ಮಹಿಳಾ ದಿನ | ಬಾಧಿತ ಮಹಿಳೆಯರತ್ತ ಕಣ್ಣೆತ್ತಿ ನೋಡೋಣ

Most read

ಅರಿವು ಮೂಡಬೇಕಿರುವುದು ಕೇವಲ ತಳಸಮಾಜದಲ್ಲಿ ಅಲ್ಲ. ಆಧುನಿಕತೆಗೆ ತೆರೆದುಕೊಂಡಿರುವ, ನಗರೀಕರಣಕ್ಕೊಳಗಾಗಿರುವ ಹಾಗೂ ತಂತ್ರಜ್ಞಾನಾಧಾರಿತ ಸಂವಹನ ಕ್ಷೇತ್ರವನ್ನು ಪ್ರಭಾವಿಸುವ ಒಂದು ಹಿತವಲಯದ ಸಮಾಜದ ನಡುವೆ ಲಿಂಗ ಸೂಕ್ಷ್ಮತೆ ಮತ್ತು ಸಂವೇದನೆಯ ಅರಿವು ಮೂಡಬೇಕಿದೆ. ಏಕೆಂದರೆ ಈ ವರ್ಗವೇ ಸಮಾಜಕ್ಕೆ ಅಗತ್ಯವಾದ ಬೌದ್ಧಿಕ ಚಿಂತನೆಗಳನ್ನೂ ಪರಿಣಾಮಕಾರಿಯಾಗಿ ಒದಗಿಸುತ್ತದೆ ನಾ. ದಿವಾಕರ, ಚಿಂತಕರು.

ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೇಶ ಆಚರಿಸುತ್ತಿದೆ. ನಿಷ್ಠುರವಾಗಿ ಹೇಳುವುದಾದರೆ ದೇಶದ ಮಹಿಳೆಯರು ಈ ದಿನವನ್ನು ತಮ್ಮ ಘನತೆ, ಗೌರವ, ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸಮಾನತೆಯ ಹಕ್ಕುಗಳಿಗೆ ಆಗ್ರಹಿಸುವ ಒಂದು ಜನಾಗ್ರಹ ದಿನದಂತೆ ಆಚರಿಸುತ್ತಿದ್ದಾರೆ. ಗಂಡಾಳ್ವಿಕೆಯ ಸಾಂಸ್ಥಿಕ ಪರಿಸರದಲ್ಲಿ ಮೇಲ್ಪದರ ಸಮಾಜದ ಸಾಧಕಿಯರನ್ನು ಗುರುತಿಸುವ ಅಲಂಕಾರಿಕ ಪ್ರಯತ್ನಗಳಿಂದ ಹೊರತಾದ ಒಳನೋಟಗಳನ್ನು ಗುರುತಿಸಲು ಸಾಧ್ಯವೇ ಇಲ್ಲದಂತಾಗಿದೆ. ಮಹಿಳಾ ದಿನಾಚರಣೆ ಔಪಚಾರಿಕವಾಗಿ ಸ್ತ್ರೀ ಸಂವೇದನೆ, ಹೆಣ್ತನದ ಘನತೆ ಮತ್ತು ಲಿಂಗ ಸೂಕ್ಷ್ಮತೆಯ ಸಾಮಾಜಿಕ-ಸಾಂಸ್ಕೃತಿಕ ಆಯಾಮಗಳನ್ನು ನಿಷ್ಕರ್ಷೆಗೊಳಪಡಿಸುವ ಒಂದು ಸಂದರ್ಭವಾಗಿ ಆಚರಿಸಲಾಗುವುದಾದರೂ, ಮೂಲತಃ ಪುರುಷ ಸಮಾಜ ಅಥವಾ ಪಿತೃಪ್ರಧಾನತೆಯನ್ನೇ ಹೊದ್ದು ಮಲಗಿರುವ ಗಂಡಾಳ್ವಿಕೆಯ ಸಾಂಸ್ಥಿಕ-ಸಾಂಘಿಕ ಕೇಂದ್ರಗಳು ಈ ದಿನದಂದು ಮೈಗೊಡವಿ ಎದ್ದು ಕೂರಬೇಕಿದೆ.

