ನವದೆಹಲಿ: ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೇಲುಸ್ತುವಾರಿಗೆ ಮಾನವ ಹಸ್ತಕ್ಷೇಪವಿಲ್ಲದ ಏಕೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಿ ಅವುಗಳ ಮೇಲ್ವಿಚಾರಣೆ ನಡೆಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಸಿಸಿಟಿವಿಗಳ ನಿರ್ವಹಣೆ ಕುರಿತೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ವಿಕ್ರಮ್‌ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು ಕ್ಯಾಮೆರಾಗಳ ಮೇಲುಸ್ತುವಾರಿಯೇ ಮುಖ್ಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಈ ಸಂಬಂಧ ಸೆ.26ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ.
ಮಾನವ ಹಸ್ತಕ್ಷೇಪವಿಲ್ಲದ ಕಂಟ್ರೋಲ್ ರೂಂ ಕುರಿತು ನಾವು ಚಿಂತನೆ ನಡೆಸಿದ್ದೇವೆ. ಎಲ್ಲ ವಿಡಿಯೊಗಳೂ ಸ್ವಾಭಾವಿಕವಾಗಿ ನಿಯಂತ್ರಣ ಕೊಠಡಿಗೆ ರವಾನೆ ಆಗಬೇಕು. ಒmದು ವೇಳೆ ಯಾವುದೇ ಕ್ಯಾಮೆರಾ ಸ್ಥಗಿತಗೊಂಡರೆ, ತಕ್ಷಣವೇ ಎಚ್ಚರಿಸುವ ವ್ಯವಸ್ಥೆ ಇರಬೇಕು. ಈ ಆರ್ಗ ಹೊರತುಪಡಿಸಿದರೆ ಅನ್ಯ ಮಾರ್ಗವೇ ಇಲ್ಲ ಎಂದು ನ್ಯಾಯಮೂರ್ತಿ ಮೆಹ್ತಾ ಅಭಿಪ್ರಾಯಪಟ್ಟರು.
2020ರ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದ ಪ್ರತ್ಯೇಕ ವಿಷಯದಲ್ಲಿ ಅಮಿಕಸ್ ಕ್ಯೂರಿ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಸಿದ್ದಾರ್ಥ ದಾವೆ ಅವರ ವಾದವನ್ನು ನ್ಯಾಯಪೀಠವು ಪರಿಗಣಿಸಿದೆ.
ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ), ಕೇಂದ್ರಿಯ ತನಿಖಾ ಸಂಸ್ಥೆ (ಎನ್‌ಐಎ) ಜಾರಿ ನಿರ್ದೇಶನಾಲಯ (ಇ.ಡಿ) ಸೇರಿದಂತೆ ಎಲ್ಲ ತನಿಖಾ ಕಚೇರಿಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ ತಿಳಿಸಿತ್ತು. ನ್ಯಾಯಾಲಯ ಸೂಚನೆ ನೀಡಿದ್ದರೂ ಎನ್‌ಐಎ, ಇ.ಡಿ., ಸಿಬಿಐ ಸೇರಿದಂತೆ ಕೆಲವು ಸಂಸ್ಥೆಗಳು ನಿರ್ದೇಶನ ಪಾಲಿಸಿಲ್ಲ ಎಂದು ಸಿದ್ದಾರ್ಥ ದಾವೆ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ರಾಜಸ್ಥಾನದಲ್ಲಿ ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಮಂದಿ ಮೃತಪಟ್ಟಿದ್ದು, 7 ಪ್ರಕರಣಗಳು ಉದಯಪುರದಲ್ಲಿ ನಡೆದಿವೆ. ಈ ಪ್ರಕರಣಗಳ ವರದಿ ಆಧರಿಸಿ ಸೆ.4ರಂದು ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ.
ಐಐಟಿಗಳ ನೆರವು ಪಡೆಯಬಹುದಲ್ಲವೇ?:
ಪ್ರತಿ ಪೊಲೀಸ್ ಠಾಣೆಯಲ್ಲೂ ಸ್ವತಂತ್ರ ಸಂಸ್ಥೆಯೊಂದು ತಪಾಸಣೆ ನಡೆಸುವಂತಿರಬೇಕು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಸಹಾಯ ಪಡೆದುಕೊಳ್ಳಬಹುದು ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಕ್ಯಾಮೆರಾಗಳು ತಕ್ಷಣವೇ ಸ್ಥಗಿತಗೊಂಡರೆ, ಸಂಬಂಧಿಸಿದ ಕಾನೂನು ಸೇವಾ ಪ್ರಾಧಿಕಾರ ಅಥವಾ ಮೇಲುಸ್ತುವಾರಿ ಸಂಸ್ಥೆಗೆ ಮಾಹಿತಿ ರವಾನೆ ಆಗಬೇಕು.ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿ ನಿರ್ದಿಷ್ಟ ಪ್ರದೇಶದ ಸಿ.ಸಿ.ಟಿವಿ ಕ್ಯಾಮೆರಾಗಳ ವಿಡಿಯೊಗಳನ್ನು ನಿರ್ವಹಿಸಬಹುದು ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.