ರಾಜ್ಯ ಸರ್ಕಾರದಿಂದ ‘ವಿಜ್ಞಾನ ನಗರ’ ಸ್ಥಾಪನೆ : ’25 ಎಕರೆ ಜಾಗ’ ಮಂಜೂರು ಮಾಡಿ ಆದೇಶ

Most read

ದಕ್ಷಿಣ ಭಾರತದ ಮೊದಲ ವಿಜ್ಞಾನ ನಗರ (Science City) ಸ್ಥಾಪನೆಗೆ ಅಗತ್ಯವಿದ್ದ 25 ಏಕರೆ ಜಾಗವನ್ನು ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ 2 ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಲಾಗಿದೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ದೇಶದಲ್ಲಿ ಪ್ರಸ್ತುತ 3 ವಿಜ್ಞಾನ ನಗರಗಳಿವೆ. ಅದರಲ್ಲಿ ಪ್ರಮುಖವಾಗಿರುವುದು ಕೋಲ್ಕತ್ತಾ ನಗರದಲ್ಲಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಪ್ರಮುಖ ನಗರವಾಗಿದ್ದು, ಭಾರತೀಯ ವಿಜ್ಞಾನ ಮಂದಿರ, ಜೆ. ಎನ್. ಸಿ. ಎ. ಎಸ್. ಆರ್‌, ರಾಮನ್‌ ಸಂಶೋಧನಾ ಸಂಸ್ಥೆ, 400ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಐಟಿ-ಬಿಟಿ ಪಾರ್ಕ್‌ ಗಳಿವೆ. ವಿಜ್ಞಾನ ನಗರ ಸ್ಥಾಪನೆಗೆ ಬೆಂಗಳೂರು ಸೂಕ್ತ ಎನ್ನುವ ಪ್ರಸ್ತಾವನೆಯನ್ನು ಆಗಸ್ಟ್‌ 3, 2023 ರಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ. ಕಿಶನ್‌ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿತ್ತು ಎಂದಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಕೇಂದ್ರ ಸಚಿವರು ವಿಜ್ಞಾನ ನಗರ ಸ್ಥಾಪನೆಗೆ ಮೂಲಭೂತವಾಗಿ 25 ಏಕರೆ ಜಾಗದ ಅಗತ್ಯತೆಯನ್ನು ತಿಳಿಸಿದ್ದರು. ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ 2024-25 ನೇ ಆಯವ್ಯಯದಲ್ಲಿ ಈ ಬಗ್ಗೆ ಘೋಷಣೆ ಮಾಡಿ ಅಗತ್ಯ ಭೂಮಿಯನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದ್ದರು. ಈ ಭರವಸೆ ಹಾಗೂ ನಮ್ಮ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ಪ್ರಯತ್ನದಿಂದಾಗಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜಾಗವನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಜಾಗದ ಲಭ್ಯತೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ದಕ್ಷಿಣ ಭಾರತದಲ್ಲೆ ಮೊದಲ ಹಾಗೂ ಅತ್ತುತ್ತಮ ವಿಜ್ಞಾನ ನಗರ ಸ್ಥಾಪನೆ ಆಗಿಲಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಕೃತ ಟಿಪ್ಪಣಿ ಹೊರಡಿಸಿದ್ದು, ಆದಿನಾರಾಯಣ ಹೊಸಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಸಂಖ್ಯೆ-1ರಲ್ಲಿ 25 ಎಕರೆ ಜಮೀನನ್ನು ವಿಜ್ಞಾನ ನಗರ ಸ್ಥಾಪನೆಗಾಗಿ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯವರಿಗೆ ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.

More articles

Latest article