ಸೂಕ್ಷ್ಮತೆ ಮತ್ತು ಸಂವೇದನೆ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಪರಿಭಾಷೆಗಳಲ್ಲಿ ಇಲ್ಲದಿರುವುದರಿಂಲೇ ಸಾಂವಿಧಾನಿಕ ನೆಲೆಯಲ್ಲಿ ಸರ್ಕಾರಗಳು ಬಳಸುವ ಮತ್ತು ಅನುಸರಿಸಲು ಬಯಸುವ ʼ ಸಬಲೀಕರಣ ʼ ಮತ್ತು ʼ ಸಮಾನತೆ ʼ ಎಂಬ ಪದಗಳೂ ಸಹ ಲಿಂಗ ಸೂಕ್ಷ್ಮತೆಯಿಂದ ವಂಚಿತವಾಗುತ್ತಿವೆ. ಡಾ. ಅಂಬೇಡ್ಕರ್‌ ಸಂವಿಧಾನ ರಚನೆಯ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಿಸಿದಂತೆ ಆರ್ಥಿಕ-ಸಾಮಾಜಿಕ ನೆಲೆಯಲ್ಲಿ ಕಾಣದ ಸಮಾನತೆ ರಾಜಕೀಯ ನೆಲೆಯಲ್ಲಿ ಸಾಕಾರಗೊಂಡರೂ ಅರ್ಥಹೀನವಾಗುತ್ತದೆ. ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಈ ಪ್ರಮೇಯವನ್ನು ಮಹಿಳಾ ಸಮೂಹಕ್ಕೆ ಅನ್ವಯಿಸಿ ನೋಡಿದಾಗ, ಏಳು ದಶಕಗಳ ಸ್ವತಂತ್ರ ಆಳ್ವಿಕೆಯ ನಂತರವೂ ಈ ಎರಡೂ ಪದಗಳು ವಾಸ್ತವಿಕ ನೆಲೆಯಲ್ಲಿ ಸಮಷ್ಟಿ ರೂಪವನ್ನು ಪಡೆದುಕೊಳ್ಳದಿರುವುದು ಗೋಚರಿಸುತ್ತದೆ. ಈ ದೃಷ್ಟಿಯಿಂದಲೇ ಆಳ್ವಿಕೆಯ ನೆಲೆಯಲ್ಲಿ ಬಳಸಲಾಗುತ್ತಿರುವ ʼಮಹಿಳಾ ಸಬಲೀಕರಣ ಮತ್ತು ಸಮಾನತೆʼಯ ಪರಿಕಲ್ಪನೆಯನ್ನು ಮರುನಿರ್ವಚಿಸುವುದು ಅತ್ಯವಶ್ಯವಾಗಿದೆ.

