ಸಿದ್ದರಾಮಯ್ಯ- ಸಿದ್ದ, ಬದ್ಧ, ಬುದ್ದನಾಗಬೇಕು…

Most read

ಬೇರೆ ಯಾವ ಆಪರೇಷನ್‍ಗೂ ಬಗ್ಗದಿರುವ, ಸಾರ್ವಜನಿಕ ಜೀವನದಲ್ಲಿ ಇದ್ದುದರಲ್ಲಿ ಸ್ವಚ್ಛವಾಗಿರುವವರ ಮೇಲೆ ಕೊನೆಯ ಅಸ್ತ್ರವೇ ದೋಷಾರೋಪ ಹೊರಿಸುವಿಕೆ. ಆರೋಪ ಬಂದ ಮೇಲೆ ತನಿಖೆ ನಡೆಯಲಿ ಎಂದಾಗುತ್ತದೆ, ತನಿಖೆ ನಡೆಯುವಾಗ ಅಧಿಕಾರ ತ್ಯಜಿಸ ಬೇಕು ಎನ್ನುವ ಒತ್ತಾಯ ಬರುತ್ತದೆ. ತನಿಖೆಯ ತೀರ್ಪು ಪ್ರಕಟವಾಗುವಾಗ ವರ್ಷಗಳು ಉರುಳುತ್ತವೆ. ಆಗ ನಿರಪರಾಧಿಯೆನ್ನುವುದು ಸಾಬೀತಾದರೂ ಉರುಳಿಹೋದ ಸಮಯ, ಕಳೆದು ಹೋದ ಆಯಸ್ಸು, ದಕ್ಷವಾಗಿ ಆಡಳಿತ ನಡೆಸುವ ಅವಕಾಶ ಮತ್ತು ಆ ಮೂಲಕ ಸಮಾಜಕ್ಕೆ ಆಗಬಹುದಾಗಿದ್ದ ಪ್ರಯೋಜನವನ್ನು ಯಾವ ತೀರ್ಪೂ ಮರಳಿ ಕೊಡುವುದಕ್ಕೆ ಸಾಧ್ಯವಿಲ್ಲ – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣದ ತನಿಖೆ ನಡೆಸಲು ರಾಜ್ಯಪಾಲರು ನೀಡಿದ ಅನುಮತಿ ಸರಿಯಾಗಿದೆ ಎನ್ನುವ ರಾಜ್ಯ ಹೈಕೋರ್ಟಿನ ತೀರ್ಮಾನ ಸ್ವಾಗತಾರ್ಹ. ಸಾರ್ವಜನಿಕ ಜೀವನದಲ್ಲಿ ಇರುವ ಯಾರ ಮೇಲೆ ಆರೋಪ ಬಂದರೂ ಅದನ್ನು ಪರಿಶೀಲಿಸಿ, ತಪ್ಪಿದ್ದರೆ ತಕ್ಕ ಶಾಸ್ತಿಯಾಗ ಬೇಕಾಗಿರುವುದು ತಾತ್ವಿಕವಾಗಿ, ನೈತಿಕವಾಗಿ ಸರಿಯಾದ ಕ್ರಮವಾಗಿದೆ. ಜೊತೆಗೇನೆ ‘ಸಿದ್ಧರಾಮಯ್ಯನವರು ಅಧಿಕಾರದಲ್ಲಿದ್ದ ಅವಧಿಯಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಘಟನೆಗಳು ನಡೆದಿವೆ ಎಂದು ಹೇಳಿರುವುದೂ ಕೂಡಾ ತನಿಖೆಗೆ ಒಳ ಪಡಬೇಕಾದದ್ದೇ, ಇದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಪ್ರಾಯಶಃ ಈ ವಿದ್ಯಮಾನ 2014 ರ ಮೊದಲು ನಡೆದಿದ್ದರೆ ಸಿದ್ಧರಾಮಯ್ಯನವರು ತಕ್ಷಣ ರಾಜೀನಾಮೆ ನೀಡಿ ತನಿಖೆ ಮುಗಿಯುವರೆಗೂ ಶಾಸಕರಾಗಿ ಮುಂದುವರಿದು, ಕೊನೆಯಲ್ಲಿ ಅವರು ಯಾವುದೇ ತಪ್ಪೆಸಗಿಲ್ಲ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎನ್ನುವ ಅಂಶ ಸಾಬೀತಾಗಿದ್ದರೆ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಾಗಿತ್ತು. ಆದರೆ ಈಗ 2024ನೇ ಇಸವಿಯ ಪರಿಸ್ಥಿತಿಯಲ್ಲಿ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲ ಯಾವ ಒತ್ತಡಗಳಿಗೂ ಬಲಿಯಾಗದೇ ಮುಖ್ಯಮಂತ್ರಿಯಾಗಿ ಮುಂದುವರಿಯಲೇಬೇಕು. ಇದು ಪ್ರಾಯಶಃ 136 ಶಾಸಕರ ಮತ್ತು ಅವರನ್ನು ಬಹುಮತದಿಂದ ಆರಿಸಿದ ಈ ನಾಡಿನ ಜನರ ಅಭಿಪ್ರಾಯವೂ ಹೌದು.

