ಶಿವಮೊಗ್ಗ: ಭಾರತೀಯ ಜನತಾ ಪಕ್ಷಕ್ಕೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಉಚ್ಛಾಟಿತ ನಾಯಕ ಕೆ.ಎಸ್.ಈಶ್ವರಪ್ಪ ಹೆಸರಲ್ಲಿ ವೃತ್ತಪತ್ರಿಕೆಯಲ್ಲಿ ಪ್ರಕಟವಾದಂತೆ ತೋರುವ ನಕಲಿ ಸುದ್ದಿಯ ಪೋಸ್ಟರ್ ಒಂದು ಚುನಾವಣೆಯ ಮುನ್ನಾ ದಿನವಾದ ನಿನ್ನೆ ಓಡಾಡಿತು.
ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇನೆ. ನೀವೆಲ್ಲರೂ ಬಿ.ವೈ.ರಾಘವೇಂದ್ರ ಅವರಿಗೇ ಓಟ್ ಮಾಡಿ. ನಾವೀಗ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕಾಗಿದೆ ಎಂದು ಈಶ್ವರಪ್ಪ ಹೇಳಿದಂತೆ ನಕಲಿ ಸುದ್ದಿಯ ಪೋಸ್ಟರ್ ತಯಾರಿಸಿ ಹರಿಬಿಡಲಾಗಿದೆ.
ಇದಲ್ಲದೆ ಈಶ್ವರಪ್ಪ ಹಿಂದೆ ನಡೆದ ಚುನಾವಣೆಯಲ್ಲಿ ರಾಘವೇಂದ್ರ ಅವರಿಗೆ ಮತ ಯಾಚಿಸುವ ವಿಡಿಯೋ ತುಣುಕನ್ನು ಎಡಿಟ್ ಮಾಡಿ, ಈಗ ಈಶ್ವರಪ್ಪನವರು ಕಣದಿಂದ ಹಿಂದೆ ಸರಿದು ರಾಘವೇಂದ್ರ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬಂತೆ ಬಿಂಬಿಸುವ ವಿಡಿಯೋ ಹರಿಬಿಡಲಾಗಿದೆ.
ಈಶ್ವರಪ್ಪ ನಕಲಿ ಸುದ್ದಿಗಳು ಹರಿದಾಡುತ್ತಿದ್ದಂತೆ ನಿನ್ನೆ ಸ್ವತಃ ಈಶ್ವರಪ್ಪ ಅವರೇ ವಿಡಿಯೋ ಸಂದೇಶ ಮಾಡಿ, ನಾನು ಕಣದಿಂದ ಹಿಂದೆ ಸರಿದಿಲ್ಲ. ರಾಘವೇಂದ್ರ ಅವರು ಈ ಮಟ್ಟಕ್ಕೆ ಇಳೀತಾರೆ ಎಂದು ಗೊತ್ತಿರಲಿಲ್ಲ. ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರೆಂದು ಬಿಂಬಿಸುವ ನಕಲಿ ಸುದ್ದಿಯೊಂದು ಹರಡಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದವರನ್ನು ಬಂಧಿಸಲಾಗಿತ್ತು.
ಪ್ರತಿ ಚುನಾವಣೆ ಸಂದರ್ಭದಲ್ಲೂ ಹೀಗೆ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದ್ದು, ಅದು ನಕಲಿ ಎಂಬುದು ಗೊತ್ತಾಗುವ ಮುನ್ನ ಮತದಾರರಲ್ಲಿ ಪರಿಣಾಮ ಬೀರುತ್ತ ಬಂದಿದೆ. ಹೀಗಾಗಿ ನಕಲಿ ಸುದ್ದಿಗಳ ಮತ್ತು ಸುಳ್ಳು ಸುದ್ದಿಗಳ ನಿಯಂತ್ರಣ ದೊಡ್ಡ ತಲೆನೋವಾಗಿ ಪರಿಣಮಿಸಿದೆ.