ಸಾರ್ವಜನಿಕ ಸೇವೆಯಲ್ಲಿ ಇರುವ ಸಚಿವರು, ಶಿಕ್ಷಕರು, ವೈದ್ಯರು, ಅಧಿಕಾರಿಗಳು ತಮಗೊದಗಿದ ಅವಕಾಶವನ್ನು ಬಳಸಿ ಇತರರ ಬದುಕಲ್ಲಿ ಹಚ್ಚುವ ಭರವಸೆಯ ಹಣತೆ ಉಂಟು ಮಾಡಬಹುದಾದ ಪರಿಣಾಮ, ಅಗಾಧವಾದದ್ದು. ಆ ನಿಟ್ಟಿನಲ್ಲಿ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಇದು ನಮ್ಮ ಊರಿನ ಹೆಣ್ಣು ಮಗಳೊಬ್ಬರು ಹೇಳಿಕೊಂಡ ಅವರ ಬದುಕಿನ ಸವಿನೆನಪಿನ ಒಂದು ಭಾಗ – ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.
ಸಾರ್ವಜನಿಕ ಸೇವೆಯಲ್ಲಿರುವವರು ಜನರ ನೋವು ನಲಿವುಗಳಿಗೆ ಸ್ಪಂದಿಸುವ ಸೂಕ್ಷ್ಮತೆಯನ್ನು ಎಂದೂ ಮರೆಯಬಾರದು. ತನಗೆ ದೊರೆತಿರುವ ಅವಕಾಶ ಇತರರ ಮೇಲೆ ಸವಾರಿ ಮಾಡುವ ಅಧಿಕಾರವಲ್ಲ ಬದಲಿಗೆ ಜನರ ನೋವು ನಲಿವಿಗೆ ಸ್ಪಂದಿಸುವ ಜವಾಬ್ದಾರಿ ಎಂದು ತಿಳಿದು ಕೆಲಸ ಮಾಡಬೇಕಿದೆ. ಒಂದು ಕಾಲದಲ್ಲಿ ಇದ್ದ ಈ ರೀತಿಯ ಧೋರಣೆ ಇತ್ತೀಚಿನ ದಿನಗಳಲ್ಲಿ ಯಾಕೋ ತುಂಬಾ ಬದಲಾಗುತ್ತಿದೆ. ಈಗೀಗ ನಾಯಕರು ಅಂದುಕೊಂಡವರು (ಎಲ್ಲ ರಂಗಗಳಲ್ಲಿಯೂ) ಬೆಳೆಯುವ ಬದಲಿಗೆ ಕೊಳೆಯಲಾರಂಭಿಸಿದ್ದಾರೆ. ಸಮಾಜದಲ್ಲಿ ನೋವಿನಲ್ಲಿರುವ ಅಸಹಾಯಕರ ಸ್ಥಿತಿ ಗೋಳು ಕೇಳುವುದೇ ಬೇಡ.
ರಾಜ್ಯದ ಮತ್ತು ದೇಶದ ರಾಜಕೀಯವನ್ನು ನೋಡಿದರೆ ಕೆಲವೊಂದು ಬಾರಿ ನಿರಾಸೆ ಮಾತ್ರವಲ್ಲ ಗಾಬರಿಯೂ ಉಂಟಾಗುತ್ತದೆ. ಕೆಡುತ್ತಿರುವುದು ಕೇವಲ ರಾಜಕಾರಣಿಗಳಲ್ಲ ಶಿಕ್ಷಕರು, ವೈದ್ಯರು, ನ್ಯಾಯ ತೀರ್ಮಾನ ಮಾಡುವ ಸಮಾಜದ ಆತ್ಮಸಾಕ್ಷಿ ಎಂದು ಕೊಂಡವರು ಕೂಡಾ. ಇಂತಹ ಸಮಯದಲ್ಲಿ ನಮ್ಮನ್ನು ಬಿಡದೆ ಕಾಡುವ ಸಾವಿರಾರು ಪ್ರಶ್ನೆಗಳಿಗೆ ಉತ್ತರವೆಲ್ಲಿ?