ಇದೇನು 2014 ರ ಮೊದಲಾದರೆ ಸರಿ, ಈಗಾದರೆ ತಪ್ಪು? ತಕ್ಷಣಕ್ಕೆ ಇದು ಒಂದು ರೀತಿಯ ಇಬ್ಬಂದಿತನದ ನಿಲುವು ಎನಿಸಬಹುದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ದೇಶದ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿ, 2014ರ ನಂತರದ ಇಡೀ ರಾಜಕೀಯ ಸಮೀಕರಣವನ್ನು ಕೂಲಂಕಶವಾಗಿ ಪರಿಶೀಲಿಸಿದರೆ ಕಳೆದ ಹತ್ತು ವರ್ಷಗಳಲ್ಲಿ ಜನಮಾನಸದ ಚಿಂತನೆಯ ಕ್ರಮವೇ ಹೇಗೆ ಮತ್ತು ಯಾರಿಂದ ಬದಲಾಯಿತು ಎನ್ನುವುದನ್ನು ಅರ್ಥಮಾಡಿಕೊಂಡರೆ ಗೊಂದಲ ನಿವಾರಣೆಯಾಗಬಹುದು. ಈ ಮೊದಲು ಪ್ರಮುಖ ನಾಯಕರ ಮೇಲೆ ರಾಜಕೀಯವಾದ ಆಪಾದನೆ ಬಂದಾಗ ಅಂತಹವರು ನಿರಪರಾಧಿಯೆಂದು ಸಾಬೀತಾಗುವವರೆಗೆ ಅಧಿಕಾರದಿಂದ ದೂರ ಉಳಿಯಬೇಕೆನ್ನುವ ಅಭಿಪ್ರಾಯ ಸಮಾಜದಲ್ಲಿ ಜನಜನಿತವಾಗಿತ್ತು. ಆದರೆ ಕಳೆದ 10 ವರ್ಷಗಳ ರಾಜಕೀಯ ಬೆಳವಣಿಗೆಗಳು ಇಂತಹ ಪರಿಸ್ಥಿತಿಯನ್ನು ಸಂಪೂರ್ಣ ಬದಲಾಯಿಸಿಬಿಟ್ಟಿವೆ. ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಮತ್ತು ಅವರ ನಿಲುವನ್ನು ಸಮರ್ಥಿಸುವ ಬಳಗ ಏನು ಮಾಡಿದೆ, ಮಾಡುತ್ತಿದೆ ಮತ್ತು ಮುಂದೆ ಏನು ಮಾಡಲು ಹೊರಟಿದೆ ಎನ್ನುವುದನ್ನು ತಿಳಿದುಕೊಳ್ಳಲು ಬ್ರಹ್ಮ ವಿದ್ಯೆ ಏನೂ ಬೇಕಾಗಿಲ್ಲ. ಆಪಾದನೆಯನ್ನು ಯಾರ ಮೇಲೆ ಬೇಕಾದರೂ ಮಾಡಬಹುದು. ಆಪಾದನೆಗೆ ಒಳಗಾದವರು ಅಪರಾಧ ಸಾಬೀತಾಗುವವರೆಗೆ ಅಪರಾಧಿಯೆಂದು ತೀರ್ಮಾನಿಸುವ ಆತುರದ ನಿರ್ಧಾರ ಸರಿಯಲ್ಲ ಎನ್ನುವುದನ್ನು ಕಳೆದ ಕೆಲವು ಸಮಯದಿಂದ ಹೇಳುತ್ತಾ ಬರಲಾಗಿದೆ. ಶಾಸಕರು ಪಕ್ಷಾಂತರ ಮಾಡಿ ಸರಕಾರಗಳನ್ನು