ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಜೂನ್ 29ರಂದು 8.00ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ.
ನಗರದಲ್ಲಿಂದು ತಮ್ಮ ಪ್ರವಾಸ ಮತ್ತು ಉದ್ದೇಶದ ಬಗ್ಗೆ ಮಾಹಿತಿ ನೀಡಿದ ಅವರು, ದೆಹಲಿಯಲ್ಲಿ ರಾಜ್ಯದಿಂದ ನೂತನವಾಗಿ ಅಯ್ಕೆಯಾಗಿರುವ ಸಂಸದರನ್ನು ಮತ್ತು ರಾಜ್ಯಸಭಾ ಸದಸ್ಯರನ್ನು ಭೇಟಿಯಾಗುವುದಾಗಿ ಹೇಳಿದರು.
ಸಭೆ ನಡೆಸಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಮತ್ತು ರೇಲ್ವೇ ಇಲಾಖೆ ಸಚಿವರನ್ನು ಭೇಟಿಯಾಗುವದರ ಜೊತೆಗೆ ರಾಜ್ಯದಿಂದ ಅಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರನ್ನು ಸಹ ಭೇಟಿಯಾಗುವುದಾಗಿ ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಘೋಷಿಸಿರುವ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ಬಿಡುಗಡೆ, ಮತ್ತು ರಾಜ್ಯಕ್ಕೆ ಸಂಪನ್ಮೂಲಗಳನ್ನು ಹೆಚ್ಚಿಸುವುದಕ್ಕೋಸ್ಕರ ಪ್ರಧಾನ ಮಂತ್ರಿ ಮತ್ತು ಇತರ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಿ, ಕೇಂದ್ರದಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ರಾಜ್ಯ ಸರ್ಕಾರದ ಪರವಾಗಿ ಎಲ್ಲರೂ ಈ ಯೋಜನೆಗಳನ್ನು ಮಂಜೂರು ಮಾಡಿಸುವುದು, ಹಣ ಬಿಡುಗಡೆ ಮಾಡಿಸುವುದು, ಸಂಪನ್ಮೂಲ ಹೆಚ್ಚು ಮಾಡಲು ಪ್ರಯತ್ನ ಪಡಬೇಕೆಂದು ತಿಳಿಸಲು ನೂತನ ಸಂಸದರನ್ನು ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.