Thursday, September 19, 2024

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

Most read

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್​ನಲ್ಲಿ ಸಿಎಂ ಮಾಧ್ಯಮ ಸಂವಾದ ನಡೆಸಿದರು.

ಈ ವೇಳೆ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಲ್ಲಿ ಈವರೆಗೆ 201 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 4,857.95 ಕೋಟಿ ರೂ. ಉಚಿತ ಟಿಕೆಟ್ ಮೌಲ್ಯವಾಗಿದೆ. ಅನ್ನ ಭಾಗ್ಯ ಯೋಜನೆಯಡಿ 4.10 ಕೋಟಿ ಫಲಾನುಭವಿಗಳಿಗೆ 5754.6 ಕೋಟಿ ರೂ. ಹಣ ನೀಡಿದ್ದೇವೆ.

ಗೃಹ ಜ್ಯೋತಿಯಡಿ 1.60 ಕೋಟಿ ಜನರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದೇವೆ. ಅದಕ್ಕಾಗಿ 7,436 ಕೋಟಿ ರೂ. ವ್ಯಯಿಸಲಾಗಿದೆ. 1.20 ಕೋಟಿ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಯುನಿಧಿಯಡಿ 29,587 ಫಲಾನುಭವಿಗಳಿಗೆ ಹಣ ನೀಡಿದ್ದೇವೆ. ಒಟ್ಟಾರೆ ಪಂಚ ಗ್ಯಾರಂಟಿಗೋಸ್ಕರ 2023-24ರಲ್ಲಿ 36,000 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು.

ವಿರೋಧ ಪಕ್ಷದವರು ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ, ಪ್ರತಿಪಕ್ಷಗಳು ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ ಎಂದು ಟೀಕೆ ಮಾಡಿದ್ದರು. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಜತೆಗೆ ಯಾವುದೇ ಕಾರಣಕ್ಕೂ ಈ ಐದು ಯೋಜನೆಗಳು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

54,374 ಕೋಟಿ ರೂ.‌ಬಂಡವಾಳ ವೆಚ್ಚ ಮಾಡುತ್ತೇವೆ ಅಂದಿದ್ದೆವು. ನಾವು ಖರ್ಚು ಮಾಡಿದ್ದು 56,274 ಕೋಟಿ ರೂ. ಆಗಿದೆ. ಆ ಮೂಲಕ ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ನೀರಾವರಿ ಯೋಜನೆಗೆ ನಾವು ಬಜೆಟ್​ನಲ್ಲಿ 16,371 ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದೆವು. ಆದರೆ 18,198 ಕೋಟಿ ರೂ. ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ ಬಜೆಟ್​ನಲ್ಲಿ 9,722 ಕೋಟಿ ನೀಡಿದ್ದೆವು ಅದರಂತೆ 9,641 ಕೋಟಿ ಖರ್ಚು ಮಾಡಿದ್ದೇವೆ. ನಮ್ಮ ಖಜಾನೆ ಖಾಲಿ ಆಗಿದೆ, ಪಾಪರ್ ಆಗುತ್ತಾರೆ ಅಂದಿದ್ರು. ಪಾಪರ್ ಆಗಿದ್ದರೆ ಇಷ್ಟು ಹಣ ಖರ್ಚು ಮಾಡಲು ಆಗುತಿತ್ತಾ ಸಿಎಂ ಎಂದು ಪ್ರಶ್ನಿಸಿದರು.

ನಂತರ ಮೀಸಲಾತಿ ವಿಷಯ ವಿಚಾರ ಪ್ರಸ್ತಾಪಿಸಿದ ಅವರು, ಮುಸ್ಲಿಮರಿಗೆ 2bಯಡಿ 4% ಮೀಸಲಾತಿ ನೀಡಲಾಗುತ್ತಿದೆ. ಚಿನ್ನಪ್ಪ ರೆಡ್ಡಿ ಆಯೋಗದಂತೆ 30 ವರ್ಷಗಳಿಂದ ಈ ಮೀಸಲಾತಿ ಜಾರಿಯಲ್ಲಿದೆ. ಈ ಹಿಂದೆ ಬೊಮ್ಮಾಯಿ ಸರ್ಕಾರ ಮುಸ್ಲಿಂ ‌ಮೀಸಲಾತಿ ರದ್ದು ಮಾಡಿತ್ತು. ಅದರ ವಿರುದ್ಧ ಮುಸ್ಲಿಂರು ಕೋರ್ಟ್​ಗೆ ಹೋಗಿದ್ದರು. ಕೋರ್ಟ್​ನಲ್ಲಿ ಬೊಮ್ಮಾಯಿ ಸರ್ಕಾರ ನಾವು ಇದನ್ನು ಜಾರಿ ಮಾಡಲ್ಲ ಎಂದಿದ್ದರು.

More articles

Latest article