1990 ರ ದಶಕದ ಆರಂಭದಲ್ಲಿ ಕಂಡುಬಂದ ಹರ್ಷದ್ ಮೆಹ್ತಾ ಹಗರಣವು ಭಾರತದ ಇತಿಹಾಸದಲ್ಲಿ ಅತ್ಯಂತ ಕುಖ್ಯಾತ ಹಣಕಾಸು ಹಗರಣಗಳಲ್ಲಿ ಒಂದಾಗಿದೆ. ಈ ಹರ್ಷದ್ ಮೆಹ್ತಾ ಪ್ರಕರಣದ ಕುರಿತು ಬರೆದಿದ್ದಾರೆ ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು
ಹರ್ಷದ್ ಮೆಹತಾ ಹಗರಣ (1992)
ಸಣ್ಣ ವ್ಯಾಪಾರಿಯೊಬ್ಬರ ಮಗನಾದ ಬಿ.ಕಾಂ. ಪಧವೀಧರ ಹರ್ಷದ್ “ಗ್ರೋ ಮೋರ್- ಸಂಶೋಧನೆ ಮತ್ತು ಆಸ್ತಿ ವ್ಯವಹಾರ” ಎನ್ನುವ ಹೂಡಿಕೆ ಸಂಸ್ಥೆಯನ್ನು 1984ರಲ್ಲಿ ಆರಂಭಿಸುವ ಮೊದಲು ಹಲವಾರು ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿದ್ದನು. ಈ ಸಂಸ್ಥೆ ಮುಂಬಯಿ ಷೇರು ಮಾರುಕಟ್ಟೆಯಲ್ಲಿ ದಲ್ಲಾಳಿ (Broker) ಕೆಲಸ ನಿರ್ವಹಿಸಲು ಆರಂಭಿಸಿದ ಮೇಲೆ 1980ರ ವೇಳೆಗೆ ಷೇರು ಪೇಟೆಯಲ್ಲಿ ದೊಡ್ಡ ಮಟ್ಟದ ವ್ಯವಹಾರ ಬೆಳೆಸುವ ಮೂಲಕ ಎಲ್ಲರ ಗಮನ ಸೆಳೆಯಿತು. ಅದರೊಂದಿಗೆ ಹರ್ಷದ್ ಮೆಹತಾನ ವಿಲಾಸಿ ಜೀವನ, ಷೇರು ಪೇಟೆಯ ಮೇಲೆ ಆತನಿಗಿದ್ದ ಹಿಡಿತ, ದೊಡ್ಡ ಮಟ್ಟದ ವ್ಯಾಪಾರ ವ್ಯವಹಾರವೇ ಮುಂತಾದ ಕಾರಣಗಳಿಂದಾಗಿ “ಷೇರು ಮಾರುಕಟ್ಟೆಯ ಅಮಿತಾಬ್ ಬಚ್ಚನ್” ಎಂದೇ ಖ್ಯಾತನಾದ. ಮಾಧ್ಯಮಗಳಂತೂ ಈತನನ್ನು “ದೊಡ್ಡ ಗೂಳಿ” (Bull) ಎಂದು ಹಾಡಿ ಹೊಗಳಿ ಅಟ್ಟಕೇರಿಸಿ ಇನ್ನಿಲ್ಲದ ಮಹತ್ವ ನೀಡಿದುವು. 1992ರಲ್ಲಿ ಎಲ್ಲರೂ ಸೇರಿ ಉಬ್ಬಿಸಿದ್ದ ಈ ಬಲೂನು ಗಾಳಿ ಹೋಗಿ, ದಾರ ಕಡಿದ ಗಾಳಿಪಟದಂತೆ ನೆಲಕ್ಕೆ ಬಿದ್ದಿತು. ಅದರೊಂದಿಗೆ ಭಾರತೀಯ ಷೇರು ಪೇಟೆಗೆ (ಅಂದರೆ ಹಣ ಹೂಡಿಕೆ ಮಾಡಿದ ಸಾಮಾನ್ಯ ಹೂಡಿಕೆದಾರರಿಗೆ) ಅಂದಾಜು 2,4000 ಕೋಟಿ ರೂಪಾಯಿಗಳಷ್ಟು ದೊಡ್ಡ ಮಟ್ಟದ ನಷ್ಟವಾಯಿತು. ಕೆಲವೊಂದು ಹಿರಿಯ ಬ್ಯಾಂಕ್ ಅಧಿಕಾರಿಗಳ ಸ್ಥಾನ, ಮಾನ, ಕೊನೆಗೆ ಪ್ರಾಣವೂ ನಷ್ಟವಾಗಿ ಇಡೀ ಅರ್ಥವ್ಯವಸ್ಥೆಯೇ ನಲುಗಿ ಹೋಯಿತು. ಷೇರು ಪೇಟೆ ಸೂಚ್ಯಂಕ 4,500ರಿಂದ 2,500 ಅಂಶಗಳಿಗೆ ಕುಸಿಯುವ ಮೂಲಕ ಅಂದಾಜು 1,00,000 ರೂಪಾಯಿಗಳಷ್ಟು ದೊಡ್ಡ ಪ್ರಮಾಣದ ನಷ್ಟ ಉಂಟಾಯಿತು. (ಇದು ಮಾರುಕಟ್ಟೆ ದರದಲ್ಲಿ ಬಂಡವಾಳ ನಗದಾಗಿ ಪರಿವರ್ತಿಸಿದರೆ ಆಗಬಹುದಾದ ಅಂದಾಜು ಮೊತ್ತ ಉದಾಹರಣೆಗೆ 4500 ರೂಪಾಯಿ ದರದಲ್ಲಿ ಖರೀದಿಸಿದ ಷೇರಿನ ಬೆಲೆ ಸೂಚ್ಯಂಕ ಕುಸಿದಾಗ 2,500 ರೂಪಾಯಿಗೆ ಇಳಿದರೆ ನನಗೆ (4500-2500) 2000 ಸಾವಿರ ನಷ್ಟವಾಗುತ್ತದೆ, ಅಂದರೆ ಸೂಚ್ಯಂಕ ಇಳಿತವಾದ ದಿನ ಮಾರಿದರೆ ಮಾತ್ರ ನಿಜವಾಗಿಯೂ ನಷ್ಟವಾಗುತ್ತದೆ, ಒಂದು ವೇಳೆ ಮಾರಾಟ ಮಾಡದೆ ಪುನಃ ಬೆಲೆ ಏರಿಕೆಯಾಗುವ ವರೆಗೆ ಕಾಯಬಹುದು.) ಇದೆಲ್ಲವೂ ವ್ಯಾಪಾರದಲ್ಲಿ ಸಂಭಾವ್ಯತೆಯ ಆಧಾರದ ಮೇಲೆ ನಡೆಯುವ ಲೆಕ್ಕಾಚಾರಗಳು.