ಉರುಳಿಸುವಾಗ, ನಿವೃತ್ತಿಯ ನಂತರ ನ್ಯಾಯಮೂರ್ತಿಗಳನ್ನು ರಾಜ್ಯಪಾಲರುಗಳಾಗಿ ನೇಮಕ ಮಾಡಿದಾಗ, ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಿದಾಗ, ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲಿನ ಬೇಡಿಕೆಗಾಗಿ ಚುನಾಯಿತ ಸರಕಾರಗಳು ಒತ್ತಾಯಿಸುವ ಸ್ಥಿತಿ ಬಂದಾಗ, ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರು ಚುನಾಯಿತ ಸರಕಾರಗಳೊಂದಿಗೆ ಸಹಕರಿಸುತ್ತಿಲ್ಲ ಎನ್ನುವ ತಕರಾರು ಕೊನೆಗೆ ಸುಪ್ರೀಂ ಕೋರ್ಟಿನ ಕದ ತಟ್ಟುವಲ್ಲಿಗೆ ಬಂದು ನಿಂತಾಗ, ಕೋಟ್ಯಂತರ ರೂಪಾಯಿಗಳ ಹಗರಣ ಎನ್ನಲಾದ ಎಲೆಕ್ಟೋರಲ್ ಬಾಂಡ್, ಹೀಗೆ ಇಂತಹ ಅನೇಕ ಸಂದರ್ಭಗಳಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ಜನತಾ ಪಕ್ಷದ ನಿಲುವು ಏನು ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ವಿಷಯಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಕಲೆಯಲ್ಲಿ ಬಿಜೆಪಿಯನ್ನು ಮೀರಿಸುವವರು ಯಾರೂ ಇರಲಾರರು ಎಂದೇ ಅನಿಸುತ್ತದೆ. ಸಮವಸ್ತ್ರಕ್ಕೆ ಸಂಬಂಧಿಸಿದ ತೀರ್ಪು ಪರಮೋಚ್ಚ ಪವಿತ್ರ ಎಂದು ಹೇಳಿದರೆ, ಅತ್ತ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಕುರಿತ ತೀರ್ಪಿನ ಬಗ್ಗೆ ವಿರೋಧ, ಇನ್ನೊಂದೆಡೆ ನಂಬಿಕೆ. ಈ ದೇಶದ ನಾಗರಿಕರೆಲ್ಲರೂ ನ್ಯಾಯಾಲಯದ ತೀರ್ಪನ್ನು ಒಪ್ಪಬೇಕು, ಗೌರವಿಸಬೇಕು. ಒಂದು ವೇಳೆ ಆ ಕುರಿತು ನಮಗೆ ತಕರಾರುಗಳಿದ್ದರೆ ಅದನ್ನು ಇರುವ ವ್ಯವಸ್ಥೆಯೊಳಗೆ ಪರಿಹರಿಸಿಕೊಳ್ಳಲು ಅವಕಾಶಗಳಿವೆ.

