ಸಿಎಂ ಸ್ಥಾನ ಡಿಕೆಶಿಗೆ ಬಿಟ್ಟುಕೊಡಿ: ವಿವಾದದ ಕಿಚ್ಚು ಹೊತ್ತಿಸಿದ ಚಂದ್ರಶೇಖರ ಸ್ವಾಮೀಜಿ ಭಾಷಣ

Most read

ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡುವ ಸಂದರ್ಭದಲ್ಲಿ ʻಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿʼ ಎಂದು ಒಕ್ಕಲಿಗರ ಮಹಾಸಂಸ್ಥಾನಮಠದ ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿರುವುದು ಜೇನುಗೂಡಿಗೆ ಕಲ್ಲುಹೊಡೆದಂತಾಗಿದ್ದು, ವಿವಾದದ ಕಿಚ್ಚು ಹೊತ್ತಿಸಿದೆ.

ಕೆಂಪೇಗೌಡರ ಜಯಂತಿ ಆಚರಣೆ ಸಂದರ್ಭದಲ್ಲಿ ಕೆಂಪೇಗೌಡರ ಕುರಿತು ಮಾತನಾಡುವ ಬದಲು ರಾಜಕೀಯ ಹೇಳಿಕೆ ನೀಡಿದ ಚಂದ್ರಶೇಖರನಾಥ ಸ್ವಾಮೀಜಿ ಕುರಿತು ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸಿಎಂ ಸ್ಥಾನ ಯಾರು ಬಿಟ್ಟು ಕೊಡೋತ್ತಾರೆ? ಹಾಗಾದ್ರೆ ಸ್ವಾಮೀಜಿ ಅವರ ಸ್ಥಾನ ಬಿಟ್ಟು ಕೊಡ್ತಾರಾ? ನಾನೇ ಸ್ವಾಮೀಜಿ ಆಗ್ತೀನಿ, ಬಿಟ್ಟು ಕೊಡ್ತಾರಾ ಕೇಳಿ? ನಾಳೆಯಿಂದ ಕಾವಿ ಹಾಕ್ತೀನಿ, ಸ್ವಾಮೀಜಿ ಬಿಡ್ತಾರಾ ಕೇಳಿ? ಯಾರೂ ತಮ್ಮ ಸ್ಥಾನ ಬಿಟ್ಟುಕೊಡಲು ರೆಡಿ ಇರಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ವಾಮೀಜಿ ಹೇಳಿಕೆ ಅವರ ಅಭಿಪ್ರಾಯ. ಯಾರು ಮುಖ್ಯಮಂತ್ರಿಯಾಗಿರಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ 136 ಶಾಸಕರು ಇದ್ದಾರೆ. ಯಾರು, ಯಾವಾಗ ಸಿಎಂ ಆಗಬೇಕು ಆ ಸಮಯದಲ್ಲಿ ಆಗುತ್ತಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

ಸ್ವಾಮೀಜಿ ಹೇಳಿದ ಕೂಡಲೇ ಯಾವುದು ಆಗೋದಿಲ್ಲ. ಎಲ್ಲವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ದಾವಣಗೆರೆಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಕುರಿತು ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾರೂ ಏನೂ ಬೇಕಾದ್ರೂ ಹೇಳಲಿ. ಅದನ್ನು ಬಹಿರಂಗವಾಗಿ ಚರ್ಚೆ ಮಾಡಲ್ಲ. ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡ್ತಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವೂ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ನುಡಿದಿದ್ದಾರೆ.

ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿಕೆಯಲ್ಲಿ ರಾಜಕೀಯ ತಂತ್ರವನ್ನು ಗುರುತಿಸಿರುವ ವಿರೋಧಪಕ್ಷದ ನಾಯಕ ಆರ್.ಅಶೋಕ್, ಸಿದ್ದರಾಮಯ್ಯ ತಂತ್ರಕ್ಕೆ ಇದೊಂದು ಪ್ರತಿತಂತ್ರ ಅಷ್ಟೇ. ತಮ್ಮನ ಸೋಲನ್ನು ಅರಗಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರಿಗೆ ಆಗುತ್ತಿಲ್ಲ. 3 ಡಿಸಿಎಂ ಗಳ ಕೂಗು ಎದ್ದಿರುವುದಕ್ಕೆ ಮುಖ್ಯ ಕಾರಣ ಗಾಯಕರೇ ಸಿದ್ದರಾಮಯ್ಯನವರು. ಇದಕ್ಕೆ ಕೌಂಟರ್ ಆಗಿ ಅಧಿಕಾರ ಬಿಟ್ಟುಕೊಡಬೇಕು ಎಂದು ಹೇಳಿಸಲಾಗಿದೆ ಎಂದು ಹೇಳಿದ್ದಾರೆ.

ಸಿಎಂ, ಡಿಸಿಎಂ ಎದುರಲ್ಲೇ ಸ್ವಾಮೀಜಿ ಹೇಳಿದ್ದಾರೆ. ಗೌರವ ಇದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ಲಿ. ಅವಮಾನ ಸಹಿಸಿ ಸಿಎಂ ಆಗಿರಬಾರದು ಎಂದು ಅವರು ನುಡಿದಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು ಈ ಕುರಿತು ನಾನು ಏನನ್ನೂ ಮಾತಾಡಲ್ಲ, ಹೈಕಮಾಂಡ್ ನಾಯಕರ ತೀರ್ಮಾನದಂತೆ ಆಗಲಿ. ಏನು ತೀರ್ಮಾನ ಮಾಡ್ತಾರೋ ಹಾಗೇ ಎಂದು ಕೊಂಚ ಅಸಮಾಧಾನದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

More articles

Latest article