ಒಬ್ಬ ಸಾಧಾರಣ ಉದ್ಯೋಗ ಮಾಡಿಕೊಂಡಿದ್ದ ಬಿ.ಕಾಂ. ಪದವೀಧರ ಮುಂಬಯಿಯ ಪ್ರಮುಖ ಜಾಗದಲ್ಲಿ ಬೃಹತ್ ಬಂಗಲೆ, ಐಶಾರಾಮಿ ಕಾರುಗಳ ಸಂಗ್ರಹ, ಬ್ಯಾಂಕುಗಳ ಮೇಲೆ, ಷೇರು ಪೇಟೆಗಳ ಮೇಲೆ ನಿಯಂತ್ರಣ ಸಾಧಿಸುವಷ್ಟರ ಮಟ್ಟಿಗೆ ಬೆಳೆಯಲು ಏನು ಕಾರಣ? ಯಾವ ಅದೃಷ್ಟ ಅವನಿಗೆ ಒಲಿದಿತ್ತು ಎನ್ನುವುದು ಬಹಳ ಕುತೂಹಲದ ಸಂಗತಿ. ಹರ್ಷದ್ ಮೆಹತಾ, ವ್ಯವಸ್ಥೆ ಮತ್ತು ವ್ಯಕ್ತಿಗಳ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು ಇಷ್ಟೆಲ್ಲ ಕಾರುಬಾರು ನಡೆಸಿದ್ದ ಎನ್ನುವುದು ನಂತರ ನಡೆದ ತನಿಖೆಯಿಂದ ಬಹಿರಂಗವಾಯಿತು. ಮೆಹತಾ ಷೇರು ಪೇಟೆಯಲ್ಲಿ ಷೇರುಗಳ ಬೆಲೆ, ಖರೀದಿಯ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡುವುದು, ಒಳಗಿನವರ ಮೂಲಕ ವ್ಯವಹಾರ ನಡೆಸುವುದು, ಷೇರು ಪೇಟೆ ಸೂಚ್ಯಂಕಗಳನ್ನು (ನಿರಾಧಾರವಾಗಿ) ಕೃತಕವಾಗಿ ಏರಿಸುವಂತೆ ಮಾಡುವುದು, ಬ್ಯಾಂಕ್‍ಗಳಲ್ಲಿರುವ ಹಣವನ್ನು ದುರುಪಯೋಗ ಮಾಡಿಕೊಳ್ಳುವುದೇ ಮುಂತಾದ ಅಕ್ರಮಗಳ ಮೂಲಕ ಲಾಭ ಗಳಿಸಲು ಆರಂಭಿಸಿದ. ಅದರಲ್ಲಿ ದೊರೆತ ಆರಂಭಿಕ ಯಶಸ್ಸಿನ ನಂತರ, ಅಡ್ಡ ದಾರಿಗಳ ಆಕರ್ಷಣೆಗೆ ಒಳಗಾಗಿ ಇನ್ನೂ ಹೆಚ್ಚಿನ ಲಾಭ ಗಳಿಕೆಯ ದುರಾಸೆಗೆ ಬಲಿ ಬಿದ್ದು ದೊಡ್ಡ ಹಗರಣಕ್ಕೆ ನಾಂದಿಹಾಡಿ ಕೊನೆಗೆ ತಾನು ತೋಡಿದ ಗುಂಡಿಯಲ್ಲಿ ಬಿದ್ದು ಸ್ವತಃ ತಾನೇ ಬಲಿಯಾದ.
