ಶಿಗ್ಗಾಂವಿ: ಬಿಜೆಪಿಯಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಕೈ ಪಡೆಗೆ ಸಾಧ್ಯವೇ ?

Most read

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಭರತ್‌ ಬೊಮ್ಮಾಯಿ ಮತ್ತು ಕಾಂಗ್ರೆಸ್ ನಿಂದ ಯಾಸೀರ್ ಅಹಮದ್ ಪಠಾಣ್ ಅಭ್ಯರ್ಥಿಗಳು.

ಶಿಗ್ಗಾಂವಿಯಲ್ಲಿ ಕೃಷಿಯೇ ಪ್ರಧಾನ. ನೀರಾವರಿ, ಮೂಲಭೂತ ಸೌಕರ್ಯ, ನಿರುದ್ಯೋಗ, ಕೃಷಿ ಸಂಬಂಧಿತ ಸಮಸ್ಯೆಗಳಿವೆ. ಆದರೆ ಚರ್ಚೆಯಾಗುತ್ತಿಲ್ಲ ಅಷ್ಟೇ. ಇಲ್ಲಿ 45 ಸಾವಿರ ಪಂಚಮಸಾಲಿ ಮತ್ತು 40 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಜತೆಗೆ ಹಿಂದುಳಿದ ವರ್ಗ ಹಾಗೂ ಎಸ್ ಸಿ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಕ್ಷೇತ್ರವನ್ನು ಕುಟುಂಬದ ಹಿಡಿತಕ್ಕೆ ತೆಗೆದುಕೊಳ್ಳುವುದು ಬೊಮ್ಮಾಯಿ ಅವರಿಗೆ ಎಷ್ಟು ಮುಖ್ಯವೋ ಇಲ್ಲಿ ಗೆದ್ದು ಅಹಿಂದ ಪಟ್ಟ ಉಳಿಸಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಅಷ್ಟೇ ಮುಖ್ಯವಾಗಿದೆ.

ಅಭ್ಯರ್ಥಿ ಆಯ್ಕೆಗೆ ತಡ ಮಾಡಿದ ಕೈ ಪಡೆ:
ಪಂಚಮಸಾಲಿ ಅಥವಾ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೇ ಎಂದು ನಿರ್ಧರಿಸುವಲ್ಲಿಯೇ ಕಾಲ ಹರಣ ಮಾಡಿದ್ದು ಹಿನ್ನಡೆಯಾಗಬಹುದು.
ಪಂಚಮಶಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎನ್ನುವ ಒತ್ತಡ ಹೆಚ್ಚಾಗಿದ್ದರೂ ಕಾಂಗ್ರೆಸ್ ಹಿಂದಿನಂತೆ ಈ ಬಾರಿಯೂ ಅಲ್ಪಸಂಖ್ಯಾತರಿಗೆ ಟಿಕೆಟ್ ಮೀಸಲಿಟ್ಟಿದೆ.

2023 ರಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ 35,978 ಮತಗಳ ಭಾರೀ ಅಂತರದಿಂದ ಪಠಾಣ್ ಸೋತಿದ್ದರು. ಆದರೂ ಹೈ ಕಮಾಂಡ್ ಇವರಿಗೆ ಮಣೆ ಹಾಕಿದೆ. ಸೋತ ನಂತರವೂ ಪಠಾಣ್ ಕ್ಷೇತ್ರದಲ್ಲೇ ಉಳಿದು ಉತ್ತಮ ಸಂಪರ್ಕ ಹೊಂದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವವಿದೆ. ಆ ಕಾರಣಕ್ಕಾಗಿ ಟಿಕೆಟ್ ನೀಡಲಾಗಿದೆ ಎಂದು ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಜ್ಜಂಪೀರ್ ಹಿಂದೆ ಸರಿದಿದ್ದು, ಕಾಂಗ್ರೆಸ್ ಹಾದಿ ಸುಗಮವಾಗಿದೆ.