ಮಹಿಳೆಯನ್ನು ಸಂಸ್ಕೃತಿಯ ಸಂರಕ್ಷಕಳಾಗಿ, ಕೌಟುಂಬಿಕ ಬದುಕಿನ ಪಾಲಕಳಾಗಿ, ಮನುಜ ಸಂಬಂಧಗಳ ನಿರ್ವಾಹಕಳಾಗಿ ಮಾತ್ರವೇ ಕಾಣುವ ಸಾಂಪ್ರದಾಯಿಕ ಸಮಾಜವೊಂದರ ದೃಷ್ಟಿಯಲ್ಲಿ ಮಾರ್ಚ್‌ 8 ಮಹಿಳೆಯರ ಔದಾತ್ಯ ಸಾಮಾಜಿಕ ಪ್ರಸ್ತುತತೆಯನ್ನು ಸ್ಮರಿಸುವ ಅಥವಾ ಆಚರಿಸುವ ದಿನವಾಗಿ ಕಾಣುತ್ತದೆ. ನಾಲ್ಕು ಗೋಡೆಗಳ ನಡುವೆ ದಿನನಿತ್ಯವೂ ಮಹಿಳೆ ನಿರ್ವಹಿಸುವ ಸಾಂಸಾರಿಕ ಚಟುವಟಿಕೆಗಳನ್ನು ಸಾಮೂಹಿಕವಾಗಿ ಆಚರಿಸುವ ಒಂದು ಪರಂಪರೆಯನ್ನು ಇದೇ ಸಾಂಪ್ರದಾಯಿಕ ಸಮಾಜ ಹುಟ್ಟುಹಾಕಿದೆ. ಇದು ಪುರುಷಾಧಿಪತ್ಯದ ಸಂಕೋಲೆಗಳಿಂದ ಬಂಧಿಸಲ್ಪಟ್ಟಿರುವ ಮಹಿಳಾ ಸಂಕುಲಕ್ಕೆ ಸಾಮಾಜೀಕರಣದ (Socialisation) ಒಂದು ಪ್ರಯತ್ನವಾಗಿ ಅಪ್ಯಾಯಮಾನವಾಗಿ ಕಾಣುತ್ತದೆ. ಇದರ ಅವಶ್ಯಕತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಇದೇ ಸಾಂಪ್ರದಾಯಿಕ ಸಮಾಜವು ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಒಂದು ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಈ ಸಾಮಾಜೀಕರಣ ಪ್ರಕ್ರಿಯೆ, ಪುರುಷಾಧಿಪತ್ಯದ ಬೇರುಗಳನ್ನು ಕಿಂಚಿತ್ತೂ ಅಲುಗಾಡಿಸುವುದಿಲ್ಲ ಎನ್ನುವುದು ಕಟು ವಾಸ್ತವ. ಕಲಿತ-ಉದ್ಯೋಗಸ್ಥ ಮಹಿಳೆಯೂ ಸಹ ಸಾಂಸಾರಿಕ ಚೌಕಟ್ಟುಗಳಲ್ಲಿ ಪರಾವಲಂಬಿಯಾಗಿಯೇ ಇರಬೇಕೆಂಬ ಗಂಡಾಳ್ವಿಕೆಯ ಕಟ್ಟಳೆಗಳು ಎಲ್ಲ ವಯೋಮಾನದ ಮಹಿಳೆಯರನ್ನೂ ಬಂಧಿಸುವುದನ್ನು ಇಂದಿಗೂ ಈ ಸಮಾಜಗಳಲ್ಲಿ ಕಾಣಬಹುದು. ಈ ಗಡಿರೇಖೆಗಳನ್ನು ಭೇದಿಸಿ, ಸೀಮೋಲ್ಲಂಘನ ಮಾಡುವ ಮೂಲಕ ವ್ಯವಸ್ಥೆಯನ್ನು ಧಿಕ್ಕರಿಸಿರುವ ಮಹಿಳೆಯರ ನಡುವೆಯೇ, ಅಕ್ಷರ ಜ್ಞಾನ ಇದ್ದಾಗ್ಯೂ ತಮ್ಮ ಸಂಕೋಲೆಗಳಿಂದ ವಿಮೋಚನೆ ಪಡೆಯಲಾಗದವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುವುದು ವಾಸ್ತವ.

ಇಲ್ಲಿ ಮಹಿಳಾ ಸಂಕುಲದ ಸಬಲೀಕರಣ ಮತ್ತು ಸಮಾನತೆ ಎರಡೂ ವಿದ್ಯಮಾನಗಳು ಅಂತರ್‌ ಸಂಬಂಧ ಹೊಂದಿರುವುದನ್ನೂ ಗುರುತಿಸಬೇಕಿದೆ. ಆರ್ಥಿಕವಾಗಿ ಸಬಲೀಕರಣಗೊಂಡ ಮಹಿಳಾ ಸಮೂಹ ಮೇಲ್ನೋಟಕ್ಕೆ ಸಮಾಜದ ವಿವಿಧ ಸ್ತರಗಳಲ್ಲಿ ಸಮಾನತೆ ಪಡೆದಿರುವುದಾಗಿ ಕಂಡರೂ, ಆಂತರಿಕವಾಗಿ ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯು ಇಂದಿಗೂ ಕಾಪಾಡಿಕೊಂಡು ಬಂದಿರುವ ಸ್ತರೀಯ ತಾರತಮ್ಯಗಳು (Graded discriminations) ಸಾಮಾಜಿಕ ನೆಲೆಯಲ್ಲಿ ತಳಸಮುದಾಯದ ಮಹಿಳಾ ಸಂಕುಲವನ್ನು ಕಾಡುತ್ತಿರುವುದು ಗೋಚರಿಸುತ್ತದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಸಬಲೀಕರಣಕ್ಕೆ ಸಮಾನಾಂತರವಾಗಿ ಮಹಿಳಾ ದೌರ್ಜನ್ಯಗಳೂ ಹೆಚ್ಚಾಗುತ್ತಿವೆ.