ಸದ್ಯ ಮುಡಾ ವಿಷಯದಲ್ಲಿ ಏನಾಗುತ್ತಿದೆ ಎನ್ನುವುದನ್ನು ಗಮನಿಸಿದರೆ, ಮೇಲ್ನೋಟಕ್ಕೆ ಏನು ಕಾಣುತ್ತಿದೆಯೋ, ಅದಕ್ಕಿಂತ ಗಹನವಾದ ಸಂಗತಿಗಳಿವೆ ಅನಿಸುತ್ತದೆ. ವಿಪಕ್ಷ ನಾಯಕರ ಇದುವರೆಗಿನ ಹೇಳಿಕೆಗಳು ನಡವಳಿಕೆಗಳು ಇದನ್ನು ಸಮರ್ಥಿಸುವ ರೀತಿಯಲ್ಲೇ ಇವೆ. ಪ್ರಸ್ತುತ ಸರಕಾರ ರಚನೆಯಾದ ದಿನದಿಂದಲೂ ವಿಪಕ್ಷಗಳು ಜನ ನೀಡಿದ ತಮ್ಮ ಪಾತ್ರವನ್ನು ಒಪ್ಪಿಕೊಳ್ಳಲೇ ಇಲ್ಲ. ಏನಾದರೂ ಮಾಡಿ ಟ್ರೆಜರಿ ಬೆಂಚಿಗೆ ಹೋಗಬೇಕು ಎನ್ನುವ ಪ್ರಯತ್ನ ಮಾಡಿದ್ದು ಬಿಟ್ಟರೆ, ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಪ್ರಯತ್ನವನ್ನೇ ಮಾಡಲಿಲ್ಲ. ಮೊದಲಿಗೆ ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು, ಆ ನಂತರ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎನ್ನುವ ಆರೋಪ ಮಾಡಿದರು. ನಂತರದಲ್ಲಿ ಆಹಾರ ನಿಗಮದ ಅಕ್ಕಿಯನ್ನು ನೀಡುವ ಕುರಿತು ಕಿರಿಕಿರಿಗಳಾದುವು. ಮಹಾರಾಷ್ಟ್ರದಲ್ಲಿ ಆದ ರೀತಿ ನಮ್ಮ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯುತ್ತದೆ ಎನ್ನುವ ಕುರಿತು ನಮ್ಮ ಮಾಧ್ಯಮಗಳಲ್ಲಿ ಚರ್ಚೆಯಾಯಿತು. ವಿಪಕ್ಷಗಳ ಬಾಯಲ್ಲಿ ಸರಕಾರ ಬೀಳಿಸುವ ಮಾತಾಯಿತೆ ಹೊರತು ಜನರ ಸಮಸ್ಯೆಯ, ಹಿತಾಸಕ್ತಿಯ ಕುರಿತು ಧ್ವನಿಯಾಗಲಿಲ್ಲ. ಕೊನೆಗೆ ‘ಮುಡಾ’ ಹಗರಣದ ರಂಗ ಪ್ರವೇಶವಾಗಿದೆ.