ಮಾರುಕಟ್ಟೆಯ ಪ್ರವೇಶ ಮಾಡಿದ ನಂತರ ಈ ಹರ್ಷದ್ ಮೆಹತಾ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಅರ್ಥಮಾಡಿಕೊಂಡು ಅದರ ದೌರ್ಬಲ್ಯಗಳನ್ನು ತನ್ನ ಅನುಕೂಲಕ್ಕಾಗಿ ಉಪಯೋಗಿಸಲು ಆರಂಭಿಸಿದ. ಸಾಮಾನ್ಯವಾಗಿ ಷೇರುಗಳ ಬೆಲೆ ಕಂಪೆನಿಯ ಆಂತರಿಕ ಆರ್ಥಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಆಂತರಿಕ ಆರ್ಥಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಲೆಕ್ಕದ ದಾಖಲೆಗಳ ಮೂಲಕ ತಿಳಿಯಲಾಗುತ್ತದೆ. ಸಾಮಾನ್ಯವಾಗಿ ದಾಖಲೆಗಳಲ್ಲಿ ನಮೂದಿಸಿರುವ ಬೆಲೆ, ಆಸ್ತಿ ಮತ್ತು ಸರಕುಗಳನ್ನು ಖರೀದಿಸಿದ ಸಮಯದ್ದಾಗಿರುವ ಕಾರಣ ಅವುಗಳ (ಪ್ರಸ್ತುತ ಮೌಲ್ಯ) ಈಗಿನ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುತ್ತದೆ. ಉದಾಹರಣೆಗೆ ಕಂಪೆನಿಯೊಂದು 50 ಎಕರೆ ವಿಸ್ತಾರವಾದ ಭೂಮಿಯಲ್ಲಿ ತನ್ನ ಮುಖ್ಯ ಕಛೇರಿ ಹೊಂದಿದೆ ಎಂದಿಟ್ಟುಕೊಳ್ಳೋಣ, ಆ 50 ಎಕರೆಯನ್ನು ಹತ್ತು ವರ್ಷದ ಹಿಂದೆ 5 ಕೋಟಿಗೆ ಖರೀದಿಸಿತ್ತು. ಈಗ ಅದರ ಮಾರುಕಟ್ಟೆ ದರ 50 ಕೋಟಿ ಇದ್ದರೂ, ಕಂಪೆನಿಯ ಲೆಕ್ಕದ ದಾಖಲೆಗಳಲ್ಲಿ ಅದು 5 ಕೋಟಿ ಎಂದೇ ಪರಿಗಣಿಸಲ್ಪಡುವುದು. ತನಗೆ ಹಿತಾಸಕ್ತಿ ಇರುವ ಕಡೆ ಈ ಮೆಹತಾ ಕಂಪೆನಿಯ ಷೇರಿನ ನಿಜ ಬೆಲೆ ದಾಖಲೆಯಲ್ಲಿ ಸೂಚಿಸಿದ್ದಕಿಂತ ಅಧಿಕವಿರುವ ಕಾರಣ ಸದ್ಯದಲ್ಲಿ ಅದರ ಬೆಲೆ ಗಗನಕ್ಕೆ ಏರುತ್ತೆ ಅಂತೆಲ್ಲಾ ಸಂಕಥನಗಳನ್ನು ಹುಟ್ಟು ಹಾಕಿ ಕಂಪೆನಿಯ ಷೇರುಗಳ ಬೆಲೆ ಏರುವ ಹಾಗೆ ಮಾಡುತ್ತಿದ್ದ. ಕಂಪೆನಿಯ ಷೇರುಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚು ಬೆಲೆಗೆ ಖರೀದಿ ಮಾಡಲು ಶುರು ಮಾಡುತ್ತಿದ್ದ. ಆಗ ಅಂತಹ ಷೇರುಗಳು ಬೇಡಿಕೆಗೆ ಹೋಲಿಸಿದರೆ ಸಣ್ಣ ಪ್ರಮಾಣದಲ್ಲಿ ಲಭ್ಯವಾಗುವ ಕಾರಣದಿಂದ ಬೆಲೆಯಲ್ಲಿ ಇನ್ನೂ ಏರಿಕೆಯಾಗ ತೊಡಗುತ್ತದೆ. ಕೆಲವೊಂದು ವೇಳೆ ತನ್ನದೇ ಆದ ರೀತಿಯಲ್ಲಿ ಕಂಪೆನಿಗಳ ಆಂತರಿಕ ವಲಯದಿಂದ ಮಾಹಿತಿ ಕಲೆಹಾಕಿ (ಕಂಪನಿಗಳಿಗೆ) ಲಾಭ ಗಳಿಕೆಯಲ್ಲಿ ಏರಿಕೆಯಾಗುವ ಸಂದರ್ಭದಲ್ಲಿ ಲಭ್ಯವಿರುವ ಷೇರುಗಳನ್ನು ತನ್ನ ಬೇನಾಮಿ ಸಹವರ್ತಿ ಖರೀದಿದಾರರ ಮೂಲಕವೂ ಖರೀದಿಸ ತೊಡಗಿದ. ಇದರೊಂದಿಗೆ ಬೇಡಿಕೆಯೇ ಇಲ್ಲದ ಕಂಪೆನಿಗಳೊಂದಿಗೆ (ಒಳ ಒಪ್ಪಂದ ಮಾಡಿಕೊಂಡು) ಅವುಗಳ ಷೇರುಗಳಿಗೆ ಕೃತಕ ಬೇಡಿಕೆ ಸೃಷ್ಟಿಮಾಡುವ ಕಾರ್ಯವನ್ನೂ ಮಾಡಲು ಆರಂಭಿಸಿದ.
