ಬೆಂಗಳೂರು: ಈಗ ಸರ್ಕಾರದ ಮುಂದಿರುವ ಯಾವುದೇ ಒಳಮೀಸಲಾತಿ ಕುರಿತ ವರದಿಗಳು ಸಮರ್ಪಕ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಕೇವಲ ಜನಸಂಖ್ಯೆ ಮಾನದಂಡ ಮಾಡಿಕೊಂಡರೆ ಬಹುತೇಕ ಅಲೆಮಾರಿ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗುವುದು ಮುಂದುವರೆಯುತ್ತದೆ. ರಾಜ್ಯದಲ್ಲಿ ಹೆಚ್ಚಿನ ಅಲೆಮಾರಿ ಸಮುದಾಯಗಳು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳಾಗಿವೆ. ಈ ಸಮುದಾಯಗಳಿಗೇ ಒಳಮೀಸಲಾತಿಯ ಅಗತ್ಯ ಹೆಚ್ಚಾಗಿದೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಈ ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ನ್ಯಾಯ ಒದಗಿಸಬೇಕು ಎಂಬ ಅಭಿಪ್ರಾಯಗಳು ಇಂದು ವಿವಿಧ ಅಲೆಮಾರಿಗಳ ಮುಖಂಡರಿಂದ ವ್ಯಕ್ತವಾದವು. ಇಂದು ಶಾಸಕರ ಭವನದಲ್ಲಿ ಪರಿಶಿಷ್ಟ ಜಾತಿ ಸೂಕ್ಷ್ಮ, ಅತಿಸೂಕ್ಷ್ಮ 49 ಅಲೆಮಾರಿ ಸಮುದಾಯಗಳ ಒಳಮೀಸಲಾತಿ ಹೊರಾಟ ಸಮಿತಿ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಸಮುದಾಯಗಳ ಮುಖಂಡರು ತಮ್ಮ ನೋವು ಹಂಚಿಕೊಂಡರು. ಸುಡುಗಾಡು ಸಿದ್ದ, ದಕ್ಕಲಿಗ, ಹಂದಿ ಜೋಗಿ, ಗಂಟಿಚೋರ್, ಸಿಂದೊಳ್ಳು, ಮಾಂಗ್ ಗಾರುಡಿ, ಚನ್ನದಾಸರ್, ದೊಂಬರು, ಬುಡ್ಗಜಂಗಮ ಮುಂತಾದ ಸಮುದಾಯಗಳ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದು ಒಳಮೀಸಲಾತಿಯ ಅಗತ್ಯತೆಯನ್ನು ವಿವರಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರವು ನ್ಯಾ. ಸದಾಶಿವ ಆಯೋಗದ ವರದಿಯನ್ನು ಮೂಲೆಗೊತ್ತಿ ಜೆ ಸಿ ಮಾಧುಸ್ವಾಮಿ ನೇತೃತ್ವದ ಸಮಿತಿ ನಡೆಸಿ ನೀಡಿದ್ದ ವರದಿಯಲ್ಲಿ 88 ಸಮುದಾಯಗಳಿಗೆ ಶೇಕಡಾ 1 ಮೀಸಲಾತಿ ಶಿಫಾರಸು ಮಾಡಿದೆ. ಇದರಿಂದ ಅಲೆಮಾರಿ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಮುಖಂಡರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆನೆ ಪದರ ನೀತಿಯನ್ನು ಅನುಸರಿಸುವುದು ಶೋಷಣೆಗೆ ಒಳಗಾದ ಸಮುದಾಯಗಳಿಗೆ ಅನ್ಯಾಯ ಮಾಡಲಿದೆ. ಹೀಗಾಗಿ ಯಾವುದೇ ಕಾರಣದಿಂದ ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿ ಕೆನೆಪದರ ನೀತಿ ಅಳವಡಿಸಕೂಡದು ಎಂಬ ಒತ್ತಾಯ ಕೇಳಿಬಂತು.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಲೋಹಿತ್, ‘ಅನೇಕ ವರ್ಷಗಳಿಂದ ನಮ್ಮ ಅಲೆಮಾರಿಗಳು ತಮ್ಮ ಹಕ್ಕುಗಳಾಗಿ ಹೋರಾಟ ನಡೆಸುತ್ತಿದ್ದರೂ ನಮ್ಮ ಗೋಳನ್ನು ಕೇಳುವವರೇ ಇಲ್ಲವಾಗಿದೆ. ನಮ್ಮ ಧ್ವನಿಗೆ ಯಾವುದೇ ಸರ್ಕಾರದಲ್ಲಿ ಬೆಲೆ ಇಲ್ಲದಂತಾಗಿದೆ. ಹೀಗಾಗಿ 49 ಅಲೆಮಾರಿ ಸಮುದಾಯಗಳ ಒಗ್ಗಟ್ಟು ಬಹಳ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಹಿರಿಯ ಮುಖಂಡ ಗೋವಿಂದಪ್ಪ ಮಾತನಾಡಿ, ನಾವು ನಮ್ಮ ಅಲೆಮಾರಿ ಸಮುದಾಯಗಳ ಕುರಿತು ಸೂಕ್ತ ರೀತಿಯಲ್ಲಿ ಜನಗಣತಿ ಹಾಗೂ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆಗುವಂತೆ ಮಾಡಬೇಕು ಎಂದು ತಿಳಿಸಿದರು. ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಹರ್ಷಕುಮಾರ್ ಕುಗ್ವೆ ಮಾತನಾಡಿ, “ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಿಷಯದಲ್ಲಿ ಯಾವುದೇ ಕಾರಣದಿಂದ ಜನಸಂಖ್ಯೆ ಮಾನದಂಡ ಅನುಸರಿಸಬಾರದು. ಈಗ ಸರ್ಕಾರ ಘೋಷಿಸಿರುವ ನಿವೃತ್ತ ನ್ಯಾಯಮೂರ್ತಿಗಳ ಏಕಸದಸ್ಯ ಆಯೋಗದ ಮೇಲೆ ಈ ನಿಟ್ಟಿನಲ್ಲಿ ದೊಡ್ಡ ಜವಾಬ್ದಾರಿ ಇದೆ. ಪರಿಶಿಷ್ಟ ಜಾತಿಗಳ ಎಡಗೈನಲ್ಲಿರುವ ಅಲೆಮಾರಿ ಸಮುದಾಯಗಳು, ಬಲಗೈನಲ್ಲಿರುವ ಅಲೆಮಾರಿ ಸಮುದಾಯಗಳು ಮತ್ತು ಈ ಎರಡರಿಂದ ಹೊರಗೆ ಇರುವ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮಾನದಂಡ ಅನುಸರಿಸುವುದು ಅಗತ್ಯವಾಗಿದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ” ಸಾಮಾಜಿಕ, ಆರ್ಥಿಕ ರಾಜಕೀಯ ನ್ಯಾಯ” ಸಮಾನ ಅವಕಾಶ, ಬ್ರಾತೃತ್ವ ಮುಂತಾದ ಪರಿಕಲ್ಪನೆಗಳು ಇಂದು ಅಲೆಮಾರಿಗಳಿಂದ ಬಹುದೂರದಲ್ಲಿವೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವ ಎಂಪಿರಿಕಲ್ ಅಂಕಿಅಂಶ ಎಂಬುದೇ ಅಲೆಮಾರಿಗಳ ವಿಷಯದಲ್ಲಿ ಸರಿಯಾಗಿ ಸಿಗದ ಪರಿಸ್ಥಿತಿ ಇದೆ, ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಲೆಮಾರಿಗಳು ತಮ್ಮ ಬೇಡಿಕೆಗಳನ್ನು ಮುಂದಿಡಬೇಕು, ಆಯೋಗದ ಎದುರು ಮತ್ತು ಮುಖ್ಯಮಂತ್ರಿಗಳ ಎದುರು ಇಡಬೇಕು ಎಂದು ತಿಳಿಸಿದರು.
ಹೈಕೋರ್ಟ್ ನ್ಯಾಯವಾದಿ ಎಚ್ ಮಂಜುನಾಥ್ ಅವರು ಮಾತನಾಡಿ, ಆಗಸ್ಟ್ 1 ರ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಅಲೆಮಾರಿ ಸಮುದಾಯಗಳಿಗೆ ವರದಾನವಾಗಿದೆ. ನಮ್ಮ ಸಮುದಾಯಗಳನ್ನು ತಬ್ಬಲಿ ಜಾತಿಗಳೂ ಎಂದು ಕರೆಯಲಾಗುತ್ತಿದೆ. ನಮ್ಮ ಪರವಾಗಿ ಅಸೆಂಬಿ, ಸಂಸತ್ತುಗಳಲ್ಲಿ ಪ್ರತಿನಿಧಿಸುವವರು ಯಾರೂ ಇಲ್ಲ. 6 ಲಕ್ಷ ಜನಸಂಖ್ಯೆಗೆ 1% ಮೀಸಲಾತಿ ಎಂಬ ಮಾನದಂಡ ಅವೈಜ್ಞಾನಿಕವಾಗಿದೆ. ಹಿಂದುಳಿದಿರುವಿಕೆಯ ಮಾನದಂಡದಲ್ಲಿ, ಪ್ರಾತಿನಿಧ್ಯದ ಕೊರತೆಯ ಆಧಾರದಲ್ಲಿ ಒಳಮೀಸಲಾತಿ ನೀಡಬೇಕೆಂಬುದು ಸುಪ್ರೀಂ ಕೋರ್ಟಿನ ತೀರ್ಪಿನಲ್ಲಿ ಉಲ್ಲೇಖವಾಗಿದೆ, ಆದ್ದರಿಂದ ಜನಸಂಖ್ಯೆಯೊಂದಿಗೆ ಆದ್ಯತೆಯ ಪ್ರಾತಿನಿಧ್ಯ ಅನುಸರಿಸಲು ಆಗ್ರಹಪಡಿಸಬೇಕಿದೆ ಎಂದು ಹೇಳಿದರು.
ವೆಂಕಟರಮಣಯ್ಯ, ಡಾ. ಚಿನ್ನು, ವೀರೇಶ್, ಶಾಂತರಾಜು, ಅನಿಲ್ ಕಾಂಬಳೆ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.