ಬೇರೆ ಯಾವ ಆಪರೇಷನ್‍ಗೂ ಬಗ್ಗದಿರುವ, ಸಾರ್ವಜನಿಕ ಜೀವನದಲ್ಲಿ ಇದ್ದುದರಲ್ಲಿ ಸ್ವಚ್ಛವಾಗಿರುವವರ ಮೇಲೆ ಕೊನೆಯ ಅಸ್ತ್ರವೇ ಈ ರೀತಿಯ ದೋಷಾರೋಪ ಹೊರಿಸುವಿಕೆ. ಆರೋಪ ಬಂದ ಮೇಲೆ ತನಿಖೆ ನಡೆಯಲಿ ಎಂದಾಗುತ್ತದೆ, ತನಿಖೆ ನಡೆಯುವಾಗ ಅಧಿಕಾರ ತ್ಯಜಿಸ ಬೇಕು ಎನ್ನುವ ಒತ್ತಾಯ  ಬರುತ್ತದೆ. ತನಿಖೆಯ ತೀರ್ಪು ಪ್ರಕಟವಾಗುವಾಗ ವರ್ಷಗಳು ಉರುಳುತ್ತವೆ. ಆಗ ನಿರಪರಾಧಿಯೆನ್ನುವುದು ಸಾಬೀತಾದರೂ ಉರುಳಿಹೋದ ಸಮಯ, ಕಳೆದು ಹೋದ ಆಯಸ್ಸು, ದಕ್ಷವಾಗಿ ಆಡಳಿತ ನಡೆಸುವ ಅವಕಾಶ ಮತ್ತು ಆ ಮೂಲಕ ಸಮಾಜಕ್ಕೆ ಆಗಬಹುದಾಗಿದ್ದ ಪ್ರಯೋಜನವನ್ನು ಯಾವ ತೀರ್ಪೂ ಮರಳಿ ಕೊಡುವುದಕ್ಕೆ ಸಾಧ್ಯವಿಲ್ಲ. ಈ ಜಾಡಿನಲ್ಲಿಯೇ ಸಿದ್ಧರಾಮಯ್ಯನವರನ್ನು ಮಣಿಸಲು ಕೊನೆಯ ಅಸ್ತ್ರವಾಗಿ ಬಿಜೆಪಿ ಈ ಅಸ್ತ್ರವನ್ನು ಬಳಸುತ್ತಿದೆ ಎನ್ನುವುದು ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಸತ್ಯ. ಕೇಂದ್ರ ಸಚಿವರು ಅನುಭವೀ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆದ ಶ್ರೀಯುತ ಕುಮಾರಸ್ವಾಮಿಯವರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಅವರ ಪಕ್ಷದೊಂದಿಗೆ ಅಧಿಕಾರ ಹಂಚಿಕೊಂಡಿರುವ ಭಾರತೀಯ ಜನತಾ ಪಕ್ಷದ ನಾಯಕರು ಯಾಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ?

ಇಡೀ ದೇಶದಲ್ಲಿ ಒಂದು ರೀತಿಯ ನಿರಾಶಾದಾಯಕ, ಗೊಂದಲ ವಾತಾವರಣವಿದ್ದಾಗ, ಭವಿಷ್ಯದ ಕುರಿತು ಗೊಂದಲಗಳು ನಿರ್ಮಾಣವಾಗಿದ್ದ ವೇಳೆ “ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ಜನತಾ ತೀರ್ಪು, ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದನ್ನು ಅಧಿಕಾರದ ಬೆನ್ನು ಬಿದ್ದವರು ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಬಹುತೇಕ ಮಾಧ್ಯಮಗಳು, ಅಧಿಕಾರದಡಿಯಲ್ಲಿ ಬರುವ ಜಾರಿ ನಿರ್ದೇಶನಾಲಯ ಅನುಷ್ಠಾನ ವಿಭಾಗ (ಇ.ಡಿ), ಕೇಂದ್ರ ತನಿಖಾ ಆಯೋಗ (ಸಿ.ಬಿ.ಐ) ನಡೆಸಿದ ದಾಳಿ ಮತ್ತು ತನಿಖೆಗಳ ವೈಖರಿಯೇ ಮುಂತಾದ ಬೆಳವಣಿಗೆಗಳ ಹೊರತಾಗಿಯೂ, ಜನರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿಯೇ ತಿಳಿಸಿದೆ. ಅಲ್ಲಿಯೂ ಸುಮಾರು ಐವತ್ತು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳು ಮತ್ತು ಎಣಿಕೆ ಮಾಡಲಾದ ಒಟ್ಟು ಮತಗಳ ನಡುವೆ ಇರುವ ಅಂತರಗಳ ಕುರಿತು ಚುನಾವಣಾ ಆಯೋಗ ನೀಡಿದ ವಿವರಣೆಯೂ ಗೊಂದಲಗಳಿಂದ ಕೂಡಿದೆ ಎನ್ನಲಾಗುತ್ತಿದೆ. ಇಂತಹ ಸ್ವಾಯತ್ತ ಸಂಸ್ಥೆಗಳು ನೈತಿಕ ಹಿನ್ನೆಲೆಯಲ್ಲಿ ಸಾರ್ವಜನಿಕ ಉತ್ತರದಾಯಿತ್ವ ನಿಭಾಯಿಸಲು ವಿಫಲವಾಗಿವೆಯೇ? ಈ ಕುರಿತು ಅಧಿಕಾರಸ್ಥರ ನಿಲುವೇನು? ಇಲ್ಲಿ ಎಲ್ಲ ಯಾಕೆ ನೈತಿಕತೆಯ ಪ್ರಶ್ನೆ ಎದುರಾಗುವುದಿಲ್ಲ? ಇದನ್ನು ಆಂಶಿಕ ಮರೆವು ಎನ್ನುವುದೋ, ಜಾಣ ಮರೆವು ಎನ್ನುವುದೋ? ಗೊತ್ತಿಲ್ಲ!