ಉದಾಹರಣೆಗೆ, ಕಛೇರಿಗಳಲ್ಲಿ ಕೆಲವೊಂದು ಜನ ಏನೇನೂ ಕೆಲಸವಿಲ್ಲದಿದ್ದರೂ, ಅನಗತ್ಯವಾಗಿ ಆ ಕಡೆ ಈ ಕಡೆ ಓಡಾಡುತ್ತ, ನೋಡುವವರ ಕಣ್ಣಿಗೆ ಎಲ್ಲಾ ಉಸ್ತುವಾರಿ ನೋಡಿಕೊಳ್ಳುವವರ ಹಾಗೆ ವರ್ತಿಸುತ್ತಿರುತ್ತಾರೆ. ವಾಸ್ತವವಾಗಿ ಅಲ್ಲಿ ಅವರ ಅಗತ್ಯವೇ ಇರುವುದಿಲ್ಲ. ಆದರೆ ನೋಡುಗರ ಕಣ್ಣಿಗೆ ಇವನೊಬ್ಬ ಬಹಳ ಮುಖ್ಯ ವ್ಯಕ್ತಿ ಎನ್ನುವ ಅಭಿಪ್ರಾಯ ಮೂಡುವ ಹಾಗೆ ಈ ಚಾಲಾಕಿಗಳು ವರ್ತಿಸುತ್ತಾರೆ. ನಿಧಾನವಾಗಿ ಜನ ಇವರನ್ನು ತಮಗರಿವಿಲ್ಲದೆಯೇ ವ್ಯವಹಾರದಲ್ಲಿ ತೊಡಗಿಸಿ ಬಿಡುತ್ತಾರೆ. ಇದೇ ರೀತಿಯಲ್ಲಿ ಬೇಡಿಕೆಯೇ ಇಲ್ಲದ ಕಂಪೆನಿಯ ಷೇರುಗಳನ್ನು ʼಎʼ ಖರೀದಿಸುತ್ತಾನೆ. ʼಎʼ ಯಿಂದ ʼಬಿʼ ಖರೀದಿಸುತ್ತಾನೆ, ʼಬಿʼ ಯಿಂದ ʼಸಿʼ ಹೀಗೆ ಖೋ ಖೋ ಆಡುತ್ತಾ ಮತ್ತೆ ಮೊದಲಿದ್ದ ಕಡೆಗೆ ಬರುತ್ತದೆ. ಹೀಗೆ ಮಾರಾಟದಲ್ಲಿ ಸಕ್ರಿಯವಾಗುವ ಮೂಲಕ ಇಂತಹ ಷೇರುಗಳೂ ಹೂಡಿಕೆದಾರರ ಕಣ್ಣಿಗೆ ಬಿದ್ದು ಅನಾಯಾಸವಾಗಿ ಬೇಡಿಕೆ ಪಡೆದುಕೊಳ್ಳುತ್ತವೆ. ಇದಕ್ಕೆ ವರ್ತುಲಾಕಾರದ ವ್ಯಾಪಾರವೆನ್ನುತ್ತಾರೆ. ಇಂತಹ ಎಲ್ಲಾ ಚಮತ್ಕಾರಗಳನ್ನು ಕರತಲಾಮಲಕ ಮಾಡಿಕೊಂಡ ಹರ್ಷದ್ ಮೆಹತಾ ಕೋಟ್ಯಂತರ ರೂಪಾಯಿಗಳ ಲಾಭ ಮಾಡಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ತನ್ನ ವ್ಯವಹಾರಕ್ಕೆ ಅಗತ್ಯವಿರುವ ಹಣವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ದೇಶದ ಕೇಂದ್ರ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ತಿಜೋರಿಯಿಂದಲೂ ಉಪಯೋಗಿಸುವಷ್ಟರ ಮಟ್ಟಿಗೆ ಪಳಗಿ ಬಿಟ್ಟಿದ್ದ.
1990 ರ ದಶಕದಲ್ಲಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಯು ವೇಗ ಪಡೆದುಕೊಂಡಿದ್ದ ಸಮಯದಲ್ಲಿ ವ್ಯಾಪಾರ ವಹಿವಾಟುಗಳಿಗೂ ವೇಗ ಸಿಕ್ಕಿತು. ರಿಸರ್ವ್ ಬ್ಯಾಂಕಿನ ನಿರ್ದೇಶನದ ಅನ್ವಯ ಬ್ಯಾಂಕುಗಳು ತಮ್ಮ ಠೇವಣಿಯ ಶೇಕಡಾ 38ರಷ್ಟನ್ನು ನಗದೀಕರಣ ಸಾಧ್ಯವಿರುವ ಭದ್ರತಾ ಪತ್ರ, ಮತ್ತಿತರ ಆಸ್ತಿಯಲ್ಲಿ ಹೂಡಿಕೆ ಮಾಡಿಡಬೇಕಿತ್ತು. ಆ ಸಮಯದಲ್ಲಿ ವ್ಯವಹಾರಗಳು ವೇಗ ಪಡೆದುಕೊಂಡಿದ್ದ ಕಾರಣ ಖಾತೆದಾರರು ಹೆಚ್ಚು ಪ್ರಮಾಣದಲ್ಲಿ ನಗದು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಈ ಕಾರಣದಿಂದ ಬ್ಯಾಂಕುಗಳು ತಾವು ಸ್ವೀಕರಿಸಿದ ಠೇವಣಿಗಳನ್ನು ಕಡಿಮೆ ಬಡ್ಡಿ ಬರುವ ಟ್ರಜರಿ ಬಾಂಡ್, ಮತ್ತಿತರ ಮೂಲಗಳಲ್ಲಿ ಹೂಡಿಕೆ ಮಾಡುವ ಸಾಹಸಕ್ಕೆ ಹೋಗುವ ಬದಲು, ಹೆಚ್ಚು ಪ್ರತಿಫಲ ಬರುವ ಅನ್ಯ ಬ್ಯಾಂಕ್‍ಗಳಲ್ಲಿ ಹೂಡಿಕೆ ಮಾಡಲು ಉತ್ಸುಕತೆ ತೋರುತ್ತಿದ್ದುವು. ಹೀಗೆ ಮಾಡುವುದರಿಂದ ಅಗತ್ಯ ಬಿದ್ದಾಗ ಹೂಡಿಕೆಯನ್ನು ಸುಲಭವಾಗಿ ನಗದಾಗಿ ಪರಿವರ್ತಿಸಬಹುದಿತ್ತು. ಇತರ ಹೂಡಿಕೆಗಳಿಗೆ ಹೋಲಿಸಿದರೆ ಇದು ಬಹಳ ಸುಲಭ ಮತ್ತು ಸರಳವಾಗಿರುತ್ತಿತ್ತು. ಬ್ಯಾಂಕುಗಳು ಪರಸ್ಪರರಲ್ಲಿ ಅಂದರೆ ಬ್ಯಾಂಕ್ ʼಎʼ ಬ್ಯಾಂಕ್ ʼಬಿʼ ಯ ಹೂಡಿಕೆ ಪತ್ರಿಕೆಯಲ್ಲಿ ಹಣ ಹೂಡಿಕೆ ಮಾಡಿದರೆ, ಬ್ಯಾಂಕ್ ʼಬಿʼ ಬ್ಯಾಂಕ್ ʼಎʼ ಯ ಹೂಡಿಕೆ ಪತ್ರದಲ್ಲಿ ಹಣ ಹೂಡಿಕೆ ಮಾಡುತ್ತಿತ್ತು. ಬ್ಯಾಂಕ್ ಬ್ಯಾಂಕುಗಳ ಮಧ್ಯೆ ಈ ರೀತಿಯ ವ್ಯವಹಾರ ಕುದುರಿಸಲು ಮಧ್ಯವರ್ತಿಗಳು ಕೆಲಸ ಮಾಡುತ್ತಿದ್ದರು.
ಉದಾಹರಣೆಗೆ ಹರ್ಷದ್ ಮೆಹತಾರಂತಹ ದಲ್ಲಾಳಿಗಳು ಬ್ಯಾಂಕ್ ʼಎʼ ಹೂಡಿಕೆ ಮಾಡ ಬಯಸಿದಾಗ ಬ್ಯಾಂಕ್ ʼಬಿʼ ಯ ಹೆಸರಿಗೆ ಚೆಕ್ ನೀಡಿ ಬದಲಿಗೆ ಹೂಡಿಕೆ ಪತ್ರ ಪಡೆಯುತ್ತಿತ್ತು. ಇದೇ ರೀತಿ ಯಾವುದೇ ಬ್ಯಾಂಕುಗಳೂ ಕೂಡಾ ವ್ಯವಹರಿಸಬಹುದಿತ್ತು. ಹೀಗೆ ಬ್ಯಾಂಕ್ ʼಎʼ ಯಿಂದ ಚೆಕ್ ಪಡೆದು ಅದನ್ನು ಬ್ಯಾಂಕ್ ʼಬಿʼ ಗೆ ನೀಡಿ ಅಲ್ಲಿಂದ ಹೂಡಿಕೆ ಪತ್ರವನ್ನು ಬ್ಯಾಂಕ್ ʼಎʼ ಗೆ ತಲುಪಿಸುವುದು ದಲ್ಲಾಳಿ ಹರ್ಷದ್ ಮೆಹತಾನ ಕೆಲಸವಾಗಿತ್ತು. ಇಂತಹ ಕೆಲಸಕ್ಕೆ ಹರ್ಷದ್ ಮೆಹತಾನಿಗೆ ಕಮಿಷನ್ ನೀಡಲಾಗುತ್ತಿತ್ತು. ಇದು ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವಾದುದರಿಂದ ಇದರಿಂದ ದೊಡ್ಡ ಮೊತ್ತದ ಕಮಿಷನ್ ಸಿಗುತ್ತಿತ್ತು. ಈ ವ್ಯವಹಾರದಲ್ಲಿ ಮುಂದುವರಿದಂತೆಲ್ಲಾ ಹರ್ಷದ್ ಮೆಹತಾ, ಬ್ಯಾಂಕುಗಳ ವಿಶ್ವಾಸ ಗಳಿಸಿದ. ಬ್ಯಾಂಕುಗಳ ಹೆಸರಿಗೆ ನೀಡಿದ ಚೆಕ್ ನಗದಾಗಿ ಪರಿವರ್ತನೆಯಾಗಲು ಕೆಲವೊಂದು ಬಾರಿ ಕೊಂಚ ಸಮಯ ತಗಲುತ್ತಿತ್ತು. ಹೀಗೆ ವಿಳಂಬವಾದಾಗ ಬಡ್ಡಿ ನಷ್ಟವಾಗುತ್ತಿತ್ತು. ಇದನ್ನು ನಿವಾರಿಸಲು ಚೆಕ್ ತನ್ನ ಹೆಸರಿಗೇ ನೀಡಿ ತಾನು ಬ್ಯಾಂಕಿನ ಪರವಾಗಿ ತಕ್ಷಣ ಹಣ ಪಾವತಿಸಿ ತಕ್ಷಣ ಹೂಡಿಕೆ ಪತ್ರ ಒದಗಿಸಿ ನಷ್ಟದ ಪ್ರಮಾಣ ಕಡಿಮೆ ಮಾಡುವುದಾಗಿ ನಂಬಿಸಿದ ಈ ಹರ್ಷದ್ ಮೆಹತಾ. ಸಾಮಾನ್ಯ ನಿಯಮಗಳನ್ನು ಮೀರಿ ಬ್ಯಾಂಕುಗಳು ಹೂಡಿಕೆ ಪತ್ರ ಖರೀದಿಸುವ ಉದ್ದೇಶದಿಂದ ನೀಡುವ ಚೆಕ್ಕನ್ನು ಹಣ ಸ್ವೀಕರಿಸಬೇಕಾಗಿರುವ ಬ್ಯಾಂಕಿನ ಬದಲಾಗಿ ತನ್ನ ಹೆಸರಿನಲ್ಲಿ ಸ್ವೀಕರಿಸಿ ತನ್ನ ಖಾತೆಗೆ ಆತ ಜಮಾ ಮಾಡಿಸುತ್ತಿದ್ದ, ಆನಂತರ ತನ್ನ ಖಾತೆಯಿಂದ ಯಾವ ಬ್ಯಾಂಕಿಗೆ ನೀಡಬೇಕೋ ಆ ಬ್ಯಾಂಕಿಗೆ ಹಣ ಪಾವತಿ ಮಾಡುತ್ತಿದ್ದ. ಹೀಗೆ ಹಲವಾರು ಬ್ಯಾಂಕುಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುವ ಮೂಲಕ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದ್ದ ಈ ಮೆಹ್ತಾ ಇಡೀ ಪಾವತಿ ಹಣ ತನ್ನ ಖಾತೆಯ ಮೂಲಕ ಹರಿಯುವಂತೆ ಮಾಡಿದ. ಹಾಗೆ ತನ್ನ ಖಾತೆಯ ಮೂಲಕ ಹರಿದು ಹೋಗುವಾಗ ಕೆಲ ಸಮಯದ ವರೆಗೆ ಅದನ್ನು ತನ್ನ ವ್ಯವಹಾರಗಳಿಗೆ ಬಳಸಿ ಲಾಭ ಮಾಡಿಕೊಳ್ಳುತ್ತಿದ್ದ. ತನ್ನ ಖಾತೆಗೆ ಬಂದ ಹಣವನ್ನು ಷೇರು ಖರೀದಿಗೆ ವಿನಿಯೋಗಿಸಿ, ಹೀಗೆ ಖರೀದಿಸಿದ ಷೇರುಗಳನ್ನು ಲಾಭಕ್ಕೆ ಮಾರಾಟ ಮಾಡಿ ಬಂದ ಹಣದಿಂದ ಬಾಕಿ ಚುಕ್ತಾ ಮಾಡುತ್ತಿದ್ದ.
ಇದೆಲ್ಲವನ್ನೂ ಬ್ಯಾಂಕ್ ಅಧಿಕಾರಿಗಳ ಅರಿವಿಗೆ ಬಾರದೇ ನಡೆಸಲು ಸಾಧ್ಯವಿರಲಿಲ್ಲ. ಮೆಹತಾ ತಾನು ಗಳಿಸಿದ ಲಾಭದಲ್ಲಿ ಆಯ ಕಟ್ಟಿನ ಜಾಗದ ಅಧಿಕಾರಿಗಳಿಗೂ ಪಾಲು ನೀಡಿ ವ್ಯವಹಾರ ನಡೆಸಿರುವ ಸಂಗತಿ ನಂತರ ನಡೆದ ತನಿಖೆಯಿಂದ ತಿಳಿದು ಬಂದಿತು. ವಿಶೇಷವಾಗಿ ಭಾರತೀಯ ಸ್ಟೇಟ್ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ನಡುವೆ ಈ ಹಲವಾರು ರೀತಿಯ ಅಕ್ರಮ ನಡೆಸಿರುವುದು ತದನಂತರ ಬೆಳಕಿಗೆ ಬಂದಿತು. ಇನ್ನು ಹಲವಾರು ಸಂದರ್ಭಗಳಲ್ಲಿ ಠೇವಣಿ ಯಾ ಹೂಡಿಕೆಗೆ ಬದಲಾಗಿ ಬ್ಯಾಂಕುಗಳು ನೀಡುವ ಬ್ಯಾಂಕ್ ರಿಸೀಟ್ಗಳನ್ನು ಹಣ ನೀಡದೆ ಅಕ್ರಮವಾಗಿ ಪಡೆದು ಅದನ್ನು ಬೇರೆ ಬ್ಯಾಂಕ್‍ಗಳಲ್ಲಿ ಭದ್ರತೆಯಾಗಿ ನೀಡಿ ಮುಂಗಡ ಹಣ ಪಡೆದು ವ್ಯವಹಾರ ಮಾಡಲಾಗಿತ್ತು. ಕೇವಲ ಒಂದು ಕೋಟಿಯ ಷೇರು ಬಂಡವಾಳವಿರುವ ಬ್ಯಾಂಕ್ ಆಫ್ ಕರಾಡ್, ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ ಬ್ಯಾಂಕ್ ರಿಸೀಟ್ಗಳನ್ನು ನೀಡಿತ್ತು. ಅದೇ ರೀತಿ ಮೆಟ್ರೋ ಪೊಲಿಟನ್ ಬ್ಯಾಂಕ್ ಕೂಡಾ ಬಿ.