ಮೈಸೂರು: 5 ವರ್ಷವೂ ಸಿಎಂ ಆಗಿ ಸಿದ್ದರಾಮಯ್ಯನವರೇ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೂ ಉದ್ಭವಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಏನು ಬೇಕಾದರೂ ಹೇಳಿಕೊಳ್ಳಲಿ ಅವರೇನೂ ನಮ್ಮ ಪಕ್ಷದವರಲ್ಲ. ನಮ್ಮ ಪಕ್ಷದ ತೀರ್ಮಾನ ಅವರಿಗೆ ಹೇಗೆ ತಿಳಿಯಲು ಸಾಧ್ಯ ಎಂದರು. ವಿಜಯೇಂದ್ರ ಅವರು ನಿನ್ನೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಕೊನೆಯ ಅಧಿವೇಶನ ಎಂದು ಭವಿಷ್ಯ ನುಡಿದಿದ್ದರು.
ನೀವು ಸಿಎಂ ಆಗ್ತೀರಾ ಎಂಬ ಪ್ರಶ್ನೆಗೆ ನಸುನಕ್ಕ ಪರಮೇಶ್ವರ್ ಅವರು, ನನ್ನನ್ನು ಏಕೆ ಕೀಟಲೆ ಮಾಡ್ತೀರಾ? ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ಧೇನೆ. ನಾನು ಸಿಎಂ ಆಗುವ ಪ್ರಶ್ನೆ ಬರುವುದೇ ಇಲ್ಲ ಎಂದರು.
ಸಚಿವ ಜಮೀರ್ ಅಹಮದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಅಧ್ಯಕ್ಷರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಅದು ಅವರ ಪರಮಾಧಿಕಾರ ಎಂದರು. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಸದ್ಯಕ್ಕೆ ಎಲ್ಲಾ ಸಚಿವರ ರಿಪೋರ್ಟ್ ಕಾರ್ಡ್ ಕೇಳಿದ್ದಾರೆ. ನಾನೂ ಕೂಡ ನನ್ನ ರಿಪೋರ್ಟ್ ಕಾರ್ಡ್ ನೀಡಿರುವೆ. ಯಾರನ್ನು ಉಳಿಸಿಕೊಳ್ಳಬೇಕು, ಮುಂದುವರಿಸಬೇಕು ಎಂದು ಹೈಕಮಾಂಡ್ ತೀರ್ಮಾನಿಸಲಿದೆ. ಗುಲಾಂ ನಬಿ ಆಜಾದ್ ಅವರು ರಾಜ್ಯದ ಉಸ್ತುವಾರಿ ವಹಿಸಿಕೊಂಡಾಗಲೂ ಇದೇ ರೀತಿ ವರದಿ ನೀಡುತ್ತಿದ್ದೆವು. ಈಗಲೂ ಅದೇ ರೀತಿ ವರದಿ ಕೇಳಿದ್ದಾರಷ್ಟೇ ಎಂದರು.
ರಾಜಕೀಯದಲ್ಲಿ ಯಾವಾಗ ಏನಾಗುತ್ತೋ ಗೊತ್ತಿಲ್ಲ ಎಂಬ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸುಭದ್ರ ಆಡಳಿತ ನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಅವಧಿ ಮುಗಿದ ಬಳಿಕ ಅಧ್ಯಕ್ಷರ ಬದಲಾವಣೆಯಾಗುತ್ತದೆ. ಅಧ್ಯಕ್ಷರು ಬದಲಾದರೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.