Saturday, May 18, 2024

ಕೇಂದ್ರದಿಂದ ರಾಜ್ಯಗಳ ತೆರಿಗೆ ಪಾಲು ಕಡಿತದ ಅಜೆಂಡಾ ಬಯಲು : ಮೋದಿ ಸರ್ಕಾರ ವಿರುದ್ಧ ಸಿದ್ದರಾಮಯ್ಯ ಗುಡುಗು!

Most read

ಕಳೆದ ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ನೀಡುತ್ತಿದ್ದ ತೆರಿಗೆ ಪಾಲಿನಲ್ಲಿ ದೊಡ್ಡ ಮಟ್ಟದ ಕಡಿತವಾಗಿದೆ ಇದಕ್ಕೆ ಮೋದಿ ಸರ್ಕಾರ ಮಾಡಿದ ಗೌಪ್ಯ ಅಜೆಂಡಾಗಳೆ ಕಾರಣ ಎಂದು ರಾಜ್ಯದ ಹಲವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆರೋಪ ಮಾಡಿದ್ದರು. ಈಗ ಇದಕ್ಕೆ ಪುಷ್ಟಿ ಕೊಡುವಂತಾ ವರದಿಗಳು ಬಂದಿದ್ದು ಸಿಎಂ ಸಿದ್ದರಾಮಯ್ಯ ಮೋದಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೌದು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ಭಾರತದ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನೇ ಬುಡಮೇಲು ಮಾಡುವಂತಹ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಗೋಪ್ಯ ಅಜೆಂಡಾವನ್ನು ನೀತಿ ಆಯೋಗದ ಸಿಇಒ ಬಿ ವಿ ಆರ್‌ ಸುಬ್ರಮಣ್ಯಂ ಅವರು ಹೊರಗೆಡವಿದ್ದಾರೆ. ‘’ಅಲ್‌-ಜಝೀರಾ’’ ದಲ್ಲಿ ಪ್ರಕಟವಾಗಿರುವ ಲೇಖನ ನಾನು ಕಳೆದ ಹತ್ತು ವರ್ಷಗಳಿಂದ ಹೇಳುತ್ತಾ ಬಂದಿರುವುದನ್ನು ದೃಡೀಕರಿಸಿದೆ ಎಂದು ಹೇಳಿದ್ದಾರೆ.

ರಾಜ್ಯಗಳಿಗೆ ಹಂಚಿಕೆಯಾದ ಹಣವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಏಕೈಕ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಹಣಕಾಸು ಆಯೋಗದೊಂದಿಗೆ ರಹಸ್ಯ ಮಾತುಕತೆಗಳಲ್ಲಿ 2014ರಿಂದ ತೊಡಗಿಸಿಕೊಂಡಿದ್ದರು ಎನ್ನುವುದು ಕಳವಳಕಾರಿ ಬೆಳವಣಿಗೆ. ರಾಜ್ಯಗಳ ತೆರಿಗೆ ಪಾಲಿನ ಹಣವನ್ನು ಪ್ರಸ್ತಾವಿತ 42% ನಿಂದ 32%ಗೆ ಇಳಿಸಲು ಮೋದಿ ಸರ್ಕಾರವು ತನ್ನ ಹಿಂದಿನ ಆಡಳಿತಾವಧಿಯಲ್ಲಿ ನಡೆಸಿದ್ದ ಸಂಚು ಕೂಡಾ ಬಯಲಾಗಿದೆ. ರಾಜ್ಯಗಳ ಪರಿಸ್ಥಿತಿ ಏನಾದರೂ ಸರಿಯೇ ಕೇಂದ್ರ ಸರ್ಕಾರದ ಪಾಲಿಗೆ ಹೆಚ್ಚಿನ ತೆರಿಗೆ ಹಣ ಉಳಿಸಿಕೊಳ್ಳಬೇಕು ಎನ್ನುವ ತಮ್ಮ ಕುತಂತ್ರ ಫಲಿಸದೆ ಹೋದಾಗ ಅನಿವಾರ್ಯವಾಗಿ ತಮ್ಮ ಅವಧಿಯ ಪ್ರಥಮ ಬಜೆಟ್‌ ಮಂಡನೆಗೂ 48 ಗಂಟೆಗಳ ಮುನ್ನವಷ್ಟೇ ಆಯವ್ಯಯವನ್ನು ತಿದ್ದಿಬರೆಯುವ ಕೆಲಸಕ್ಕೆ ಕೈಹಾಕಿದ್ದರು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಗುಡುಗಿದ್ದಾದೆ.

ಬಜೆಟ್‌ ಸಿದ್ಧತೆಯಲ್ಲಿ ಖುದ್ದು ಪಾಲ್ಗೊಂಡಿದ್ದ ಸುಬ್ರಮಣ್ಯಂ ಅವರು ಹೇಳಿರುವ ಕಟು ಸತ್ಯಗಳು ದೇಶದ ಅಸಂಖ್ಯಾತ ಬಡಜನರ ದೈನಂದಿನ ಬದುಕು, ಭವಿಷ್ಯವನ್ನು ಮೋದಿಯವರು ಎಂತಹ ಕರಿನೆರಳಿಗೆ ದೂಡಿದ್ದರು ಮತ್ತು ತಮ್ಮ ಕುತ್ಸಿತ ಕಾರ್ಯಸಾಧನೆಗಾಗಿ ಅರ್ಥ ಸಚಿವರು, ಅರ್ಥ ಸಚಿವಾಲಯವನ್ನೇ ಹೊರಗಿಟ್ಟು ಹೀಗೆ ಆತುರಾತುರವಾಗಿ ರೂಪಿಸಿದ ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಮೋದಿ ಎಳ್ಳುನೀರು ಬಿಟ್ಟಿದ್ದರು ಎನ್ನುವುದನ್ನು ತಿಳಿಸುತ್ತದೆ.
ಉದಾಹರಣೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣದಂತಹ ಆದ್ಯತಾ ವಲಯಕ್ಕೆ ನಿಗದಿಪಡಿಸಲಾಗಿದ್ದ ರೂ. 36,000 ಕೋಟಿ ಅನುದಾನವನ್ನು ಸರಾಸರಿ ಅರ್ಧಕ್ಕೆ ಇಳಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳು ಎರಡನೆಯ ದರ್ಜೆಯ ನಾಗರಿಕರೇನೋ ಎನ್ನುವಂತಹ ಅನುಮಾನ ಹುಟ್ಟಿಸುವ ಧೋರಣೆಯನ್ನು ಅನುಸರಿಸಿದರು. ಇಷ್ಟು ಮಾತ್ರವೇ ಅಲ್ಲ, ಹಿಂದಿನ ವಿತ್ತೀಯ ಅವಧಿಯಲ್ಲಿ ಶಾಲಾ ಶಿಕ್ಷಣಕ್ಕೆ ನೀಡಲಾಗಿದ್ದ ಅನುದಾನದಲ್ಲಿ 18.4 ಪ್ರತಿಶತ ಇಳಿಕೆ ಮಾಡಿ ಮಕ್ಕಳ ಭವಿಷ್ಯವನ್ನು ಚಿವುಟಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಮೋದಿಯವರ ಬಂಡವಾಳ ಬಯಲು ಮಾಡಿರುವ ಸುಬ್ರಮಣ್ಯಂ ಅವರು ಕೇಂದ್ರ ಸರ್ಕಾರವು ಹೇಗೆ ಆಯವ್ಯಯೇತರ ಸಾಲದ ಮೇಲೆ ಅವಲಂಬನೆ ಹೊಂದಿತ್ತು ಎನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದು ಕೇಂದ್ರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ಹೀಗೆ ದಾಖಲೆಗಳಿಂದ ಸಾಲವನ್ನು ಹೊರಗಿಡುವ ಕಣ್ಕಟ್ಟಿನ ತಂತ್ರಗಳಿಂದ ಸರ್ಕಾರದ ಮೇಲಿನ ಋಣಭಾರವೇನೂ ಕಮ್ಮಿಯಾಗುವುದಿಲ್ಲ. ಅಂತಿಮವಾಗಿ ಸಾಲದ ಶೂಲೆ ಹೆಗಲಮೇಲೆ ಏರಿಯೇ ಕೂತಿರುತ್ತದೆ. ಆದರೆ, ಇಂತಹ ಅಪ್ರಾಮಾಣಿಕ ಆರ್ಥಿಕ ಕಸರತ್ತುಗಳು ಸರ್ಕಾರದ ಪಾರದರ್ಶಕತೆಯ ಬಗ್ಗೆ, ಜವಾಬ್ದಾರಿಯುತ ಆಡಳಿತದ ಬಗ್ಗೆ ಗಾಢ ಸಂಶಯವನ್ನು ಉಂಟು ಮಾಡುತ್ತವೆ. ಇಂತಹ ಅಪ್ರಾಮಾಣಿಕ ನಡೆಗಳ ಪರಿಣಾಮ ಏನಾಗಿರುತ್ತದೆ ಎನ್ನುವುದನ್ನು ಕೇಂದ್ರದ ಅರ್ಥವ್ಯವಸ್ಥೆಗೆ ಕನ್ನಡಿ ಹಿಡಿದಿರುವ 2022ರ ಮಹಾಲೇಖಪಾಲರ ವರದಿ ವಿವರಿಸುತ್ತದೆ. ವರದಿಯು ಒಂದು ಪ್ರಮುಖ ಅಂಶವೆಂದರೆ, ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಸಂಸ್ಥೆಗಳು ರೂ. 1.69 ಲಕ್ಷ ಕೋಟಿಯಷ್ಟು ಸಾಲವನ್ನು ಮರೆಮಾಚಿರುವುದನ್ನು ಹೊರಗೆಡವಿರುವುದು.