ಬಸವರಾಜ ಬೊಮ್ಮಾಯಿ, ತಮ್ಮ ಮಗನ ಪರವಾಗಿ ಮೂರು ತಿಂಗಳಿಂದಲೇ ಕ್ಷೇತ್ರದಲ್ಲಿ ಸಂಚರಿಸುತ್ತಾ ಸಜ್ಜುಗೊಳಿಸಿದ್ದಾರೆ. ಮೇಲ್ನೋಟಕ್ಕೆ ಮಗನಿಗೆ ಟಿಕೆಟ್ ಬೇಡ ಎಂದು ಹೇಳುತ್ತಲೇ ಒಳೊಳಗೆ ಟಿಕೆಟ್ ಪಕ್ಕಾ ಮಾಡಿಕೊಂಡಿದ್ದರು. ಪ್ರಚಾರದಲ್ಲೂ ಬಿಜೆಪಿ ಮುಂದಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಲು ಬಯಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರು ಪಟ್ಟು ಹಿಡಿದು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವುದು ಸಂಪ್ರದಾಯವೂ ಹೌದು. ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರೆ ಗೆಲುವು ಸುಲಭವಾಗುತ್ತಿತ್ತು. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿರುವುದರಿಂದ ಎಂದಿನಂತೆ ಬಿಜೆಪಿ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ.

ಈ ಬಾರಿಯೂ ಪಂಚಮಸಾಲಿ ಸಮುದಾಯ ಸಾರಾಸಗಟಾಗಿ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ಹೇಳುವುದು ಕಷ್ಟ. ಕಾಂಗ್ರೆಸ್ ಟಿಕೆಟ್ ಕೊಡದೆ ಇರುವುದರಿಂದ ಪಂಚಮಸಾಲಿ ಸಮುದಾಯಕ್ಕೆ ಅಸಮಾಧಾನವಾಗಿದೆ ಎಂಬುದು ನಿಜ. ಆದರೆ ಇದೊಂದೇ ಕಾರಣಕ್ಕೆ ಪಂಚಮಸಾಲಿ ಮತದಾರರು ಭರತ್ ಜತೆ ನಿಲ್ಲುತ್ತಾರೆ ಎಂದು ಹೇಳಲಾಗದು. ದಶಕಗಳಿಂದ ಪಂಚಮಸಾಲಿ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿಲ್ಲ. ಈ ಅಪಾಯವನ್ನು ತಪ್ಪಿಸಲು ಭರತ್ ಸೋಲಿಸಿದರೆ ಮುಂದಿನ ಚುನಾವಣೆಯಲ್ಲಿ ನಮ್ಮದೇ ಸಮುದಾಯದ ಒಬ್ಬರಿಗೆ ಟಿಕೆಟ್ ಸಿಗಲಿದೆ ಎಂಬ ಅಭಿಪ್ರಾಯ ಹರಿದಾಡುತ್ತಿದೆ.

ಇದುವರೆಗೂ ಬೊಮ್ಮಾಯಿ ಅವರು ಮುಸ್ಲಿಂ ಸೇರಿ ಅಹಿಂದ ಮತಗಳನ್ನೂ ಸೆಳೆಯುತ್ತಿದ್ದರು. ಸಿಎಂ ಸಿದ್ದರಾಮಯ್ಯ ಅವರಿಂದಾಗಿ ಈ ವರ್ಗಗಳ ಮತಗಳು ಈ ಬಾರಿ ಬೊಮ್ಮಾಯಿಗೆ ಸಿಗದೆ ಹೋಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಗೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಧರ್ಮದ ಆಧಾರದಲ್ಲಿ ಚುನಾವಣೆ ನಡೆದರೆ ಗೆಲುವು ಕಷ್ಟ. ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಜೊತೆಗೆ ಲಿಂಗಾಯತ ಮತಗಳನ್ನು ಸೆಳೆದರೆ ಮಾತ್ರ ಕಾಂಗ್ರೆಸ್ ಗೆಲುವು ಕಾಣಬಹುದು.

ಆದರೆ ಅದು ಅಷ್ಟೊಂದು ಸುಲಭ ಅಲ್ಲ. ಯಾರೇ ಗೆದ್ದರೂ ಕಡಿಮೆ ಅಂತರ ಮಾತ್ರ ಕಡಿಮೆ ಎನ್ನುವುದಂತೂ ಖಚಿತ.

More articles

Latest article