ಈ ಹಿಂದೆ ಬ್ರಿಟೀಷ್ ಅಧಿಪತ್ಯದ ಆಡಳಿತ ವ್ಯವಸ್ಥೆಯಲ್ಲಿ ನೆಲದ ಕನಸುಗಳು ಆಳುವವರ ಬೂಟಿನಡಿಯಲ್ಲಿ ಕಮರಿ ಹೋಗುತ್ತಿರುವ ಸಮಯವೂ ಒಂದಿತ್ತಲ್ಲ.. ನಾವು ಆ ಹಂತವನ್ನು ದಾಟಿ ಬಂದ ಕಥನಗಳು ನಮ್ಮ ಭವಿಷ್ಯದ ದಾರಿಯನ್ನೂ ತೋರಬಲ್ಲವು. ಯಾವ ಸಮಾಜವೂ ಸಾಧಿಸಬೇಕಾದದ್ದನ್ನು ಸಾಧಿಸಿ ಆಯಿತು ಇನ್ನು ನಿರಾಳವಾಗಿರಬಹುದು ಎನ್ನುವ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲ. ಕೋಟ್ಯಂತರ ಖುಷಿಯ ತೋಟದಲ್ಲಿ ಅಸಂತೋಷದ ಅಸಹನೆಯ ಕಳೆಗಳೂ ಇರುತ್ತವೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಇನ್ನೊಬ್ಬರ ಸೋಲನ್ನು ತನ್ನ ಗೆಲುವು ಎಂದು ತಿಳಿದು ಕೊಂಡಿರುವ ಮನೋಭಾವದ ಜನರೂ ಗೆಳೆಯರ ಮುಖವಾಡದ ಹಿಂದೆ ರಂಗಪ್ರವೇಶಕ್ಕೆ ಕಾಯುತ್ತಿರುತ್ತಾರೆ. ಈ ಎಲ್ಲಾ ಕಾರಣಗಳಿಂದ ನಾವು ಸಾಧಿಸಿದ ಸಾಮಾಜಿಕ ನ್ಯಾಯ, ಸಮಾನತೆ, ಸೌಹಾರ್ದತೆಯ ಪಾಠಗಳನ್ನು ಕೇವಲ ಮುದ್ರಿಸಿ ಹಂಚಿದರೆ ಸಾಕಾಗುವುದಿಲ್ಲ. ಅದು ನಮ್ಮ ಆಚಾರ ವಿಚಾರಗಳಲ್ಲಿ ಬದುಕಿನ ಭಾಗವೇ ಆಗಿಬಿಡುವ ಮೂಲಕ ಜನ ಮಾನಸದ ಆಲೋಚನೆಯನ್ನು ಪ್ರಭಾವಿಸುತ್ತಾ ನಿರಾಸೆಯ ಕತ್ತಲೆಯಲ್ಲೂ ದಾರಿ ತೋರುವ ಹಾಗಿರಬೇಕು.
ಸಾರ್ವಜನಿಕ ಸೇವೆಯಲ್ಲಿ ಇರುವ ಸಚಿವರು, ಶಿಕ್ಷಕರು, ವೈದ್ಯರು, ಅಧಿಕಾರಿಗಳು ತಮಗೊದಗಿದ ಅವಕಾಶವನ್ನು ಬಳಸಿ ಇತರರ ಬದುಕಲ್ಲಿ ಹಚ್ಚುವ ಭರವಸೆಯ ಹಣತೆ ಉಂಟು ಮಾಡಬಹುದಾದ ಪರಿಣಾಮ, ಅಗಾಧವಾದದ್ದು. ಇಂತಹ ನಿದರ್ಶನಗಳು ನಿಮ್ಮೆಲ್ಲರ ನೆನಪಲ್ಲೂ ಇರಬಹುದು. ತೂಕಡಿಸುತ್ತಾ ಇರಬಹುದಾದ ಇಂತಹ ಸದಾಶಯದ ಸಂಕಥನದ ನೆನಪಿನ ಬುತ್ತಿಯನ್ನು ಬಿಚ್ಚಿ ಸವಿಯುವ ಮೂಲಕ ನಮಗೇ ನಾವೇ ಸ್ಫೂರ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ. ಇದು ನಮ್ಮ ಊರಿನ ಹೆಣ್ಣು ಮಗಳೊಬ್ಬರು ಹೇಳಿಕೊಂಡ ಅವರ ಬದುಕಿನ ಸವಿನೆನಪಿನ ಒಂದು ಭಾಗ.
ಬೆವರು ಬಸಿದು ಕಲ್ಲು ಕರಗಿಸಿ ಬೆಳೆದ ನನಗೆ, ದೇವರು ಒಂದಲ್ಲ ಒಂದು ದಾರಿ ತೋರಿಸುತ್ತಲೇ ಇದ್ದ. ಇಲ್ಲಾಂದ್ರೆ ಉಳ್ಳವರ ಮನೆಯ ಹುಡುಗಿಯೊಬ್ಬಳೇ ಕಾಲೇಜು ಶಿಕ್ಷಣ ಪಡೆಯಲು ಹೋಗ್ತಾಳೆ ಎನ್ನುವಾಗ ಆಕೆಯ ಓರಗೆಯವಳಾಗಿ, ‘ಹೂವಿನೊಂದಿಗೆ ನಾರಿಗೂ ಸ್ವರ್ಗ’ ಎನ್ನುವಂತೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ನನಗಂತೂ ಸಿಗುತ್ತಲೇ ಇರಲಿಲ್ಲ. ವಿಪರ್ಯಾಸವೆಂದರೆ ಯಾರ ಕಾರಣದಿಂದ ನನಗೆ ಕಲಿಯುವ ಅವಕಾಶವಾಗಿತ್ತೋ ಆ ಹೆಣ್ಣು ಮಗಳು ನಂತರದ ಒಂದೇ ವರ್ಷಕ್ಕೆ ಓದು ನಿಲ್ಲಿಸಿ ಮನೆಯಲ್ಲಿ ಉಳಿದಳು. ಆದರೆ ನನ್ನ ಓದು ನಿರಾತಂಕವಾಗಿ ಮುಂದೆ ಸಾಗಿತು.