ರಾಜ್ಯ ಸರ್ಕಾರಗಳ ಜೊತೆ ಹಂಚಿಕೊಳ್ಳದ ಸೆಸ್‌ ಮತ್ತು ಸರ್ಚಾರ್ಜ್‌ಗಳನ್ನು ನಿರಂತರವಾಗಿ ಏರಿಸುತ್ತಲೇ ಬಂದಿರುವ ಕೇಂದ್ರ ಸರ್ಕಾರದ ನಡೆಯ ಹಿಂದೆ ರಾಜ್ಯಗಳನ್ನು ಅವುಗಳಿಗೆ ದಕ್ಕಬೇಕಿರುವ ನ್ಯಾಯಯುತ ಹಕ್ಕುಗಳಿಂದ ವಂಚಿತವಾಗಿಸುವ ಹುನ್ನಾರವಿದೆ. ಆಯವ್ಯಯ ಮತ್ತು ಆಡಳಿತದ ಕುರಿತ ಸಂಶೋಧನಾ ಸಂಸ್ಥೆಯಾದ ‘ಆಯವ್ಯಯ ಮತ್ತು ಆಡಳಿತ ಹೊಣೆಗಾರಿಕಾ ಕೇಂದ್ರ’ದ ಮಾಲಿನಿ ಚಕ್ರವರ್ತಿಯವರು ಹೇಳಿರುವಂತೆ ಕೇಂದ್ರದ ಈ ನಡೆಯ ಹಿಂದೆ ರಾಜ್ಯಗಳ ಪಾಲನ್ನು ಕಸಿದು ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ತಂತ್ರವಿರುವುದು ಭಾಸವಾಗುತ್ತದೆ. ಕೇಂದ್ರದ ಈ ದಮನಕಾರಿ ನೀತಿಯಿಂದಾಗಿ ಒಟ್ಟು ತೆರಿಗೆಯಲ್ಲಿ ಸೆಸ್‌ ಮತ್ತು ಸರ್ಚಾರ್ಜ್‌ಗಳ ಪಾಲು 2011-12ರಲ್ಲಿ 10.4% ಇದ್ದದ್ದು 2021-22ರ ವೇಳೆಗೆ 18.4%ಗೆ ಏರಿಕೆಯಾಗಿದೆ.

ಬಿ ವಿ ಆರ್‌ ಸುಬ್ರಮಣ್ಯಂ ಅವರು ಹೊರಹಾಕಿರುವ ಈ ಎಲ್ಲ ಕಟುಸತ್ಯಗಳು ಮತ್ತು ಅಲ್‌ ಜಝೀರಾ ಪ್ರಕಟಿಸಿರುವ ಒಳನೋಟದ ಲೇಖನ ಮೋದಿ ಸರ್ಕಾರವು ಒಕ್ಕೂಟ ಆರ್ಥಿಕ ವ್ಯವಸ್ಥೆಯೆಡೆಗೆ ಹೊಂದಿರುವ ಅನರ್ಥಕಾರಿ ಧೋರಣೆಗಳನ್ನು ಬಹಿರಂಗಗೊಳಿಸುತ್ತದೆ.
ಇಂತಹ ಸಾರ್ವತ್ರಿಕ ಸಂಗತಿಗಳನ್ನು ಸಂವಿಧಾನಬದ್ಧವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ನಾವೆಲ್ಲರೂ ಸಾರ್ವಜನಿಕವಾಗಿಯೇ ಚರ್ಚಿಸಬೇಕಾಗಿರುವುದು ಅತ್ಯಂತ ತುರ್ತಾಗಿದೆ.. ಇದು ಹೀಗೆ ಮುಂದುವರಿದರೆ ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳು ಕೇಂದ್ರದ ಕುಟಿಲ ಆರ್ಥಿಕ ಕ್ರಮಗಳ ಹೊರೆಯನ್ನು ಹೊರುತ್ತಲೇ ಹೋಗಬೇಕಾಗುತ್ತದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ನನ್ನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ.

ಕೇಂದ್ರ ಸರ್ಕಾರವು ಭಾರತದ ಒಕ್ಕೂಟದ ಎಲ್ಲ ರಾಜ್ಯಗಳೊಟ್ಟಿಗೆ ತನ್ನ ಸಂಪನ್ಮೂಲವನ್ನು ನ್ಯಾಯುತವಾಗಿ, ಸಮತೆಯ ತತ್ವದಡಿಯಲ್ಲಿ ಹಂಚಿಕೊಳ್ಳಲು ಇನ್ನೂ ಕಾಲಮಿಂಚಿಲ್ಲ. ಆ ಮೂಲಕ ತನ್ನನ್ನು ತಾನೇ ಅದು ತಹಬದಿಗೆ ತಂದುಕೊಳ್ಳಬೇಕಿದೆ. ತೆರಿಗೆಯ ಪಾಲು, ಸಂಪನ್ಮೂಲ ಹಂಚಿಕೆಯ ವಿಚಾರವಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳು ಎತ್ತುತ್ತಿರುವ ನ್ಯಾಯಯುತ ದನಿಯನ್ನು ಹತ್ತಿಕ್ಕುವ ಯತ್ನವನ್ನು ಕೇಂದ್ರವು ಇನ್ನಾದರೂ ಕೈಬಿಡಲಿ. ತನ್ನ ವಿತ್ತೀಯ ದುರ್ನಡತೆಯನ್ನು ಸರಿಪಡಿಸಿಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

More articles

Latest article