ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳುತ್ತೀರಲ್ಲ, ತಾಕತ್ತಿದ್ದರೆ ರಾಜ್ಯದಲ್ಲಿ ಎಫ್.ಐ.ಆರ್. ದಾಖಲಾಗಿರುವ ಎಲ್ಲರೂ ರಾಜೀನಾಮೆ ನೀಡಿ ಎಂದು ತಮ್ಮದೇ ಪಕ್ಷದವರು ಸೇರಿದಂತೆ ಬಿಜೆಪಿ ನಾಯಕರುಗಳಿಗೆ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು? ಎಫ್.ಐ.ಆರ್ ಆದಾ ಕ್ಷಣ ರಾಜೀನಾಮೆ ಕೊಡಬೇಕು ಎಂದು ಯಾವ ಕಾನೂನು ಹೇಳಿದೆ. ರಾಜ್ಯಪಾಲರು ತನಿಖೆ ಮಾಡುವಂತೆ ಹೇಳಿದ್ದಾರೆ. ನ್ಯಾಯಾಲಯ ಕೂಡ ಅದನ್ನು ಎತ್ತಿ ಹಿಡಿದಿದೆ. ಜೈಲಿಗೆ ಹಾಕಬೇಕು, ರಾಜೀನಾಮೆ ಕೊಡಬೇಕು ಎಂದು ನ್ಯಾಯಾಲಯ ಹೇಳಿದೆಯೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬಿಡುತ್ತಾರೆ, ಯಾರ ವಿರುದ್ಧವೆಲ್ಲ ಪ್ರಕರಣ ದಾಖಲಾಗಿದೆಯೋ ಅವರೆಲ್ಲ ವಿಧಾನಸೌಧದ ಮುಂದೆ ನಿಂತುಕೊಂಡಿರಿ ಎಂದು ಒತ್ತಾಯಿಸಿದ ಜಿ.ಟಿ.ದೇವೇಗೌಡ, ಪ್ರಕರಣ ಎದುರಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಟ್ಟುಬಿಡುವರೇ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿವೆ. ರಾಜ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ನೀಡದೆ ಬೆಳಗ್ಗೆ ಎದ್ದರೆ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಎಂದು ಕೇಳುತ್ತೀರಲ್ಲ ಯಾಕೆ? 2 ಲಕ್ಷ ಮತಗಳಿಂದ ಗೆದ್ದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರನ್ನು ರಾಜೀನಾಮೆ ಕೇಳಿದರೆ ಕೊಡಲು ಆಗುತ್ತದೆಯೇ? 136 ಶಾಸಕರ ಬಲದ ಮೇಲೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರಿಗೆ ಕಷ್ಟ ಬಂದಷ್ಟು ಗಟ್ಟಿಯಾಗುತ್ತಾರೆ. ತಾಯಿ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಅವರಿಗೆ ಇದ್ದೇ ಇರುತ್ತದೆ. 2006ರ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮತ್ತು ಬಿಜೆಪಿ ಪಕ್ಷದವರು ಇಬ್ಬರು ಸೇರಿಕೊಂಡು ಅವರನ್ನು ಸೋಲಿಸಲು ಪ್ರಯತ್ನಿಸಿದರೂ ಅವರು ಸೋಲದೆ ಗೆದ್ದು ಬಂದರು. ಈಗಲೂ ಸಹ ಈ ಪ್ರಕರಣದಿಂದ ಪರಾಗಿ ಜಯಶಾಲಿಯಾಗುತ್ತಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.