ರಾಜಕೀಯ ಭ್ರಷ್ಟಾಚಾರ ಸ್ವಜನ ಪಕ್ಷಪಾತ, ವಂಶಪಾರಂಪರ್ಯ ರಾಜಕಾರಣಗಳಿಗೆ ಪೂರ್ಣವಿರಾಮ ಹಾಕುವುದಾಗಿ ಹೇಳಿ ಜನರ ವಿಶ್ವಾಸ ಗಳಿಸಿ ಅಧಿಕಾರ ಪಡೆದ ಪಕ್ಷ ಏನು ಮಾಡಿದೆ? ಭ್ರಷ್ಟಾಚಾರದ ಹಗರಣಗಳ ರೂವಾರಿಗಳಾಗಿದ್ದ ಹಲವು ರಾಜಕೀಯ ನಾಯಕರನ್ನು ರಾಜಕೀಯ ಶುದ್ಧೀಕರಣ ಮಾಡಿ ಯಾವ ರೀತಿಯಲ್ಲಿ ತಮ್ಮೊಳಗೆ ಸೇರಿಸಿ ಕೊಳ್ಳಲಾಯಿತು? ಜಾರ್ಖಂಡ್ ಮತ್ತು ದೆಹಲಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಹೇಗೆಲ್ಲ ನಡೆಸಿ ಕೊಳ್ಳಲಾಯಿತು? ಯಾವೆಲ್ಲ ರೀತಿಯಲ್ಲಿ ಜನರು ಆರಿಸಿದ ಸರಕಾರಗಳನ್ನು ಅಧಿಕಾರ ನಡೆಸಲು ಬಿಡದೆ ಅಲ್ಲಿ ತೊಡರುಗಾಲು ಹಾಕಲಾಯಿತು? ಇವೆಲ್ಲವೂ ನಮ್ಮ ಕಣ್ಣೆದುರೇ ಇದೆ. ಸರಕಾರ ತಪ್ಪು ಮಾಡಿದರೆ ಅದನ್ನು ವಾದ, ಸಂವಾದ, ಚರ್ಚೆಗಳ ಮೂಲಕ ಜನರಿಗೆ ತಿಳಿಯುವಂತೆ ಮಾಡಬೇಕಾದ್ದು ಶಾಸನ ಸಭೆಗಳಲ್ಲಿ ಮತ್ತು ಸಮಾಜದಲ್ಲಿ. ಆದರೆ ಸದ್ಯದ ಸ್ಥಿತಿಯಲ್ಲಿ ಮತ್ತು ಕಳೆದ ಕೆಲವು ವರ್ಷಗಳಿಂದ ವಿಪಕ್ಷದ ಮಂತ್ರಿಗಳ ಶಾಸಕರ, ಸಂಸದರ ಕುರಿತು ಇರುವ ಆಪಾದನೆಗಳ ವಿಮರ್ಶೆ ಜಾರಿ ನಿರ್ದೇಶನಾಲಯ, ಕೇಂದ್ರಿಯ ತನಿಖಾ ಸಮಿತಿ, ರಾಜಭವನಗಳ ಮೂಲಕ ನಡೆಯುತ್ತಿರುವುದನ್ನು ಏನೆಂದು ಅರ್ಥಮಾಡಿಕೊಳ್ಳುವುದು? ಇದು ಸರ್ವಾಧಿಕಾರಿ ಧೋರಣೆಯೇ? ಅಧಿಕಾರದ ದಕ್ಷತೆಯೇ? ಅಥವಾ ಪ್ರಜಾತಂತ್ರದ ಅಣಕವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ಪಾಲಿಸಬೇಕಾದ ‘ಧರ್ಮ’ ಅನುಭವಿಸಬೇಕಾದ ‘ಕರ್ಮ’ದ ಕುರಿತು ಮತ್ತು ಅದು ಮುಂದಿನ ತಲೆಮಾರಿನ ಮೇಲೆ ಈಗಿನ “ಸತ್ಯೋತ್ತರ ರಾಜಕಾರಣ” ಉಂಟುಮಾಡಬಹುದಾದ ಪರಿಣಾಮದ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ.