ಆರ್ಥಿಕತೆಯಿಂದ ಹೊರತಾಗಿ ನೋಡಿದಾಗ, ಸಾಮಾಜಿಕವಾಗಿ ಮತ್ತು ಒಂದು ಹಂತಕ್ಕೆ ಆರ್ಥಿಕವಾಗಿ ಸಮಾನ ಸ್ತರದಲ್ಲಿ ಕಾಣುವ ಮಹಿಳೆ, ಸಾಂಸ್ಕೃತಿಕವಾಗಿ ಸದಾ ನೇಪಥ್ಯದಲ್ಲೇ ಇರುವುದನ್ನು ಗುರುತಿಸಬೇಕಿದೆ. ಸಮಾನತೆ ಎನ್ನುವುದನ್ನು ಸಾಮಾಜಿಕ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಿದಾಗ, ಭಾರತೀಯ ಸಮಾಜದ ಸಾಂಸ್ಥಿಕ ನೆಲೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನೂ ಗಮನಿಸಬೇಕಾಗುತ್ತದೆ. ಆಂತರಿಕ ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದ ಅಥವಾ ಆ ಉದಾತ್ತ ಕಲ್ಪನೆಗೆ ಪ್ರಾಶಸ್ತ್ಯವನ್ನೇ ನೀಡದ ರಾಜಕೀಯ ಪಕ್ಷಗಳು ತಮ್ಮೊಳಗಿನ ಶ್ರೇಣೀಕರಣದಲ್ಲಿ ಮಹಿಳಾ ಸಮೂಹಕ್ಕೆ ಸೂಕ್ತ ಸ್ಥಾನಮಾನವನ್ನು ಕಲ್ಪಿಸುವ ಆಲೋಚನೆ ಮಾಡುವುದು ವರ್ತಮಾನದ ತುರ್ತು.

ಆದರೆ ಎಡಪಕ್ಷಗಳನ್ನೂ ಒಳಗೊಂಡಂತೆ ಯಾವ ಪಕ್ಷದಲ್ಲೂ ಈ ಔದಾತ್ಯವನ್ನು ಕಾಣಲಾಗುತ್ತಿಲ್ಲ. ಹಾಗಾಗಿಯೇ ಆಡಳಿತಾತ್ಮಕ ನೆಲೆಯಲ್ಲಿ ಅನುಸರಿಸಲಾಗುವ ಕಾಯ್ದೆ, ಕಾನೂನು, ನಿಯಮ ಮತ್ತು ನೀತಿಗಳು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಮಹಿಳಾ ಸುರಕ್ಷತೆಯನ್ನು ಸಾಕಾರಗೊಳಿಸಲಾಗುತ್ತಿಲ್ಲ. ಸಮಾನತೆಗಾಗಿ ಹೋರಾಡುತ್ತಿರುವ ಮಹಿಳಾ ಚಳುವಳಿಗಳಲ್ಲಿ ಸಮಾನ ಹಕ್ಕುಗಳಷ್ಟೇ ಅಲ್ಲದೆ ಸಮಾನ ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನಗಳೂ ಒಂದು ಪ್ರಧಾನ ಕಾರ್ಯಸೂಚಿಯಾಗಬೇಕಿದೆ. ಈ ನೆಲೆಯಲ್ಲಿ ನಿಂತು ನೋಡುವಾಗ ನಮ್ಮ ಸಮಾಜ ಮತ್ತು ಆಡಳಿತ ವ್ಯವಸ್ಥೆಯು ರೂಪಿಸಿರುವ ಸಬಲೀಕರಣ ಮತ್ತು ಸಮಾನತೆ ಎರಡೂ ಉದಾತ್ತ ಕಲ್ಪನೆಗಳು, ತಳಸಮಾಜದ ಬಹುಸಂಖ್ಯಾತ ಮಹಿಳೆಯರ ದೃಷ್ಟಿಯಲ್ಲಿ ಮಿಥ್ಯೆಯಂತೆ ಕಾಣುತ್ತದೆ.

