ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್
ಗೆ ಬಂಡಾಯದ ಬಿಸಿ ತಟ್ಟುವ ಲಕ್ಷಣಗಳು ಗೋಚರಿಸುತ್ತಿವೆ.
ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಒಂದು ಬಾರಿ ಈ ಕ್ಷೇತ್ರದ ಶಾಸಕರಾಗಿದ್ದ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಖಾದ್ರಿ ಅವರು ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದರು. ಅವರ ಅಭಿಪ್ರಾಯಕ್ಕೆ ಬದ್ಧನಾಗಿ
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಒಪ್ಪಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳಿರುವಾಗ ಖಾದ್ರಿ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಮಾಜಿ ಶಾಸಕ ಮಂಜುನಾಥ್ ಕುನ್ನೂರು ಅವರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಪುತ್ರ ಪುತ್ರ ರಾಜು ಕುನ್ನೂರುಗೆ ಟಿಕೆಟ್ ತಪ್ಪಿದ್ದಕ್ಕೆ ಇವರು ಬಂಡಾಯವಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದಾರೆ.