ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು: ಸಿಎಂ ಸಿದ್ದರಾಮಯ್ಯ ಸೂಚನೆ

Most read

2024-25ನೇ ಸಾಲಿನ ಮುಂಗಾರು ಹಂಗಾಮಿನ ಮಳೆ, ಬೆಳೆ,ಬೀಜ ಹಾಗೂ ರಸಗೊಬ್ಬರಗಳ ಪರಿಸ್ಥಿತಿ ಮತ್ತು ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ಅಧಿಕಾರಿಗಳಿಗೆ ಗಂಭೀರ ಸೂಚನೆಗಳನ್ನು ನೀಡಿದ್ದಾರೆ.

ಇಂದು ಕೃಷಿ ಇಲಖಾಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೆರ್ ಬಿತ್ತನೆ ಗುರಿ ಇದ್ದು, ಇದುವರೆಗೆ 50.91 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇನ್ನೂ 32 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಬೇಕಾಗಿದ್ದು ಈ ಬಾರಿ ಎಲ್ಲಾ ಕಡೆ ಉತ್ತಮ ಮಳೆಯಾಗಿರುವ ಕಾರಣ ಬಿತ್ತನೆ ಗುರಿ ಸಾಧಿಸುವ ಭರವಸೆ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಬಿತ್ತನೆ ಬಳಿಕ ಮಳೆಯಾಗದೇ ಮೊಳಕೆಯಲ್ಲೇ ಹಾಳಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಪ್ರಸ್ತುತ ಸಾಲಿನಲ್ಲಿ 291940 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ಅವಧಿಯಲ್ಲಿ 1162498 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಇನ್ನೂ 1516007 ರಸಗೊಬ್ಬರ ದಾಸ್ತಾನು ಇದೆ. ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬೆಳೆ ವಿಮೆ ಸರಿಯಾಗಿ ದೊರೆಯುವುದನ್ನು ಖಾತ್ರಿಪಡಿಸಲು ಬೆಳೆ ಕಟಾವು ಪ್ರಯೋಗವನ್ನು ಹೆಚ್ಚಿಸಬೇಕು. ಈ ಸಂದರ್ಭದಲ್ಲಿ ರೈತ ಪ್ರತಿನಿಧಿ ಸಹ ಸ್ಥಳದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದ್ದಾರೆ.

ಕಳೆದ ಸಾಲಿನಲ್ಲಿ ಬೆಳೆವಿಮೆ ಯೋಜನೆಯಡಿ 24,52,393 ರೈತರು ನೋಂದಣಿ ಮಾಡಿದ್ದು, ಪ್ರಸ್ತುತ ಮುಂಗಾರಿನಲ್ಲಿ ಇದುವರೆಗೆ 508550 ರೈತರು ನೋಂದಣಿ ಮಾಡಿದ್ದಾರೆ. ಇನ್ನೂ 1943843 ರೈತರು ನೋಂದಣಿ ಮಾಡಬೇಕಾಗಿದೆ. ಬೆಳೆ ವಿಮೆ ಲಾಭ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ದೊರೆಯುವುದನ್ನು ಖಾತ್ರಿಪಡಿಸಬೇಕು ಎಂದರು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಕೆಲವು ರಾಜ್ಯಗಳು ಹೊರ ಬಂದಿವೆ. ಬೆಳೆ ವಿಮೆ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಸಭೆಯನ್ನು ನಡೆಸಲಾಗುವುದು. ರೈತರಿಗೆ ಬೆಳೆವಿಮೆಯ ಲಾಭ ಪೂರ್ಣವಾಗಿ ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಬೇಕು ಎಂದರು.

ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆ ಸಮೀಕ್ಷೆ ಶೇ.100ರಷ್ಟು ಕೈಗೊಳ್ಳಬೇಕು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕು. ಈ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದಿದ್ದಾರೆ.

More articles

Latest article