ಹಾಗಾಗಿಯೇ ಮಹಿಳಾ ದೌರ್ಜನ್ಯಗಳು ಸಾಮಾಜಿಕವಾಗಿ ಸ್ತರೀಯ ಸೀಮೆಗಳನ್ನಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ-ಧಾರ್ಮಿಕವಾಗಿ ತಾತ್ವಿಕ ಗಡಿರೇಖೆಗಳನ್ನೂ ದಾಟಿ ಹೋಗಿವೆ. ಆಡಳಿತ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾಗಿ ʼಮಹಿಳಾ ಸಬಲೀಕರಣʼದ ಪ್ರಯತ್ನಗಳು ನಡೆಯುತ್ತಲೇ ಇದ್ದರೂ, ಸಬಲೀಕರಣವನ್ನು ಕೇವಲ ಆರ್ಥಿಕ ಸ್ಥಾನಮಾನ, ಸಾಮಾಜಿಕ ಗುರುತು ಮತ್ತು ಆಧ್ಯಾತ್ಮಿಕ ಪ್ರಾತಿನಿಧ್ಯಗಳಿಗೆ ಸೀಮಿತಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಾಂಸ್ಥಿಕ ಮತ್ತು ಸಾಂಘಿಕ ಪ್ರಾತಿನಿಧ್ಯ ಮತ್ತು ನಿಗದಿತ ಪಾತ್ರ ನಿರ್ವಹಣೆಗೂ, ಲಿಂಗ ಸೂಕ್ಷ್ಮತೆಯ ನೆಲೆಯಲ್ಲಿ ಕಾಣಬಹುದಾದ ಹೆಣ್ತನದ ಸಮಾನತೆಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸಬೇಕಿದೆ. ಮಾನಸಿಕ ಹಿಂಸೆ, ಅಪಮಾನ, ಕೀಳರಿಮೆ ಹಲ್ಲೆ, ಕಿರುಕುಳ, ದೌರ್ಜನ್ಯಕ್ಕೊಳಗಾಗುವ ಮಹಿಳೆಯನ್ನು ಸಬಲೀಕರಣದ ಪರಿಪೂರ್ಣ ಫಲಾನುಭವಿ ಎಂದು ಪರಿಗಣಿಸಲಾಗುವುದಿಲ್ಲ.

ಈ ಅಂತರವನ್ನು ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ವಲಯಗಳಲ್ಲೂ ಇಂದಿಗೂ ಗುರುತಿಸಬಹುದಾಗಿದೆ. ಇದನ್ನೂ ಮೀರಿ ಗಮನಿಸಬೇಕಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ʼಸೂಟ್‌ ಕೇಸ್‌ʼ ಸಂಸ್ಕೃತಿ. ರಾಜಕೀಯವಾಗಿ, ಆಡಳಿತ ಕೇಂದ್ರಗಳಲ್ಲಿ ಅಕ್ರಮ ವ್ಯವಹಾರಗಳ ಚೌಕಟ್ಟಿನೊಳಗೆ ಕಾಣಲಾಗುತ್ತಿದ್ದ ʼ ಸೂಟ್‌ಕೇಸ್‌ ʼ ಈಗ ಅತ್ಯಾಚಾರ-ಹತ್ಯೆಗೊಳಗಾದ ಅಸಹಾಯಕ ಮಹಿಳೆಯರ ಶವಗಳನ್ನು ಹೊರುವ ಒಂದು ಸಾಧನವಾಗಿ ಪರಿಣಮಿಸಿದೆ. ಬಾಧಿತ ಮಹಿಳೆಯ ದೇಹವನ್ನು ಕತ್ತರಿಸಿ ಹುಗಿದಿಡುವ ಒಂದು ಕ್ರೂರ ಪ್ರವೃತ್ತಿಯನ್ನು ಗಂಡು ಸಮಾಜ ರೂಢಿಸಿಕೊಳ್ಳುತ್ತಿದೆ. ದೆಹಲಿಯ ಶ್ರದ್ಧಾವಾಲ್ಕರ್‌ ಅವರಿಂದ ಹಿಮಾನಿ ವಾರ್ಕರ್ ಎಂಬ ಕಾಂಗ್ರೆಸ್‌ ಕಾರ್ಯಕರ್ತೆಯವರೆಗೂ ವಿಸ್ತರಿಸುವ ಈ ದೌರ್ಜನ್ಯದ ಹಿಂದಿರುವ ಬೌದ್ಧಿಕ ಮನಸ್ಥಿತಿಯನ್ನು ಭೇದಿಸಬೇಕಿದೆ.

