ನವದೆಹಲಿ: ಶಬರಿಮಲೆ ದೇವಾಲಯದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಿದೆ.
ಹದಿನೈದು ದಿನಗಳ ಹಿಂದೆಯಷ್ಟೇ ಇವರ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸಾಬೀತಾಗಿವೆ ಎಂದು ಕೇರಳ ಹೈಕೋರ್ಟ್, ಶ್ರೀಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಜತೆಗೆ ಹೈಕೋರ್ಟ್ ಟಿಡಿಬಿ ಮಾಜಿ ಕಾರ್ಯದರ್ಶಿ ಎಸ್. ಜಯಶ್ರೀ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಹ ತಿರಸ್ಕರಿಸಿತ್ತು.
ಇವರಿಬ್ಬರಿಗೂ ಜಾಮೀನು ನೀಡಿದರೆ, ತನಿಖೆಯ ಹಾದಿ ತಪ್ಪಿಹೋಗುತ್ತದೆ ಎಂದು ಎಸ್ ಐಟಿ ನ್ಯಾಯಾಲಯದಲ್ಲಿ ವಾದಿಸಿತ್ತು.
ಗರ್ಭಗುಡಿ ಬಾಗಿಲು ಮತ್ತು ದ್ವಾರಪಾಲಕರ ವಿಗ್ರಗಗಳನ್ನು ತಾಮ್ರದಿಂದ ನಿರ್ಮಿಸಲಾಗಿತ್ತು. ಈ ಮಾಹಿತಿ ಅರಿವಿದ್ದರೂ ಶ್ರೀಕುಮಾರ್ ಮತ್ತು ಜಯಶ್ರೀ ಇಬ್ಬರೂ ಚಿನ್ನದಿಂದ ಮಾಡಲ್ಪಟ್ಟಿವೆ ಎಂದು ದಾಖಲೆಗಳಲ್ಲಿ ನಮೂದಿಸಿ ಸಹಿ ಹಾಕಿದ್ದರು. ಈ ಲೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು.
ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಆರು ಮಂದಿಯನ್ನು ಎಸ್ ಐಟಿ ಬಂಧಿಸಿದೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಮತ್ತು ಟಿಡಿಬಿ ಮಾಜಿ ಅಧ್ಯಕ್ಷರಾದ ಎನ್ ವಾಸು ಮತ್ತು ಎ ಪದ್ಮಕುಮಾರ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