ಅಧಿಕಾರ ನಡೆಸಿದವರೆಲ್ಲರೂ ಸತ್ಯ ಹರಿಶ್ಚಂದ್ರರು ಎಂದು ಜನ ಭಾವಿಸಿಲ್ಲ ಮತ್ತು ಈಗಿನ ಕಾಲದಲ್ಲಿ ಆ ರೀತಿಯ ನಿರೀಕ್ಷೆಯೂ ಇಲ್ಲ. ಬೆಲ್ಲದ ಅಂಗಡಿಯಲ್ಲಿರುವಾಗ ಒಂದು ತುಂಡು ಬೆಲ್ಲ ತಿಂದು ನೀರು ಕುಡಿದರೆ ಯಾರದ್ದೂ ತಕರಾರಿರುವುದಿಲ್ಲ. ಆದರೆ ಇಡೀ ಅಂಗಡಿಯನ್ನೇ ಆಪೋಷನ ತೆಗೆದುಕೊಂಡು ಇದ್ದದ್ದೆಲ್ಲ ನುಂಗಿ ಹಾಕಿದರೆ ಜನರ ಮನಸ್ಸಿನಲ್ಲಿ ಉಳಿಯುವ ಕಹಿಯನ್ನು ಅಳಿಸಿ ಹಾಕಲು ಮಂಡ್ಯದ ಸಕ್ಕರೆಯೂ ಕಡಿಮೆಯಾಗುತ್ತಿರುವುದೂ ಈ ನಾಡಿನ ದೌರ್ಭಾಗ್ಯ.

ಸದ್ಯದ ಪರಿಸ್ಥಿತಿಯಲ್ಲಿ ಭವ್ಯ ಭೋಜನದ ನಿರೀಕ್ಷೆಯಲ್ಲಿರುವ ಬಹಳ ಜನ ನಾಯಕರು ಇರಬಹುದಾದರೂ ತನಿಖೆ ಎದುರಿಸಬೇಕಾದ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯುವುದು ತಪ್ಪಲ್ಲ. ಅವರ ಮೇಲಿನ ತನಿಖೆ ಪಾರದರ್ಶಕವಾಗಿ ಈ ನೆಲದ ಕಾನೂನಿನಂತೆ ನಡೆಯಲಿ. ತನಿಖೆಯ ತೀರ್ಪು ಬರುವವರೆಗೆ ತಾಳ್ಮೆಯಿಂದ ಕಾಯುವ. ನಾವೆಲ್ಲ ಈಗಾಗಲೇ ಮೈ ತುಂಬಾ ಕೆಸರು ಮೆತ್ತಿಸಿಕೊಂಡಿದ್ದೇವೆ, ಕನಿಷ್ಠ ಕಾನೂನು ಪ್ರಕ್ರಿಯೆ ನ್ಯಾಯ ಸಮ್ಮತವಾಗಿ ನಡೆದುಕೊಳ್ಳುವಂತೆ ನಾವು ಕಳುಹಿಸಿದ ವಿರೋಧ ಪಕ್ಷದಲ್ಲಿರುವ ನಾಯಕರು ಶಾಸಕರು ಗಮನಿಸಲಿ. ರಸ್ತೆಯಲ್ಲಿ, ಗಲ್ಲಿಗಲ್ಲಿಯಲ್ಲಿ ಹೋರಾಟ ನಡೆಯುವ ಮೊದಲು ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ಇತರ ಅವಕಾಶಗಳ ಸರಿಯಾದ ಬಳಕೆಯಾಗಲಿ.