ಮನುವಾದ, ಸನಾತನವಾದ ಎಂಬ ಕ್ಲೀಷೆಗಳಿಂದ ಹೊರಬಂದು ನೋಡಿದಾಗ, ಡಿಜಿಟಲ್‌ ಯುಗದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಸಾಧನಗಳ ನಡುವೆಯೂ ಸುಶಿಕ್ಷಿತ ಸಮಾಜ ಮಹಿಳೆಯನ್ನು ನೋಡುವ ದೃಷ್ಟಿಕೋನ ತನ್ನ ಪ್ರಾಚೀನತೆಯ ಪೊರೆಯನ್ನು ಕಳಚಿಕೊಂಡಿಲ್ಲ ಎನ್ನುವ ಕಟು ವಾಸ್ತವ ನಮ್ಮನ್ನು ಕಾಡಬೇಕಿದೆ. ಜಾತಿ, ಮತ ಮತ್ತು ಆರ್ಥಿಕ ಸ್ಥಾನಮಾನಗಳ ಅಸ್ಮಿತೆಗಳಿಂದಾಚೆಗೂ ಈ ಮನಸ್ಥಿತಿ ಜೀವಂತವಾಗಿರುವುದೂ ಸಹ ಗಂಭೀರ ಸಮಸ್ಯೆಯಾಗಿದೆ. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ-ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪುರುಷಕೇಂದ್ರಿತ ಭದ್ರಕೋಟೆಗಳನ್ನು ಭೇದಿಸುವ ತುರ್ತು ಇಂದು ಎದುರಾಗಿದೆ. ಇದಕ್ಕೆ ಬಹುಮುಖ್ಯವಾಗಿ ಅಡ್ಡಿಯಾಗುವುದು ನವ ಉದಾರವಾದ ಮತ್ತು ಬಂಡವಾಳಶಾಹಿಯು ಸೃಷ್ಟಿಸುವಂತಹ ಮಾರುಕಟ್ಟೆಯ ಗೋಡೆಗಳು. ಈ ಅಪಾಯಕಾರಿ ಗೋಡೆಗಳನ್ನು ಕೆಡವುವ ನಿಟ್ಟಿನಲ್ಲಿ, ಮಹಿಳೆಯೇ ನಾಯಕತ್ವ ವಹಿಸಿರುವ ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್‌ನಂತಹ ಪಕ್ಷಗಳೂ ಕ್ರಿಯಾಶೀಲವಾಗಿ ಯೋಚಿಸುತ್ತಿಲ್ಲ. ಇದು ಕಟು ವಾಸ್ತವ.

ಹಾಗಾಗಿಯೇ ಈ ಮಹಿಳಾ ನಾಯಕತ್ವಗಳೂ ಸಹ ಸಮಾಜದಲ್ಲಿ ಬೇರೂರಿರುವ ಶೋಷಣೆಯ ಬೇರುಗಳನ್ನು ಅಲುಗಾಡಿಸಲಾಗುತ್ತಿಲ್ಲ. ಮಹಿಳಾ ದೌರ್ಜನ್ಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಪಿತೃಪ್ರಧಾನತೆ ಮೂಲತಃ ಬೆಳೆಯುವುದು ಸಾಮಾಜಿಕ-ಆರ್ಥಿಕ ನೆಲೆಯಲ್ಲಿ. ಅದನ್ನು ದೀರ್ಘಕಾಲ ಯಥಾಸ್ಥಿತಿಯಲ್ಲಿರಿಸಿ ಸ್ಥಾಪಿತ ಹಿತಾಸಕ್ತಿಯನ್ನಾಗಿಸುವುದು ಜಾತಿ ಶ್ರೇಷ್ಠತೆಗಳ ಚಿಂತನೆ ಮತ್ತು ಧಾರ್ಮಿಕ ನಂಬಿಕೆಗಳು. ಭಾರತದ ಅಲ್ಪಸಂಖ್ಯಾತ ಸಮುದಾಯದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಈ ವಾಸ್ತವವನ್ನು ಸ್ಪಷ್ಟವಾಗಿ ಕಾಣಬಹುದು. ಹಿಂದೂ-ಮುಸ್ಲಿಂ ಕ್ರೈಸ್ತ ಸಮಾಜಗಳಲ್ಲಿರುವ ಪುರೋಹಿತಶಾಹಿಯ ನಿಯಂತ್ರಣದ ಒಂದು ಆಯಾಮವನ್ನು ಮಾತ್ರ ಮೇಲ್ಜಾತಿಗಳಲ್ಲಿರುವ ಕರ್ಮಠ ಧೋರಣೆ ಮತ್ತು ಸಾಂಪ್ರದಾಯಿಕ ಚಿಂತನೆಗಳಲ್ಲಿ ಕಾಣಬಹುದು.

