ಕಳೆದ ವರ್ಷ ಚಿತ್ರದುರ್ಗದ ಮುರುಘಾ ಮಠದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಲಾಗಿತ್ತು ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಹೊರಗಡೆ ಬಂದಿದ್ದರು. ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ಕೂಡ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ, ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿ ದೂರು ಸಲ್ಲಿಸಿದ್ದರು. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ. ಹಾಗಾಗಿ, ಪೊಲೀಸರು ಸ್ವಾಮೀಜಿಯವರನ್ನು ಬಂಧಿಸಿದ್ದಾರೆಂದು ಹೇಳಲಾಗಿದೆ.
ಸ್ವಾಮೀಜಿ ಅಭಿಷೇಕ್ ಎನ್ನುವ ವ್ಯಕ್ತಿಗೆ ತಮಗೆ ಚರ್ಮ ರೋಗದ ಕುರಿತಂತೆ ಹೇಳಿಕೊಂಡಿದ್ದರು. ಅಭಿಷೇಕ್ ಮಹಿಳೆಯನ್ನು ಪರಿಚಯಿಸಿ ವೈದ್ಯ ಎಂದು ಹೇಳಿದ್ದ.ಮಹಿಳೆಗೆ ಚರ್ಮ ರೋಗ ತೋರಿಸಲು ಸ್ವಾಮೀಜಿಗೆ ಇಷ್ಟವಿಲ್ಲದ ಕಾರಣ ಅವರ ಮೊಬೈಲ್ ಗೆ ಫೋಟೋ ಕಳುಹಿಸಿದ್ದರು.ವ್ಯಾಧಿಯ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಲು ಸ್ವಾಮೀಜಿಗೆ ವಿಡಿಯೋ ಕಾಲ್ ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಗ, ಸ್ವಾಮೀಜಿಯವರು ಚರ್ಮ ವ್ಯಾಧಿಯಿರುವ ಜಾಗವನ್ನು ತೋರಿಸಿದ್ದರು.
ಅದೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅಭಿಷೇಕ್ ಹಾಗೂ ಮತ್ತಿತರರು ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಮಠದ ದೇವಸ್ಥಾನದ ಟ್ರಸ್ಟಿ ಕೆ. ಅಭಿಲಾಷ್ ಎಂಬುವರು ಪೊಲೀಸರಲ್ಲಿ ನ. 6ರಂದು ದೂರು ದಾಖಲಿಸಿದ್ದರು. ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಎಚ್.ಎಸ್. ಅಭಿಷೇಕ್, ಬೆಂಗಳೂರಿನಲ್ಲಿರುವ ಯುವತಿ, ಪಾಂಡವಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್, ಶ್ರೀನಿವಾಸ್, ರಾಮನಗರ ಜಿಲ್ಲೆಯ ಕವನಪುರ ಗ್ರಾಮದ ಚೇತನ್, ಕುಣಿಗಲ್ ನ ನಂದೀಶ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಇದೀಗ ದೇವಸ್ಥಾನದ ಟ್ರಸ್ಟಿ ನೀಡಿದ್ದ ದೂರಿನನ್ವಯ ಪೊಲೀಸರು ಅಭಿಷೇಕ್ ರನ್ನು ಕರೆಯಿಸಿ ವಿಚಾರಣೆ ನಡೆಸಿದಾಗ ಆತ, ಸ್ವಾಮೀಜಿಯವರು ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿದ್ದ. ಈ ವಿಚಾರ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಮಠಕ್ಕೆ ಆಗಮಿಸಿದ ಪೊಲೀಸರು, ಗುರುವಾರ ಸಂಜೆಯಿಂದಲೇ ಮಠದಲ್ಲಿ ಪರಿಶೀಲನೆ ನಡೆಸಿದ್ದರು. ಆಗ ಸಿಕ್ಕ ಕೆಲವು ದಾಖಲೆಗಳನ್ನು ಆಧರಿಸಿ, ಸ್ವಾಮೀಜಿಯವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
2021ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಠದಲ್ಲಿಯೇ ಮಾತನಾಡಿದ ಬಾಲ ಮಂಜುನಾಥ ಸ್ವಾಮೀಜಿ, ನಾನು ಮೂಲತಃ ಒಕ್ಕಲಿಗ. ಸನ್ಯಾಸತ್ವ ಸ್ವೀಕರಿಸಿದ ನಂತರ ಧರ್ಮಕ್ಕೆ ಹೋರಾಡುತ್ತೇನೆ. ಮೀಸಲಾತಿಗಾಗಿ ಹೋರಾಡಲ್ಲ. ಧರ್ಮ ಎತ್ತಿಹಿಡಿಯಲು ನಾನು ಜೀವ ತ್ಯಜಿಸಲು ಸಿದ್ಧ. ಹಾಗಾಗಿ, ಮೀಸಲಾತಿಗಾಗಿ ಹೋರಾಟ ಮಾಡಲ್ಲ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮಠದ ವಿದ್ಯಾಚೌಡೇಶ್ವರಿ ದೇಗುಲದಲ್ಲಿ ಸ್ವಾಮೀಜಿ ಜೊತೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವೇದಿಕೆ ಹಂಚಿಕೊಂಡಿರೋದನ್ನು ಕಾಣಬಹುದು.