ ದಲಿತರಿಗೆ ಮತ್ತು ಆದಿವಾಸಿಗಳಿಗೆ ಸಂವಿಧಾನದ ಮೂಲಕ ಸಮಾನತೆ ಕೊಟ್ಟಿದ್ದನ್ನು ಈ ಮನುವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಲೇ ಇಲ್ಲ. ಅದಕ್ಕಾಗಿ ಅಂಬೇಡ್ಕರ್ ರವರನ್ನು ಈಗಲೂ ಅವಮಾನಿಸುತ್ತಲೇ ಇರುತ್ತಾರೆ. ದಲಿತರ ಮೇಲೆ ದೌರ್ಜನ್ಯವನ್ನು ಮಾಡಿಸುತ್ತಲೇ ಇರುತ್ತಾರೆ. ರಾಷ್ಟ್ರಪತಿಯವರನ್ನೇ ಆದಿವಾಸಿ ವಿಧವೆ ಮಹಿಳೆ ಎನ್ನುವ ಕಾರಣಕ್ಕೆ ಆಗ ಹೊಸ ಸಂಸತ್ ಭವನ ಹಾಗೂ ಈಗ ರಾಮಮಂದಿರದ ಉದ್ಘಾಟನೆಯಿಂದ ದೂರ ಇಟ್ಟಿದ್ದೇ ಮನುವಾದಿ ಮತಾಂಧರ ದಲಿತ ವಿರೋಧಿತನಕ್ಕೆ ಲೇಟೆಸ್ಟ್ ಸಾಕ್ಷಿಯಾಗಿದೆ.
ಅಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಲರಾಮ ವಿಗ್ರಹ ಸ್ಥಾಪನೆಗೂ ಹಾಗೂ ಆ ಸಂಭ್ರಮದ ನೆಪದಲ್ಲಿ ದೇಶದ ಅಲ್ಲಲ್ಲಿ ನಡೆದ ಕೆಲವು ದುಷ್ಕೃತ್ಯಗಳಿಗೂ ಸಂಬಂಧವಿದೆ. ರಾಮಮಂದಿರ ಉದ್ಘಾಟನೆ ಎನ್ನುವುದು ರಾಮಭಕ್ತರಲ್ಲಿ ಭಾವತೀವ್ರತೆಯನ್ನು ಅತಿಯಾಗಿ ಪ್ರಚೋದಿಸಿದ್ದಂತೂ ಸುಳ್ಳಲ್ಲ. ಭಾವಪ್ರಚೋದನೆಗೊಳಗಾದ ಕೆಲವಾರು ಮತಾಂಧರು ಅಲ್ಪಸಂಖ್ಯಾತರನ್ನು ಅಪಮಾನಿಸಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ದಲಿತ ಸಮುದಾಯದ ಮಹೋನ್ನತ ನಾಯಕರಾದ ಅಂಬೇಡ್ಕರ್ ರವರನ್ನೂ ಅವಮಾನಿಸುವ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ಈ ಮೂಲಕ ತಮ್ಮ ಮತಾಂಧ ಹಿಂದುತ್ವವನ್ನು ಸಾಬೀತು ಮಾಡುತ್ತಿದ್ದಾರೆ.
ರಾಮಭಕ್ತಿ ಎನ್ನುವುದು ಪರಧರ್ಮ ಸಹಿಷ್ಣುತತೆಯನ್ನು ತಂದು ಕೊಡಬೇಕೆ ಹೊರತು ಮತ್ಸರವನ್ನಲ್ಲ. ಭಕ್ತಿ ಎಂಬುದು ಅವರವರ ಭಾವನೆಯೇ ಹೊರತು ದುರ್ಬಲರ ಮೇಲೆ ಸಂಘಟಿತರಾಗಿ ಶಕ್ತಿ ತೋರುವುದಲ್ಲ. ಇದನ್ನು ತಮ್ಮ ವಾನರ ಸೇನೆಗೆ ಕಲಿಸಿ ಕೊಡಬೇಕಾಗಿದ್ದ ಸಂಘ ಪರಿವಾರದ ನಾಯಕರು ರಾಮನ ಹೆಸರಲ್ಲಿ ಹಿಂದೂ ಮತ ಕ್ರೋಢೀಕರಣದಲ್ಲಿ ನಿರತರಾಗಿದ್ದಾರೆ. ಹೇಳಿದರೂ ಕೇಳಲಾಗದ ಉನ್ಮಾದ ಪರಿಸ್ಥಿತಿಯಲ್ಲಿ ಮತಾಂಧ ಭಕ್ತರಿದ್ದಾರೆ. ಇದೆಲ್ಲವನ್ನೂ ನೋಡಿ ಅಯೋಧ್ಯೆಯ ಬಾಲರಾಮ ಕೆತ್ತಿದ ಕಲ್ಲಿನಲಿ ಅರಳಿ ನಿಂತು ಮಂದಸ್ಮಿತನಾಗಿದ್ದಾನೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ ಹಾಗೂ ಪತ್ರಕರ್ತರು