ಆರ್. (ಬ್ಯಾಂಕ್ ರಿಸೀಟ್) ಗಳನ್ನು ನೀಡಿತ್ತು. ಇವುಗಳ ಆಧಾರದ ಮೇಲೆ ನಗದೀಕರಿಸಿದ ಕೋಟ್ಯಂತರ ರೂಪಾಯಿಗಳನ್ನು ಷೇರು ಪೇಟೆಯಲ್ಲಿ ಹೂಡಿಕೆ ಮಾಡಿ ಕೃತಕವಾಗಿ ಬೆಲೆ ಏರಿಸಲು ಉಪಯೋಗಿಸಲಾಗಿತ್ತು. ಉದಾಹರಣೆಗೆ ಇನ್ನೂರರ ಆಸುಪಾಸಿನಲ್ಲಿದ್ದ ಎ.ಸಿ.ಸಿ.ಕಂಪೆನಿಯ ಷೇರುಗಳ ಬೆಲೆಯನ್ನು ರೂಪಾಯಿ ಹತ್ತು ಸಾವಿರದ ವರೆಗೆ ಏರಿಸುವಲ್ಲಿ ಮೆಹತಾನ ಕೈವಾಡವಿತ್ತು.
ಈ ಮೊದಲು ತಿಳಿಸಿದಂತೆ, ಎ.ಸಿ.ಸಿ.ಕಂಪೆನಿಯ ಆಸ್ತಿಯ ಮಾರುಕಟ್ಟೆ ದರ ಹಲವು ಪಾಲು ಹೆಚ್ಚಿದ್ದು, ಅದರ ನಿಜವಾದ ಮೌಲ್ಯ ಅಧಿಕವಿದೆ ಎನ್ನುವ ಕಥೆಕಟ್ಟಿ ಹೂಡಿಕೆದಾರರನ್ನು ನಂಬಿಸಿ ಷೇರು ಪೇಟೆಯಲ್ಲಿ ವಹಿವಾಟು ಅಧಿಕವಾಗಿಸಲಾಗಿತ್ತು. ಇಂತಹ ಹಕೀಕತ್ತುಗಳ ಪ್ರಭಾವದಿಂದ 2500 ರ ಆಸುಪಾಸಿನಲ್ಲಿದ್ದ ಮುಂಬೈ ಷೇರು ಸೂಚ್ಯಂಕ ಅಲ್ಪಾವಧಿಯಲ್ಲಿಯೇ 4500 ಕ್ಕೆ ಏರಿಕೆಯಾಯಿತು. ಈ ರೀತಿಯಲ್ಲಿ ಕೃತಕವಾದ ಕ್ರಮಗಳಿಂದ ಏರಿಕೆಯಾಗಿದ್ದ ಷೇರುಗಳ ಬೆಲೆ ಮತ್ತು ಸೂಚ್ಯಂಕದ ಕಾರಣದಿಂದ ಬಂಡವಾಳ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಉಂಟಾಯಿತು. ಈ ನಡುವೆ ಆರ್ಥಿಕ ವಿಷಯಗಳ ಕುರಿತು ವರದಿ ಮಾಡುತ್ತಿದ್ದ ಟೈಮ್ಸ್ ಆಫ್ ಇಂಡಿಯಾದ ಶ್ರೀಮತಿ ಸುಚೇತಾ ದಲಾಲ್ ಅವರು ಕೆಲವು ಖಚಿತ ಸುಳಿವಿನ ಆಧಾರದಲ್ಲಿ ತನಿಖೆ ನಡೆಸಿ, ಅದರ ಆಧಾರದ ಮೇಲೆ ಭಾರತೀಯ ಸ್ಟೇಟ್‍ಬ್ಯಾಂಕಿನಿಂದ ಸುಮಾರು 600 ಕೋಟಿ ರೂಪಾಯಿಗಳು ಸೋರಿಕೆಯಾಗಿ ಷೇರುಪೇಟೆಗೆ ಬಂದಿರುವ ಕುರಿತು ವರದಿ ಮಾಡಿದರು. ಟೈಮ್ಸ್ ಆಫ್ ಇಂಡಿಯಾದ ಈ ವರದಿ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟುಮಾಡಿತು. ಪರಿಣಾಮವಾಗಿ ಷೇರುಪೇಟೆ ಸೂಚ್ಯಂಕ 4500ರಿಂದ 2500ಕ್ಕೆ ಕುಸಿಯಿತು. ಷೇರು ವ್ಯವಹಾರಗಳ ಕುರಿತಂತೆ ಪಾವತಿ ಸಮಸ್ಯೆಯೂ ಜಟಿಲವಾಗಿ ಇಡೀ ಷೇರು ಪೇಟೆಯನ್ನು 1992 ರ ನವಂಬರ್ ತಿಂಗಳಲ್ಲಿ ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಗಿ ಬಂತು. ಈ ಕುರಿತು ಪಾರ್ಲಿಮೆಂಟಿನಲ್ಲೂ ಚರ್ಚೆಗಳಾಗಿ ಕೇಂದ್ರ ಸರಕಾರ ಕೇಂದ್ರ ತನಿಖಾ ಆಯೋಗದ ಮೂಲಕ ತನಿಖೆ ಆರಂಭಿಸಿತು. ಜನಪ್ರಿಯತೆಯ ಉತ್ತುಂಗದಲ್ಲಿದ್ದ ಹರ್ಷದ್ ಮೆಹತಾನ ಮೇಲೆ 72 ಕೇಸು ಜಡಿದು ಬಂಧಿಸಿ ಜೈಲಿಗೆ ಕಳಿಸಲಾಯಿತು.