ಈ ಕ್ರೌರ್ಯ ಪರಾಕಾಷ್ಠೆಯ ಮತ್ತೊಂದು ಆಯಾಮವನ್ನು ಹೆಣ್ಣು ಮಕ್ಕಳನ್ನು ಸುಟ್ಟುಹಾಕುವ ಪ್ರವೃತ್ತಿಯಲ್ಲಿ ಕಾಣಬಹುದು. ಅತ್ಯಾಚಾರ ಮತ್ತು ದೌರ್ಜನ್ಯಗಳ ಹಾಗೆಯೇ ಅಸಹಾಯಕ ಮಹಿಳೆಯನ್ನು ಜೀವಂತ ದಹನ ಮಾಡುವುದಕ್ಕೂ ಸಹ ಮನುಜ ಸಂಬಂಧಗಳು ಅಡ್ಡಿಯಾಗುತ್ತಿಲ್ಲ ಎನ್ನುವ ವಿಚಾರವೇ ಪ್ರಜ್ಞಾವಂತ ಸಮಾಜವನ್ನು ಕಂಗೆಡಿಸಬೇಕಿದೆ. ವಿದ್ಯೆ ಕಲಿಸುವ ಶಿಕ್ಷಕರೇ ಅತ್ಯಾಚಾರಿಗಳಾಗುತ್ತಿದ್ದಾರೆ, ಹೆತ್ತ ತಂದೆಯೇ ಹೆಣ್ಣುಮಕ್ಕಳನ್ನು ಸುಟ್ಟುಹಾಕುತ್ತಿರುವುದೂ ವರದಿಯಾಗಿದೆ. ಎರಡೂ ನೆಲೆಗಳಲ್ಲಿ ಗುರುತಿಸಬೇಕಿರುವುದು ಜಾತಿ-ಧರ್ಮ-ಸಂಸ್ಕೃತಿಯನ್ನು ಉಳಿಸಿಕೊಳ್ಳುವ ತವಕ ಮತ್ತು ಈ ಚೌಕಟ್ಟಿನಲ್ಲೇ ಸೃಷ್ಟಿಯಾಗುವ ಪುರುಷಾಧಿಪತ್ಯವನ್ನು ಸಾಕ್ಷೀಕರಿಸುವ ಉತ್ಕಟ ಹಂಬಲ.

ಇಲ್ಲಿ ಒಂದು ಮಹಿಳಾ ಸಂಕುಲ ಸಮಾಜದ ತಣ್ಣನೆಯ ಕ್ರೌರ್ಯವನ್ನು ಮೌನವಾಗಿ ಅನುಭವಿಸುತ್ತಿದೆ. ಈ ಬಾಧಿತ ಸಮೂಹದತ್ತ ಕಣ್ತೆರೆದು ನೋಡಲು ನಿರ್ದಿಷ್ಟ ಸಂದರ್ಭವೇನೂ ಬೇಕಿಲ್ಲವಾದರೂ, ಅಂತಾರಾಷ್ಟ್ರೀಯ ಮಹಿಳಾ ದಿನವಾದರೂ ನಮ್ಮ ಸತ್ತ ಪ್ರಜ್ಞೆಯನ್ನು ಜೀವಂತಗೊಳಿಸಬೇಕಿದೆ.

ಸಮಸ್ತ ಮಹಿಳೆಯರಿಗೂ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆಯ ಶುಭಾಶಯಗಳು

ನಾ. ದಿವಾಕರ

ಚಿಂತಕರು

ಇದನ್ನೂ ಓದಿ- ಮಹಿಳಾ ದಿನ ವಿಶೇಷ | ಸಮಾನತೆಯ ಹಾದಿಯಲಿ ಸಾಹಚರ್ಯ

More articles

Latest article