Tuesday, September 17, 2024

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಟ್ವೀಟ್ ಡಿಲೀಟ್ ಮಾಡಿದ ಸಿಎಂ ಸಿದ್ದರಾಮಯ್ಯ: ಕಾರಣವೇನು ಗೊತ್ತೇ?

Most read

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಈಗ ಅವರು ಆ ಟ್ವೀಟ್ ಅನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಇದಕ್ಕೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಹೌದು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ ಟ್ವೀಟ್ ಡಿಲೀಟ್ ಮಾಡಿದ್ದು ಉದ್ಯಮಿಗಳ ಒತ್ತಡಕ್ಕೆ ಎಂಬ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೈಗಾರಿಕೋದ್ಯಮಿಗಳು ಸಿಎಂ ಟ್ವೀಟ್ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ ತಮ್ಮ ಟ್ವಿಟ್ ಡಿಲೀಟ್ ಮಾಡಿಕೊಂಡಿದ್ದಾರೆ.

ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕನ್ನಡಿಗರಿಗೆ 100% ಉದೋಗ ಖಾತರಿಗಾಗಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸದಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಿದೆ.

ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದ್ದು, ಇದನ್ನು ಸದನದಲ್ಲಿ ಮಂಗಳವಾರ ಮಂಡನೆ ಮಾಡಲಾಗುತ್ತಿದೆ. ಆದರೆ, ಇದಕ್ಕೂ ಮುನ್ನ ಉದ್ಯಮಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಅವರು ಕೂಡ ಟ್ವೀಟ್ ಡಿಲೇಟ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಸ್ಪಷ್ಟನೆ ಕೊಟ್ಟು ಮರು ಟ್ವೀಟ್‌ ಮಾಡಿದ ಸಿಎಂ ಸಿದ್ದರಾಮಯ್ಯ

ಸಿಎಂ ಟ್ವೀಟ್ ನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಶೇ. 100 ರಷ್ಟು ಎನ್ನುವುದು ಇತ್ತು. ಆದರೆ ಬಿಲ್ ನಲ್ಲಿ, ಮ್ಯಾನೇಜ್ಮೆಂಟ್ ಕೋಟಾದಲ್ಲಿ 50% ನಾನ್ ಮ್ಯಾನೇಜ್ಮೆಂಟ್ ಕೋಟಾ 70% ಎಂಬ ನಿಯಮ ಇದೆ. ಹೀಗಾಗಿ ಸಿಎಂ ನೂರಕ್ಕೆ ನೂರರಷ್ಟು ಅನ್ನುವ ಪದ ಬಳಕೆ ಟ್ವೀಟ್ ನಲ್ಲಿ ಮಾಡಿದ್ದಕ್ಕೆ ಡಿಲೀಟ್ ಮಾಡಿದ್ದಾರೆ.

ಈ ಕುರಿತು ಮತ್ತೆ ಇಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.

ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದೆ.

More articles

Latest article