ಹರ್ಷದ್ ಮೆಹತಾ ಎಂತಹ ಚಾಲಾಕಿ ಎಂದರೆ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಪಿ.ವಿ ನರಸಿಂಹರಾಯರಿಗೇ ಲಂಚ ನೀಡಿ ಕೇಸ್ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಎನ್ನುವ ಮಾತುಗಳೂ ಕೇಳಿ ಬಂತು. ಸಾವಿರಾರು ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ರಿಸೀಟ್‌ಗಳು ಬರೀ ಕಾಗದದ ಚೂರುಗಳೆಂದು ಸಾಬೀತಾಯಿತು. ನ್ಯಾಶನಲ್ ಹೌಸಿಂಗ್ ಬ್ಯಾಂಕಿನ ಅಧ್ಯಕ್ಷ ಫೇರ್ವಾನಿಯವರು ಅಧಿಕಾರ ಕಳೆದುಕೊಂಡು, ಮೇ 21 1992 ರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡರು. ಕರಾಡ್ ಬ್ಯಾಂಕಿನ ಅಧ್ಯಕ್ಷ ಭೂಪೇನ್ ದಲಾಲ್ ಅಧಿಕಾರದಿಂದ ಕೆಳಗಿಳಿದು ಕಾನೂನು ಕ್ರಮ ಎದುರಿಸ ಬೇಕಾಯಿತು. ಮಧುರಾ ಬ್ಯಾಂಕಿನ ಮುಖ್ಯಸ್ಥ ಶ್ರೀ ಎಸ್ ಪಿ. ಸಭಾಪತಿಯವರನ್ನು ಅಮಾನತು ಮಾಡಲಾಯಿತು. ಬ್ಯಾಂಕ್ ಆಫ್ ಸೌರಾಷ್ಟ್ರ ಕೂಡಾ ತೀವ್ರ ಒತ್ತಡಕ್ಕೆ ಒಳಗಾಯಿತು. ಕ್ಯಾನ್ ಬ್ಯಾಂಕ್ ಮ್ಯೂಚುವಲ್ ಫಂಡ್, ಕ್ಯಾನ್ ಬ್ಯಾಂಕ್ ಫೈನಾನ್ಸಿಯಲ್ ಸರ್ವಿಸಸ್ ಹಿರಿಯ ಅಧಿಕಾರಿಗಳ ತಲೆದಂಡವಾಯಿತು. ವಿತ್ತ ಸಚಿವ ಶ್ರೀ ಪಿ. ಚಿದಂಬರಂ ಅವರ ಮಡದಿ ಹರ್ಷದ್ ಮೆಹತಾನ ಕಂಪೆನಿಯಲ್ಲಿ ಷೇರುಗಳನ್ನು ಹೊಂದಿರುವ ಕಾರಣ ರಾಜೀನಾಮೆ ನೀಡಬೇಕಾಯಿತು. ಮುಂದೆ ಕೇಂದ್ರ ಸರಕಾರ ಜಾನಕೀರಾಮನ್ ಸಮಿತಿಯ ಮೂಲಕ ಹಗರಣದ ಸಮಗ್ರ ತನಿಖೆ ಮಾಡಿಸಿತು. ಇಡೀ ಹಗರಣದಿಂದಾಗಿ ಸಾಮಾನ್ಯ ಹೂಡಿಕೆದಾರರಿಗೆ ಆದ ನಷ್ಟದ ಪ್ರಮಾಣವೂ ಸಾಕಷ್ಟು ದೊಡ್ಡದೇ ಆಗಿತ್ತು.
ಮುಂದೆ 2001 ರಲ್ಲಿ ಹರ್ಷದ್ ಮೆಹತಾ ಹೃದಯಾಘಾತದಿಂದ ನಿಧನ ಹೊಂದಿದನು. ಈ ಆರ್ಥಿಕ ಹಗರಣ ಬಂಡವಾಳ ಮಾರುಕಟ್ಟೆಯ ಹುಳುಕುಗಳನ್ನು ಎತ್ತಿ ತೀರಿಸಿ ಹಲವು ಸುಧಾರಣೆಗಳಿಗೆ ಕಾರಣವಾಯಿತು. ಇದರಿಂದ ಕಲಿತ ಪಾಠವೇನೋ ಒಳ್ಳೆಯದೇ ಆದರೆ ಅದಕ್ಕೆ ದೇಶದ ಜನ ತೆತ್ತ ಬೆಲೆ ಮಾತ್ರ ಬಹಳ ದುಬಾರಿ.
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ನ್ಯಾಯಾಂಗ ಮತ್ತು ಸರಕಾರ: ಪ್ರತ್ಯೇಕತೆಯ ಗೋಡೆ ಕುಸಿಯದಿರಲಿ