ಬೆಂಗಳೂರು: ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಿರುಚಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೆಲವು ಮಹಿಳೆಯರು ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. ಆ ವಿಚಾರ ಕುರಿತು ಪರಿಶೀಲನೆ ನಡೆಸುವುದಾಗಿ ನಿನ್ನೆ ಡಿಕೆಶಿ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಸ್ವತಃ ಮುಖ್ಯಮಂತ್ರಿಗಳೇ ಮಧ್ಯೆ ಪ್ರವೇಶಿಸಿ ಯಾವುದೇ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು. ಸಾರಿಗೆ ಸಚಿವರೂ ಸೇರಿದಂತೆ ಅನೇಕ ಸಚಿವರೂ ಸ್ಪಷ್ಟನೆ ನೀಡಿ ಯಾವುದೇ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಬೇಕಾಯಿತು.
ಇವರ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಐದು ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡುತ್ತಾರೆ. ಈ ಮೂಲಕ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ ಎಂದು ಬಿಂಬಿಸಲು ಹೊರಟರು. ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲೂ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿದರು.
ಈ ವಿಚಾರದಲ್ಲಿ ನಾನು ಬುಧವಾರ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಆರ್ಥಿಕವಾಗಿ ಸಬಲರಾಗಿರುವವರು, ಐಟಿಬಿಟಿ ಉದ್ಯೋಗಿಗಳು, ಎಂಎನ್ಸಿ ಕಂಪನಿಗಳ ಸಿಬ್ಬಂದಿ ಸೇರಿದಂತೆ ಅನೇಕ ಮಹಿಳೆಯರು ತಮಗೆ ಬಸ್ಗಳಲ್ಲಿ ಉಚಿತ ಪ್ರಯಾಣದ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾವು ಕೆಲಸ ಮಾಡುವ ಕಂಪನಿಗಳಲ್ಲಿ ಸಂಚಾರಕ್ಕಾಗಿ ಪ್ರತ್ಯೇಕ ಭತ್ಯೆ ನೀಡಲಾಗುತ್ತಿದೆ. ಹೀಗಾಗಿ, ನಮಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಅಗತ್ಯವಿಲ್ಲ ಎಂದು ತಿಳಿಸಿದ್ದರು ಎಂದರು.
ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವಿಲ್ಲ. ಅಂತಹವರ ಸಂಖ್ಯೆ ಶೇ. 7ರಿಂದ ಶೇ 8ರಷ್ಟು ಇರಬಹುದು. ಹಿಂದೆ ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸ್ವಇಚ್ಛೆಯಿಂದ ಸಬ್ಸಿಡಿ ತ್ಯಜಿಸುವವರಿಗೆ ಅವಕಾಶ ನೀಡಿದ್ದರು. ಅದೇ ಮಾದರಿಯಲ್ಲಿ ಆಲೋಚನೆ ಮಾಡುವುದಾಗಿ ನಾನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈಗಿನ ಸರ್ಕಾರದ ಅವಧಿ ಜತೆಗೆ ಮುಂದಿನ ಐದು ವರ್ಷದ ಅವಧಿಯೂ ಸೇರಿ ಒಟ್ಟು ಎಂಟೂವರೆ ವರ್ಷ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದರು. ಯಾರಿಗೆ ಬೇಕೊ ಅವರು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡಬಹುದಲ್ಲವೇ? ಪರಿಷ್ಕರಣೆ ಏಕೆ ಪ್ರಶ್ನೆಗೆ ಉತ್ತರಿಸಿದ ಅವರು ಆ ರೀತಿ ಮಾಡಲು ಸಾರಿಗೆ ಸಿಬ್ಬಂದಿಗೆ ಸರ್ಕಾರ ಅನಮತಿ ನೀಡಬೇಕಲ್ಲವೇ? ಇಲ್ಲವಾದಲ್ಲಿ ಬಲವಣತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬಆರೋಪ ಕೇಳಿ ಬರುತದೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಮಾಡಬೇಕಿದೆ ಎಂದರು.
ಈ ಗ್ಯಾರಂಟಿ ಯೋಜನೆಗಳನ್ನುಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಜನ ಅವರನ್ನು ತಿರಸ್ಕರಿಸುತ್ತಿದ್ದಾರೆ. ಆದ್ದರಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.