ವಂಶಪಾರಂಪರ್ಯವಾಗಿ ಜನಬಲ, ಧನಬಲ ಇಲ್ಲದೇ ಹೋದರೂ ಸಮಾಜವಾದಿ ಹಿನ್ನೆಲೆಯ ಕಾರಣದಿಂದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಆಡಳಿತ ನಡೆಸಿರುವ ಕೆಲವೇ ಕೆಲವು ಜನರಲ್ಲಿ ಸಿದ್ಧರಾಮಯ್ಯ ಕೂಡಾ ಒಬ್ಬರು. ಈ ಕಾರಣದಿಂದ ಕರ್ನಾಟಕದ ರಾಜಕೀಯ ಇತಿಹಾಸದ ಕೆಲವು ಪುಟಗಳಲ್ಲಿ ದಾಖಲಾಗಿರುವ ಅವರ ರಾಜಕೀಯ ಬದುಕಿಗೊಂದು ಗಟ್ಟಿ ಉಪಸಂಹಾರದ ಅಗತ್ಯವಿದೆ. ಅವರ ರಾಜಕೀಯ ಎದುರಾಳಿಗಳ ಬಾಯಿಯಿಂದ ಬಂದ ಟೀಕೆಗಳೆಲ್ಲ ಅವರ ಮನದಾಳದದಿಂದಲೇ ಬಂದಿರದೆ ಇರಬಹುದು; ಅದೇ ರೀತಿ ಅವರ ಗುಣಗಾನ ಮಾಡುವವರ ಹೊಗಳಿಕೆಯ ಮಾತುಗಳು ಎಷ್ಟು ಆಳದಿಂದ ಅರಳಿವೆ ಎಂದೂ ಹೇಳುವುದೂ ಕಷ್ಟ. ಆದರೆ ಈ ನಾಡಿನ ದೀನ ದುರ್ಬಲರ, ಮಹಿಳೆಯರ ನಿಟ್ಟುಸಿರು ಏನು ಹೇಳುತ್ತದೆ? ಅವರು ಸಾಗಿ ಬಂದ ರಾಜಕೀಯ ದಾರಿಯ ಅವಲೋಕನ ಮಾಡಿದಾಗ ಸ್ವತಃ ಅವರ ಮನಸ್ಸಿಗೆ, ಮತಿಗೆ ಏನು ಅನಿಸುತ್ತದೆ? ‘ಮುಡಾ’ ವಿಷಯವಾದರೂ ಅಷ್ಟೇ, ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಸಿದ್ದರಾಮನ ಹುಂಡಿಯ ಸಿದ್ದರಾಮಯ್ಯ ತಿಳಿದಷ್ಟು ಇನ್ಯಾರೂ ತಿಳಿದಿರಲು ಸಾಧ್ಯವೇ ಇಲ್ಲ. ಈ ನಾಡಿನ ಜನ ಯಾವ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನೆನಪಿಟ್ಟುಕೊಳ್ಳಬೇಕು ಎನ್ನುವುದನ್ನು ಅವರೇ ತೀರ್ಮಾನಿಸಲಿ. ಇದಕ್ಕೆ ಅವರು ಸಿದ್ದ, ಬದ್ಧ, ಬುದ್ದನಾಗಬೇಕು…

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಮೂಡಾ ತನಿಖೆಗೆ ಅನುಮತಿ; ತಪ್ಪಿಲ್ಲವಾದರೆ ಯಾಕಿರಬೇಕು ಭೀತಿ

More articles

Latest article