ಶಿಕ್ಷಣದ ಬಲದಿಂದಲೇ ಪ್ರಾಥಮಿಕ ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿ ವೃತ್ತಿ ಬದುಕಿನ ಆರಂಭವೂ ಆಯಿತು. ಮನೆಯಿಂದ ಕೇವಲ ಎಂಟು ಕಿಲೋಮೀಟರ್ ದೂರ ನಡೆದೇ ಹೋಗುವ ಸುಖವೂ ನನ್ನ ಪಾಲಿಗೆ ದೊರೆತ ಪಂಚಾಮೃತವೇ. ಮದುವೆಯಾದ ಮೇಲೆ ತಾಯಿಯಾಗುವ ಭಾಗ್ಯ. ಬಾಣಂತನದಿಂದ ಎದ್ದವಳಿಗೆ ದಿನಾ ಹದಿನಾರು ಕಿಲೋಮೀಟರ್ ನಡಿಗೆ ಯಾಕೋ ದೇಹ ಸಹಕರಿಸಲೊಲ್ಲದು, ವರ್ಗಾವಣೆಯಂತೂ ನನ್ನಂತಹವಳಿಗೆ ‘ಗಗನ ಕುಸುಮ’. ಕೊನೆ ಪಕ್ಷ ಒಂದು ವರ್ಷದ ಮಟ್ಟಿಗೆ ಡೆಪ್ಯೂಟೇಷನ್ ಆದರೂ ಮಾಡಿಕೊಡಿ, ಎಂದು ಹಿರಿಯ ಅಧಿಕಾರಿಗಳಲ್ಲಿ ಮಾಡಿದ ಮನವಿ ‘ಗೋರ್ಖಲ್ಲ ಮೇಲೆ ಸುರಿದ ಮಳೆ’ಯಾಯಿತು. ಬದುಕಿನ ಬಂಡಿ ಸಾಗಬೇಕಾದರೆ ಎಂಟು ಮತ್ತೆ ಎಂಟು ಹದಿನಾರು ಕಿಲೋಮೀಟರ್ ದೂರದ ದಾರಿ ಸವೆಯಲೇ ಬೇಕು, ಸವಿಯಲೇ ಬೇಕು ಅದೂ ಹಸುಗೂಸನ್ನು ಹೊತ್ತುಕೊಂಡು. ಹೆತ್ತ ಮೇಲೆ ಹೊತ್ತು ತೀರಲೇಬೇಕು….ಎನ್ನುವಂತಾಯಿತು ನನ್ನ ಕತೆ.
ಇದ್ದಕ್ಕಿದ್ದಂತೆ ಒಂದು ದಿನ ಕುಗ್ರಾಮದ ನನ್ನ ಶಾಲೆಯ ಮುಂದೆ ಭರ್ರೆಂದು ಆಗಮಿಸಿತು ಜೀಪು. ಬಂದವರು ಅಂತಿಂಥವರಲ್ಲ ರಾಜ್ಯದ ಶಿಕ್ಷಣ ಸಚಿವರು! ತರಗತಿಯ ಮೂಲೆಯಲ್ಲಿ ಜೋಳಿಗೆ ಜೋಕಾಲಿಯಲ್ಲಿ ನಿದ್ದೆ ಮಾಡುತ್ತಿರುವ ನನ್ನ ಕಂದನ ಕೂಗು ಕೇಳಿ ನಾನು ಇನ್ನೇನು ಕಾದಿದೆಯೋ ಎಂದು ಹೆದರಿಯೇ ಹೋದೆ. “ಯಾರದಮ್ಮಾ ಮಗು. ಇಲ್ಲಿ ಯಾಕಿದೆ?” ಸಚಿವರ ಮಾತಿಗೆ ಗಾಬರಿ ಬಿದ್ದೆ. ಆದರೂ ಸಾವರಿಸಿಕೊಂಡು ನನ್ನ ಪರಿಸ್ಥಿತಿಯನ್ನು ಅವರ ಮುಂದೆ ಬಿಡಿಸಿಟ್ಟೆ. ಉಳಿದೆಲ್ಲ ವಿಚಾರ ಬದಿಗಿರಿಸಿ, “ಹತ್ತಮ್ಮಾ ಜೀಪು” ಎಂದು ಆಜ್ಞೆ ಮಾಡಿಬಿಟ್ಟರು. ಜೋಳಿಗೆ ಜೋಕಾಲಿಯಿಂದ ಹಸುಗೂಸನ್ನೆತ್ತಿಕೊಂಡು ಸಚಿವರ ಜೀಪು ಹತ್ತಿದೆ”. ನನ್ನ ಸಹೋದ್ಯೋಗಿಗಳಿಗೆ ಆಶ್ಚರ್ಯ. ಕಿವಿಯ ಹತ್ತಿರ ಬಂದು “ಮಿನಿಸ್ಟ್ರು ನಿಮಗೆ ಪರಿಚಯನಾ”? ಎಲ್ಲ ಕಣ್ಣುಗಳಲ್ಲೂ ಇದೇ ಪ್ರಶ್ನೆ. ನನಗೆ ಅವರು ಮಿನಿಷ್ಟ್ರು ಅಂತ ಗೊತ್ತಾಗಿದ್ದೆ ಇವತ್ತು. ಅವರನ್ನು ನೋಡಿರೋದು ಮೊದಲನೆ ಸರ್ತಿ, ಇನ್ನು ಪರಿಚಯ ಎಲ್ಲಿ ಬಂತು? ಹೇಳಿದ್ರೆ ನಂಬೋರಾರು?
ಜೀಪು ಹೋಗಿ ನಿಂತಿದ್ದೇ ಶಿಕ್ಷಣಾಧಿಕಾರಿಯವರ ಕಛೇರಿ ಮುಂದೆ. ಶಿಕ್ಷಣ ಮಂತ್ರಿಗಳ ಆಗಮನವೆಂದರೆ ಕೇಳಬೇಕೆ? ಮಂತ್ರಿಗಳ ಸೂಚನೆಯಂತೆ ಅವರನ್ನು ಹಿಂಬಾಲಿಸಿದೆ. ಶಿಕ್ಷಣ ಸಚಿವರ ಮುಂದೆ ಕೈಕಟ್ಟಿ ನಿಂತ ಶಿಕ್ಷಣಾಧಿಕಾರಿಗಳು “ಹೇಳಮ್ಮಾ ನಿನಗೆ ಹತ್ತಿರವಿರುವ ಯಾವ ಶಾಲೆ ಬೇಕು? ಎಂದು ಕೇಳಿದರು. ನನಗೆ ಅನುಕೂಲವಾಗಿರುವ ಮನೆ ಹತ್ತಿರದ ಶಾಲೆ ಆಗಬಹುದೆಂದೇ ಅರ್ಧ ಗಂಟೆಯೊಳಗೆ ಡೆಪ್ಯೂಟೇಷನ್ ಆದೇಶ ಹೊರಡಿಸಿ ಮತ್ತೆ ಮನೆಯವರೆಗೂ ಕಳಿಸಿಕೊಟ್ಟರು. ಎರಡು ವರ್ಷ ಡೆಪ್ಯೂಟೇಷನ್ ನಂತರ ವರದಿ ಪ್ರಕಾರ ವರ್ಗಾವಣೆಯೂ ಆಯಿತು. ಆದರೆ ಕರ್ತವ್ಯದಿಂದ ಬಿಡುಗಡೆ ಮಾಡಲೊಲ್ಲದ ಅಧಿಕಾರಿ ವರ್ಗದಿಂದ ಬಿಡುಗಡೆಯಾಗಲು ಮತ್ತೆ ಮಂತ್ರಿವರ್ಯರ ಭೇಟಿ, ಆಗಲೂ ಮಾನವೀಯತೆ ತೋರಿದ ಸಚಿವರು. ಇದೆಲ್ಲಾ ನಡೆದಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಕೆಲವು ವರ್ಷದ ಹಿಂದೆ. ಆ ಸಚಿವರು ಈಗಲೂ ಗಟ್ಟಿಮುಟ್ಟಾಗಿ ನಮ್ಮ ನಡುವೆ ಓಡಾಡುತ್ತಿದ್ದಾರೆ, ರಾಜಕಾರಣಿಯಾಗಿ ಅಲ್ಲ, ನಮ್ಮ ನಿಮ್ಮಂತೆ. ಮತ್ತೆ ಇಂತಹ ದಿನಗಳು ಕರ್ನಾಟಕದಲ್ಲಿ ಬರಬಾರದೇ?
ಡಾ. ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- http://ಇಸ್ರೇಲ್ ಇರಾನ್ ವಾರ್ – ಇರಾನ್ ಚರಿತ್ರೆ! https://kannadaplanet.com/israel-iran-war-iran-history/